ರಸ್ತೆ ದುರ್ಗಮ; ಸಂಚಾರ ದುಸ್ತರ

7
ಸತ್ತೀಹಳ್ಳಿ– ಹರಿವಿನಗಂಡಿ ರಸ್ತೆ ದುಃಸ್ಥಿತಿ

ರಸ್ತೆ ದುರ್ಗಮ; ಸಂಚಾರ ದುಸ್ತರ

Published:
Updated:
ರಸ್ತೆ ದುರ್ಗಮ; ಸಂಚಾರ ದುಸ್ತರ

ಹರಿವಿನಗಂಡಿ(ಚಿಕ್ಕಮಗಳೂರು): ತಾಲ್ಲೂಕಿನ ಆಲ್ದೂರು ಹೋಬಳಿಯ ಸತ್ತೀಹಳ್ಳಿ– ಹರಿವಿನಗಂಡಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಈ ಹಾದಿಯಲ್ಲಿ ಸಂಚರಿಸಲು ಜನರು ನರಕಯಾತನೆ ಅನುಭವಿಸುವಂತಾಗಿದೆ.

ರಸ್ತೆಯು ಸುಮಾರು 3 ಕಿಲೋ ಮೀಟರ್‌ ಇದೆ. ಕಲ್ಲು, ಉಬ್ಬುತಗ್ಗು, ಗುಂಡಿಮಯವಾಗಿರುವ ಈ ದುರ್ಗಮ ರಸ್ತೆಯಲ್ಲಿ ಸಂಚರಿಸುವುದು ಸವಾಲಾಗಿ ಪರಿಣಮಿಸಿದೆ. ಕೆಲ ಬೈಕ್‌ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳು ಇವೆ. ಮಳೆಗಾಲದಲ್ಲಿ ಕೆಸರಿನ ರಾಡಿ, ಗುಂಡಿಗಳನ್ನು ದಾಟಿಕೊಂಡು ಪ್ರಯಾಸದಿಂದ ಸಾಗಬೇಕಾದ ಸ್ಥಿತಿ ಇದೆ.

ಪಿಯು ವಿದ್ಯಾರ್ಥಿನಿ ಎಚ್‌.ಸಿ.ಲಿವಿನಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಾಲೇಜಿಗೆ ಚಿಕ್ಕಮಗಳೂರಿಗೆ ಹೋಗುತ್ತೇನೆ. ರಸ್ತೆ ಹಾಳಾಗಿದ್ದು, ಓಡಾಡುವುದಕ್ಕೆ ಬಹಳ ಸಮಸ್ಯೆಯಾಗಿದೆ. ಗುಂಡಿಗಳನ್ನು ದಾಟಲು ‘ಸರ್ಕಸ್‌’ ಮಾಡಬೇಕು. ನಮ್ಮ ಗೋಳು ಕೇಳುವವರು ಇಲ್ಲ’ ಎಂದು ಅಳಲು ತೋಡಿಕೊಂಡರು.

ಹರಿವಿನಗಂಡಿಯಲ್ಲಿ 10 ಬೈಕುಗಳು, 3 ರಿಕ್ಷಾಗಳು ಇವೆ. ಸುಮಾರು 48 ಮನೆಗಳಿದ್ದು, ಜನಸಂಖ್ಯೆ 200 ಇದೆ. ಈ ಪೈಕಿ ಬಹುತೇಕರು ಹೊಟ್ಟೆಪಾಡಿಗೆ ಕೂಲಿ ಅವಲಂಬಿಸಿದ್ದಾರೆ. ಆಲ್ದೂರು, ಗುಲ್ಲನ್‌ಪೇಟೆ ಇತರೆಡೆಗಳಿಗೆ ಕಾಫಿ ತೋಟಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಪ್ರತಿನಿತ್ಯ ಓಡಾಡುವುದು ಗ್ರಾಮಸ್ಥರಿಗೆ ಕಷ್ಟವಾಗಿದ್ದು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಗ್ರಾಮದಲ್ಲಿ ಬಹುತೇಕ ಪರಿಶಿಷ್ಟ ಸಮುದಾಯವರು ವಾಸಿಸುತ್ತಿದ್ದಾರೆ.

ಕಾಫಿ ತೋಟಗಳ ಮಧ್ಯೆ ಇರುವ ಈ ರಸ್ತೆಯ ಬಹಳ ಕಡಿದಾಗಿದೆ. ಎರಡ್ಮೂರು ಕಡೆ ಇಳಿಜಾರು ಇದ್ದು, ರಸ್ತೆ ತುಂಬಾ ಕಲ್ಲುಗಳೇ ಇವೆ. ಗ್ರಾಮದಿಂದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿಕ್ಕಮಗಳೂರು, ಮೂಡಿಗೆರೆ, ಅಲ್ದೂರಿಗೆ ಹೈಸ್ಕೂಲು, ಕಾಲೇಜಿಗೆ ಹೋಗುತ್ತಾರೆ. ರಸ್ತೆ ದುಃಸ್ಥಿತಿಯಿಂದಾಗಿ ಎಲ್ಲರೂ ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ಮುಖಂಡ ಲಕ್ಷ್ಮಣಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ರೋಗಿಗಳನ್ನು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಹಸ ಪಡಬೇಕಾದ ಸ್ಥಿತಿ ಇದೆ. ಈ ರಸ್ತೆಯ ಸ್ಥಿತಿ ನೋಡಿ ರಿಕ್ಷಾದವರು ನಮ್ಮೂರಿಗೆ ಬಾಡಿಗೆಗೆ ಬರುವುದೇ ಇಲ್ಲ. ರಸ್ತೆ ಸಮಸ್ಯೆಯನ್ನು ಹಲವು ಬಾರಿ ಶಾಸಕ ಬಿ.ಬಿ.ನಿಂಗಯ್ಯ ಅವರ ಗಮನಕ್ಕೆ ತಂದಿದ್ದೇವೆ. ಅವರು ಸ್ಪಂದಿಸುತ್ತಿಲ್ಲ’ ಎಂದು ಸಂಕಟ ತೋಡಿಕೊಂಡರು.

‘ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಸ್ತೆ ಸರಿಪಡಿಸಲು ಕ್ರಮಕೈಗೊಳ್ಳದಿದ್ದರೆ ಚುನಾವಣೆಯಲ್ಲಿ ಗ್ರಾಮಸ್ಥರೆಲ್ಲರೂ ಮತದಾನ ಬಹಿಷ್ಕರಿಸಲು ಯೋಚಿಸಿದ್ದೇವೆ. ಜಿಲ್ಲಾಧಿಕಾರಿಯವರಿಗೆ ಶೀಘ್ರದಲ್ಲಿ ಮನವಿ ಸಲ್ಲಿಸುತ್ತೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry