ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಶ್ರೀ’ ಪ್ರಶಸ್ತಿ ಪ್ರದಾನ

Last Updated 9 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೊಂದಳಿ ಕಲೆಗಾರ ವೆಂಕಪ್ಪ ಅಂಬಾಜಿ ಸುಗತೇಕರ ಹಾಗೂ ಕರಡಿ ವಾದನ ಕಲಾವಿದ ವೆಂಕಪ್ಪ ಪುಲಿ ಅವರಿಗೆ ಶುಕ್ರವಾರ ಇಲ್ಲಿ 2017ನೇ ಸಾಲಿನ ‘ಜಾನಪದ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂಕಪ್ಪ ಅಂಬಾಜಿ ಸುಗತೇಕರ, ‘ನನ್ನ ಅಪ್ಪನಿಂದ ಬಳುವಳಿಯಾಗಿ ಬಂದಿರುವ ಈ ಕಲೆಯಿಂದಲೇ ಕುಟುಂಬದ ನಿರ್ವಹಣೆಯಾಗುತ್ತಿದೆ. ಈ ಕಲೆಯೊಂದಿಗೆ ನಾವು ಬದುಕುತ್ತಿದ್ದೇವೆ. 60 ವರ್ಷಗಳಿಂದ ಈ ಕಲೆಯೊಂದಿಗೆ ನಡೆದುಬಂದಿದ್ದೇನೆ’ ಎಂದರು.

ಬಾಗಲಕೋಟೆಯವರಾದ ಇವರು ಮನೆಮನೆಗೆಹೋಗಿ ದಾಸರಪದ, ತತ್ವಪದ, ದೇವಿ ಪದ, ಪುರಂದರದಾಸ– ಕನಕದಾಸರ ಕೀರ್ತನೆಗಳು, ಶಿಶುನಾಳ ಶರೀಫರ ಪದಗಳು ಮತ್ತು ರಾಜರ ಕಥೆಗಳನ್ನು ಗಾಯನದ ರೂಪದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಗೊಂದಳಿ ಎನ್ನುವ ಅಲೆಮಾರಿ ಸಮುದಾಯದ ಕಲೆ ಇದಾಗಿದೆ.

ಹುಬ್ಬಳ್ಳಿಯ ಗಿರಿಯಾಲದ ವೆಂಕಪ್ಪ ಪುಲಿ ಅವರು 13ನೇ ವಯಸ್ಸಿನಲ್ಲಿಯೇ ಗೆಳೆಯರ ಜೊತೆ ಸೇರಿ ಮೇಳ ಕಟ್ಟಿದ್ದರು.  ಅನೇಕ ವರ್ಷಗಳಿಂದ ಕರಡಿವಾದನವನ್ನು ಪ್ರದರ್ಶಿಸುತ್ತಿದ್ದಾರೆ. ‘ತಲೆಗೆ ಹಳದಿ ರುಮಾಲು, ನೆಹರೂ ಅಂಗಿ, ಬಿಳಿಯ ಪಂಚೆ, ನಡುಕಟ್ಟು, ಕಿರೀಟಧಾರಿಯಾಗಿ ಕರಡಿಮಜಲನ್ನು ಹೊತ್ತು ಈ ಕಲೆಯನ್ನು ಪ್ರದರ್ಶಿಸುತ್ತೇವೆ’ ಎಂದು ಕಲೆಯ ಕುರಿತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ‘ಈ ಬಾರಿಯಿಂದ ಇಬ್ಬರಿಗೆ ಪ್ರಶಸ್ತಿ ನೀಡುತ್ತಿದ್ದೇವೆ. ಜನಪದ ಕಲಾವಿದರಲ್ಲಿ ಹೆಚ್ಚು ಬಡವರೇ ಇರುತ್ತಾರೆ. ಹಾಗಾಗಿ ಪ್ರಶಸ್ತಿಯ ಮೊತ್ತವನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT