7
ಮಾದರಿ ನೀತಿಸಂಹಿತೆ ಪಾಲಿಸುವ ಕುರಿತು ಬ್ಯಾಂಕ್ ಅಧಿಕಾರಿಗಳ ಸಭೆ

ಅಭ್ಯರ್ಥಿ ಖರ್ಚಿನ ಮಿತಿ ₹28 ಲಕ್ಷ

Published:
Updated:
ಅಭ್ಯರ್ಥಿ ಖರ್ಚಿನ ಮಿತಿ ₹28 ಲಕ್ಷ

ಬೆಳಗಾವಿ: ‘ಚುನಾವಣೆ ಸಂದರ್ಭದಲ್ಲಿ ದಾಖಲೆಗಳಿಲ್ಲದೇ ಹಣ ಸಾಗಿಸುವುದನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಲಿದೆ. ಹೀಗಾಗಿ, ಸಂಶಯಾಸ್ಪದ ಸಾಗಾಟ ಅಥವಾ ಖಾತೆಗಳ ವಹಿವಾಟುಗಳ ಮೇಲೆ ಬ್ಯಾಂಕ್‌ಗಳವರು ನಿಗಾ ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ಸೂಚಿಸಿದರು.

ಶುಕ್ರವಾರ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ಚುನಾವಣೆ ವೇಳೆ ಹಣದ ಬಳಕೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಬ್ಯಾಂಕ್‌ಗಳ ಸಿಬ್ಬಂದಿ, ವಾಹನಗಳು,ಹಣ ಸಾಗಾಣಿಕೆಗೆ ಬಳಸುವ ಖಾಸಗಿ ಸಂಸ್ಥೆಗಳ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದಕ್ಕೆಅವಕಾಶ ಕೊಡಬಾರದು. ಪ್ರತಿ ವ್ಯವಹಾರಗಳ ಸಮರ್ಪಕ ದಾಖಲೆಗಳನ್ನು ಹೊಂದಿರಬೇಕು’ ಎಂದು ತಿಳಿಸಿದರು.

‘ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲ ಬ್ಯಾಂಕ್‌ಗಳ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ಹಣ ಮುಟ್ಟುಗೋಲು: ‘ಬ್ಯಾಂಕು ಅಥವಾ ಎಟಿಎಂಗಳಿಗೆ ಹಣ ಸಾಗಿಸುವಾಗ ಬ್ಯಾಂಕ್ ನಿಯಮಾವಳಿ ಪ್ರಕಾರ ಎಲ್ಲ ದಾಖಲೆಗಳು ಇರಬೇಕು. ದಾಖಲೆ ಇಲ್ಲದ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಬ್ಯಾಂಕ್‌ ಸಿಬ್ಬಂದಿ ಅಥವಾ ಹಣ ಸಾಗಿಸುವ ಖಾಸಗಿ ಸಂಸ್ಥೆಗಳ ಸಹಾಯವಿಲ್ಲದೇ ಭಾರೀ ಮೊತ್ತದ ಹಣ ಸಾಗಾಟ ಕಷ್ಟಸಾಧ್ಯ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಆಯೋಗವು ಅಕ್ರಮ ಹಣದ ಸಾಗಾಟ, ವರ್ಗಾವಣೆ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ’ ಎಂದರು.

‘ಯಾರೇ ₹ 50ಸಾವಿರ ಮೇಲ್ಪಟ್ಟು ನಗದು ಒಯ್ಯುವುದಕ್ಕೆ ಸಮರ್ಪಕ ದಾಖಲಾತಿ ಹೊಂದಿರಬೇಕಾಗುತ್ತದೆ. ಇಲ್ಲದಿದ್ದರೆ ಅದನ್ನೂ ವಶಪಡಿಸಿಕೊಳ್ಳಲಾಗುವುದು’ ಎಂದು ವಿವರಿಸಿದರು.

ಅಭ್ಯರ್ಥಿಗಳ ಖಾತೆ ಮೇಲೆ ನಿಗಾ: ‘ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಕುಟುಂಬದವರ ಖಾತೆಗಳಿಂದ ನಡೆಯುವ ಪ್ರತಿ ವ್ಯವಹಾರಗಳ ಮೇಲೂ ಬ್ಯಾಂಕುಗಳು ಕಣ್ಣಿಡಬೇಕು. ಅಭ್ಯರ್ಥಿಗಳು ಚುನಾವಣಾ ಖರ್ಚು-ವೆಚ್ಚಕ್ಕಾಗಿ ಪ್ರತ್ಯೇಕ ಖಾತೆ ಹೊಂದಿರಬೇಕು. ಪ್ರತಿ ಅಭ್ಯರ್ಥಿಗೆ ಚುನಾವಣಾ ಆಯೋಗ ನಿಗದಿಪಡಿಸಿರುವ ಖರ್ಚಿನ ಮಿತಿ ₹ 28 ಲಕ್ಷ. ಈ ಪೈಕಿ ₹ 20 ಸಾವಿರವನ್ನು ಮಾತ್ರ ನಗದು ರೂಪದಲ್ಲಿ ಖರ್ಚು ಮಾಡಬಹುದು. ಉಳಿದ ಪ್ರತಿ ವ್ಯವಹಾರವನ್ನು ಚೆಕ್ ಅಥವಾ ಆರ್‌ಟಿಜಿಎಸ್ ಮೂಲಕವೇ ನಡೆಸಬೇಕು’ ಎಂದು ತಿಳಿಸಿದರು.

‘ಅಭ್ಯರ್ಥಿಯ ಪತಿ/ ಪತ್ನಿ ಅಥವಾ ಅವಲಂಬಿತರ ಖಾತೆಗಳಿಗೆ ₹ 1 ಲಕ್ಷಕ್ಕಿಂತ ಅಧಿಕ ಹಣದ ಜಮಾ ಅಥವಾ ಹಿಂತೆಗೆಯುವಿಕೆ ಬಗ್ಗೆ ಆಯೋಗದ ಜಾಲತಾಣದಲ್ಲಿ ಮಾಹಿತಿ ಒದಗಿಸಲಾಗುತ್ತದೆ. ಜಿಲ್ಲೆ ಅಥವಾ ಆಯಾ ವಿಧಾನಸಭಾ ಕ್ಷೇತ್ರದಲ್ಲಿನ ಒಂದೇ ಬ್ಯಾಂಕ್‌ನಿಂದ ಅನೇಕ ವ್ಯಕ್ತಿಗಳ ಖಾತೆಗೆ ಏಕಕಾಲಕ್ಕೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಬಗ್ಗೆಯೂ ಮಾಹಿತಿ ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.‌

ಮಾಹಿತಿ ಕೊಡಬೇಕು: ‘ಯಾವುದೇ ರಾಜಕೀಯ ಪಕ್ಷದ ಖಾತೆಗೆ ₹ 1 ಲಕ್ಷಕ್ಕಿಂತ ಅಧಿಕ ಮೊತ್ತದ ವಹಿವಾಟು ನಡೆದರೆ ಆ ಕುರಿತು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮತದಾರರಿಗೆ ಆಮಿಷವೊಡ್ಡುವ ಉದ್ದೇಶದಿಂದ ನಡೆಯಬಹುದಾದ ಯಾವುದೇ ರೀತಿಯ ಹಣಕಾಸಿನ ವರ್ಗಾವಣೆ ಬಗ್ಗೆ ಗಮನಕ್ಕೆ ತರಬೇಕು. ನೀತಿಸಂಹಿತೆ ಜಾರಿಯಲ್ಲಿರುವ ಸಂದರ್ಭ ಯಾರದೇ ಖಾತೆಯಿಂದ ₹ 1 ಲಕ್ಷಕ್ಕೂ ಅಧಿಕ ವಹಿವಾಟು ನಡೆದರೆ ಅದನ್ನೂ ತಿಳಿಸಬೇಕು’ ಎಂದು ಸೂಚಿಸಿದರು.

ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ರಮೇಶ ಕಳಸದ, ಚುನಾವಣಾ ವೆಚ್ಚ ವೀಕ್ಷಣಾ ಸಮಿತಿ ನೋಡಲ್ ಅಧಿಕಾರಿ ಎಂ.ಪಿ. ಅನಿತಾ ಇದ್ದರು.

**

ಹಣ ಸಾಗಿಸುವ ಬ್ಯಾಂಕ್ ಸಿಬ್ಬಂದಿ, ವಾಹನಗಳು, ರಕ್ಷಣಾ ಸಿಬ್ಬಂದಿ ಹಾಗೂ ಎಟಿಎಂ ನಿರ್ವಹಿಸುವವರ ಬಗ್ಗೆ ನಿಗದಿತ ನಮೂನೆಯಲ್ಲಿ ಮಾಹಿತಿ ಕೊಡಬೇಕು.

ಎಸ್‌. ಜಿಯಾವುಲ್ಲಾ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry