ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ಹೇರಿಕೆ ಆದೇಶಕ್ಕೆ ಸಹಿ

ಉಕ್ಕು, ಅಲ್ಯುಮಿನಿಯಂ ಆಮದು ನಿರ್ಬಂಧಿಸಲು ಕ್ರಮ
Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಆಮದು ಮಾಡಿಕೊಳ್ಳುವ ಉಕ್ಕು ಮತ್ತು ಅಲ್ಯುಮಿನಿಯಂಗಳ ಮೇಲೆ ದುಬಾರಿ ಸುಂಕ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಸಹಿ ಹಾಕಿದ್ದಾರೆ.

ಇದು ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಸಮರಕ್ಕೆ ಕಾರಣವಾಗಬಹುದು ಎನ್ನುವ ಭೀತಿ ಮೂಡಿಸಿದೆ. ನೆರೆಹೊರೆಯಲ್ಲಿ ಇರುವ ಕೆನಡಾ ಮತ್ತು ಮೆಕ್ಸಿಕೊ ಹೊರತುಪಡಿಸಿ ಉಳಿದೆಲ್ಲ ದೇಶಗಳಿಂದ ಆಮದು ಮಾಡಿಕೊಳ್ಳುವ ಈ ಎರಡೂ ಲೋಹಗಳ ಮೇಲೆ ಕ್ರಮವಾಗಿ ಶೇ 25 ಮತ್ತು ಶೇ 10ರಷ್ಟು ಸುಂಕ ವಿಧಿಸಲು ನಿರ್ಧರಿಸಲಾಗಿದೆ. 15 ದಿನಗಳಲ್ಲಿ ಈ ಆದೇಶ ಜಾರಿಗೆ ಬರಲಿದೆ.

ಈ ಆಮದು ಸುಂಕ ಹೇರಿಕೆಯಿಂದ ವಿನಾಯ್ತಿ ಬಯಸುವ ದೇಶಗಳು, ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಜತೆ ಸಂಧಾನ ನಡೆಸಬಹುದಾಗಿದೆ.

‘ಅಸಮರ್ಪಕ ಆಮದು ನೀತಿಯಿಂದ ಅಮೆರಿಕದ ಉದ್ಯಮ ವಹಿವಾಟು ಎದುರಿಸುತ್ತಿರುವ ನಷ್ಟ ತಡೆಗಟ್ಟಲು ಈ ಎರಡೂ ಲೋಹಗಳ ಆಮದು ನಿರ್ಬಂಧಿ
ಸುವುದು ಅನಿವಾರ್ಯವಾಗಿತ್ತು. ಅಮೆರಿಕದ ರಾಷ್ಟ್ರೀಯ ಸುರಕ್ಷತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ.

‘ದುಬಾರಿ ಆಮದು ಸುಂಕ ಪಾವತಿಸಲು ಇಚ್ಛೆ ಇಲ್ಲದವರು ಅಮೆರಿಕದಲ್ಲಿಯೇ ಉದ್ದಿಮೆಗಳನ್ನು  ಸ್ಥಾಪಿಸಲು ಮುಂದೆ ಬನ್ನಿ’ ಎಂದೂ ಅವರು ಆಹ್ವಾನ ನೀಡಿದ್ದಾರೆ.

ಅಧ್ಯಕ್ಷರ ಈ ನಿಲುವು ಅಮೆರಿಕದ ಆಡಳಿತದಲ್ಲಿಯೂ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟಿದೆ. ಪ್ರಮುಖ ಆರ್ಥಿಕ ಸಲಹೆಗಾರ ಗ್ಯಾರಿ ಕೊಹ್ನ್‌ ಅವರು ಇದೇ ಕಾರಣಕ್ಕೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪ್ರತೀಕಾರದ ಬೆದರಿಕೆ: ಅಮೆರಿಕದ ಪ್ರಮುಖ ವಾಣಿಜ್ಯ ಪಾಲುದಾರರಾಗಿರುವ ಚೀನಾ ಮತ್ತು ಐರೋಪ್ಯ ಒಕ್ಕೂಟವು ಇದಕ್ಕೆ ಪ್ರತೀಕಾರ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿವೆ. ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆ ಮೇಲಿನ ಗಂಭೀರ ಸ್ವರೂಪದ ದಾಳಿ ಇದಾಗಿದೆ ಎಂದು ಚೀನಾ ಟೀಕಿಸಿದೆ.

ಇದು ದ್ವಿಪಕ್ಷೀಯ ಬಾಂಧವ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜಪಾನ್‌ ಪ್ರತಿಕ್ರಿಯಿಸಿದೆ. ಈ ತೀರ್ಮಾನದ ವಿರುದ್ಧ ವಿಶ್ವ ವ್ಯಾಪಾರ ಸಂಘಟನೆಗೆ ದೂರು ಸಲ್ಲಿಸುವುದಾಗಿ ದಕ್ಷಿಣ ಕೊರಿಯಾ ಹೇಳಿದೆ.

ತನ್ನ ಸರಕು ಮತ್ತು ಉತ್ಪನ್ನಗಳ ಮೇಲೆ ಇತರ ದೇಶಗಳು ವಿಧಿಸುವ ತೆರಿಗೆ ದರಗಳನ್ನೇ ಅಮೆರಿಕವೂ ವಿಧಿಸಬೇಕಾಗುತ್ತದೆ ಎಂದೂ ಟ್ರಂಪ್‌ ಅವರು ಭಾರತ ಮತ್ತು ಚೀನಾಕ್ಕೆ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT