ಬ್ಯಾಂಕ್‌ಗಳ ಉದ್ದೇಶಪೂರ್ವಕ ಸುಸ್ತಿದಾರರ ಪ್ರಮಾಣ ಏರಿಕೆ

7

ಬ್ಯಾಂಕ್‌ಗಳ ಉದ್ದೇಶಪೂರ್ವಕ ಸುಸ್ತಿದಾರರ ಪ್ರಮಾಣ ಏರಿಕೆ

Published:
Updated:
ಬ್ಯಾಂಕ್‌ಗಳ ಉದ್ದೇಶಪೂರ್ವಕ ಸುಸ್ತಿದಾರರ ಪ್ರಮಾಣ ಏರಿಕೆ

ನವದೆಹಲಿ: ಸಾಲ ಮರುಪಾವತಿ ಮಾಡದೇ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ವಂಚಿಸಿರುವ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆಯಲ್ಲಿ ಶೇ 1.66ರಷ್ಟು ಏರಿಕೆಯಾಗಿದೆ.

‘ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ಒಟ್ಟು ಇಂತಹ 9,063 ಉದ್ದೇಶಪೂರ್ವಕ ಸುಸ್ತಿದಾರರನ್ನು ಪತ್ತೆ ಮಾಡಲಾಗಿದೆ. ಸಾಲ ಮರುಪಾವತಿ ಸಾಮರ್ಥ್ಯ ಇದ್ದರೂ ಇವರು ಬಾಕಿ ಉಳಿಸಿಕೊಂಡಿದ್ದಾರೆ. ಇವರಿಂದ ಬ್ಯಾಂಕ್‌ಗಳಿಗೆ ಒಟ್ಟು ₹ 1,10,050 ಕೋಟಿಗಳಷ್ಟು ಸಾಲ ಮರುಪಾವತಿ ಆಗಬೇಕಾಗಿದೆ’ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್ ಹೊರಡಿಸಿರುವ ನಿಯಮಾವಳಿಗಳ ಪ್ರಕಾರ, ಇಂಥವರಿಗೆ ದಂಡ ವಿಧಿಸಲು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

ಉದ್ದೇಶಪೂರ್ವಕ ಸುಸ್ತಿದಾರರು, ಕಂಪನಿಗಳ ಪ್ರವರ್ತಕರಾಗಿ, ನಿರ್ದೇಶಕರಾಗಿ ಬಂಡವಾಳ ಮಾರುಕಟ್ಟೆಗೆ ಪ್ರವೇಶಿಸದಂತೆ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಕೂಡ ಕಠಿಣ ನಿಯಮಗಳನ್ನು ರೂಪಿಸಿದೆ. ಈ ಕ್ರಮಗಳು 2016ರಿಂದಲೇ ಜಾರಿಗೆ ಬಂದಿವೆ. 2017 ಡಿಸೆಂಬರ್ 31ರ ವೇಳೆಗೆ ಇಂತಹ ಸುಸ್ತಿದಾರರ ವಿರುದ್ಧ ಒಟ್ಟು 2,108 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಸಾಲ ವಸೂಲಾತಿಗಾಗಿ 8,462 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2016ರ ಮಾರ್ಚ್‌ ಅಂತ್ಯದವರೆಗಿನ ಐದು ವರ್ಷಗಳ ಅವಧಿಯಲ್ಲಿ ₹ 2.30 ಲಕ್ಷ ಕೋಟಿ ಸಾಲ ವಜಾ ಮಾಡಿವೆ.

ಸುಸ್ತಿದಾರರಿಂದ ಸಾಲ ವಸೂಲಾತಿ ಮಾಡಲು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ  ಭಾರತೀಯ ರಿಸರ್ವ್‌ ಬ್ಯಾಂಕ್‌ ಇತ್ತೀಚೆಗೆ ವಾಣಿಜ್ಯ ಬ್ಯಾಂಕ್‌ಗಳಿಗೆ ತಾಕೀತು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry