ಸರಣಿ ಗೆದ್ದ ರಾಣಿ ಬಳಗ

7

ಸರಣಿ ಗೆದ್ದ ರಾಣಿ ಬಳಗ

Published:
Updated:
ಸರಣಿ ಗೆದ್ದ ರಾಣಿ ಬಳಗ

ಸೋಲ್‌: ಅಪೂರ್ವ ಆಟ ಆಡಿದ ಭಾರತದ ಮಹಿಳಾ ಹಾಕಿ ತಂಡದವರು ದಕ್ಷಿಣ ಕೊರಿಯಾ ಎದುರಿನ ನಾಲ್ಕನೇ ಪಂದ್ಯದಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆ 3–1ರಿಂದ ಸರಣಿ ಕೈವಶ ಮಾಡಿಕೊಂಡಿದ್ದಾರೆ.

ಶುಕ್ರವಾರ ನಡೆದ ಹೋರಾಟದಲ್ಲಿ ರಾಣಿ ರಾಂಪಾಲ್‌ ಬಳಗ 3–1 ಗೋಲುಗಳಿಂದ ಗೆದ್ದಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಭಾರತ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ತಂಡ ಖಾತೆ ತೆರೆಯಿತು. ಪೆನಾಲ್ಟಿ ಕಾರ್ನರ್‌ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಗುರ್ಜಿತ್‌ ಕೌರ್‌ ಪ್ರವಾಸಿ ಪಡೆಯ ಖುಷಿಗೆ ಕಾರಣರಾದರು. ಗುರ್ಜಿತ್‌, ಎದುರಾಳಿ ತಂಡದ ಗೋಲ್‌ಕೀಪರ್‌ ಹೀಬಿನ್‌ ಜಂಗ್‌ ಅವರನ್ನು ವಂಚಿಸಿ ಚೆಂಡನ್ನು ಗುರಿ ಸೇರಿಸಿದ ರೀತಿ ಸೊಗಸಾಗಿತ್ತು.

ನಾಲ್ಕನೇ ನಿಮಿಷದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಕೊರಿಯಾಕ್ಕೆ ಸಮಬಲದ ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿ ಮುಟ್ಟಿಸಲು ಈ ತಂಡದ ಆಟಗಾರ್ತಿಗೆ ಆಗಲಿಲ್ಲ. 10ನೇ ನಿಮಿಷದಲ್ಲಿ ಸಿಕ್ಕ ಅವಕಾಶದ ಲಾಭ ಎತ್ತಿಕೊಳ್ಳಲೂ ಆತಿಥೇಯರು ವಿಫಲರಾದರು.

14ನೇ ನಿಮಿಷದಲ್ಲಿ ದೀಪಿಕಾ, ಭಾರತದ ಖುಷಿ ಹೆಚ್ಚಿಸಿದರು. ಪೆನಾಲ್ಟಿ ಕಾರ್ನರ್‌ನಲ್ಲಿ ಚುರುಕಾಗಿ ಚೆಂಡನ್ನು ಗುರಿ ಮುಟ್ಟಿಸಿದ ಅವರು 2–0 ಮುನ್ನಡೆಗೆ ಕಾರಣರಾದರು.

ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಯಾರಿಗೂ ಗೋಲು ಬಾರಿಸಲು ಆಗಲಿಲ್ಲ.

2–0 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ರಾಣಿ ಬಳಗ ಮೂರನೇ ಕ್ವಾರ್ಟರ್‌ನಲ್ಲೂ ಪರಿಣಾಮಕಾರಿ ಆಟ ಆಡಿತು. ಕೊರಿಯಾ ಕೂಡ ಪ್ರಬಲ ಪೈಪೋಟಿ ಒಡ್ಡಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ವೇಗದ ಆಟಕ್ಕೆ ಮುಂದಾದವು.

47ನೇ ನಿಮಿಷದಲ್ಲಿ ವಂದನಾ ಕಟಾರಿಯಾ ತಮ್ಮತ್ತ ಬಾರಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಪೂನಮ್‌ ರಾಣಿ ಅದನ್ನು ಲೀಲಾಜಾಲವಾಗಿ ಗುರಿಯತ್ತ ತಳ್ಳಿದರು. ಇದರೊಂದಿಗೆ 3–0ರ ಮುನ್ನಡೆ ತನ್ನದಾಗಿಸಿಕೊಂಡ ಪ್ರವಾಸಿ ಪಡೆ ಗೆಲುವಿನ ಹಾದಿ ಸುಗಮ ಮಾಡಿಕೊಂಡಿತು. ಆ ನಂತರದ 8 ನಿಮಿಷದಲ್ಲಿ ಯಾರಿಗೂ ಗೋಲು ಗಳಿಸಲು ಆಗಲಿಲ್ಲ. 57ನೇ ನಿಮಿಷದಲ್ಲಿ ಮಿ ಹ್ಯುನ್‌ ಪಾರ್ಕ್‌ ಗೋಲು ದಾಖಲಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry