ಕಾಂಗ್ರೆಸ್ ಕೆಲಸ ಬಿಟ್ಟು ನಾಗರಿಕರ ‌ರಕ್ಷಿಸಿ

ಮಂಗಳವಾರ, ಮಾರ್ಚ್ 26, 2019
28 °C
ಪೊಲೀಸರಿಗೆ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಗ್ರಹ, 48 ಗಂಟೆ ಅವಧಿಯಲ್ಲಿ 5 ಕೊಲೆ ಯತ್ನ: ಆರೋಪ

ಕಾಂಗ್ರೆಸ್ ಕೆಲಸ ಬಿಟ್ಟು ನಾಗರಿಕರ ‌ರಕ್ಷಿಸಿ

Published:
Updated:
ಕಾಂಗ್ರೆಸ್ ಕೆಲಸ ಬಿಟ್ಟು ನಾಗರಿಕರ ‌ರಕ್ಷಿಸಿ

ತುಮಕೂರು: ನಗರದಲ್ಲಿ 48 ಗಂಟೆಗಳ ಅವಧಿಯಲ್ಲಿ (ಮಾ.3ರಿಂದ 4ರ ನಡುವೆ) ಐದು ಕಡೆ ಕೊಲೆ ಯತ್ನದ ಪ್ರಕರಣಗಳು ಜರುಗಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪೊಲೀಸರು ಕಾಂಗ್ರೆಸ್ ಪಕ್ಷದ ಕೆಲಸವನ್ನು ಮಾಡುವುದನ್ನು ಬಿಟ್ಟು ನಾಗರಿಕರ ರಕ್ಷಣೆಗೆ ಮುಂದಾಗಬೇಕು ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಗ್ರಹಿಸಿದರು.

ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜಯನಗರ, ನಗರ ಠಾಣೆ ಹಾಗೂ ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ ನಡೆದಿವೆ. ಆರೋಪಿಗಳಲ್ಲಿ ಕೆಲವರನ್ನು ಬಂಧಿಸಿದ್ದು ಇಬ್ಬರು ತಪ್ಪಿಸಿಕೊಂಡಿದ್ದಾರೆ. ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನಾಗರಿಕರಿಗೆ ಸೂಕ್ತ ರಕ್ಷಣೆ ಕೊಡಿ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಲ್ಲಿ ವಿನಂತಿ ಮಾಡಿಕೊಳ್ಳುವೆ ಎಂದು ಅವರು ಹೇಳಿದರು.

ಬಿದಿರುಮಳೆ ತೋಟದಲ್ಲಿ ಅನಧಿಕೃತವಾಗಿ ಪ್ರಾರ್ಥನಾ ಮಂದಿರ ನಿರ್ಮಿಸಲಾಗುತ್ತಿದೆ. ಈ ವಿಚಾರದಲ್ಲಿ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕರ್ತವ್ಯ ಲೋಪ ಎಸಗಿರುವ ನಗರಪಾಲಿಕೆ ಆಯುಕ್ತರು, ಯೋಜನಾಧಿಕಾರಿ ಹಾಗೂ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೋಗಸ್ ಮತದಾರರು: ಮುಖಂಡ ಪಂಚಾಕ್ಷರಯ್ಯ ಮಾತನಾಡಿ, ನಗರದ ಮತದಾರರ ಪಟ್ಟಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಬೋಗಸ್ ಮತದಾರರು ಇದ್ದಾರೆ. ಅರ್ಜಿಗಳು ಇಲ್ಲದೆಯೇ 15 ಸಾವಿರ ಮಂದಿಯನ್ನು ಪಟ್ಟಿಗೆ ಸೇರಿಸಲಾಗಿದೆ. ಹೀಗೆ ವ್ಯಾಪಕ ಅಕ್ರಮಗಳು ನಡೆದಿರುವ ಕಾರಣ ರಾಜ್ಯ ಚುನಾವಣಾ ಆರೋಗಕ್ಕೆ ಜಿಲ್ಲಾಧಿಕಾರಿ ಇನ್ನೂ ಅಂತಿಮ ಮತದಾರರ ಪಟ್ಟಿಯನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು  ಆರೋಪಿಸಿದರು.

‘ನಮ್ಮ ಹೋರಾಟದ ಫಲವಾಗಿ ಸಹಾಯಕ ಮತದಾರ ನೋಂದಣಾಧಿಕಾರಿ ಡಿ.ಲಕ್ಷ್ಮಣ್ ಅವರನ್ನು ಅಮಾನತುಗೊಳಿಸಲಾಯಿತು. ಉಪವಿಭಾಗಾಧಿಕಾರಿ ತಬ್ಸುಮ್ ಜಹೇರಾ ಅವರನ್ನು ವರ್ಗಾವಣೆ ಮಾಡಲಾಯಿತು ಇದು ಮತದಾರಪಟ್ಟಿಯಲ್ಲಿ ಅಕ್ರಮ ನಡೆದಿರುವುದನ್ನು ಒಪ್ಪಿಕೊಂಡಿರುವುದನ್ನು ತೋರಿಸುತ್ತದೆ’ ಎಂದರು.

‘ಒಂದೇ ಕೋವಿನ 20 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರನ್ನು ಸೇರಿಸಲಾಗಿದೆ. ಅರ್ಜಿಯನ್ನು ಪಡೆಯದೆಯೇ ಕಂಪ್ಯೂಟರ್‌ಗೆ ಹೆಸರು ಟೈಪ್ ಮಾಡಿ ವಿವರಗಳನ್ನು ಅಪ್‌ಲೋಡ್ ಮಾಡಿದ್ದಾರೆ’ ಎಂದು ದೂರಿದರು.

ಎಂ.ಬಿ.ನಂದೀಶ್, ರಾಮಾಂಜಿನಪ್ಪ, ಶಾಂತರಾಜು, ಟಿ.ಕೆ.ಮಂಜುನಾಥ್, ಉಮಾಶಂಕರ್ ಇದ್ದರು.

***

3 ದಿನಗಳಲ್ಲಿ 3 ಸಾವಿರ ಅರ್ಜಿ ಪರಿಶೀಲನೆ ಸಾಧ್ಯವೇ?

ಮೂರು ಸಾವಿರ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು ಯಾವುದೇ ಅಕ್ರಮ ನಡೆದಿಲ್ಲ ಎಂದು ಜಿಲ್ಲಾಧಿಕಾರಿಯವರು ಸ್ಪಷ್ಟನೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಪಂಚಾಕ್ಷರಯ್ಯ ಅವರು, ‘ಆ ವಾರದಲ್ಲಿ ನಾಲ್ಕು ದಿನ ಸರ್ಕಾರಿ ರಜೆ ಇತ್ತು. ಉಳಿದ ಮೂರು ದಿನಗಳ ಕರ್ತವ್ಯದ ಅವಧಿಯಲ್ಲಿ ಕನಿಷ್ಠ ಅರ್ಧ ಸೆಕೆಂಡ್ ಒಂದು ಅರ್ಜಿ ಪರಿಶೀಲಿಸಿದರೆ ಮಾತ್ರ 3 ಸಾವಿರ ಅರ್ಜಿಗಳನ್ನು ಪರಿಶೀಲಿಸಲು ಸಾಧ್ಯ. ಅಂದಮೇಲೆ ಅಧಿಕಾರಿಗಳು ಯಾವ ಮಟ್ಟದಲ್ಲಿ ಪರಿಶೀಲನೆ ನಡೆಸಿದ್ದಾರೆ ಎನ್ನುವುದು ತಿಳಿಯುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry