ಕಡಿವಾಣ ಹಾಕಲು ಆಡಳಿತ ಸಮಿತಿ ರಚನೆ

ಸೋಮವಾರ, ಮಾರ್ಚ್ 25, 2019
28 °C

ಕಡಿವಾಣ ಹಾಕಲು ಆಡಳಿತ ಸಮಿತಿ ರಚನೆ

Published:
Updated:
ಕಡಿವಾಣ ಹಾಕಲು ಆಡಳಿತ ಸಮಿತಿ ರಚನೆ

ದೊಡ್ಡಬಳ್ಳಾಪುರ: ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಸಮಿತಿ ರಚನೆ ಮಾಡು‌ವುದಾಗಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ.ಶ್ರೀವತ್ಸ ಹೇಳಿದರು.

ಶುಕ್ರವಾರ ಬೆಸೆಂಟ್ ಪಾರ್ಕ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸರ್ವ ಸದಸ್ಯರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಸದಸ್ಯ ಸುನಿಲ್‌ ಕುಮಾರ್ ಮಾತನಾಡಿ, ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ 14 ಅನಧಿಕೃತ ಕ್ಲಿನಿಕ್‌ಗಳೇ ಇವೆ ಎಂದು ಆರೋಗ್ಯ ಇಲಾಖೆಯೇ ಮಾಹಿತಿ ನೀಡಿದೆ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ದಾಳಿ ನಡೆಸಿಲ್ಲ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರ್ಮಿಳಾ ಹೆಡೆ, ದೂರು ಬಂದಿರುವ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ನೊಟೀಸ್ ನೀಡಲಾಗಿದೆ. 14 ಅನಧಿಕೃತ ಕ್ಲಿನಿಕ್‌ಗಳಲ್ಲಿ ಬಿ.ಎಂ.ಎಸ್ ವೈದ್ಯರಿದ್ದಾರೆ. 7ಮಂದಿಗೆ ಪರವಾನಗಿ ಇಲ್ಲ. ಇವೆಲ್ಲಾ ಇಲಾಖೆ ಗಮನಕ್ಕೆ ಬಂದಿದ್ದು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪಲೋಹರ್ ಮಾತನಾಡಿ, ಈ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಅನಧಿಕೃತ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲು ತಾಲ್ಲೂಕು ಆಡಳಿತದ ಸಹಕಾರವಿದೆ ಎಂದರು.

ಆರೂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಈ ಬಗ್ಗೆ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಸದಸ್ಯೆ ಮುತ್ತುಲಕ್ಷ್ಮೀ ದೂರಿದಾಗ ವೈದ್ಯರು ವರ್ಗಾವಣೆಯಾಗಿದ್ದು, ಬೇರೆ ಕಡೆಯಿಂದ ವೈದ್ಯರನ್ನು ನೀಯೋಜಿಸಲಾಗಿದೆ ಎಂದು ಡಾ.ಶರ್ಮಿಳಾ ಹೆಡೆ ಅವರು ಉತ್ತರಿಸಿದರು.

ಇತ್ತೀಚೆಗೆ ನಡೆದ ರೇಷ್ಮೆ ಬೆಳೆಗಾರರ ಸಮಾವೇಶದಲ್ಲಿ ತಾಲ್ಲೂಕು ಪಂಚಾಯಿತಿ ಮಹಿಳಾ ಸದಸ್ಯರನ್ನು ವೇದಿಕೆಗೆ ಆಹ್ವಾನಿಸದೆ ಅಗೌರವ ತೋರಲಾಗಿದೆ. ಆಹ್ವಾನ ಪತ್ರಿಕೆ ನೀಡಿ ಕೈತೊಳೆದುಕೊಳ್ಳುವ ಇಲಾಖೆಗಳು, ಸದಸ್ಯರನ್ನು ಗೌರವದಿಂದ ನಡೆಸಿಕೊಳ್ಳಲು ಕಲಿಯಬೇಕಿದೆ. ಇಲ್ಲವಾದಲ್ಲಿ ಅಂತಹ ಸಮಾರಂಭ ಬಹಿಷ್ಕರಿಸಲಾಗುವುದು ಎಂದು ಸದಸ್ಯೆ ಅನ್ನಪೂರ್ಣಮ್ಮ ದೂರಿದರು. ಇದಕ್ಕೆ ಸದಸ್ಯ ಡಿ.ಸಿ.ಶಶಿಧರ್ ದನಿಗೂಡಿಸಿದರು. ಮುಂದೆ ಹೀಗಾಗಂದತೆ ಎಚ್ಚರ ವಹಿಸಿ ಎಂದು ಅಧ್ಯಕ್ಷ ಶ್ರೀವತ್ಸ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರೇಷ್ಮೆ ಇಲಾಖೆಯಲ್ಲಿ ಹಿಪ್ಪುನೇರಳೆ ಬೇಸಾಯ ಪ್ರಗತಿಯಲ್ಲಿದ್ದು, ತಾಲ್ಲೂಕಿನ ಇಬ್ಬರು ರೈತರಿಗೆ ರಾಜ್ಯ ಪ್ರಶಸ್ತಿ ದೊರೆತಿದೆ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಅಂಜಿನ ಮೂರ್ತಿ ತಿಳಿಸಿದರು.

ಸಿಡಿಪಿಒ ಜಯಲಕ್ಷ್ಮೀ ಮಾತನಾಡಿ, ಮಾತೃಪೂರ್ಣ ಯೋಜನೆ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.

ತಾಲ್ಲೂಕು ಆಡಳಿತ ನೆರವು ನೀಡಿದರೆ, ವಾಹನ ವ್ಯವಸ್ಥೆ ಮಾಡಿ ಗರ್ಭಿಣಿಯರ ಬಳಿಗೆ ಆಹಾರ ನೀಡಲಾಗುವುದು ಎಂದರು.

ಕೃಷಿ ಇಲಾಖೆ ಅಧಿಕಾರಿ ರೂಪಾ ಕೃಷಿ ಬಗ್ಗೆ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಮಳೆಗಾಲ ಮುಗಿದಿದ್ದು, ಹಿಂಗಾರು ಹಂಗಾಮಿನ 150 ಎಕರೆ ಗುರಿ ಮುಟ್ಟಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ ಹೊಂಡ ನಿರ್ಮಿಸಿಕೊಳ್ಳಲು ಈಗ ಅನುದಾನವಿಲ್ಲ. ಅಂತಹವರಿಗೆ ಜೂನ್ ಅಥವಾ ಜುಲೈನಲ್ಲಿ ಅನುದಾನ ನೀಡಲಾಗುವುದು. ಜಂಟಿ ಖಾತೆಗಳಲ್ಲಿನ ಪಹಣಿಯ ಬಗ್ಗೆ ಇರುವ ಗೊಂದಲ ಸರಿಪಡಿಸಿ, ಸಹಾಯಧನ ನೀಡಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಸ್ಥಾಯಿಸಮಿತಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

**

ನೀರಿನ ಘಟಕ ನಿರ್ವಹಣೆ: ಏಜೆನ್ಸಿಗಳಿಗೆ ಗುತ್ತಿಗೆ

ದರ್ಗಾಜೋಗಿಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕರ್ ಕಟ್ಟಿಸಿದ್ದರೂ ನೀರು ಬಿಡುತ್ತಿಲ್ಲ. ಹಲವು ಗ್ರಾಮಗಳಲ್ಲಿಯೂ ಇದೇ ಸಮಸ್ಯೆಯಾಗಿದೆ ಎಂದು ಸದಸ್ಯೆ ಅನ್ನಪೂರ್ಣಮ್ಮ ಸಭೆಯ ಗಮನಕ್ಕೆ ತಂದಾಗ, ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ನೋಡಬೇಕು. ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಸಮಸ್ಯೆ ದೂರುಗಳು ಬರುತ್ತಿದ್ದು, ಘಟಕಗಳನ್ನು ನಿರ್ವಹಿಸಲು ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಶ್ರೀವತ್ಸ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry