ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷವಾದ ಕಾಲೇಜಿಗೆ ಪಿ.ಜಿ.ಕೋರ್ಸ್‌

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಿರ್ಧಾರ
Last Updated 10 ಮಾರ್ಚ್ 2018, 5:45 IST
ಅಕ್ಷರ ಗಾತ್ರ

ಬಳ್ಳಾರಿ: ಮೂರು ವರ್ಷ ಪೂರೈಸಿದ ಯಾವುದೇ ಕಾಲೇಜಿಗೆ ನ್ಯಾಕ್‌ ಮಾನ್ಯತೆ ಇರದಿದ್ದರೂ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಲು ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿದ್ಯಾವಿಧಾಯಕ ಪರಿಷತ್‌ ಸಭೆ ಶುಕ್ರವಾರ ತೀರ್ಮಾನಿಸಿತು.

‘ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣದ ಕುರಿತು ಖಾತ್ರಿ ಇಲ್ಲದೆಯೇ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲು ಕಾಲೇಜುಗಳಿಗೆ ಅನುಮತಿ ನೀಡಿದರೆ ವಿಶ್ವವಿದ್ಯಾಲಯದ ಘನತೆಗೆ ಕುಂದು ಬರುವ ಸಾಧ್ಯತೆ ಇದೆ’ ಎಂಬ ಕೆಲವು ಸದಸ್ಯರ ಆಕ್ಷೇಪಣೆಯ ನಡುವೆಯೇ ಈ ತೀರ್ಮಾನವನ್ನು ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್‌ ಪ್ರಕಟಿಸಿದರು.

ಪ್ರಕಟಿಸುವ ಮುನ್ನ ಮಾತನಾಡಿದ ಅವರು, ‘ಕಾಲೇಜುಗಳು ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವಂಥವು. ಅಲ್ಲಿನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗ ಮಾತ್ರ ಗುಣಮಟ್ಟದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ’ ಎಂದರು.

ದಾಖಲಾತಿ ಹೆಚ್ಚಲಿ: ‘ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಆರಂಭಿಸುವುದರಿಂದ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚುತ್ತದೆ. ಈಗಾಗಲೇ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಇದೆ. ಗುಣಮಟ್ಟದ ನೆಪ ಹೇಳಿ ಕೋರ್ಸ್‌ ಆರಂಭಿಸದಿದ್ದರೆ ದಾಖಲಾತಿ ಪ್ರಮಾಣ ಕುಸಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅಧಿಕಾರ ಮೊಟುಕು: ‘ವಿಶ್ವವಿದ್ಯಾಲಯಗಳ ಅಧಿಕಾರ ಮೊಟುಕಾಗುತ್ತಿದೆ. ಕೋರ್ಸ್‌ ಆರಂಭಿಸಲು ಇಲ್ಲಿ ಅನುಮತಿ ನೀಡುವುದಿಲ್ಲ ಎಂದು ಹೇಳಿದರೆ ಪ್ರಭಾವಶಾಲಿ ಕಾಲೇಜುಗಳ ಮುಖಂಡರು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಕೋರ್ಸ್‌ಗಳನ್ನು ಖರೀದಿಸುತ್ತಾರೆ. ಆಗ ಕೊಡಲೇಬೇಕಾಗಿತ್ತದೆ. ಅದಕ್ಕಿಂತ ಮೊದಲೇ ನಾವು ಉದಾರಿಗಳಾಗುವುದು ಉತ್ತಮ’ ಎಂದು ಸಲಹೆ ನೀಡಿದರು.

ಅವರಿಗೂ ಮುನ್ನ ತಮ್ಮ ಅಭಿಪ್ರಾಯ ಮಂಡಿಸಿದ್ದ ಪರಿಷತ್‌ ಸದಸ್ಯರಾದ ಪ್ರೊ.ಭೀಮನಗೌಡ ಮತ್ತು ಪ್ರೊ.ರಾಬರ್ಟ್‌ಜೋಸ್‌, ‘ವಿಶ್ವವಿದ್ಯಾಲಯಕ್ಕೆ ಇನ್ನೂ ನ್ಯಾಕ್‌ ಮಾನ್ಯತೆ ದೊರಕಿಲ್ಲ. ಅದಕ್ಕಾಗಿ ಪ್ರಯತ್ನ ನಡೆದಿದೆ. ಯುಜಿಸಿಯ ಅನುದಾನವೂ ದೊರಕಬೇಕಾಗಿದೆ. ಇಂಥ ಸನ್ನಿವೇಶದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೀಗಾಗಿ ಮೊದಲಿನಂತೆ, ಐದು ವರ್ಷ ಪೂರೈಸಿರುವ, ಶಾಶ್ವತ ಅನುದಾನ ಪಡೆದ, ನ್ಯಾಕ್‌ ಮಾನ್ಯತೆಯುಳ್ಳ ಕಾಲೇಜುಗಳಿಗೆ ಮಾತ್ರ ಕೋರ್ಸ್ ಆರಂಭಿಸಲು ಅನುಮತಿ ನೀಡುವುದು ಒಳಿತು’ ಎಂದರು.

‘ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಮತ್ತು ಗುಣಮಟ್ಟದ ಶಿಕ್ಷಣದ ನಡುವೆ ಸಮತೋಲನ ತರಬೇಕಾಗಿದೆ. ದೇಶದಲ್ಲಿ ಶೇ 34ರಷ್ಟು ಪದವೀಧರರು ಮಾತ್ರ ಉದ್ಯೋಗ ಪಡೆಯಲು ಅರ್ಹರು ಎಂಬ ಸನ್ನಿವೇಶವಿದೆ. ಇಂಥ ಸನ್ನಿವೇಶದಲ್ಲಿ ವಿಶ್ವವಿದ್ಯಾಲಯದ ಪದವಿಗಳನ್ನು ಪಡೆದವರಿಗೆ ಉದ್ಯೋಗ ದೊರಕುವುದಿಲ್ಲ ಎಂದಾದರೆ ಕೋರ್ಸ್‌ಗಳನ್ನು ಆರಂಭಿಸಿ ಏನು ಪ್ರಯೋಜನ’ ಎಂದು ಕೇಳಿದರು.

‘ವಿಶ್ವವಿದ್ಯಾಲಯಕ್ಕೇ ನ್ಯಾಕ್‌ ಮಾನ್ಯತೆ ಸಿಗದಿರುವಾಗ, ಆ ಮಾನ್ಯತೆ ಸಿಕ್ಕ ಕಾಲೇಜುಗಳಿಗೆ ಮಾತ್ರ ಕೋರ್ಸ್‌ ಆರಂಭಿಸಲು ಅನುಮತಿಸಲಾಗುವುದು ಎಂಬ ವಾದವನ್ನು ಯಾರೂ ಒಪ್ಪುವುದಿಲ್ಲ’ ಎಂದು ಕುಲಪತಿ ಅವರಿಗೆ ಪ್ರತಿಕ್ರಿಯಿಸಿದರು.

ಕುಲಸಚಿವರಾದ ಪ್ರೊ.ಎಸ್‌.ಎ.ಪಾಟೀಲ ಮತ್ತು ಪ್ರೊ.ಹೊನ್ನು ಸಿದ್ದಾರ್ಥ ಇದ್ದರು.

**

‘ನಕಲು: ಅಧಿಕ ದಂಡಶುಲ್ಕ ವಿಧಿಸಿ’

‘ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದವರಿಗೆ ಎರಡು ಪರೀಕ್ಷೆಗಳಿಗೆ ಹಾಜರಾಗಲು ನಿಷೇಧ ಹೇರಿ, ಕೇವಲ ₹ 500 ದಂಡಶುಲ್ಕ ವಸೂಲು ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಅಧಿಕ ದಂಡಶುಲ್ಕ ವಿಧಿಸಬೇಕು’ ಎಂದು ಸದಸ್ಯರಾದ ಭೀಮನಾಗೌಡ, ವೆಂಕಟೇಶ್‌ ಪ್ರತಿಪಾದಿಸಿದರು.

ಅದಕ್ಕೆ ಸಮ್ಮತಿಸಿದ ಕುಲಪತಿ, ‘ಎಷ್ಟು ಶುಲ್ಕ ವಿಧಿಸಬೇಕು ಎಂಬುದನ್ನು ನಿರ್ಣಯಿಸಲು ಉಪಸಮಿತಿ ರಚಿಸಲಾಗುವುದು’ ಎಂದರು.

**

ಇನ್‌ಸ್ಪೆಕ್ಟರ್‌ ರಾಜ್‌ ವ್ಯವಸ್ಥೆ ಹೋಗಿ ಎಷ್ಟೋ ಕಾಲವಾಗಿದೆ. ವಿಶ್ವವಿದ್ಯಾಲಯವು ಪದವಿ ಕಾಲೇಜುಗಳ ಮೇಲೆ ಅಂಥ ನಿಯಮಗಳನ್ನು ಹೇರುವುದನ್ನು ನಿಲ್ಲಿಸಬೇಕು.

–ಪ್ರೊ.ಎಂ.ಎಸ್‌.ಸುಭಾಷ್‌, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT