ಸರಯೂ ತೀರದ ಕೋಸಲ, ಅದರ ರಾಜ ದಶರಥ

7

ಸರಯೂ ತೀರದ ಕೋಸಲ, ಅದರ ರಾಜ ದಶರಥ

Published:
Updated:
ಸರಯೂ ತೀರದ ಕೋಸಲ, ಅದರ ರಾಜ ದಶರಥ

ಸರಯೂನದಿಯ ತೀರ. ಆ ಕಡೆಗೆ ದಟ್ಟವಾದ ಕಾಡು; ಈ ಕಡೆಗೆ ಕೋಸಲರಾಜ್ಯ. ಅದು ತುಂಬ ಸಮೃದ್ಧವಾದ ರಾಜ್ಯ. ಧನ–ಧಾನ್ಯಗಳಿಗೆ ಕೊರತೆಯೇ ಇಲ್ಲ. ಪ್ರಜೆಗಳ ಬದುಕಿಗೆ ಕಷ್ಟ ಎನಿಸುವಂಥ ಯಾವ ಅಡ್ಡಿಗಳಿಗೂ ಅವಕಾಶವೇ ರಾಜ್ಯದಲ್ಲಿ ಇರಲಿಲ್ಲ. ಅವರೆಲ್ಲರೂ ಆನಂದದಿಂದ ಇದ್ದರು. ಪ್ರಜೆಗಳು ಧರ್ಮಾತ್ಮರೂ ವಿದ್ವಾಂಸರೂ ಸತ್ಯವಾದಿಗಳೂ ಆಗಿದ್ದರು. ಅವರೆಲ್ಲರೂ ತಮ್ಮ ಗಳಿಕೆಯಲ್ಲಿಯೇ ತೃಪ್ತರಾಗಿ ಜೀವನವನ್ನು ನಡೆಸುತ್ತಿದ್ದರೆ ಹೊರತು ಇನ್ನೊಬ್ಬರ ಹಣಕ್ಕಾಗಿ ಆಸೆ ಪಡುತ್ತಿರಲಿಲ್ಲ. ಹೀಗೆಂದು ಬಡತನದಲ್ಲಿದ್ದ ಯಾವೊಬ್ಬ ಗೃಹಸ್ಥನನ್ನೂ ರಾಜ್ಯದಲ್ಲಿ ನೋಡುವುದಕ್ಕೆ ಸಾಧ್ಯವೇ ಇರಲಿಲ್ಲವೆನ್ನಿ!

ನಿರಾಶೆಯಿಂದ ಕುಗ್ಗಿದ ಒಬ್ಬನೇ ಒಬ್ಬನನ್ನೂ ಹುಡುಕಿದರೂ ರಾಜ್ಯದಲ್ಲಿ ಸಿಗುತ್ತಿರಲಿಲ್ಲ. ಎಲ್ಲರಲ್ಲೂ ರಾಜಭಕ್ತಿ ಇದ್ದಿತು. ಎಲ್ಲ ವರ್ಣದವರೂ ಸಾಮರಸ್ಯದಿಂದ ಇದ್ದರು. ಹಸು, ಕುದುರೆ, ಧನಧಾನ್ಯಗಳು ಅವರವರ ಅಗತ್ಯಕ್ಕೆ ತಕ್ಕಂತೆ ಇದ್ದವು. ಆನೆ, ಕುದುರೆ, ಹಸು, ಎತ್ತು, ಒಂಟೆ, ಕತ್ತೆ ಮುಂತಾದ ಹಲವು ಪ್ರಾಣಿಗಳನ್ನು ಜನರು ಸಾಕುತ್ತಿದ್ದರು.

ಕೋಸಲೆಯ ರಾಜಧಾನಿ ಅಯೋಧ್ಯಾ; ಅದು ಲೋಕಪ್ರಸಿದ್ಧಿಯನ್ನು ಸಂಪಾದಿಸಿತ್ತು. ಈ ನಗರವನ್ನು ಸಾಕ್ಷಾತ್‌ ಮನುಚಕ್ರವರ್ತಿಯೇ ನಿರ್ಮಿಸಿದ್ದ. ಈ ಮಹಾನಗರವನ್ನು ಪಗಡೆಯ ಹಾಸಿನ ಆಕಾರದಲ್ಲಿ ಕಟ್ಟಲಾಗಿತ್ತು. ಹನ್ನೆರಡು ಯೋಜನ ಉದ್ದ ಮತ್ತು ಮೂರು ಯೋಜನ ಅಗಲ. ನಗರದ ರಸ್ತೆಗಳು ಅಗಲವಾಗಿದ್ದವು. ಅಚ್ಚುಕಟ್ಟಾಗಿ ನಿರ್ಮಾಣವಾಗಿದ್ದ ಆ ರಸ್ತೆಗಳನ್ನು ನಿತ್ಯವೂ ಸ್ವಚ್ಛಗೊಳಿಸುತ್ತಿದ್ದರು. ರಾಜಬೀದಿಗಳಿಗೆ ನೀರನ್ನು ಚಿಮುಕಿಸಿ ಹೂಗಳನ್ನು ಹರಡುತ್ತಿದ್ದರು. ನಗರದ ದಿಡ್ಡಿಯ ಬಾಗಿಲುಗಳು ಸದಾ ತೋರಣಗಳಿಂದ ಕಂಗೊಳಿಸುತ್ತಿದ್ದವು. ಭದ್ರವಾದ ದಿಡ್ಡಿಯ ಬಾಗಿಲುಗಳು ಆ ನಗರಕ್ಕೆ ‘ಅಯೋಧ್ಯಾ’ ಎಂಬ ಹೆಸರನ್ನು ಅನ್ವರ್ಥ ಮಾಡಿದ್ದವು.

ನಗರದೊಳಗಿರುವ ಅಂಗಡಿಗಳನ್ನೂ ಸಹ ಕ್ರಮಬದ್ಧವಾಗಿ ವಿಂಗಡಿಸಲಾಗಿತ್ತು. ವರ್ತಕರು, ಶಿಲ್ಪಿಗಳು, ನರ್ತಕರು, ವೀರರು, ಯೋಗಿಗಳು, ಸಿದ್ಧಪುರುಷರು, ವಿದ್ವಾಂಸರು, ಕೃಷಿಕರು – ಹೀಗೆ ಸಮಾಜದ ಎಲ್ಲ ಕ್ಷೇತ್ರಗಳ ಜನರೂ ಸೌಹಾರ್ದದಿಂದ ಇದ್ದರು.

ಮನೆಗಳೂ ಕೂಡ ಸುಂದರವಾಗಿದ್ದವು. ಮನೆಗಳನ್ನು ಸಮಭೂಮಿಯಲ್ಲಿ ಕಟ್ಟಲಾಗಿತ್ತು. ಎತ್ತರದ ಉಪ್ಪರಿಗೆಯ ಮನೆಗಳೂ ಸಾಕಷ್ಟು ಸಂಖ್ಯೆಯಲ್ಲಿದ್ದವು. ಏಳು ಅಂತಸ್ತುಗಳಿರುವ ‘ವಿಮಾನ’ ಎಂದು ಕರೆಯಿಸಿಕೊಳ್ಳುವ ಗೃಹಸಮುದಾಯಗಳೂ ಇದ್ದವು. ವ್ಯಾಪಾರಕ್ಕಾಗಿ ನಾನಾ ದೇಶಗಳ ವರ್ತಕರು ನಗರದಲ್ಲಿ ಯಾವಾಗಲೂ ತುಂಬಿರುತ್ತಿದ್ದರು.

ನಗರದಲ್ಲಿ ಸದಾ ಸಂಗೀತ–ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ದುಂದುಭಿ, ಮೃದಂಗ, ವೀಣೆ, ಮದ್ದಲೆ – ಮುಂತಾದ ವಾದ್ಯಗಳ ಮಧುರವಾದ ಧ್ವನಿ ಕೇಳುತ್ತಲೇ ಇರುವುದು. ಇಡಿಯ ನಗರದಲ್ಲಿ ಕಾಮುಕನಾಗಲಿ, ಜಿಪುಣನಾಗಲಿ, ಕ್ರೂರಿಯಾಗಲಿ, ವಿದ್ಯಾಹೀನನಾಗಲಿ, ನಾಸ್ತಿಕನಾಗಲಿ ಯಾರೊಬ್ಬರೂ ಹೆಸರಿಗೆ ಕೂಡ ಇರಲಿಲ್ಲ. ಎಲ್ಲ ಸ್ತ್ರೀಪುರುಷರೂ ಧರ್ಮವಂತರು; ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡವರಾಗಿದ್ದರು.

ಸೌಜನ್ಯ ಮತ್ತು ಸದಾಚಾರಗಳಲ್ಲಿ ಸಂತೋಷವನ್ನು ಪಡುತ್ತ ಅವರೆಲ್ಲರೂ ಮುನಿಗಳಂತೆ ಪರಿಶುದ್ಧಹೃದಯಿಗಳಾಗಿದ್ದರು. ಕಳ್ಳರ ಭಯವೂ ಸುಳ್ಳರ ಕಾಟವೂ ಇರಲಿಲ್ಲ. ಎಲ್ಲರೂ ಶುಭ್ರವಾಗಿರುತ್ತಿದ್ದರು. ಒಳ್ಳೆಯ ಬಟ್ಟೆಯನ್ನು ಧರಿಸಿ, ಚಂದನಾದಿ ಸುಗಂಧದ್ರವ್ಯಗಳನ್ನು ಲೇಪಿಸಿಕೊಳ್ಳುತ್ತಿದ್ದರು. ಎಲ್ಲರ ತಲೆಯಲ್ಲಿ ಶಿರೋಭೂಷಣವಿರುತ್ತಿತ್ತು; ಕೊರಳಲ್ಲಿ ಹಾರಗಳನ್ನು ಧರಿಸುತ್ತಿದ್ದರು. ಕಬ್ಬಿನ ಹಾಲಿನಂತೆ ಸಿಹಿಯಾದ ನೀರು ಯಾವಾಗಲೂ ನಗರದಲ್ಲಿ ಯಥೇಚ್ಛವಾಗಿ ದೊರಕುತ್ತಿತ್ತು. ಬೆಳ್ಳಗಿನ ಅಕ್ಕಿಯೂ ಸಮೃದ್ಧವಾಗಿ ದೊರೆಯುತ್ತಿತ್ತು.

ಸೈನಿಕರ ದಂಡು ಯಾವಾಗಲೂ ರಾಜ್ಯದ ರಕ್ಷಣೆಗೆ ಸಿದ್ಧವಾಗಿ ನಿಂತಿತ್ತು. ಹಲವು ಬಗೆಯ ಯಂತ್ರಗಳೂ ಆಯುಧಗಳೂ ಯುದ್ಧಸನ್ನಾಹದ ಸಿದ್ಧತೆಯಲ್ಲಿಯೇ ಇರುತ್ತಿದ್ದವು. ಮಹಾರಥರಿಂದಲೂ ವೀರಯೋಧರಿಂದಲೂ ಸೈನ್ಯವು ತುಂಬಿತ್ತು. ನಾನಾ ರೀತಿಯ ಯುದ್ಧತಂತ್ರಗಳಲ್ಲಿ ಅವರೆಲ್ಲರೂ ನಿಸ್ಸೀಮರು. ಗುಹೆಯಲ್ಲಿರುವ ಸಿಂಹಗಳಂತೆ ಅವರು ಅಯೋಧ್ಯೆಯಲ್ಲಿ ವಾಸವಾಗಿದ್ದರು. ಶತ್ರುವಾದರೂ ಒಂಟಿಯಾಗಿರುವವನನ್ನೂ
ಅಸಹಾಯನನ್ನೂ ಮರೆಯಲ್ಲಿ ಅಡಗಿರುವವನನ್ನೂ ಹೆದರಿ ಓಡುವವನನ್ನೂ ಈ ಸೈನಿಕರು ಎಂದಿಗೂ ಬಾಣಗಳಿಂದ ಹೊಡೆಯುತ್ತಿರಲಿಲ್ಲ. ನಗರದ ಸುತ್ತಲೂ ಪ್ರಾಕಾರವಿದ್ದಿತು.

ನಗರದ ಹೊರವಲಯದಲ್ಲಿ ಮಾವಿನ ತೋಪುಗಳಿದ್ದವು. ಇಂಥ ಸಂಪದ್ಭರಿತವೂ ಆನಂದದಾಯಕವೂ ವಿಶಾಲವೂ ಆದ ಕೋಸಲ ರಾಜ್ಯವನ್ನು ದಶರಥ ಮಹಾರಾಜನು ಆಳುತ್ತಿದ್ದನು. ದಶರಥನು ಇಕ್ಷ್ವಾಕುವಂಶಕ್ಕೆ ಸೇರಿದವನು. ಈ ವಂಶದಲ್ಲಿ ಹಲವರು ಚಕ್ರವರ್ತಿಗಳು ರಾಜ್ಯವನ್ನು ಆಳಿದವರು. ಈ ವಂಶದಲ್ಲಿ ಹುಟ್ಟಿದ ‘ಸಗರ’ ಎಂಬ ಚಕ್ರವರ್ತಿ ಸಮುದ್ರವನ್ನೇ ಅಗೆಯಿಸಿದವನು; ಹೀಗಾಗಿ ಅದಕ್ಕೆ ‘ಸಾಗರ’ ಎಂದೂ ಹೆಸರಾಯಿತು!

ದಶರಥನು ಶೂರನಷ್ಟೇ ಅಲ್ಲ, ವಿದ್ವಾಂಸನೂ ಹೌದು. ವೇದಾರ್ಥಗಳನ್ನು ಬಲ್ಲವನು. ಪ್ರಜೆಗಳಿಗೆ ಪ್ರೀತಿಪಾತ್ರ. ಅವನು ಅತಿರಥ; ಯಜ್ಞಯಾಗಗಳಲ್ಲಿ ಆಸಕ್ತನು; ಧರ್ಮಶೀಲ; ಅವನು ಜಿತೇಂದ್ರಿಯ; ಹೀಗಾಗಿಯೇ ಅವನನ್ನು ಎಲ್ಲರೂ ಮಹರ್ಷಿಗಳಿಗೆ ಸಮನಾದ ಒಬ್ಬ ‘ರಾಜರ್ಷಿ’ ಎಂದೇ ಹೊಗಳುತ್ತಿದ್ದರು. ಅವನ ಬಳಿ ಚತುರಂಗ ಸೇನೆಯ ಬಲವಿತ್ತು. ಸಂಪತ್ತಿನಲ್ಲಿ ಅವನು ದೇವೇಂದ್ರನನ್ನೂ ಕುಬೇರನನ್ನೂ ಸರಿಗಟ್ಟಬಲ್ಲವ. ಮನುಚಕ್ರವರ್ತಿಯು ಹೇಗೆ ಪ್ರಜೆಗಳನ್ನು ಧರ್ಮದಿಂದ ಪಾಲಿಸುತ್ತಿದ್ದನೋ ಹಾಗೆಯೇ ಅವನು ಪ್ರಜೆಗಳನ್ನು ಪಾಲಿಸುತ್ತಿದ್ದ.

ಇಂದ್ರನು ಅಮರಾವತಿಯನ್ನು ರಕ್ಷಿಸುವಂತೆ ಅವನು ಅಯೋಧ್ಯೆಯನ್ನು ರಕ್ಷಿಸುತ್ತಿದ್ದ. ಅವನಲ್ಲಿ ಕಾಂಬೋಜ, ಬಾಹ್ಲಿಕ, ವನಾಯು ಮತ್ತು ಸಿಂಧುದೇಶಗಳ ಉತ್ತಮ ಜಾತಿಯ ಕುದುರೆಗಳಿದ್ದವು. ಮಹಾಬಲಶಾಲಿಗಳಾದ ಪರ್ವತಾಕಾರದ ಮದ್ದಾನೆಗಳೂ ಇದ್ದವು; ಅವುಗಳಲ್ಲಿ ಕೆಲವು ವಿಂಧ್ಯಪರ್ವತದಲ್ಲಿಯೂ ಹಿಮವತ್ಪರ್ವತದಲ್ಲಿಯೂ ಹುಟ್ಟಿದಂಥವು; ಮತ್ತೆ ಕೆಲವು ಐರಾವತ, ಪುಂಡರೀಕ, ಅಂಜನ, ವಾಮನ ಎಂಬ ದಿಗ್ಗಜಗಳ ವಂಶದಲ್ಲಿ ಹುಟ್ಟಿದವು; ಅವುಗಳಲ್ಲಿ ಕೆಲವು ಭದ್ರ, ಮಂದ್ರ, ಮೃಗ ಎಂಬ ಜಾತಿಗೆ ಸೇರಿದವು.

ಶತ್ರುಗಳ ದರ್ಪವನ್ನು ಅಡಗಿಸಿ, ನಕ್ಷತ್ರಗಳ ನಡುವೆ ಇರುವ ಚಂದ್ರನಂತೆ ಪ್ರಜೆಗಳಿಗೆ ಆಹ್ಲಾದವನ್ನು ಉಂಟುಮಾಡುತ್ತ ದಶರಥನು ರಾಜ್ಯಭಾರ ಮಾಡುತ್ತಿದ್ದ. ದಶರಥನಿಗೆ ಎಂಟು ಮಂದಿ ಅಮಾತ್ಯರಿದ್ದರು; ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ – ಈ ಅಮಾತ್ಯರು ಗುಣಶಾಲಿಗಳು. ಅವರಿಗೆ ಜನರ ನಿರೀಕ್ಷೆಗಳೂ ಚೆನ್ನಾಗಿ ಗೊತ್ತಿದ್ದವು, ರಾಜನ ಮನಸ್ಸು ಕೂಡ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ರಾಜ್ಯಕ್ಕೆ ಹಿತಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರಿಗೆ ಸುಲಭವಾಗುತ್ತಿತ್ತು.

ಪ್ರಧಾನ ಅಮಾತ್ಯರಿಗೆ ಸಹಾಯ ಮಾಡಲು ಇನ್ನೂ ಅನೇಕ ಮಂತ್ರಿಗಳೂ ಇದ್ದರು. ಈ ಅಮಾತ್ಯರ ಜೊತೆಯಲ್ಲಿ ದಶರಥನಿಗೆ ಇಬ್ಬರು ಮುಖ್ಯಪುರೋಹಿತರಿದ್ದರು; ಅವರೇ ವಸಿಷ್ಠ ಮತ್ತು ವಾಮದೇವ. ವಸಿಷ್ಠರಂತೂ ಇಕ್ಷ್ವಾಕುವಂಶದ ಹಲವರು ಚಕ್ರವರ್ತಿಗಳನ್ನು ಕಂಡವರು. ಇವರೊಂದಿಗೆ ಸುಯಜ್ಞ, ಜಾಬಾಲಿ, ಕಾಶ್ಯಪ, ಗೌತಮ, ಮಾರ್ಕಂಡೇಯ, ದೀರ್ಘಾಯು, ಕಾತ್ಯಾಯನ ಎಂಬ ಋತ್ವಿಜರು ದಶರಥನಿಗೆ ನೆರವಾಗುತ್ತಿದ್ದರು.

ಅವನ ಅಮಾತ್ಯರೂ ಮಂತ್ರಿಗಳೂ ವಿದ್ಯೆಯಲ್ಲಿಯೂ ವಿನಯದಲ್ಲಿಯೂ ದೊಡ್ಡವರು; ಅವರೆಲ್ಲರೂ ಜನಾಪವಾದಕ್ಕೆ ಹೆದರುತ್ತಿದ್ದರು; ಹಿಡಿದ ಕಾರ್ಯವನ್ನು ಮಾಡುವುದರಲ್ಲಿ ದಕ್ಷರು; ಯಾವುದೇ ಆಮಿಷಗಳಿಗೆ ಮಾರಾಟವಾಗುವಂಥವರಲ್ಲ; ಅವರಲ್ಲಿ ಪರಸ್ಪರ ಪ್ರೀತಿ–ಗೌರವಗಳನ್ನು ಹೊಂದಿದ್ದವರು; ಎಂದಿಗೂ ನೀತಿ–ನಿಯಮಗಳನ್ನು ಮೀರಿದವರಲ್ಲ; ಜನರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದರು, ಅವರೊಂದಿಗೆ ನಗುನಗುತ್ತ ಮಾತನಾಡುತ್ತಿದ್ದರು; ಸ್ವಾರ್ಥಕ್ಕಾಗಿ ಎಂದಿಗೂ ಸುಳ್ಳು ಹೇಳಿದವರಲ್ಲ; ಅವರ ಮಕ್ಕಳು ಅಪರಾಧಿಗಳು ಎಂದು ಕಂಡುಬಂದರೆ ಅವರನ್ನೂ ಶಿಕ್ಷಿಸದೆ ಬಿಡುತ್ತಿರಲಿಲ್ಲ; ಅಪರಾಧಿ ಅಲ್ಲದಿದ್ದರೆ ತಮ್ಮ ಶತ್ರುಗಳನ್ನು ಕೂಡ ಅವರು ಹಿಂಸಿಸುತ್ತಿರಲಿಲ್ಲ; ತಮ್ಮ ರಾಜ್ಯದ ಬಗ್ಗೆ ಮಾತ್ರವಲ್ಲ, ಅಕ್ಕಪಕ್ಕದ ರಾಜ್ಯಗಳ ವಿಷಯವನ್ನೂ ಅವರು ಗೂಢಚಾರರ ಮೂಲಕ ಸಂಗ್ರಹಿಸುತ್ತಿದ್ದರು; ಎಲ್ಲರೂ ಒಂದಾಗಿ ಏಕತೆಯಿಂದ ರಾಜಕಾರ್ಯವನ್ನು ನಡೆಸುತ್ತ, ರಾಜ್ಯದ ಜನತೆಯನ್ನು ಸದಾ ನೆಮ್ಮದಿಯಾಗಿರುವಂತೆ ನೋಡಿಕೊಳ್ಳುತ್ತಿದ್ದರು; ಅವರ ರಾಜನೀತಿ ಎಂಬ ಕಣ್ಣು ಸದಾ ಜಾಗರೂಕವಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry