2011ರ ಕೆಪಿಎಸ್‌ಸಿ ಆಯ್ಕೆ ಪಟ್ಟಿ ಹಗರಣ: ಅಭ್ಯರ್ಥಿಗಳ ಆಯ್ಕೆ ರದ್ದು

7

2011ರ ಕೆಪಿಎಸ್‌ಸಿ ಆಯ್ಕೆ ಪಟ್ಟಿ ಹಗರಣ: ಅಭ್ಯರ್ಥಿಗಳ ಆಯ್ಕೆ ರದ್ದು

Published:
Updated:
2011ರ ಕೆಪಿಎಸ್‌ಸಿ ಆಯ್ಕೆ ಪಟ್ಟಿ ಹಗರಣ: ಅಭ್ಯರ್ಥಿಗಳ ಆಯ್ಕೆ ರದ್ದು

ಬೆಂಗಳೂರು: ‘2011ರ ಸಾಲಿನ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಆಯ್ಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ವೇದ್ಯವಾಗಿದೆ’ ಎಂದು ಶುಕ್ರವಾರ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌ ಎಲ್ಲ 362 ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ರದ್ದುಪಡಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿಗೆ ಮುಖಭಂಗವಾದಂತಾಗಿದೆ.

ಅಂತಿಮ ಆಯ್ಕೆ ಪಟ್ಟಿಯಿಂದ ವಂಚಿತರಾಗಿದ್ದ ಆರ್‌.ರೇಣುಕಾಂಬಿಕೆ ಸೇರಿದಂತೆ 13 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದೆ. 2014ರ ಮಾರ್ಚ್‌ 21ರಂದು ಕೆಪಿಎಸ್‌ಸಿ ಪ್ರಕಟಿಸಿದ್ದ ಅಂತಿಮ ಆಯ್ಕೆ ಪಟ್ಟಿಯನ್ನು ಕಾನೂನು ಬಾಹಿರ ಎಂದು ಘೋಷಿಸಿದೆ.

ಈ ತೀರ್ಪಿನಿಂದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಆದೇಶದ ಮೇರೆಗೆ ವಿವಿಧ ಇಲಾಖೆಗಳಲ್ಲಿ ಸುಮಾರು 70 ಅಭ್ಯರ್ಥಿಗಳಿಗೆ

ಹುದ್ದೆ ತೋರಿಸಿ ಸರ್ಕಾರ ಹೊರಡಿಸಿದ್ದ ನೇಮಕಾತಿ ಆದೇಶವೂ ಇದೇ ವೇಳೆ ರದ್ದುಗೊಂಡಂತಾಗಿದೆ. ‘ಆಯ್ಕೆ ಪ್ರಕ್ರಿಯೆ ಸೇವಾ ನಿಯಮದ ವ್ಯಾಪ್ತಿಗೆ ಒಳಪಡುವುದರಿಂದ ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿಗಣಿಸಬಾರದು’ ಎಂಬ ಪ್ರತಿವಾದಿಗಳ ಕೋರಿಕೆಯನ್ನು ನ್ಯಾಯಪೀಠ ತಳ್ಳಿ ಹಾಕಿದೆ.

ಆದೇಶ ರದ್ದು: ‘2011ರ ಆಯ್ಕೆ ಪಟ್ಟಿ ರದ್ದುಗೊಳಿಸಿ ಸರ್ಕಾರ 2014ರ ಆಗಸ್ಟ್‌ 14ರಂದು ಕೈಗೊಂಡಿದ್ದ ನಿರ್ಧಾರ ಕಾನೂನು ಬಾಹಿರವಾಗಿದೆ. ಎಲ್ಲ 362 ಅಭ್ಯರ್ಥಿಗಳಿಗೆ ಈ ಆದೇಶ ಕೈಸೇರಿದ ಎರಡು ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡಬೇಕು’ ಎಂದು ಕೆಎಟಿ ರಾಜ್ಯ ಸರ್ಕಾರಕ್ಕೆ 2016ರ ಅಕ್ಟೋಬರ್‌ನಲ್ಲಿ ನಿರ್ದೇಶಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ: ‘ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು’ ಎಂದು ತಿಳಿಸಿದ ಆಯ್ಕೆಯಾದ 230 ಅಭ್ಯರ್ಥಿಗಳ ಪರ ವಕೀಲ ಬಿ.ಎಲ್‌.ಆಚಾರ್ಯ, ‘ನ್ಯಾಯಪೀಠ ಸಿಐಡಿ ವರದಿ ಒಪ್ಪಿಕೊಂಡಿರುವುದು ತಪ್ಪು. ಸಿಐಡಿ ನೀಡಿರುವುದು ಮಧ್ಯಂತರ ವರದಿ ಅಷ್ಟೇ. ಎಲ್ಲ 362 ಅಭ್ಯರ್ಥಿಗಳೂ ಕಳಂಕಿತರಲ್ಲ ಎಂಬುದನ್ನು ಮನಗಾಣಬೇಕಿತ್ತು’ ಎಂದು ಪ್ರತಿಕ್ರಿಯಿಸಿದರು.

ಕೇವಿಯೆಟ್‌: ‘ಆದೇಶದ ಮೂಲಪ್ರತಿ ಪಡೆದು ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯೆಟ್‌ ಸಲ್ಲಿಸಲಾಗುವುದು’ ಎಂದು ರೇಣುಕಾಂಬಿಕೆ ಪರ ವಕೀಲ ರಹಮತ್‌ ಉಲ್ಲಾ ಕೊತ್ವಾಲ್ ತಿಳಿಸಿದರು.

ಏನಿದು ಪ್ರಕರಣ?: ಕರ್ನಾಟಕ ಗೆಜೆಟೆಡ್‌ ಪ್ರೊಬೆಷನರಿ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮ–1997ರ ಅನ್ವಯ 2011ನೇ ಸಾಲಿನಲ್ಲಿ ‘ಎ’ ಗುಂಪಿನಲ್ಲಿ 162 ಹಾಗೂ ‘ಬಿ’ ಗುಂಪಿನಲ್ಲಿ 200 ಹುದ್ದೆಗಳಿಗೆ ನೇಮಕ ಮಾಡುವಂತೆ ಆಯೋಗವು ಸರ್ಕಾರಕ್ಕೆ ಕೋರಿತ್ತು. ಈ ಕೋರಿಕೆ ಅನ್ವಯ ಆಯೋಗವು 2011ರ ನವೆಂಬರ್‌ 3ರಂದು ಅಧಿಸೂಚನೆ ಹೊರಡಿಸಿ, ನೇಮಕಾತಿ ಬಗ್ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು.

2012ರ ಏಪ್ರಿಲ್ 22ರಂದು ಪೂರ್ವಭಾವಿ ಪರೀಕ್ಷೆಯನ್ನೂ, 2012ರ ಡಿಸೆಂಬರ್ 15ರಿಂದ 2013ರ ಮೇ 27ರವರೆಗೆ ಮುಖ್ಯ ಪರೀಕ್ಷೆಯನ್ನೂ ನಡೆಸಲಾಗಿತ್ತು. 2013ರ ಏಪ್ರಿಲ್ 1,2 ಹಾಗೂ ಮೇ 7ರಿಂದ 27ರವರೆಗೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ನಡೆಸಲಾಗಿತ್ತು. ಈ ಮಧ್ಯೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅನ್ಯಾಯ ನಡೆದಿದೆ ಎಂದು ‘ಪ್ರಜಾವಾಣಿ’ ವರದಿ ಮಾಡಿತ್ತು.

2013ರ ಮೇ 28ರಂದು ಅಭ್ಯರ್ಥಿ ಡಾ.ಎಚ್‌.ಪಿ.ಎಸ್‌.ಮೈತ್ರಿ ಅಡ್ವೊಕೇಟ್‌ ಜನರಲ್ ಅವರಿಗೆ ಮನವಿ ಸಲ್ಲಿಸಿ, ‘ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್ ನನ್ನ ಆಯ್ಕೆಗೆ ಲಂಚ ಕೇಳಿದ್ದಾರೆ’ ಎಂದು ದೂರಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ 2011ನೇ ಸಾಲಿನಲ್ಲಿ ನಡೆಸಿದ ಗೆಜೆಟೆಡ್‌ ಪ್ರೊಬೆಷನರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸರ್ಕಾರ ಯಾವ ನಿರ್ಣಯ ಕೈಗೊಳ್ಳಬಹುದು ಮತ್ತು ಈ ಕುರಿತಂತೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರಿಗೆ ಕೋರಿತ್ತು. 2013ರ ಜೂನ್‌ 4ರಂದು ಅಡ್ವೊಕೇಟ್‌ ಜನರಲ್‌ ನೀಡಿದ ಅಭಿಪ್ರಾಯದ ಅನುಸಾರ ಸರ್ಕಾರ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಕ್ರಮ ನಡೆದಿದೆ ಎಂದು ಹೇಳಿತ್ತು.

ಸಿಐಡಿ ವರದಿಯನ್ನು ಸರ್ಕಾರ ಒಪ್ಪಿಕೊಂಡಿತ್ತು. ಇದರ ಅನುಸಾರ ಅಧಿಸೂಚನೆ ಹಿಂಪಡೆದಿತ್ತು. ಇದನ್ನು ಆಯ್ಕೆಯಾದ ಅಭ್ಯರ್ಥಿಗಳು ಕೆಎಟಿಯಲ್ಲಿ ಪ್ರಶ್ನಿಸಿದ್ದರು.

ಯಾರು ತಪ್ಪೆಸಗಿದ್ದಾರೆ ಅವರನ್ನು ಪ್ರತ್ಯೇಕಿಸಿ, ಉಳಿದವರಿಗೆ ನೇಮಕಾತಿ ಆದೇಶ ನೀಡುವಂತೆ ಕೆಎಟಿ ಹೇಳಿತ್ತು. ಆದರೆ, ಸರ್ಕಾರ ಎಲ್ಲರಿಗೂ ನೇಮಕಾತಿ ಆದೇಶ ಕೊಡಲು ಮುಂದಾಗಿತ್ತು. ಆಗ ರೇಣುಕಾಂಬಿಕೆ ಮತ್ತಿತರರು ಹೈಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದರು. ಅಷ್ಟೊತ್ತಿಗಾಗಲೇ 78 ಜನರಿಗೆ ಆದೇಶ ನೀಡಲಾಗಿತ್ತು.

‘ಅಂಕಗಳನ್ನು ತಿದ್ದಿದ್ದಾರೆ’

ಮರು ಎಣಿಕೆಯಲ್ಲಿ ಅಂಕಗಳನ್ನು ತಿದ್ದಿರುವುದು ಸ್ಪಷ್ಟವಾಗಿದೆ. ಸಂದರ್ಶನದಲ್ಲಿ ಕೆಪಿಎಸ್‌ಸಿ ಸದಸ್ಯರು ನಿರ್ದಿಷ್ಟ ಅಭ್ಯರ್ಥಿಗೆ ಒಂದೇ ರೀತಿಯಲ್ಲಿ ಅಂಕಗಳನ್ನು ನೀಡಿದ್ದಾರೆ. ಅಂದರೆ 566 ಅಭ್ಯರ್ಥಿಗಳಿಗೆ ಎಲ್ಲ ಸದಸ್ಯರೂ ಒಂದೇ ತೆರನಾಗಿ ಅಂಕ ನೀಡಿದ್ದಾರೆ. ಇದರಿಂದ ಎಲ್ಲ ಸದಸ್ಯರೂ ಅಂಕಗಳನ್ನು ಏಕರೀತಿ ನೀಡುವುದಕ್ಕೆ ಪೂರ್ವ ನಿರ್ಧಾರ ಮಾಡಿದ್ದರು ಎಂಬುದು ತಿಳಿದು ಬರುತ್ತದೆ. ಕೆಪಿಎಸ್‌ಸಿ ಅಧ್ಯಕ್ಷರಿಗೆ ಖಾಸಗಿ ಕಾರ್ಯದರ್ಶಿಯಾಗಿದ್ದ ಗೋಪಾಲಕೃಷ್ಣ ಪ್ರತಿ ದಿನ ಸಂದರ್ಶನ ನಡೆದ ನಂತರ ಅಧ್ಯಕ್ಷರು ಹಾಗೂ ಸದಸ್ಯರ ಜೊತೆ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೋರಿದ ಸಾಧನೆಯ ಬಗ್ಗೆ ಚರ್ಚಿಸುತ್ತಿದ್ದರು ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಕೆಪಿಎಸ್‌ಸಿಯ 2011ರ ನೇಮಕಾತಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ‘ಪ್ರಜಾವಾಣಿ’ 2013ರಲ್ಲಿ ನಿರಂತರವಾಗಿ ವಿಶೇಷ ವರದಿಗಳನ್ನು ಪ್ರಕಟಿಸಿತ್ತು.

**

ಭ್ರಷ್ಟಾಚಾರದ ವಿರುದ್ಧ ನ್ಯಾಯಾಲಯದಲ್ಲಿ ಜಯ ದೊರಕಿದಂತಾಗಿದೆ.– ರಹಮತ್‌ ಉಲ್ಲಾ ಕೊತ್ವಾಲ್‌,ಅರ್ಜಿದಾರರ ವಕೀಲ

ಇದೇ 19ಕ್ಕೆ ಸುಪ್ರೀಂ ತೀರ್ಪು?

ಬೆಂಗಳೂರು: ಕೆ‍ಪಿಎಸ್‌ಸಿ ನಡೆಸಿದ 1998, 1999 ಮತ್ತು 2004ರ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಅಕ್ರಮ ನೇಮಕಾತಿ ಬಗ್ಗೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಇದೇ 19ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಅಕ್ರಮ ನಡೆದಿರುವ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ತನಿಖೆಗೆ ಆದೇಶಿಸಲು ಕೋರಿದ್ದರು. ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸರ್ಕಾರ ಸಿಐಡಿ ತನಿಖೆ ನಡೆಸಿ ವರದಿ ನೀಡಿತ್ತು. ಅಕ್ರಮ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿತ್ತು.

ವಿಚಾರಣೆ ನಡೆಸಿದ ಹೈಕೋರ್ಟ್‌ 2016ರ ಜೂನ್‌ 21ರಂದು ತೀರ್ಪು ಪ್ರಕಟಿಸಿತ್ತು. ಅಕ್ರಮ ನಡೆದಿರುವುದನ್ನು ಎತ್ತಿ ಹಿಡಿದಿತ್ತು. ಈಗಾಗಲೇ ಅಧಿಕಾರಿಗಳು 10–12 ವರ್ಷದಿಂದ ಸೇವೆ ಸಲ್ಲಿಸುತ್ತಿರುವುದರಿಂದ ನೇಮಕಾತಿ ರದ್ದು ಮಾಡಲು ಆಗುವುದಿಲ್ಲ. ರೀ–ಡೂ ಮಾಡುವಂತೆಯೂ ಹೇಳಿತ್ತು.

ಇದರಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದ ಅಧಿಕಾರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯ ಇದೇ 19ಕ್ಕೆ ಅರ್ಜಿ ಅಂತಿಮ ವಿಲೇವಾರಿಗೆ ದಿನಾಂಕ ನಿಗದಿಪಡಿಸಿದೆ. ಮೂರು ಬ್ಯಾಚ್‌ನಲ್ಲಿ 738 ಅಧಿಕಾರಿಗಳಿದ್ದು, ಇದರಲ್ಲಿ 33 ಐಎಎಸ್‌ ಮತ್ತು 27 ಐಪಿಎಸ್‌ಗೆ ಬಡ್ತಿ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry