ಅಂಜುಮ್‌ಗೆ ಬೆಳ್ಳಿ ಪದಕ

ಮಂಗಳವಾರ, ಮಾರ್ಚ್ 19, 2019
26 °C
ವಿಶ್ವಕಪ್‌ ಶೂಟಿಂಗ್‌ನ 50 ಮೀಟರ್ಸ್‌ ರೈಫಲ್‌ 3 ಪೊಷಿಸನ್‌ನಲ್ಲಿ ಸಾಧನೆ

ಅಂಜುಮ್‌ಗೆ ಬೆಳ್ಳಿ ಪದಕ

Published:
Updated:
ಅಂಜುಮ್‌ಗೆ ಬೆಳ್ಳಿ ಪದಕ

ನವದೆಹಲಿ: ಭಾರತದ ಅಂಜುಮ್‌ ಮೌದ್ಗಿಲ್‌, ಮೆಕ್ಸಿಕೊದ ಗುವಾಡಲಾಜರದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಬೆಳ್ಳಿ ‍ಪದಕ ಗೆದ್ದಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ 50 ಮೀಟರ್ಸ್‌ ರೈಫಲ್‌ 3 ಪೊಸಿಷನ್‌ ವಿಭಾಗದ ಫೈನಲ್‌ನಲ್ಲಿ ಅಂಜುಮ್‌ 454.2 ಸ್ಕೋರ್‌ ಗಳಿಸಿ ಈ ಸಾಧನೆ ಮಾಡಿದರು. ವಿಶ್ವಕಪ್‌ ಟೂರ್ನಿಯಲ್ಲಿ ಅವರು ಗೆದ್ದ ಮೊದಲ ಪದಕ ಇದಾಗಿದೆ.

ಚೀನಾದ ರುಯಿಜಿಯಾವೊ ಪೀ, ಈ ವಿಭಾಗದ ಚಿನ್ನಕ್ಕೆ ಕೊರಳೊಡ್ಡಿದರು. ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿರುವ ರುಯಿಜಿಯಾವೊ 455.4 ‍ಸ್ಕೋರ್‌ ಹೆಕ್ಕಿದರು. ಚೀನಾದವರೇ ಆದ ಟಿಂಗ್‌ ಸುಂಗ್‌ (442.2) ಕಂಚು ತಮ್ಮದಾಗಿಸಿಕೊಂಡರು.

45 ಶಾಟ್‌ಗಳ ಫೈನಲ್‌ನಲ್ಲಿ ಅಂಜುಮ್‌, ಶುರುವಿನಿಂದಲೇ ನಿಖರವಾಗಿ ಗುರಿ ಹಿಡಿದರು. 15ನೇ ಶಾಟ್‌ನ ಅಂತ್ಯಕ್ಕೆ ಮೂರನೇ ಸ್ಥಾನದಲ್ಲಿದ್ದ ಭಾರತದ ಶೂಟರ್‌, 5 ಶಾಟ್‌ಗಳ ಪ್ರೋನ್‌ ಪೊಸಿಷನ್‌ ಸೀರಿಸ್‌ನ ಬಳಿಕ ಅಗ್ರಸ್ಥಾನ ತಮ್ಮದಾಗಿಸಿಕೊಂಡರು. 15 ಶಾಟ್‌ಗಳ ಪ್ರೋನ್‌ ಪೊಸಿಷನ್‌ ಸೀರಿಸ್‌ ನಂತರವೂ ಮುನ್ನಡೆ ಕಾಪಾಡಿಕೊಂಡಿದ್ದರು.

ಆ ನಂತರದ 10 ಶಾಟ್‌ಗಳ ಸ್ಪರ್ಧೆ ಮುಗಿದಾಗ ಅಂಜುಮ್‌ 10ನೇ ಸ್ಥಾನಕ್ಕೆ ಕುಸಿದರು. 41ನೇ ಶಾಟ್‌ನಲ್ಲಿ 10.8 ಸ್ಕೋರ್‌ ಸಂಗ್ರಹಿಸಿದ ಅವರು ಕೊನೆಯ ನಾಲ್ಕು ಶಾಟ್‌ಗಳಲ್ಲಿ  (10.2, 10.1, 9.5 ಮತ್ತು 10.2) ಅಮೋಘ ಸಾಮರ್ಥ್ಯ ತೋರಿ ಬೆಳ್ಳಿಗೆ ಮುತ್ತಿಕ್ಕಿದರು.

ಇದಕ್ಕೂ ಮುನ್ನ ನಡೆದಿದ್ದ ಅರ್ಹತಾ ಸುತ್ತಿನ ಪ್ರೋನ್‌ ವಿಭಾಗದಲ್ಲಿ ಅಂಜುಮ್‌ 400ಕ್ಕೆ 399 ಸ್ಕೋರ್‌ ಸಂಪಾದಿಸಿದ್ದರು. ಒಟ್ಟಾರೆ 1170 ಸ್ಕೋರ್‌ ಗಳಿಸಿದ ಅವರು ಎರಡನೇಯವರಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.

ಚೀನಾದ ಪೀ 1178 ಸ್ಕೋರ್‌ ಗಳಿಸಿ ವಿಶ್ವದಾಖಲೆ ನಿರ್ಮಿಸಿದರು. ಈ ಮೂಲಕ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟರು.

ಭಾರತದ ಗಾಯತ್ರಿ, ಅರ್ಹತಾ ಸುತ್ತಿನಲ್ಲಿ 15ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಅವರು ಒಟ್ಟು 1153 ಸ್ಕೋರ್‌ ಕಲೆಹಾಕಿದರು. ತೇಜಸ್ವಿನಿ ಸಾವಂತ್‌, 16ನೇ ಸ್ಥಾನ ಪಡೆದರು.

ಅನೀಶ್‌ಗೆ ನಿರಾಸೆ: ಪುರುಷರ 25 ಮೀಟರ್ಸ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಕಣದಲ್ಲಿದ್ದ ಅನೀಶ್‌ ಭಾನವಾಲಾ ಅರ್ಹತಾ ಸುತ್ತಿನಲ್ಲಿ ಒಟ್ಟಾರೆ 578 ಸ್ಕೋರ್‌ ಗಳಿಸಿ ಏಳನೇ ಸ್ಥಾನ ತಮ್ಮದಾಗಿಸಿಕೊಂಡರು.

ರ‍್ಯಾಪಿಡ್‌ ಫೈರ್‌ ಸುತ್ತಿನಲ್ಲಿ 99 ಸ್ಕೋರ್‌ ಸಂಗ್ರಹಿಸಿದ್ದ ಅನೀಶ್‌, ಆ ನಂತರದ ಐದು ಸುತ್ತುಗಳಲ್ಲಿ ಕ್ರಮವಾಗಿ 7,9,10,8 ಮತ್ತು 8 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು.

ನೀರಜ್‌ ಕುಮಾರ್‌ 13ನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. ಅವರು ಒಟ್ಟು 569 ಸ್ಕೋರ್‌ ಸಂಗ್ರಹಿಸಿದರು.

ಒಟ್ಟು ಎಂಟು ಪದಕಗಳನ್ನು ಗೆದ್ದಿರುವ ಭಾರತ ತಂಡ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮೂರು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ತಂಡದ ಖಾತೆಯಲ್ಲಿವೆ. ತಲಾ ಎರಡು ಚಿನ್ನ ಮತ್ತು ಬೆಳ್ಳಿ ಹಾಗೂ ಒಂದು ಕಂಚು ಜಯಿಸಿರುವ ಚೀನಾ ತಂಡ ಪಟ್ಟಿಯಲ್ಲಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry