ವಸತಿ ರಹಿತರಿಗೆ ಜಿ ಪ್ಲಸ್ 1 ಮಾದರಿ ಮನೆ

7

ವಸತಿ ರಹಿತರಿಗೆ ಜಿ ಪ್ಲಸ್ 1 ಮಾದರಿ ಮನೆ

Published:
Updated:

ಹಾವೇರಿ: ಸೂರಿಲ್ಲದ ನಗರವಾಸಿಗಳಿಗೆ ಜಿ ಪ್ಲಸ್‌ 1 ಮಾದರಿಯ ಮನೆ ನಿರ್ಮಾಣ, ನಗರದ ಮೂಲ ಸೌಕರ್ಯಗಳಿಗೆ ಆದ್ಯತೆ ಒಳಗೊಂಡಂತೆ ₹ 22ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಚಾಲನೆ ನೀಡುವ ಮೂಲಕ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ಜಿಲ್ಲಾಡಳಿತ, ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಬಸವೇಶ್ವರ ನಗರದ ‘ಬಿ’ ಬ್ಲಾಕ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಟ್ರೈಸಿಕಲ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರ ಪ್ರದೇಶದಲ್ಲಿ ಸ್ವಂತ ಸೂರಿಲ್ಲದೇ ಬಾಡಿಗೆ ಮನೆಯಲ್ಲಿ ವಾಸ ವಿರುವ ಕುಟುಂಬಗಳಿಗೆ ವಸತಿ ಕಲ್ಪಿಸುವ ದೃಷ್ಟಿಯಿಂದ 1,112 ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ಜಿ ಪ್ಲಸ್‌ 1 ಮಾದರಿಯ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ. ಈ ಮನೆಗಳು ಎಲ್ಲ ರೀತಿಯ ಮೂಲ ಸೌಕರ್ಯ ಹೊಂದಲಿವೆ ಎಂದು ಹೇಳಿದರು.

ಜಾಗದ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಕಷ್ಟವಾಗಿದೆ. ಅದಕ್ಕಾಗಿ ಹೆಚ್ಚುವರಿಯಾಗಿ ಹತ್ತು ಎಕರೆ ಜಾಗದಲ್ಲಿ 441 ಮನೆ ನಿರ್ಮಾಣ ಮಾಡಲು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದರು.

ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಜೊತೆ ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ಮಹಿಳಾ ಕಾಲೇಜು ನಿರ್ಮಾಣಕ್ಕೆ ಸ್ಥಳ ಗುರುತಿ ಸಲಾಗಿದ್ದು. ಶೀಘ್ರವೇ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಹಾವೇರಿ ನಗರವು ಜಿಲ್ಲಾ ಕೇಂದ್ರವಾಗಿ 20 ವರ್ಷ ಕಳೆದರೂ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಂಡಿರಲಿಲ್ಲ. ಆದರೆ, ಇಂದು ನಮ್ಮ ಸರ್ಕಾರದ ಅವಧಿಯಲ್ಲಿ ರುದ್ರಪ್ಪ ಲಮಾಣಿ ಶ್ರಮದಿಂದ ಅಭಿವೃದ್ಧಿಯ ಪಥದಲ್ಲಿ ಸಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಮಾತನಾಡಿ, ಕಳೆದೆರಡು ವರ್ಷಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ, ವಿವಿಧ ಕಾಮಗಾರಿಗಳಿಗೆ ಚಾಲನೆ ಸಿಗುವ ಜೊತೆಗೆ ಹಾವೇರಿಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಹೇಳಿದರು.

ಐತಿಹಾಸಿಕ ಸ್ಥಳಗಳು, ಜನಪದ ಕಲೆಗಳು, ಸಾಂಸ್ಕ್ರತಿಕ ಹಿನ್ನೆಲೆ ಹೊಂದಿ ರುವ ಹಾವೇರಿಯು ಇನ್ನೂ ಕೆಲವೇ ದಿನಗಳಲ್ಲಿ ಪ್ರೇಕ್ಷಣೀಯ ಸ್ಥಳವಾಗಿ ಬದಲಾಗಲಿದೆ ಎಂದರು

ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಸಭೆ ಸದಸ್ಯೆ ರತ್ನಾ ಭೀಮಕ್ಕನವರ, ಆಶ್ರಯ ಸಮಿತಿ ಅಧ್ಯಕ್ಷ ಪರಶುರಾಮ ಅಡಕಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್. ಪ್ರಕಾಶ, ನಗರಸಭೆ ಪೌರಾಯುಕ್ತ ಶಿವಕುಮಾರಯ್ಯ ಇದ್ದರು.

**

ವಾಯುವಿಹಾರಕ್ಕೆ ಸುಸಜ್ಜಿತವಾದ ಉದ್ಯಾನ, ರಸ್ತೆ–ಚರಂಡಿಗಳ ನಿರ್ಮಾಣ ಮಾಡುವುದರ ಮೂಲಕ ನಗರದ ಸೌಂದರ್ಯೀಕರಣಕ್ಕೆ ಶ್ರಮಿಸಲಾಗುತ್ತಿದೆ

–ರುದ್ರಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry