ಕೇಂದ್ರದ ಏಜೆನ್ಸಿಯಂತೆ ಯುಜಿಸಿ ಕೆಲಸ

ಬುಧವಾರ, ಮಾರ್ಚ್ 20, 2019
26 °C
ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಗಂಭೀರ ಆರೋಪ

ಕೇಂದ್ರದ ಏಜೆನ್ಸಿಯಂತೆ ಯುಜಿಸಿ ಕೆಲಸ

Published:
Updated:
ಕೇಂದ್ರದ ಏಜೆನ್ಸಿಯಂತೆ ಯುಜಿಸಿ ಕೆಲಸ

ಹೊಸಪೇಟೆ: ‘ಕೇಂದ್ರ ಸರ್ಕಾರದ ಏಜೆನ್ಸಿಯಂತೆ ಯು.ಜಿ.ಸಿ. ಕೆಲಸ ಮಾಡುತ್ತಿದೆ. ಕೇಂದ್ರ ಹೇಳಿದಂತೆಯೇ ನಡೆದುಕೊಳ್ಳುತ್ತಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಆರೋಪಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ನುಡಿಹಬ್ಬದ ನಿಮಿತ್ತ ಶುಕ್ರವಾರ ವಿ.ವಿ.ಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ‘ಉನ್ನತ ಶಿಕ್ಷಣ; ವರ್ತಮಾನದ ಬಿಕ್ಕಟ್ಟುಗಳು’ ಕುರಿತು ಮಾತನಾಡಿದರು.

‘ಯು.ಜಿ.ಸಿ. ಹಣ ಭಾಷೆ, ಸಮಾಜ ವಿಜ್ಞಾನಕ್ಕೆ ಖರ್ಚಾಗುತ್ತಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗಷ್ಟೇ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಉನ್ನತ ಶಿಕ್ಷಣ ಸಚಿವನಾದವನಿಗೆ ಏನೂ ಮಾಡಬೇಕೆಂಬುದೇ ಗೊತ್ತಿರುವುದಿಲ್ಲ. ಎಲ್ಲವೂ ಐ.ಎ.ಎಸ್‌. ಅಧಿಕಾರಿಗಳ ಲಾಬಿಯಿಂದ ನಡೆಯುತ್ತಿದೆ. ಪ್ರಾಧ್ಯಾಪಕರು ಏನೂ ಮಾಡದ ಅಸಹಾಯಕ ಸ್ಥಿತಿಯಲ್ಲಿದ್ದೇವೆ. ಸಮಾಜ ವಿಜ್ಞಾನ ಬೋಧಿಸುವ ಶಿಕ್ಷಕರಲ್ಲಿ ಕೀಳರಿಮೆ ಬಿತ್ತಲಾಗುತ್ತಿದೆ’ ಎಂದರು.

‘ಶಿಕ್ಷಣ, ಆರೋಗ್ಯ, ರಾಜಕಾರಣ ಈ ಮೂರೂ ಕ್ಷೇತ್ರಗಳು ಸೇವೆಯ ಸಂಗತಿಗಳಾಗಿದ್ದವು. ಆದರೆ, ಇಂದು ಉದ್ಯಮಗಳಾಗಿ ಬದಲಾಗಿವೆ. ಉನ್ನತ ಶಿಕ್ಷಣ ಕೂಡ ಹೊರತಾಗಿಲ್ಲ. ರಾಜಕಾರಣದಿಂದ ಅದು ಹೊರಬಂದಿಲ್ಲ’ ಎಂದು ಹೇಳಿದರು.

ಪ್ರಾಧ್ಯಾಪಕ ಪ್ರೊ.ರಹಮತ್‌ ತರೀಕೆರೆ ಮಾತನಾಡಿ, ‘ವಿಜ್ಞಾನ ಕ್ಷೇತ್ರಕ್ಕೆ ಸಮಾಜದ ಸಂವೇದನೆಯೇ ಇಲ್ಲ. ಯಾವ ಕ್ಷೇತ್ರಕ್ಕೆ ಅಪಾರ ಪ್ರಮಾಣದಲ್ಲಿ ಹಣ ಸುರಿಯಲಾಗುತ್ತಿದೆಯೋ ಅದಕ್ಕೆ ಯಾವುದೇ ಉತ್ತರದಾಯಿತ್ವ ಎಂಬುದೇ ಇಲ್ಲ’ ಎಂದರು.

‘ಶಿಕ್ಷಣ ಖಾಸಗೀಕರಣದ ಜತೆ ಜತೆಗೆ ದುಬಾರಿ ಕೂಡ ಆಗುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ಕಣ್ಣು ಕೊರೈಸುವ ಸೌಲಭ್ಯಗಳಿವೆ. ಆದರೆ, ಗುಣಮಟ್ಟದ, ಸಂವೇದನೆಯಿಂದ ಕೂಡಿರುವ ಶಿಕ್ಷಣ ವ್ಯವಸ್ಥೆಯಿಲ್ಲ. ಯು.ಜಿ.ಸಿ., ನ್ಯಾಕ್‌ನಲ್ಲಿ ಬಹುತ್ವದ ನಿರಾಕರಣೆ ಇದೆ. ವಿದ್ಯಾರ್ಥಿಗಳಲ್ಲಿ ಸಂವೇದನೆ ತುಂಬಬೇಕೇ ಅಥವಾ ಉದ್ಯಮಗಳಿಗೆ ಸರಕು ಸೃಷ್ಟಿಸಬೇಕೇ? ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ’ ಎಂದು ಹೇಳಿದರು.

ಪ್ರಾಧ್ಯಾಪಕ ಪ್ರೊ. ಮೊಗಳ್ಳಿ ಗಣೇಶ್‌ ಮಾತನಾಡಿ, ‘ಸಮಾಜಶಾಸ್ತ್ರದ ಆಲೋಚನೆಗಳು ಜನರಿಗೆ ತಲುಪುತ್ತಿಲ್ಲ. ಜ್ಞಾನ ಕೇವಲ ಅಲಂಕಾರಿಕ ವಸ್ತುವಾಗಿದೆ’ ಎಂದು ವ್ಯಾಖ್ಯಾನಿಸಿದರು.

‘ನಮ್ಮ ವಿಶ್ವವಿದ್ಯಾಲಯಗಳು ಮರಳಿ ಹಳ್ಳಿ ಕಡೆಗೆ ಹೋಗಬೇಕು. ಹಳ್ಳಿಗಳೇ ನಿಜವಾದ ವಿ.ವಿ.ಗಳು. ಅಲ್ಲಿನ ಜ್ಞಾನ, ಆಧುನಿಕ ಜಗತ್ತಿಗೆ ತಕ್ಕಂತೆ ಪುನರುಜ್ಜೀವನಗೊಳಿಸಬೇಕು. ಆಗ ಭಾರತದ ನಿಜವಾದ ಜ್ಞಾನ ಯಾವುದು ಎಂಬುದು ಗೊತ್ತಾಗುತ್ತದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕವಿ ಸಿದ್ದಲಿಂಗಯ್ಯ ಮಾತನಾಡಿ, ‘ಬಹುತೇಕ ರಾಜಕಾರಣಿಗಳು ಪುಸ್ತಕಗಳನ್ನು ಓದುವುದಿಲ್ಲ. ಹೀಗಾಗಿಯೇ ಅವರು ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳಿಗೆ ಸ್ಪಂದಿಸುತ್ತಿಲ್ಲ. ಅಷ್ಟೇ ಅಲ್ಲ, ರಾಜಕಾರಣಿಗಳು ಭಾಷೆಯನ್ನು ಭ್ರಷ್ಟಗೊಳಿಸುತ್ತಿದ್ದಾರೆ’ ಎಂದರು.

‘ಜನನಾಯಕರು ಎಂದು ಕರೆಯಿಸಿಕೊಳ್ಳುವವರಿಗೆ ಕನಿಷ್ಠ ಜ್ಞಾನ ಇರಬೇಕು. ಮುಖ್ಯಮಂತ್ರಿ, ಶಾಸಕರಿಗೆ ಕನಿಷ್ಠ ತಿಳಿವಳಿಕೆ ಇರದಿದ್ದರೆ ಸಮಾಜದಲ್ಲಿ ನಗೆಪಾಟಲಿಗೆ ಈಡಾಗುತ್ತಾರೆ. ಸ್ವಲ್ಪ ಸಮಯವಾದರೂ ಅವರು ಓದಬೇಕು. ಸಾಹಿತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳಬೇಕು. ಆ ಗುಣ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರಲ್ಲಿ ಇದ್ದವು’ ಎಂದು ತಿಳಿಸಿದರು.

ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಮಾತನಾಡಿ, ‘ಜಾತಿ, ಬಂಡವಾಳಷಾಹಿಗಳು ಸೇರಿಕೊಂಡು ಇಡೀ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಸನಾತನ ಭಾರತವು ರಾಜಕೀಯ, ಶಿಕ್ಷಣದ ಮೂಲಕ ವಿಜೃಂಭಿಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದ ಕಳವಳ ವ್ಯಕ್ತಪಡಿಸಿದರು.

ಕುಲಸಚಿವ ಡಿ. ಪಾಂಡುರಂಗಬಾಬು, ಪ್ರಸಾರಾಂಗದ ನಿರ್ದೇಶಕ ಹೆಬ್ಬಾಲೆ ಕೆ. ನಾಗೇಶ್‌, ಪ್ರಾಧ್ಯಾಪಕರಾದ ಚಿನ್ನಸ್ವಾಮಿ ಸೋಸಲೆ ಇದ್ದರು. ಇದೇ ವೇಳೆ 55 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

**

ಪ್ರತಿಧ್ವನಿಸಿದ ಯು.ಜಿ.ಸಿ ವೇತನ

ವಿಚಾರ ಸಂಕಿರಣದಲ್ಲಿ ಯು.ಜಿ.ಸಿ. ಸಂಬಳ ವಿಷಯ ಪ್ರತಿಧ್ವನಿಸಿತು. ಕವಿ ಸಿದ್ದಲಿಂಗಯ್ಯ ಮಾತನಾಡಿ, ‘ಯು.ಜಿ.ಸಿ ವೇತನ ಪಡೆಯುತ್ತಿರುವ ಪ್ರಾಧ್ಯಾಪಕರು ತಿಂಗಳಿಗೆ ಕನಿಷ್ಠ ₹ 5 ಸಾವಿರ ಮೌಲ್ಯದ ಪುಸ್ತಕಗಳನ್ನು ಖರೀದಿಸಬೇಕು. ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನ ವಿಸ್ತರಿಸಿಕೊಳ್ಳಬೇಕು. ಪ್ರಾಧ್ಯಾಪಕರು ಪುಸ್ತಕ ಪ್ರೇಮ ಬೆಳೆಸಿಕೊಳ್ಳದಿದ್ದರೆ ಮತ್ಯಾರೂ ಬೆಳೆಸಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಪ್ರಾಧ್ಯಾಪಕ ರಹಮತ್‌ ತರೀಕೆರೆ ಮಾತನಾಡಿ, ‘ಯು.ಜಿ.ಸಿ. ಸಂಬಳ ಪ್ರಾಧ್ಯಾಪಕರಿಗೆ ಮದ ತಂದಿದೆ. ಪ್ರಾಧ್ಯಾಪಕರಲ್ಲಿ ಆತ್ಮವಿಮರ್ಶೆ ಸತ್ತು ಹೋಗಿದೆ’ ಎಂದರು.

ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ಪ್ರತಿಕ್ರಿಯಿಸಿ, ‘ಯು.ಜಿ.ಸಿ. ಕೊಡುತ್ತಿರುವ ಒಂದೂವರೆ ಲಕ್ಷ ಸಂಬಳ ದೊಡ್ಡದಲ್ಲ. ಆ ಸಂಬಳವೇ ಪ್ರಾಧ್ಯಾಪಕರನ್ನು ನೈತಿಕವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎನ್ನುವುದು ತಪ್ಪು. ಅವರವರ ಕೆಲಸಕ್ಕೆ ತಕ್ಕಂತೆ ಸಂಬಳ ಪಡೆಯುತ್ತಿರುವುದು ತಪ್ಪಲ್ಲ’ ಎಂದು ಸಮರ್ಥಿಸಿಕೊಂಡರು.

**

‘ವಿಶ್ವಗುರು ಆಗಲು ಹೇಗೆ ಸಾಧ್ಯ?’

‘ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ 50ರಷ್ಟು ಶಿಕ್ಷಕರ ಹುದ್ದೆ ಖಾಲಿಗಳಿವೆ. ಹೀಗಿರುವಾಗ ಭಾರತ ಇಡೀ ಜಗತ್ತಿಗೆ ‘ವಿಶ್ವಗುರು’ ಆಗಲು ಹೇಗೆ ಸಾಧ್ಯ’ ಎಂದು ನವದೆಹಲಿಯಲ್ಲಿನ ‘ಪ್ರಜಾವಾಣಿ’ ಹಿರಿಯ ವರದಿಗಾರ ಡಿ. ಉಮಾಪತಿ ಪ್ರಶ್ನಿಸಿದರು.

‘ನೆಟ್‌ (ಎನ್‌.ಇ.ಟಿ.) ಪಾಸು ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ಕೆಲಸವಿಲ್ಲದೇ ಸುಮ್ಮನೆ ಕುಳಿತಿದ್ದಾರೆ. ಲಕ್ಷಾಂತರ ಗುತ್ತಿಗೆ ಶಿಕ್ಷಕರು ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರಿಗಿಂತ ಕಡಿಮೆ ವೇತನ ಪಡೆದು ಕೆಲಸ ನಿರ್ವಹಿಸುತ್ತಿದ್ದಾರೆ. ಜಗತ್ತಿನ 500 ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೇ ಒಂದು ವಿಶ್ವವಿದ್ಯಾಲಯವೂ ಇಲ್ಲ. ಇದನ್ನು ಸ್ವತಃ ಪ್ರಧಾನಿ ಮೋದಿಯೇ ಒಪ್ಪಿಕೊಂಡಿದ್ದಾರೆ’ ಎಂದರು.

‘ರಾಜಕೀಯ ಹಸ್ತಕ್ಷೇಪದಿಂದ ಉನ್ನತ ಶಿಕ್ಷಣ ಹಾಳಾಗುತ್ತಿದೆ. ಕಾಣದ ಸಂಸ್ಥೆಯೊಂದು ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಅದರ ಬೇರುಗಳು ಮನುಸ್ಮೃತಿಯಲ್ಲಿವೆ. ಆ ಸಂಸ್ಥೆ ಜನರಿಗೆ ಉತ್ತರದಾಯಿಯಲ್ಲ. ಇಡೀ ದೇಶ ಒಪ್ಪಿಕೊಂಡಿರುವ ಸಂವಿಧಾನವನ್ನು ಅದು ಗೌರವಿಸುವುದಿಲ್ಲ’ ಎಂದು ಹೇಳಿದರು.

**

ಲೆನಿನ್‌, ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಆ ಗತಿ ಬಸವಣ್ಣನವರ ಪ್ರತಿಮೆಗಳಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ

–ಡಿ. ಉಮಾಪತಿ, ಹಿರಿಯ ಪತ್ರಕರ್ತರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry