ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿ ಮತ್ತೆ ಮೂರು ದಿನ ಸಿಬಿಐ ವಶಕ್ಕೆ

20ರವರೆಗೆ ಬಂಧನಕ್ಕೆ ತಡೆ: ಸದ್ಯ ಚಿದಂಬರಂ ಪುತ್ರ ನಿರಾಳ
Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಲಂಚ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮತ್ತೆ ಮೂರು ದಿನ ಸಿಬಿಐ ವಶಕ್ಕೆ ನೀಡಿದೆ.

ಕಾರ್ತಿ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ ಸಿಬಿಐ ಅಧಿಕಾರಿಗಳು, ವಿಚಾರಣೆಗಾಗಿ ಮತ್ತೆ ಆರು ದಿನ ಅವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು. ಕಾರ್ತಿ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಈ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದರು.

ಸಿಬಿಐ ಮನವಿ ತಿರಸ್ಕರಿಸಿದ ನ್ಯಾಯಾಧೀಶರು, ಮೂರು ದಿನ ಮಾತ್ರ ಆರೋಪಿ ಕಾರ್ತಿಯನ್ನು ಸಿಬಿಐ ವಶಕ್ಕೆ ಒಪ್ಪಿಸಿದರು. ಸೋಮವಾರ ಮತ್ತೆ ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಸೂಚಿಸಿದರು. ಜಾಮೀನು ಕೋರಿ ಕಾರ್ತಿ ಸಲ್ಲಿಸಿರುವ ಅರ್ಜಿ 15ರಂದು ವಿಚಾರಣೆಗೆ ಬರಲಿದೆ.

ಐಎನ್‌ಎಕ್ಸ್‌ ಮೀಡಿಯಾಕ್ಕೆ ವಿದೇಶಿ ಹೂಡಿಕೆ ಅನುಮತಿ ನೀಡುವುದಕ್ಕಾಗಿ ಲಂಚ ಪಡೆದ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಫೆ.28ರಂದು ಲಂಡನ್‌ನಿಂದ ಬಂದಿಳಿದ ಕಾರ್ತಿ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ  ಬಂಧಿಸಿದ್ದರು. ಅಂದಿನಿಂದಲೂ ಅವರು ಸಿಬಿಐ ವಶದಲ್ಲಿದ್ದಾರೆ.

ಕಾರ್ತಿ ಅವರ ಲೆಕ್ಕಪರಿಶೋಧಕ ಎಸ್‌. ಭಾಸ್ಕರರಾಮನ್‌ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಇದೇ 22ರವರೆಗೆ ವಿಸ್ತರಿಸಿದೆ.

ಬಂಧನಕ್ಕೆ ಹೈಕೋರ್ಟ್‌ ತಡೆ– ಸದ್ಯಕ್ಕೆ ನಿರಾಳ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಾರ್ಚ್ 20ರವರೆಗೆ ಕಾರ್ತಿ ಚಿದಂಬರಂ ಅವರನ್ನು ಬಂಧಿಸದಂತೆ ದೆಹಲಿ ಹೈಕೋರ್ಟ್‌ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ. 20ರಂದು ದೆಹಲಿ ಹೈಕೋರ್ಟ್‌ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಕಾರ್ತಿ ಮನವಿ ಪರಿಗಣಿಸಿದ ನ್ಯಾಯಾಲಯವು ವಿವರಣೆ ಕೋರಿ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಈ ಮೊದಲು ಜಾರಿ ನಿರ್ದೇಶನಾಲಯವನ್ನಷ್ಟೇ ಪ್ರತಿವಾದಿ ಮಾಡಿದ್ದ ಕಾರ್ತಿ ಪರ ವಕೀಲರು, ಈಗ ಕೇಂದ್ರ ಸರ್ಕಾರವನ್ನೂ ಸೇರಿಸಿದ್ದಾರೆ.

ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್‌ ರದ್ದು ಮಾಡುವಂತೆ ಕಾರ್ತಿ ಪರ ವಕೀಲ ಹಾಗೂ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್‌ ಅವರು ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿತ್ತು.

‘ಕಾರ್ತಿಯೇ ಎಎಸ್‌ಸಿಪಿಎಲ್‌ ಒಡೆಯ’
ಚೆನ್ನೈ ಮೂಲದ ಅಡ್ವಾನ್ಸ್‌ಡ್‌ ಸ್ಟ್ರಾಟೆಜಿಕ್‌ ಕನ್ಸಲ್ಟೆನ್ಸಿ ಪ್ರೈವೇಟ್‌ ಲಿಮಿಟೆಡ್‌ (ಎಎಸ್‌ಸಿಪಿಎಲ್‌) ಜತೆ ಕಾರ್ತಿಗೆ ನೇರ ಸಂಬಂಧವಿದೆ ಎಂದು ಸಿಬಿಐ ಹೇಳಿದೆ.

ಲೆಕ್ಕ ಪರಿಶೋಧಕ ಎಸ್‌. ಭಾಸ್ಕರರಾಮನ್‌ ಮೂಲಕ ಕಾರ್ತಿ ಈ ಸಂಸ್ಥೆ ನಡೆಸುತ್ತಿದ್ದರು. ಆದರೆ, ಅವರೇ ಈ ಸಂಸ್ಥೆಯ ನಿಜವಾದ ಒಡೆಯ. ಎಎಸ್‌ಸಿಪಿಎಲ್‌ ನಿರ್ದೇಶಕರು ತನಿಖೆಯ ವೇಳೆ ಈ ವಿಷಯ ತಿಳಿಸಿದ್ದಾರೆ ಎಂದು ಸಿಬಿಐ ಹೇಳಿದೆ.

ಈ ಕಂಪನಿ ಜತೆ ತಮಗೆ ಯಾವ ಸಂಬಂಧವೂ ಇಲ್ಲ ಎಂದು ಕಾರ್ತಿ ವಾದಿಸುತ್ತಿದ್ದಾರೆ.

ಕಾರ್ತಿ ಅವರೇ ಎಎಸ್‌ಸಿಪಿಎಲ್‌ ನಿಜವಾದ ಮಾಲೀಕ ಎಂದು ಸಂಸ್ಥೆಯ ನಿರ್ದೇಶಕರು ಮಾರ್ಚ್‌ 5ರಂದು ಸಿಬಿಐ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ತಿ ನಿರ್ದೇಶನದಂತೆಯೇ ಭಾಸ್ಕರರಾಮನ್‌ ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿಯನ್ನು ಸಿಬಿಐ ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ.

ವಿದೇಶಿ ಹೂಡಿಕೆ ಅನುಮತಿ ಪಡೆಯಲು ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಯು ಕಾರ್ತಿ ಅವರ ಎಎಸ್‌ಸಿಪಿಎಲ್‌ಗೆ ₹9,96,296 ಲಂಚ ನೀಡಿದ ದಾಖಲೆಗಳನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ನಂತರ  ನ್ಯಾಯಾಂಗ ಬಂಧನದಲ್ಲಿರುವ ಲೆಕ್ಕ ಪರಿಶೋಧಕ ಭಾಸ್ಕರರಾಮನ್‌ ಅವರನ್ನು ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT