ಸೆರೆನಾ ಗೆಲುವಿನ ಆರಂಭ

ಮಂಗಳವಾರ, ಮಾರ್ಚ್ 19, 2019
20 °C

ಸೆರೆನಾ ಗೆಲುವಿನ ಆರಂಭ

Published:
Updated:
ಸೆರೆನಾ ಗೆಲುವಿನ ಆರಂಭ

ಇಂಡಿಯಾನ ವೇಲ್ಸ್‌: ಅಮೆರಿಕದ ಸೆರೆನಾ ವಿಲಿಯಮ್ಸ್, ಡಬ್ಲ್ಯುಟಿಎ ಇಂಡಿಯಾನ ವೇಲ್ಸ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಸೆರೆನಾ 7–5, 6–3ರ ನೇರ ಸೆಟ್‌ಗಳಿಂದ ಜರಿನಾ ದಿಯಾಸ್‌ ಅವರನ್ನು ಸೋಲಿಸಿದರು.

ಹೆಣ್ಣುಮಗುವಿಗೆ ಜನ್ಮ ನೀಡಿದ ನಂತರ ಸೆರೆನಾ, ಡಬ್ಲ್ಯುಟಿಎ ಟೂರ್ನಿಯಲ್ಲಿ ಆಡಿದ ಮೊದಲ ಸಿಂಗಲ್ಸ್‌ ಪಂದ್ಯ ಇದಾಗಿದ್ದರಿಂದ ಸಾಕಷ್ಟು ಕುತೂಹಲ ಗರಿಗೆದರಿತ್ತು. ಒಟ್ಟು 15 ತಿಂಗಳುಗಳ ನಂತರ ಅವರು ಕಣಕ್ಕಿಳಿದಿದ್ದಾರೆ. ಅವರು ಅಂಕಣಕ್ಕೆ ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು.

ಶ್ರೇಯಾಂಕರಹಿತ ಆಟಗಾರ್ತಿ ಸೆರೆನಾ ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ಹೀಗಾಗಿ 5–5ರ ಸಮಬಲ ಕಂಡುಬಂತು. 11ನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಅವರು ಮರು ಗೇಮ್‌ನಲ್ಲಿ ದಿಯಾಸ್‌ ಸರ್ವ್‌ ಮುರಿದು ಮುನ್ನಡೆ ಗಳಿಸಿದರು.

ಎರಡನೇ ಸೆಟ್‌ನಲ್ಲಿ ಸೆರೆನಾ ಆಟ ರಂಗೇರಿತು. ಶರವೇಗದ ಸರ್ವ್‌ ಮತ್ತು ಬ್ಯಾಕ್‌ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದರು.

ಎರಡನೇ ಸುತ್ತಿನಲ್ಲಿ ಸೆರೆನಾ, 29ನೇ ಶ್ರೇಯಾಂಕದ ಆಟಗಾರ್ತಿ ಕಿಕಿ ಬರ್ಟೆನ್ಸ್‌ ವಿರುದ್ಧ ಸೆಣಸಲಿದ್ದಾರೆ.

ಈ ವಿಭಾಗದ ಇತರ ಪಂದ್ಯಗಳಲ್ಲಿ ಸೊರಾನ್ ಕ್ರಿಸ್ಟಿ 6–2, 6–3ರಲ್ಲಿ ಮೋನಿಕಾ ನಿಕುಲೆಸ್ಕು ಎದುರೂ, ಮೋನಿಕಾ ಪುಯಿಗ್‌ 6–3, 7–6ರಲ್ಲಿ ಬೀಟ್ರಿಜ್‌ ಮಯಿಯಾ ಮೇಲೂ, ನಟಾಲಿಯಾ ವಿಖಲ್ಯಾನ್‌ಸೆವಾ 6–3, 6–2ರಲ್ಲಿ ವೆರಾ ಜ್ವೊನಾವೆರಾ ವಿರುದ್ಧವೂ, ಡೇನಿಯಲ್ ಕಾಲಿನ್ಸ್‌ 2–6, 6–4, 6–3ರಲ್ಲಿ ಟೇಲರ್‌ ಟೌನ್ಸೆಂಡ್‌ ಮೇಲೂ, ಜೆನಿಫರ್‌ ಬ್ರಾಡಿ 3–6, 6–4, 6–2ರಲ್ಲಿ ಮಿಹಾಯೆಲಾ ಬುಜಾರ್ನೆಸ್ಕೊ ಮೇಲೂ, ಏಕ್ತರಿನಾ ಮಕರೋವಾ 6–2, 6–4ರಲ್ಲಿ ಸಾರಾ ಸೊರಿಬೆಸ್‌ ವಿರುದ್ಧವೂ, ವಿಕ್ಟೋರಿಯಾ ಅಜರೆಂಕಾ 6–4, 6–2ರಲ್ಲಿ ಹೀಥರ್‌ ವಾಟ್ಸನ್‌ ಮೇಲೂ ಗೆದ್ದರು.

ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯಗಳಲ್ಲಿ ಫೆಡೆರಿಕೊ ಡೆಲ್‌ಬೊನಿಸ್‌ 6–2, 4–6, 7–5ರಲ್ಲಿ ರ‍್ಯಾನ್‌ ಹ್ಯಾರಿಸನ್‌ ಮೇಲೂ, ಮಿಷೆಲ್‌ ಕ್ರೂಯೆಜರ್ 6–4, 1–6, 6–4ರಲ್ಲಿ ಬೆನೊಟ್ ಪಿಯೆರ್‌ ವಿರುದ್ಧವೂ, ಜೆಮಿ ಚಾರ್ಡಿ 6–4, 7–6ರಲ್ಲಿ ಜೂಲಿಯನ್‌ ಬೆನ್ನೆಟಿಯು ಮೇಲೂ, ಮ್ಯಾಕ್ಸಿಮಿಲಿಯಾನ್‌ ಮಾರ್ಟೆರರ್‌ 6–7, 7–6, 6–3ರಲ್ಲಿ ಇವೊ ಕಾರ್ಲೊವಿಚ್‌ ಎದುರೂ, ಡೆನಿಸ್‌ ಶಪೊಲೊವ್‌ 6–3, 6–4ರಲ್ಲಿ ರಿಕಾರ್ಡಸ್‌ ಬೆರಾಂಕಿಸ್‌ ಮೇಲೂ ಗೆದ್ದರು.‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry