ಭಾರತದ ಪ್ರಗತಿ 2014ರಲ್ಲಷ್ಟೇ ಆರಂಭವಾಯಿತೇ?

ಗುರುವಾರ , ಮಾರ್ಚ್ 21, 2019
32 °C
ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ

ಭಾರತದ ಪ್ರಗತಿ 2014ರಲ್ಲಷ್ಟೇ ಆರಂಭವಾಯಿತೇ?

Published:
Updated:
ಭಾರತದ ಪ್ರಗತಿ 2014ರಲ್ಲಷ್ಟೇ ಆರಂಭವಾಯಿತೇ?

ಮುಂಬೈ: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕೂ ಮೊದಲು ಭಾರತದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳೂ ಆಗಿರಲಿಲ್ಲವೇ ಎಂದು ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸಿದರು. ಇಲ್ಲಿ ಶುಕ್ರವಾರ ನಡೆದ ಇಂಡಿಯಾ ಟುಡೇ ಸಂವಾದದಲ್ಲಿ ಅವರು ಮಾತಾನಾಡಿದರು.

‘2014ರ ಮೇ 26ರವರೆಗೆ ಭಾರತ ಮಹಾಶೂನ್ಯವಾಗಿತ್ತೇ ಎಂದು ಕೇಳಲು ಬಯಸುತ್ತೇನೆ. ನಾಲ್ಕು ವರ್ಷದ ಹಿಂದೆಯಷ್ಟೇ ಭಾರತ ಪ್ರಗತಿಯತ್ತ ಹೆಜ್ಜೆ ಇಡಲು ಆರಂಭಿಸಿತೇ? ಅಲ್ಲಿಯವರೆಗೆ ಅಭಿವೃದ್ಧಿ ಆಗಿಯೇ ಇಲ್ಲ ಎಂದು ಬೊಬ್ಬಿಡುವುದು ಭಾರತೀಯರ ಪ್ರಜ್ಞೆಗೆ ಮಾಡುತ್ತಿರುವ ಅವಮಾನವಲ್ಲವೇ’ ಎಂದು ಸೋನಿಯಾ ಪ್ರಶ್ನಿಸಿದರು.

‘ದೇಶದ ಸಾಧನೆಗಳನ್ನು ಒಪ್ಪಿಕೊಳ್ಳುವ ಮನಸ್ಸು ಇಲ್ಲದೇ ಇರುವುದು ಅಹಂಕಾರವಲ್ಲದೆ ಮತ್ತೇನಲ್ಲ’ ಎಂದು ಅವರು ಟೀಕಿಸಿದರು.

‘ದೇಶದ ಸಾಧನೆಗಳೆಲ್ಲವೂ ಭಾರತೀಯರ ಸಾಮೂಹಿಕ ಪ್ರಯತ್ನದ ಫಲ. ಅವೆಲ್ಲವನ್ನೂ ಎನ್‌ಡಿಎ ಸರ್ಕಾರ ಅತ್ಯಂತ ಸಿನಿಕತನದಿಂದ ಅಲ್ಲಗಳೆಯುತ್ತಿದೆ. ಭಾರತದ ಪರಿಕಲ್ಪನೆಯನ್ನು ಮರುರೂಪಿಸುವ ಬಹುದೊಡ್ಡ ಕಾರ್ಯಸೂಚಿಯ ಭಾಗವಿದು. ಇತಿಹಾಸ ತಿದ್ದುವುದು, ದೇಶ ಕಟ್ಟಿದ ನಾಯಕರ ಅವಹೇಳನ, ಪೂರ್ವಗ್ರಹಗಳನ್ನು ಹುಟ್ಟುಹಾಕುವುದು ಮತ್ತು ಸುಳ್ಳು ಮಾಹಿತಿಗಳನ್ನು ವೈಭವೀಕರಿಸವುದು ಈ ಕಾರ್ಯಸೂಚಿಯ ಭಾಗಗಳು’ ಎಂದು ಅವರು ಆರೋಪಿಸಿದ್ದಾರೆ.

‘ಸಂವಿಧಾನದ ಮೂಲ ಆಶಯಗಳು ಮತ್ತು ಮೌಲ್ಯಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತರಲಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆ. ಸಂವಿಧಾನವನ್ನು ಬದಲಿಸುವ ಮಾತುಗಳು ಪದೇ ಪದೇ ಕೇಳಿಬರುತ್ತಿದೆ. ಸರ್ಕಾರದ ಭಾಗವಾಗಿರುವವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಆಕಸ್ಮಿಕ ಅಲ್ಲವೇ ಅಲ್ಲ. ಭಾರತ ಪರಿಕಲ್ಪನೆಯನ್ನು ಮರುರೂಪಿಸುವ ಸಂಚಿನ ಭಾಗಗಳಿವು. ಇವೆಲ್ಲವುಗಳ ಪರಿಣಾಮ ನಮ್ಮ ಕಣ್ಣೆದುರು ಇದೆ. ಬೆದರಿಕೆ ಮತ್ತು ದಬ್ಬಾಳಿಕೆಗಳು ಸಾಮಾನ್ಯ ಎಂಬಂತಾಗಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸೋನಿಯಾ ಹೇಳಿದ್ದು

* ಈಗ ಭಿನ್ನಾಭಿಪ್ರಾಯಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಭಿನ್ನದನಿಗಳನ್ನು ಅಡಗಿಸಲಾಗುತ್ತಿದೆ. ಸ್ವತಂತ್ರವಾಗಿ ಚಿಂತಿಸುವ ಹಾಗೇ ಇಲ್ಲ. ನಮಗೆ ಇಷ್ಟವಾದದ್ದನ್ನು ತಿನ್ನುವಂತಿಲ್ಲ, ನಮ್ಮಿಷ್ಟದವರನ್ನು ಭೇಟಿ ಮಾಡುವಂತಿಲ್ಲ–ಮದುವೆಯಾಗುವಂತಿಲ್ಲ.

* ಆಡಳಿತದಲ್ಲಿ ಪಾರದರ್ಶಕತೆ ತರುವ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆ ರೂಪಿಸಿದೆವು. ಆದರೆ ಈಗ ಮಾಹಿತಿ ಹಕ್ಕು ಕಾರ್ಯಕರ್ತರನ್ನೇ ಕೊಲ್ಲಲಾಗುತ್ತಿದೆ.

* ನಾವು ರೂಪಿಸಿದ ಆಧಾರ್ ಜನ ಸಬಲೀಕರಣದ ಸಾಧನವಾಗಿತ್ತು. ಆದರೆ ಈಗ ಅದು ಜನ ನಿಯಂತ್ರಣದ ಸಲಕರಣೆಯಾಗಿದೆ.

ಮೋದಿಯ ಚುನಾವಣಾ ತಂತ್ರ ಎದುರಿಸಲಾಗಲಿಲ್ಲ

‘ಸತತ ಎರಡು ಅವಧಿಗೆ ನಾವು ಆಡಳಿತದಲ್ಲಿ ಇದ್ದುದರಿಂದ ಆಡಳಿತ ವಿರೋಧಿ ಅಲೆಯಿತ್ತು. ಅದರ ಜತೆಗೆ ಇನ್ನಿತರ ಸಮಸ್ಯೆಗಳ ಕಾರಣಕ್ಕೆ ನಾವು 2014ರ ಲೋಕಸಭಾ ಚುನಾವಣೆಯಲ್ಲಿ ಸೋತೆವು. ನರೇಂದ್ರ ಮೋದಿಯ ಚುನಾವಣಾ ಪ್ರಚಾರ ಕಾರ್ಯಕ್ರಮಗಳು ಮತ್ತು ತಂತ್ರಗಳಿಗೆ ನಾವು ಪೈಪೋಟಿ ನೀಡಲು ಸಾಧ್ಯವೇ ಆಗಲಿಲ್ಲ’ ಎಂದು ಸೋನಿಯಾ ಹೇಳಿದರು.

‘ಮೋದಿಯವರ ‘ಒಳ್ಳೆಯ ದಿನಗಳು’ ಅಭಿಯಾನವು ವಾಜಪೇಯಿಯವರ ‘ಭಾರತ ಪ್ರಕಾಶಿಸುತ್ತಿದೆ’ ಅಭಿಯಾನದ ಹಾದಿಯನ್ನೇ ಹಿಡಿಯುತ್ತದೆ. ‘ಭಾರತ ಪ್ರಕಾಶಿಸುತ್ತಿದೆ’ಯಿಂದಲೇ 2004ರಲ್ಲಿ ನಾವು ಅಧಿಕಾರಕ್ಕೆ ಬಂದದ್ದು’ ಎಂದು ಅವರು ಹೇಳಿದರು.

ಅತಿ ಆತ್ಮವಿಶ್ವಾಸ ಬೇಡ

‘ಕರ್ನಾಟಕ ನಮಗೆ ಅತ್ಯಂತ ಮಹತ್ವದ ರಾಜ್ಯ. ಅಲ್ಲಿ ಮರಳಿ ಅಧಿಕಾರಕ್ಕೆ ಬರಲು ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಮರಳಿ ಅಧಿಕಾರಕ್ಕೆ ಬರುವ ಬಗ್ಗೆ ಪಕ್ಷದ ಅಲ್ಲಿನ ನಾಯಕರು ಆತ್ಮವಿಶ್ವಾಸದಿಂದ ಇದ್ದಾರೆ. ಆದರೆ ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ. ಹೀಗಾಗಿ ಕೊನೆಯ ಕ್ಷಣದವರೆಗೂ ದುಡಿಯಲೇಬೇಕು’ ಎಂದು ರಾಜ್ಯದ ನಾಯಕರಿಗೆ ಸೋನಿಯಾ ಕಿವಿಮಾತು ಹೇಳಿದರು.

ಸಲಹೆ ನೀಡುವುದಿಲ್ಲ

‘ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡುವ ಧೈರ್ಯ ಮಾಡುವುದಿಲ್ಲ. ಆ ಕೆಲಸ ಮಾಡಲು ಅವರ ಸುತ್ತ ಹಲವರಿದ್ದಾರೆ’ ಎಂದು ಸೋನಿಯಾ ಹೇಳಿದ್ದಾರೆ. ‘ಪ್ರಧಾನಿಗೆ ಸಲಹೆ ನೀಡುತ್ತೀರಾ’ ಎಂದು ಕೇಳಿದ ಪ್ರಶ್ನೆಗೆ ಅವರು ಈ ಮಾತು ಹೇಳಿದರು.

‘ಮೋದಿಯ ಬಗ್ಗೆ ನನಗೆ ವೈಯಕ್ತಿಕವಾಗಿ ಏನೂ ಗೊತ್ತಿಲ್ಲ. ಆದರೆ ಅಟಲ್ ಬಿಹಾರಿ ವಾಜಪೇಯಿಯವರು ನಮ್ಮ ರಾಜಕೀಯ ವಿರೋಧಿಗಳಾಗಿದ್ದರೂ, ಆಡಳಿತಾತ್ಮಕ ಸಂಬಂಧ ಚೆನ್ನಾಗೇ ಇತ್ತು. ಸಂಸದೀಯ ಪ್ರಜಾತಂತ್ರದ ಬಗ್ಗೆ ವಾಜಪೇಯಿಗೆ ಅಪಾರ ಗೌರವವಿತ್ತು’ ಎಂದು ಮೋದಿ ಮತ್ತು ವಾಜಪೇಯಿಯವರ ಆಡಳಿತ ವೈಖರಿ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

*

ನನಗೆ ಮಿತಿಗಳ ಅರಿವಿತ್ತು. ಮನಮೋಹನ್ ಸಿಂಗ್ ನನಗಿಂತಲೂ ಉತ್ತಮ ಪ್ರಧಾನಿಯಾಗಬಲ್ಲರು ಎಂದು ತಿಳಿದಿದ್ದರಿಂದ 2004ರಲ್ಲಿ ಅವರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಿದೆವು.

–ಸೋನಿಯಾ ಗಾಂಧಿ, ಕಾಂಗ್ರೆಸ್ ನಾಯಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry