ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ

7
11 ವರ್ಷಗಳಿಂದ ಆಯೋಜಿಸುತ್ತಿರುವ ಶಿಬಿರಕ್ಕೆ ಈ ಬಾರಿ ಸ್ಥಳೀಯರಿಂದ ನಿರಾಸಕ್ತಿ

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ

Published:
Updated:
ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ

ಗೋಕರ್ಣ: ಪಟ್ಟಣದಲ್ಲಿ ಅಡ್ಡಾಡುವ ಬೀದಿ ನಾಯಿ ಮತ್ತು ಸಾಕು ನಾಯಿಗಳಿಗೆ ಇಲ್ಲಿಯ ಸಣ್ಣ ಬೇಲೆಯ ಮಾಬ್ಲಾ ಹೌಸ್ ಆವರಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬುಧವಾರ ಉಚಿತ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.

ಜರ್ಮನ್ ದೇಶದ ಡೆನಿಸ್ ದಾಸ್ ಎಂಬ ಮಹಿಳೆ ಈ ಉಚಿತ ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸುತ್ತಿದ್ದು, ಕಳೆದ 11 ವರ್ಷಗಳಿಂದ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಅವರು, ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಲು ಪಂಚಾಯ್ತಿ ಸಿಬ್ಬಂದಿ ಅನುಸರಿಸುವ ಅವೈಜ್ಞಾನಿಕ ಕ್ರಮ ನಿಲ್ಲಿಸಲು ಈ ಪ್ರಯತ್ನಕ್ಕೆ ಮುಂದಾದರು. ಅದರ ಭಾಗವಾಗಿ 2007ರಲ್ಲಿ ಸಂತಾನ ಶಕ್ತಿ ಹರಣ ಅಭಿಯಾನವನ್ನು ತಾವೇ ಪ್ರಾರಂಭಿಸಿದರು. ಇದಕ್ಕೆ ಕೆಲವು ಸ್ಥಳೀಯ ಸಂಘ ಸಂಸ್ಥೆಗಳು ಕೈಜೋಡಿಸಿದವು. ಇದೀಗ ಇವರ ಪ್ರಯತ್ನದ ಫಲವಾಗಿ ಬೀದಿ ನಾಯಿಗಳ ಹಾವಳಿ ಇಲ್ಲಿ ನಿಯಂತ್ರಣಕ್ಕೆ ಬಂದಿದೆ.

ಕಡಿಮೆಯಾಗುತ್ತಿದೆ ಸಹಕಾರ: ಆಕೆಗೆ ಸ್ಥಳೀಯವಾಗಿ ಸಿಗುತ್ತಿದ್ದ ಸಹಾಯ, ಸಹಕಾರ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಇದರಿಂದ ಶಿಬಿರದ ವೆಚ್ಚವೂ ಭರಿಸಲು ಕಷ್ಟವಾಗುತ್ತಿದ್ದು, ಅದನ್ನು ನಡೆಸುವ ಆಸಕ್ತಿಯನ್ನು ಅವರು ಕ್ರಮೇಣ ಕಳೆದುಕೊಳ್ಳುತ್ತಿದ್ದಾರೆ.

‘ಶಿಬಿರ ನಡೆಸಲು ಕೆಲವರು ತಾವೇ ಮುಂದೆ ಬಂದು ಸಹಾಯ ಹಸ್ತ ನೀಡುತ್ತಿದ್ದರು. ಆದರೆ ಕೆಲವು ಬಾರಿ ಇಲ್ಲಿಯ ನಾಯಿಗಳನ್ನು ಕಾರವಾರ ಅಥವಾ ಗೋವಾಕ್ಕೆ ಒಯ್ದು ಶಸ್ತ್ರ ಚಿಕಿತ್ಸೆ ಮಾಡಿಸಲು ಪ್ರಾರಂಭಿಸಿದ್ದೆ. ಆದರೆ ಪರವಾನಗಿ ಇಲ್ಲದೇ ಪ್ರಾಣಿಗಳನ್ನು ಸಾಗಾಟ ಮಾಡಿದ್ದಕ್ಕಾಗಿ ಪೊಲೀಸರಿಂದ ಮಾರ್ಗ ಮಧ್ಯದಲ್ಲಿ ಕಿರುಕುಳ ಅನುಭವಿಸಬೇಕಾಯಿತು. ಈ ವರ್ಷ ಯಾರ ನೆರವು ಇಲ್ಲದೆಯೇ ಇಲ್ಲಿಯೇ ಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕೆ ಜಾಗದ ಸಮಸ್ಯೆಯಾಗಿ ಸರ್ಕಾರಿ ಪಶು ಚಿಕಿತ್ಸಾಲಯದಿಂದ ಕನಿಷ್ಟ ಒಂದು ಆಪರೇಶನ್ ಟೇಬಲ್ ಪಡೆಯಲೂ ತೀರಾ ಹೆಣಗಾಡಬೇಕಾಯಿತು’ ಎಂದು ಡೆನಿಸ್ ದಾಸ್ ಬೇಸರ ವ್ಯಕ್ತಪಡಿಸಿದರು.

ಕೊನೆಯ ಶಿಬಿರ?: ಇವೆಲ್ಲದರಿಂದ ನೊಂದಿರುವ ಅವರು ಶಿಬಿರ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಾರಿ ಶಿಬಿರವನ್ನು ತಮ್ಮ ಸ್ವಂತ ಹಣದಲ್ಲಿ ಡೆನಿಸ್ ಆಯೋಜಿಸಿದ್ದಾರೆ. ಇದಕ್ಕಾಗಿ ₹ 1.50 ಲಕ್ಷ ಅವರಿಗೆ ವ್ಯಯವಾಗಲಿದ್ದು, ಕೆಲವು ವಿದೇಶಿ ಪ್ರವಾಸಿಗರು ಕಾರ್ಯಕರ್ತರಾಗಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ವರ್ಷದ ಶಿಬಿರ ಬಹುಶಃ ಡೆನಿಸ್ ಸಂಘಟಿಸುತ್ತಿರುವ ಕೊನೆಯ ಶಿಬಿರ ಆಗಲಿದೆಯೇ ಎಂಬ ಆತಂಕ ಇದೀಗ ಕೆಲವು ಸ್ಥಳೀಯರಲ್ಲಿ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry