ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹93.62 ಲಕ್ಷ ಕ್ರಿಯಾಯೋಜನೆಗೆ ಅನುಮೋದನೆ

ಗುರುಮಠಕಲ್: ಪುರಸಭೆಯ ಸಾಮಾನ್ಯ ಸಭೆ
Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಗುರುಮಠಕಲ್: ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ 2018–19ನೇ ಸಾಲಿಗೆ 14ನೇ ಹಣಕಾಸು ಮುಕ್ತನಿಧಿ ಯೋಜನೆಯ ಅನುದಾನದಡಿ ಬಿಡುಗಡೆಯಾದ ₹93.62 ಲಕ್ಷಕ್ಕೆ ಕ್ರಿಯಾಯೋಜನೆ ರೂಪಿಸಲು ಅನುಮೋದಿಸಿಲಾಯಿತು.

ಅಧ್ಯಕ್ಷ ಜಿ.ರವೀಂದ್ರರೆಡ್ಡಿ ಪಾಟೀಲ ಅವರ ನೇತೃತ್ವದಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮಾನ್ಯಸಭೆಯ ನಡವಳಿಗಳ ಬಗ್ಗೆ ಚರ್ಚೆ ನೆಡೆಯಿತು. ಗುರುಮಠಕಲ್ ಪಟ್ಟಣವು ತಾಲ್ಲೂಕು ಕೇಂದ್ರವಾಗಿದೆ. ಎಲ್ಲಾ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛತೆ ಕುಡಿಯುವ ನೀರಿನ ಕೊಳವೆಗಳ ದುರಸ್ತಿ ಮತ್ತು ಶೌಚಾಲಯ ಸಮಸ್ಯೆ ಪರಿಹರಿಸಲು ನಿರ್ಧರಿಸಲಾಯಿತು.

ಸದಸ್ಯರಾದ ಕೆ.ದೇವದಾಸ ಮತ್ತು ಪ್ರಭಾವತಿ ಗುಡಿಸೆ ಮಾತನಾಡಿ, ‘ಪಟ್ಟಣದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳು 4 ವರ್ಷಗಳಿಂದ ಪೂರ್ಣಗೊಂಡಿಲ್ಲ. ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದರು.

‘ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಮತ್ತು ಅರಕೇರಾ ಧರ್ಮಪುರ ಗ್ರಾಮಗಳ ಹತ್ತಿರದ ನೀರೆತ್ತುವ ಘಟಕಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆ ಹಾಗೂ ಹಲವು ವರ್ಷಗಳಿಂದ ಅಂಗವಿಕಲ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯು ನನೆಗುದಿಗೆ ಬಿದ್ದಿದೆ. ಯಾರಿಗೆ ಹಕ್ಕುಪತ್ರ ನೀಡಲಾಗಿದೆಯೋ, ಅವರಿಗೆ ಒಂದು ವಾರದ ಒಳಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಅವರು ತಿಳಿಸಿದರು.

‘ಆರು ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ಕರೆದರೆ ನಮ್ಮ ವಾರ್ಡುಗಳಲ್ಲಿನ ಸಮಸ್ಯೆಗಳನ್ನುಯಾವಾಗ ಮತ್ತು ಯಾರ ಬಳಿ ಹೇಳಿಕೊಳ್ಳಬೇಕು. ತಿಂಗಳಿಗೊಮ್ಮೆ ಸಭೆಯನ್ನು ನಡೆಸುವಂತೆ ಹಲವು ಬಾರಿ ನಾವು ಮನವಿ ಮಾಡಿದ್ದೇವೆ. ಆದರೆ ಇಲ್ಲಿಯವರೆಗೂ ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ. ಜನರ ಸಮಸ್ಯೆಗಳನ್ನು ಚರ್ಚಿಸಲು ಸಾಮಾನ್ಯಸಭೆಯನ್ನು ಹೊರತುಪಡಿಸಿ ಮತ್ತೇನಾದರೂ ವ್ಯವಸ್ಥೆಯಿದೆಯೇ’ ಎಂದು ಕುಟುಕಿದರು.

‘6 ತಿಂಗಳುಗಳಿಂದ ಮುಟೇಶನ್ ಮತು ಖಾತೆಯ ನಕಲು ನೀಡುತ್ತಿಲ್ಲ. ಇದರಿಂದಾಗಿ ಬಡವರಿಗೆ ತೊಂದರೆಯಾಗಿದೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸೈಯದ್ ಅಹ್ಮದ್ ದಖನಿ ಅವರು, ‘ಹೈಕೋರ್ಟಿನ ಸೂಚನೆಯಂತೆ ಮುಟೇಶನ್ ಮತ್ತು ಖಾತೆ ನಕಲು ನೀಡುವ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಈ ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ಪೌರಕಾರ್ಮಿಕರಿಗೆ ತಿಂಗಳಿಗೆ ಸರಿಯಾಗಿ ವೇತನ ನೀಡಲು ಆಗುತ್ತಿಲ್ಲ. ಪುರಸಭೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಅವಧಿ ಮುಗಿದಿದೆ. ಆದರೂ ಪೌರಾಡಳಿತ ಸುಮ್ಮನಿದೆ. ಹೀಗಾಗಿ ಪುರಸಭೆಯ ಆದಾಯಕ್ಕೆ ತೊಂದರೆಯಾಗಿದೆ. 2 ದಿನಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಖಾಲಿ ಮಾಡಿಸಿ ಹೊಸ ಟೆಂಡರ್ ಕರೆಯದಿದ್ದರೆ ಪುರಸಭೆ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದು ಸದಸ್ಯ ಬಾಲಪ್ಪ ನಿರೇಟಿ ಎಚ್ಚರಿಕೆ ನೀಡಿದರು.

ಪುರಸಭೆ ವ್ಯಾಪ್ತಿಯ ಐ.ಡಿ.ಎಸ್.ಎಂ.ಟಿ ಹಾಗೂ ಟಿ.ಫ್.ಸಿ ಯೋಜನೆಯ ವಾಣಿಜ್ಯ ಮಳಿಗೆಗಳ ಕಾರಾರು ಒಪ್ಪಂದದ ಪ್ರಕಾರ ಅವಧಿ ಮುಗಿದಿದ್ದು, ಈಗ ಮರು ಹಾರಾಜು ಮಾಡುವಂತೆ ಮಳಿಗೆಗಳನ್ನು ಖಾಲಿ ಮಾಡಿಸಿ, ಮರು ಟೆಂಡರ್ ಪ್ರಕ್ರಿಯೆ ಹಂಚಿಕೆ ಮಾಡುವುದು. ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ಪೊಲೀಸ್ ಭದ್ರತೆಯೊಂದಿಗೆ ಮಳಿಗೆಗಳಿಗೆ ಬೀಗ ಹಾಕಿ, ಮಳಿಗೆಗಳನ್ನು ಪುರಸಭೆಯ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸರ್ವ ಸದಸ್ಯರು ಅನುಮೋದಿಸಿದರು.

ಉಪಾಧ್ಯಕ್ಷೆ ರೇಣುಕಾ ಚಂದಾಪುರ, ಸದಸ್ಯರಾದ ಬಾಲಪ್ಪ ನಿರೇಟಿ, ಕೆ.ದೇವದಾಸ, ಪ್ರಕಾಶ ನಿರೇಟಿ, ಪ್ರಭಾವತಿ ಗುಡಸೆ, ಲಿಂಗಪ್ಪ ತಾಂಡೂರ್ಕರ್, ವಿಜಯಲಕ್ಷ್ಮೀ ಕೋಟಕೊಂಡಿ, ನವಿತಾ ಕಂದೂರ್, ಅಖ್ತರ್ ಪ್ಯಾರೆ, ಮಾಸಿಯೋದ್ದೀನ್ ಆಸಿಮ್, ವೆಂಕಟಪ್ಪ ಮನ್ನೆ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT