ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಪಟ್ಟು ವಿವಾಹ: ಯುವಜೋಡಿ ಹೇಳಿಕೆ

ಸಕ ಶಿವಮೂರ್ತಿ ನಾಯ್ಕ್ ಪುತ್ರಿ ಲಕ್ಷ್ಮಿ ನಾಯ್ಕ್ –ನಿರ್ಮಾಪಕ ಸುಂದರ್‌ ಗೌಡ
Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಬಿಟ್ಟು ಹೋಗಿ ಮೈಸೂರಿನಲ್ಲಿ ಮದುವೆಯಾಗಿರುವ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಲಕ್ಷ್ಮಿ ನಾಯ್ಕ್ ಹಾಗೂ ‘ಮಾಸ್ತಿಗುಡಿ’ ಸಿನಿಮಾ ನಿರ್ಮಾಪಕ ಸುಂದರ್‌ ಗೌಡ ಯಲಹಂಕ ಉಪನಗರ ಪೊಲೀಸ್‌ ಠಾಣೆಗೆ ಶುಕ್ರವಾರ ಹಾಜರಾಗಿ ಹೇಳಿಕೆ ನೀಡಿದರು.

ಶಿವಮೂರ್ತಿ ಕುಟುಂಬವು ಯಲಹಂಕ ಉಪನಗರದಲ್ಲಿ ವಾಸವಿದೆ. ಮಾ. 7ರಂದು ಮನೆಯಿಂದ ಲಕ್ಷ್ಮಿ ನಾಪತ್ತೆ ಆಗಿದ್ದರು. ಅವರ ತಾಯಿ (ಶಿವಮೂರ್ತಿ ಪತ್ನಿ) ಠಾಣೆಗೆ ದೂರು ನೀಡಿದ್ದರು. ಲಕ್ಷ್ಮಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಮರುದಿನ ಸಾಮಾಜಿಕ ಜಾಲತಾಣಗಳಲ್ಲಿ ಮದುವೆ ಫೋಟೊಗಳನ್ನು ಪ್ರಕಟಿಸಿದ್ದ ಲಕ್ಷ್ಮಿ, ‘ನಾನು ಸುಂದರ್‌ಗೌಡ ಅವರನ್ನು ಮದುವೆಯಾಗಿದ್ದೇನೆ’ ಎಂದಿದ್ದರು.

‘ಸುಂದರ್‌ ಗೌಡ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಹೋಗಿರಬಹುದು’ ಎಂದು ಅನುಮಾನಪಟ್ಟಿದ್ದ ಪೊಲೀಸರು, ಅವರಿಗಾಗಿ ಹುಡುಕಾಟ
ನಡೆಸಿದ್ದರು. ಲಕ್ಷ್ಮಿ ಅವರ ಫೇಸ್‌ಬುಕ್‌ ಬರಹದಲ್ಲಿದ್ದ ಮಾಹಿತಿ ಆಧರಿಸಿ ಮೈಸೂರಿಗೆ ಹೋಗಿದ್ದ ಪೊಲೀಸರ ತಂಡ, ದಂಪತಿ ತಂಗಿದ್ದ ‘ರೂಸ್ಟ್‌ ರೆಸಾರ್ಟ್‌’ನಲ್ಲಿ ಪರಿಶೀಲನೆ ನಡೆಸಿತ್ತು. ಅಲ್ಲಿ ಸುಂದರ್‌ ಗೌಡ ಸಂಬಂಧಿಕರು ಮಾತ್ರ ವಾಸವಿದ್ದರು. ಅವರಿಂದಲೇ ಮಾಹಿತಿ ಪಡೆದು ವಾಪಸ್‌ ಬಂದಿತ್ತು.

ಆ ಮಾಹಿತಿ ತಿಳಿದ ಸುಂದರ್‌ ಗೌಡ ಹಾಗೂ ಲಕ್ಷ್ಮಿ, ನಟ ದುನಿಯಾ ವಿಜಯ್ ಮನೆಗೆ ಶುಕ್ರವಾರ ಬೆಳಿಗ್ಗೆ ಬಂದಿದ್ದರು. ನಂತರ ವಿಜಯ್‌ ಅವರೇ ಬೆಳಿಗ್ಗೆ 10 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದರು. ಇನ್‌ಸ್ಪೆಕ್ಟರ್‌ ಮಂಜುನಾಥ್‌ ಕೊಠಡಿಯಲ್ಲೇ ಅವರಿಬ್ಬರು ಹೇಳಿಕೆ ನೀಡಿದರು. ಮಧ್ಯಾಹ್ನ 12 ಗಂಟೆಗೆ ಠಾಣೆಯಿಂದ ನಿರ್ಗಮಿಸಿದರು.

ಇಷ್ಟಪಟ್ಟು ಮದುವೆ:  ಅವರಿಬ್ಬರ ಹೇಳಿಕೆಯನ್ನು ಪೊಲೀಸರು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಹೇಳಿಕೆಯಲ್ಲಿ ಲಕ್ಷ್ಮಿ, ‘ನಾನು ಇಷ್ಟಪಟ್ಟು ಮದುವೆಯಾಗಿದ್ದೇನೆ. ಮದುವೆಗೆ ನನ್ನನ್ನು ಯಾರೂ ಬಲವಂತಪಡಿಸಿಲ್ಲ. ನನಗೆ 23 ವರ್ಷವಾಗಿದ್ದು, ಮದುವೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಸ್ವತಂತ್ರಳಾಗಿದ್ದೇನೆ’ ಎಂದಿದ್ದಾರೆ.

ಸುಂದರ್‌ ಗೌಡ, ‘ಪರಸ್ಪರ ಪ್ರೀತಿಸಿ ಮದುವೆಯಾಗಿದ್ದೇವೆ. ಆಕೆಯನ್ನು ನಾನು ಅಪಹರಿಸಿದ್ದೇನೆ ಎನ್ನುವುದು ಸುಳ್ಳು’ ಎಂದಿದ್ದಾರೆ.

‘ಮದುವೆ ಬಗ್ಗೆ ಮಾತುಕತೆ ನಡೆಸಿಲ್ಲ’: ‘ಮದುವೆ ಮಾಡಿಕೊಳ್ಳುವ ಬಗ್ಗೆ ನಮ್ಮೊಂದಿಗೆ ಯಾರೂ ಮಾತುಕತೆ ನಡೆಸಿರಲಿಲ್ಲ. ಮಾತನಾಡಿ ಒಪ್ಪಿಗೆ ಪಡೆದೇ ಮದುವೆ ಆಗಬಹುದಿತ್ತು’ ಎಂದು ಲಕ್ಷ್ಮಿ ಅಣ್ಣ ಸೂರಜ್ ಹೇಳಿದರು.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಅವರಿಬ್ಬರ ಪ್ರೀತಿ ವಿಚಾರ ನಮಗೆ ಗೊತ್ತಿರಲಿಲ್ಲ. ನಮಗೆ ಹೇಳಿದ್ದರೆ ನಾವೇ ಮದುವೆ ಮಾಡಿಸುತ್ತಿದ್ದೆವು. ನಮ್ಮ ಕುಟುಂಬದ ಹೆಸರು ಕೆಡಿಸಲು ಇಷ್ಟೆಲ್ಲ ಅವಾಂತರ ಮಾಡಲಾಗಿದೆ’ ಎಂದು ದೂರಿದರು.

‘ಮದುವೆ ಬಗ್ಗೆ ದುನಿಯಾ ವಿಜಯ್ ನಮ್ಮ ಜತೆ ಮಾತನಾಡಬಹುದಿತ್ತು. ಪ್ರಚಾರಕ್ಕಾಗಿ ಅವರಿಬ್ಬರನ್ನು ಠಾಣೆಗೆ ಕರೆತರುವ ಅವಶ್ಯಕತೆ ಇರಲಿಲ್ಲ. ನಮ್ಮ ತಂಗಿಯ ಜೀವನ ನಮಗೆ ಮುಖ್ಯ. ಆಕೆಯ ಸಂತೋಷವೇ ನಮ್ಮ ಸಂತೋಷ’ ಎಂದರು.

‘8 ತಿಂಗಳ ಪ್ರೀತಿಗಾಗಿ ಮನೆ ತೊರೆದ ಲಕ್ಷ್ಮಿ’
‘ಲಕ್ಷ್ಮಿ ನಮ್ಮ ಮನೆಯ ದೇವತೆ. ಯಾವುದೇ ಕೊರತೆ ಆಗದಂತೆ ಆಕೆಯನ್ನು ಬೆಳೆಸಿದ್ದೆವು. ಆದರೆ, ಆಕೆ 8 ತಿಂಗಳ ಪ್ರೀತಿಗಾಗಿ ನಮ್ಮನ್ನೆಲ್ಲ ತೊರೆದು ಹೋಗಿದ್ದಾಳೆ’ ಎಂದು ಕುಟುಂಬದ ಸದಸ್ಯರು ತಿಳಿಸಿದರು.

ಠಾಣೆ ಎದುರು ಸುದ್ದಿಗಾರರ ಜತೆ ಮಾತನಾಡಿದ ಸಂಬಂಧಿಕರೊಬ್ಬರು, ‘ಹುಡುಗನಿಗೆ 36 ವರ್ಷ ಹಾಗೂ ಲಕ್ಷ್ಮಿಗೆ 23 ವರ್ಷ. ಅವರಿಬ್ಬರ ನಡುವೆ 13 ವರ್ಷ ಅಂತರವಿದೆ. ಅವರು ಮದುವೆಯಾಗುವುದು ಸರಿಯೇ’ ಎಂದು ಪ್ರಶ್ನಿಸಿದರು.

’ರಾಜರಾಜೇಶ್ವರಿ ನಗರದ ವೈದ್ಯಕೀಯ ಕಾಲೇಜೊಂದರಲ್ಲಿ ಲಕ್ಷ್ಮಿ, ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಳೆ. ಅದೇ ಕಾಲೇಜಿನಲ್ಲೇ 8 ತಿಂಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಸುಂದರ್‌ ಗೌಡ ಭಾಗವಹಿಸಿದ್ದರು. ಆಗಲೇ ಪರಸ್ಪರ ಪರಿಚಯವಾಗಿತ್ತು. ನಂತರ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು. ಈ ವಿಷಯವನ್ನು ಅವರ ಸ್ನೇಹಿತರು ನಮಗೆ ತಿಳಿಸಿದ್ದಾರೆ’ ಎಂದರು.

‘ಲಕ್ಷ್ಮಿ ತಂದೆ ಶಾಸಕ‌. ಕುಟುಂಬದ ಅಂತಸ್ತಿಗೆ ತಕ್ಕಂತೆ ಐಪಿಎಸ್ ಅಥವಾ ಐಎಎಸ್ ಅಧಿಕಾರಿಗೆ ಮಗಳನ್ನು ಕೊಟ್ಟು ಮದುವೆ ಮಾಡಬೇಕು ಎಂದು ಅಂದುಕೊಂಡಿದ್ದರು. ಆದರೆ, ಈಗ ಆಗಿದ್ದೇ ಬೇರೆ’

‘ಲಕ್ಷ್ಮಿ ಹೆಸರಿನಲ್ಲಿ ₹ 50 ಕೋಟಿ ಆಸ್ತಿ ಇದೆ. ಅದಕ್ಕೆ ಆಸೆಪಟ್ಟು ಸುಂದರ್‌ ಗೌಡ, ಆಕೆಯನ್ನು ಮರಳು ಮಾಡಿದ್ದಾನೆ. ‘ಮಾಸ್ತಿಗುಡಿ’ ಸಿನಿಮಾ ಪ್ರಕರಣದಲ್ಲಿ ಆತ ಜೈಲಿಗೆ ಹೋಗಿ ಬಂದಿದ್ದಾನೆ. ಆತ ಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವೇ. ಹೆತ್ತವರ ಶಾಪ ಆತನಿಗೆ ತಟ್ಟುವುದು ನಿಶ್ಚಿತ’ ಎಂದು ಅತ್ತರು.

ಕುಸಿದುಬಿದ್ದ ಅಜ್ಜಿ

ಲಕ್ಷ್ಮಿ ಮನವೊಲಿಕೆಗೆ ಆಕೆಯ ಕುಟುಂಬದವರು ಠಾಣೆಗೆ ಬಂದು ಪ್ರಯತ್ನಿಸಿದರು. ಅಜ್ಜಿ ಕಣ್ಣೀರಿಡುತ್ತಲೇ, ‘ಬಾ ಲಕ್ಷ್ಮಿ ಮನೆಗೆ’ ಎಂದು ಗೋಗರೆದರು. ಆದರೆ, ಮೊಮ್ಮಗಳು ಮನಸು ಬದಲಾಯಿಸಲಿಲ್ಲ.

ಅತ್ತು ಸುಸ್ತಾದ ಅಜ್ಜಿ ಠಾಣೆಯಲ್ಲಿ ಕುಸಿದು ಬಿದ್ದರು. ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

**

ಇಬ್ಬರೂ ಒಪ್ಪಿಗೆಯಿಂದ ಮದುವೆಯಾಗಿದ್ದೀರಾ? ಎಂದು ಇನ್‌ಸ್ಪೆಕ್ಟರ್‌ ಕೇಳಿದರು. ನಾವು ಹೌದು ಎಂದು ಹೇಳಿದ್ದೇವೆ
– ಸುಂದರ್‌ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT