ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷಕ್ಕೊಮ್ಮೆ ಬರುವವರು ನಾವು, ಸದಾ ಬರುವವರಲ್ಲ...

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ರಾತ್ರಿ ಕಾಮಣ್ಣನ ಸುಟ್ಟ ಕೆಂಡದಲ್ಲಿ ಬೆಳ್ಳಂ ಬೆಳಿಗ್ಗೆಯೇ ಕಾಯಿಸಿದ ಕಡಲೆ ತಿನ್ನುತ್ತ ಲಯಬದ್ದವಾಗಿ ಹಲಿಗೆ ಬಾರಿಸುತ್ತ ದೊಡ್ಡಂಗಳದ ಕಟ್ಟಿಮ್ಯಾಗ್ ಕುಂತಿದ್ದೆ. ಬಣ್ಣದಾಗ್ ಮುಳುಗಿ ಎದ್ದಿದ್ದ ಓಣ್ಯಾಗಿನ ಉಡಾಳರೆಲ್ಲ ಎದುರಿಗೆ ಸಿಕ್ಕವರಿಗೆಲ್ಲ ಬಣ್ಣ ಹಚ್ಚುತ್ತ ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಲೌಡ್‌ಸ್ಪೀಕರ್‌ದಾಗ ಕೇಳಿ ಬರುತ್ತಿದ್ದ ದೂರದ ಬೆಟ್ಟ ಚಿತ್ರದ

ಕಾಮಣ್ಣ ಕಟ್ಟಿಗೆ ಭೀಮಣ್ಣ ಬೆರಣಿ
ಕಾಮಣ್ಣ ಕಟ್ಟಿಗೆ ಭೀಮಣ್ಣ ಬೆರಣಿ
ಅಡಿಕೆ ಗೋಟು ಪೊರಕೆ ಏಟು
ಕಾಮಣ್ಣ ಮಕ್ಕಳು, ಕಳ್ಳನನ್ನ ಮಕ್ಕಳು
ಏನೇನು ಕದ್ದರು, ಸೌದೆ ಬೆರಣಿ ಕದ್ದರು
ಯಾತಕ್ಕೆ ಕದ್ದರು, ಕಾಮಣ್ಣನ ಸುಡೋಕೆ
ಲಬೊ... ಲಬೊ... ಲಬೊ...

ಹಾಡಿನ ಹಿಮ್ಮೇಳದಲ್ಲಿ ಅಲ್ಲೊಂದು ಹೊಸ ಲೋಕಾನೆ ತೆರೆದುಕೊಂಡಿತ್ತು.
ಅಂಗಳದಾಗಿನ ಬೋರ್‌ಗೆ ನೀರಿನ ನೆಪ ಮಾಡಿಕೊಂಡು ಬಂದು ಹೋಗುತ್ತಿದ್ದ ಶಂಕ್ರಿ, ಮೀನಿ, ಪಮ್ಮಿ, ಮಂಜಿ, ಮಾನಿ ಮುಸಿ ಮುಸಿ ನಗುತ್ತಲೇ ಕೊಡಕ್ಕ ನೀರು ತುಂಬ್ಕೊಂಡು ಸೊಂಟದ ಮ್ಯಾಲೆ ಇಟ್ಕೊಂಡು ವಯ್ಯಾರದ ನಡಿಗೆಯಿಂದ ಗಮನ ಸೆಳೆಯುತ್ತಿದ್ದರು. ಅವ್ರ ದೃಷ್ಟಿ ಹುಡುಗರ ಹುಚ್ಚಾಟಗಳತ್ತಲೇ ನೆಟ್ಟಿತ್ತು. ಹುಡುಗರು ಹುಬ್ಬು ಹಾರಿಸಿದಾಗೊಮ್ಮೆ ಪ್ರಿಯಾ ವಾರಿಯರ್‌ಳಂತೆ ಹುಬ್ಬನ್ನು ಕಾಮನಬಿಲ್ಲಿನಂತೆ ಬಾಗಿಸಿ ಪ್ರತ್ಯುತ್ತರ ಕೊಡೊವಾಗ ಅವರ ಕೆನ್ನೆಗಳೆಲ್ಲ ಕೆಂಪೇರಿ, ಹೋಳಿ ಹುಣ್ಣಿಮೆಯ ಥರಹೆವಾರಿ ಬಣ್ಣಗಳನ್ನೂ ನಿವಾಳಿಸಿ ತೆಗೆಯುವಂತೆ ಕಾಣುತ್ತಿದ್ದವು. ಅವರ ಒಂದು ಕೊಂಕು ನಗೆ ನೋಡಿ ಮಂಗ್ಯಾಗ ಹೆಂಡ ಕುಡಿಸಿದಂತೆ ಹುಡುಗರೆಲ್ಲ ಹುಚ್ಚುಚ್ಚಾರ ಕುಣಿಯುತ್ತ, ಕೇಕೆ ಹಾಕುತ್ತ ಮತ್ತಷ್ಟು ಜೋರಾಗಿ ಬಾಯಿ ಬಡಿದುಕೊಳ್ಳುತ್ತಿದ್ದರು.

ಲುಂಗಿ ಬನಿಯನ್‌ದಾಗ್‌ ಕಣ್ಣುಜ್ಜಿಕೊಳ್ಳುತ್ತಲೇ ನಮ್ಮ ಹತ್ತಿರ ಬಂದ ವಕೀಲ ಬಸ್ಯಾ ಇವನಾರವ, ಇವನಾರವ ಎಂದು ಗುರುತಿಸಲು ಪ್ರಶ್ನಿಸುವ ನಾಟಕ ಮಾಡುತ್ತ ಹತ್ತಿರ ಬಂದ.

ಗುಂಪಿನಲ್ಲಿದ್ದವರೆಲ್ಲ ಅವ್ನ ಮ್ಯಾಲೆ ಮುಗಿ ಬಿದ್ದು ಮುಖಕ್ಕೆ ವಾರ್ನಿಸ್‌ ಬಳಿದು ಹಳದಿ, ಕೇಸರಿ, ನೀಲಿ, ಕೆಂಪು ಬಣ್ಣದಾಗ್‌ ಅವನನ್ನು ಮುಳುಗಿಸಿದರು. ತನ್ನ ಗುರುತು ತನಗೇ ಸಿಗದಂತಾದ ಬಸ್ಯಾ  ‘ನಾ ಯಾರು’ ಎಂದು ತನ್ನದೇ ವಿಶಿಷ್ಟ ಆಂಗಿಕ ಶೈಲಿಯಲ್ಲಿ ಪ್ರಶ್ನಿಸಲು ಶುರು ಮಾಡುತ್ತಿದ್ದಂತೆ ಎಲ್ಲರೂ ಹೋ ಎಂದು ಅರಚಿದರು.

ಅದೇ ಹೊತ್ನಾಗ್‌, ‘ಏಯ್‌ ನನಗಿಷ್ಟು ಬಿಸಿ ಬಿಸಿ ಕಡ್ಲಿ ಕೊಡ್ರೊ’ ಎಂದು ಹೇಳುತ್ತ ದೊಡ್ಡಂಗಳದ ದೊಡ್ಡಪ್ಪ ಖ್ಯಾತಿಯ ಅಜ್ಜ  ಬಂದ.

‘ಎಪ್ಪತ್ತೈದು ವರ್ಷ ಆದವ್ರಿಗೆ, ಹಲ್ ಬಿದ್ದವ್ರಿಗೆ ಕಡ್ಲಿ ಕೊಡಲ್ಲ, ಹೋಗ್ಹೋಗ್‌’ ಎಂದು ದತ್ಯಾ ಛೇಡಿಸಿದ. ಅದ್ಕ ನಾನೂ ದನಿಗೂಡಿಸಿ, ‘ಹಲ್‌ ಗಟ್ಟಿಯಾಗ್ಲಂತ್‌ ತಿನ್ನೊ ಕಾಮಣ್ಣನ ಕಡ್ಲಿ ಬೊಚ್ಚು ಬಾಯಿಯವರಿಗೆ ಯಾಕೊ ಯಜ್ಜ’ ಎಂದು ಕಾಲೆಳೆದೆ.

‘ಏಯ್‌ ನಂಗ್‌ ಹಲ್ಲು ಇಲ್ಲದಿದ್ರ ಏನಾತು. ಮನ್ಯಾಗ್‌ ಗೌಡ್ತಿಗೆ ಕೊಡ್ತೀನಿ. ಹೊಯ್ಕೊಂಡವರ ಬಾಯ್ಯಾಗ ಹೋಳಿಗಿ ಮಾಡಿ ಹಾಕ್ತಾಳ. ಮಧ್ಯಾಹ್ನ ನಮ್ಮ ಮನಿಗs ಬರ‍್ರೀ ಹೋಳ್ಗಿ ತಿನ್ಸಿ ಕಳಸ್ತೀನಿ. ಸುಮ್ನ ಬಾಯಿ ಮುಚ್ಗೊಂಡು ಕೊಡ್ರಲೇ’ ಎಂದು ಜೋರು ಮಾಡಿದ.

‘ಏಯ್‌ ಮುತ್ಯಾ ಈ ವಯಸ್ಸ್‌ನಾಗೂ ನಿಂಗ್‌ ಈಸ್ಟ್‌ಮನ್‌ ಕಲರ್‌ ಕನ್ಸು ಬೀಳ್ತಾವೇನ್’ ಎಂದು ಜಾನಿ ಪ್ರಶ್ನಿಸಿದ.

‘ಏಯ್‌ ಬಿಕನಾಸಿಗಳಾ. ನಿಮ್ದೆಲ್ಲ ಹೈಬ್ರಿಡ್‌ ಕನ್ಸು. ನಮ್ಮದೇನಿದ್ರೂ ಜವಾರಿ ಕಣ್ರೊ’ ಎಂದ ಕಣ್ಣು ಮಿಟುಕಿಸಿ. ಅದನ್ನು ಕೇಳುತ್ತಿದ್ದಂತೆ ಪಡ್ಡೆ ಹೈಕಳೆಲ್ರೂ ಜೋರಾಗಿ ಬಾಯಿ, ಬಾಯಿ ಬಡಿದುಕೊಂಡ್ರು. ಬೊಚ್ಚುಬಾಯಿ ಅಗಲಿಸಿ ನಕ್ಕ ಮುತ್ಯಾನ ನಗು ಮುಂದ ರತಿಯ ಅಂದವೂ ಸಪ್ಪೆ ಎನಿಸಿತ್ತು.

ಅದೇ ಹೊತ್ನ್ಯಾಗ್ ಪ್ರಭ್ಯಾ ತನ್ನ ಪಟಾಲಂ ಜತೆ ಬರೋದು ದೂರದಿಂದಲೇ ಕಣ್ಣಿಗೆ ಬಿತ್ತು. ಇಡೀ ಟೋಳಿ ಕೇಸ್ರಿ ಬಣ್ಣದಾಗ್‌ ಮುಳುಗಿತ್ತು.
ಆಗ ಮಲ್ಯಾ, ನನ್ನ ಕೈಯ್ಯಾಗಿನ ಹಲಿಗಿ ಕಸ್ಕೊಂಡವ್ನ, ಹೆಣಾ ಹೊತ್ಕೊಂಡು ಸ್ಮಶಾನಕ್ಕೆ ತಗೊಂಡು ಹೋಗುವಾಗ್‌ ಮಾತ್ರ ಕಿವಿಗೆ ಬೀಳುವ ವಿಶಿಷ್ಟ ಸದ್ದನ್ಯಾಗ್‌ ಹಲಿಗಿ ಬಾರ್ಸಾಕತ್ತ.

ಇದನ್ನ ನೋಡಿ ಪ್ರಭ್ಯಾಗ್‌ ಸಿಟ್‌ ಬಂದು, ‘ಏಯ್‌ ಮಲ್ಯಾ, ನಮ್ಮನ್‌ ನೋಡಿ ಯಾಕ್‌ ಹಲಿಗಿ ಸದ್ದ ಬದಲ್ಸಿದಿ. ಅಂವಾ ಸರ್ಯಾಗ್‌ ಬಾರ್ಸಾಕತ್ತಿದ್ನಲ್ಲ. ನಾವೇನ್‌ ನಿಂಗ್‌ ಹೆಣಾ ಹೊರೊವ್ರಂಗ್‌ ಕಂಡಿವೇನ್‌’ ಎಂದು ದಬಾಯಿಸಿದ.

‘ನೀವ್‌ ಹೆಣದ ಸೋಂಗ್‌ ಹಾಕಿರೇನ್‌ ಅನ್ಕೊಂಡು ಹಂಗ್‌ ಬಾರ್ಸಾಕತ್ತಿನೇಳ್‌. ಮನ್ಸಿಗೆ ಹಚ್ಕೊಬ್ಯಾಡ’ ಎಂದ ಮಲ್ಯಾ, ಇನ್ನಷ್ಟು ಹುರುಪಿನಿಂದ ಜೋರಾಗಿ ಬಡಿಯತೊಡಗಿದ.

‘ಸೋಂಗ್‌ ಹಾಕಾಕ್‌ ಯಾರರ ಹೆಣ ಆಗ್ತಾರೇನಂತ್‌ ನಾನೂ ಹುಡ್ಕಾಕತ್ತೀನಿ. ನಿಂಗs ಮಾಡುನೇನ್‌’ ಅಂದ ಪ್ರಭ್ಯಾ.

‘ಬಿಜಾಪುರ್‌ ನೆಲ್ದಾಗ್‌ ಅಂಥಾ ಹೆಣಾ ಸಿಗುದಿಲ್ಲ. ಕರಾವಳಿಗೆ ಹೋಗ್‌ ಬೇಕಿದ್ರ. ಅಲ್ಲಿ ಬದುಕಿದ್ದವರನ್ನೂ ಸತ್ತವರ ಪಟ್ಟಿಗೆ ಸೇರಿಸುವ, ಹೆಣಕ್ಕ ಹೆಣಾ ಬೀಳಿಸುವ ಹೇತ್ಲಾಂಡಿಗಳು, ನಲಪಾಡ್‌ಗಿರಿಗೆ ತಮ್ಮ ಪಕ್ಷದ ಕಾರ್ಯಕರ್ತನೂ ಬಲಿಪಶು ಆಗ್ಯಾನ್ ಎಂದು ತಮ್ಮೆಲ್ಲ ‘ವಿದ್ವತ್‌’ ಪ್ರದರ್ಶಿಸುವ ‘ಬಂಡಲ್‌ ರಾಜಾ’ಗಳೂ ಬೇಜಾನ್‌ ಸಿಗ್ತಾರ್‌ ಹೋಗಲೇ. ಹೆಣಾ ಎತ್ತಾವ್ರ ಮುಖದಾಗ ಪ್ರೇತಕಳೆ ಅಲ್ದ ಕಾಮಣ್ಣನ ಕಳೆ ಇರ್ತದೇನಲೇ’ ಎಂದು ಮಲ್ಯಾ ಕಿಚಾಯಿಸಿದ.

ಅಷ್ಟರಾಗ್ ಶಶ್ಯಾ ಮುಂದ್‌ ಬಂದವ್ನ, ಪ್ರಭ್ಯಾನ ಮುಖಕ್ಕ ಎರಿ ಬಂಡಿ ಬಳ್ದ ಬಿಟ್ಟ. ಹಿಂದನs ಪಡ್ಡೆ ಹೈಕ್ಳು ಲಬೊ ಲಬೊ ಎಂದು ಜೋರಾಗಿ ಬಾಯಿ ಬಡಿದುಕೊಂಡರು.

‘ಏಯ್‌ ಇದೇನ್‌ ಹಚ್ಚಿದಿ ಮುಖಕ್ಕ. ಜೈಲು ಹಕ್ಕಿಗಳಿಗೆ ಬಳಸಿದ ಸಾಬ್ನಾದಿಂದನೂ ಇದು ಹೋಗುದಿಲ್ಲೋ’ ಎಂದು ಪ್ರಭ್ಯಾ ಹಣೆ ಹಣೆ ಚಚ್ಚಿಕೊಂಡ.

‘ಗೋಮೂತ್ರದಾಗ್‌ ತೊಳ್ಕೊ ಲೇ ಗೋಮೂತ್ರದಾಗ್‌, ಅದ್ರಿಂದ್‌ ಎಲ್ಲಾ ಬಣ್ಣಾ, ಪಾಪ ತೊಳ್ದ ಹೋಗ್ತದ’ ಎಂದು ಮೋನ್ಯಾ ಹೇಳ್ದಾ.

‘ಪ್ರಕಾಶ್‌ ರೈ ಭಾಷ್ಣಾ ಮಾಡ್ದ ಜಾಗಾ, ‘ರಾಗಾ’ ಇದ್ದ ಜನಾಶೀರ್ವಾದ ಬಸ್‌ ಹಾದು ಹೋದ ರಸ್ತೇನ ಗೋಮೂತ್ರದಾಗ ತೊಳೀತೀರಲ್ಲ. ನಿಮ್ಮ ಸರ್ಕಾರ ಬಂದ್ರ ಮೋಡಗಳಲ್ಲಿ ಗೋಮೂತ್ರ ಬಿತ್ತನೆ ಮಾಡಿ ಗೋಮೂತ್ರದ ಮಳಿ ಬರಸ್ತಿರೇನ್‌ ನೋಡ್‌. ಗೋಮೂತ್ರದ ಮಳಿ ಬಂದ್ರ ನೀವೂ ಸೇರಿದಂತೆ ಎಲ್ರೂ ಸ್ವಚ್ಛ ಆಗ್ತಾರ್‌ ನೋಡ್‌’ ಎಂದು ಛೇಡಿಸಿದ.

ಕಾಮಣ್ಣ ಕಟ್ಟಿಗೆ ಹಾಡಿನ... ‘ವರುಷಕ್ಕೊಮ್ಮೆ ಬರುವರು ನಾವು ಸದಾ ಬರುವರಲ್ಲ...’ ಎಂದು ಮೋನ್ಯಾ ರಾಗವಾಗಿ ಹಾಡತೊಡಗಿದಂತೆ ಅದನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ ಮುತ್ಯಾ, ‘ಹಂಗಲಲ್ಲೇ ಅದು, ‘ಐದು ವರುಷಕ್ಕೊಮ್ಮೆ ಬರುವವರು ನಾವು ಸದಾ ಬರುವವರಲ್ಲ’ ಎಂದು ಹಾಡಲೇ ಎಂದು ಜೋರು ಮಾಡಿದ.

‘ಮುಂದಿನ ಬಾರಿ ಎಲೆಕ್ಷನ್‌ಗೆ ನಿಲ್ಲಲ್ಲ ಎಂದು ಐದು ವರ್ಷದ ಹಿಂದನs ಘೋಷಿಸಿ ಈಗ ಮತ್ತ ಸಿ.ಎಂ ಕನಸು ಕಾಣಾಕತ್ತಿರುವ ಸೀದಾ ರೂಪಯ್ಯಾ, ಚೆಕ್ ರೂಪದಾಗ ಲಂಚ ತಗೊಂಡು ಜೈಲಿಗೆ ಹೋಗಿ ಬಂದ ಬ್ಯಾನಿ ಮರ‍್ಯಾಕ್‌ ಸಿ.ಎಂ ಆಗಲೇ ಬೇಕೆಂದು ಪರಿವರ್ತನ ಯಾತ್ರೆ ಮುಗಿಸಿ ಸುಸ್ತಾಗಿರುವ ಯಡ್ಯೂರಪ್ಪ, 20 ತಿಂಗಳ ಅಧಿಕಾರ ಅನುಭವಿಸಿ ‘ಹೆಂಡ್ತಿ’ಗೆ ಅಧಿಕಾರ ಹಸ್ತಾಂತರಿಸದೆ ಕೊಟ್ಟ ಮಾತಿನಂತೆ ನಡೆಯದ,ಮಾತಿಗೆ ತಪ್ಪಿದ ಮಗನ ತಪ್ಪು ಮನ್ನಿಸಿ ಎಂದು ಗೋಗರೆಯುತ್ತಿರುವ ಕುಮಾರಣ್ಣ ಇವ್ರಾಗ್ ಛಲೋ ಮಂದಿನ ನೋಡಿ ವೋಟ್‌ ಹಾಕರ್ಲೆ. ಇಲ್ಲಂದ್ರ ಐದ್‌ ವರ್ಷಾನೂ ಬಾಯಿ, ಬಾಯಿ ಬಡ್ಕೊಂಡs.. ಮನ್ಯಾಗ ಇರಬೇಕಾಗ್ತದರ್ಲೆ, ಬಹುಪರಾಕ್‌’ ಎಂದು ಕಾರಣಿಕ ಹೇಳ್ಕಿ ನೀಡಿದ ಮುತ್ಯಾ ಮನಿಕಡೆ ಹೊಂಟಾ.

ಮುತ್ಯಾನ ಮುತ್ತಿನಂತಹ ಮಾತು ಚುನಾವಣಾ ಹಲಿಗಿ ಸಪ್ಪಳದಾಗ್‌ ಎಷ್ಟ್‌ ಮಂದಿ ಕಿವ್ಯಾಗ್‌ ಬೀಳ್ತದೊ ಗೊತ್ತಿಲ್ಲ ಎಂದು ಅನುಮಾನಿಸುತ್ತಲೇ ನಾನೂ ಗೆಣಸಿನ ಹೋಳಿಗೆ ತಿನ್ನುವ ಹುರುಪಿನ್ಯಾಗ ಮನಿಕಡೆ ನಡೆದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT