ಸಾಮಗ್ರಿ ಖರೀದಿ ಅವ್ಯವಹಾರ; ತನಿಖೆಗೆ ಆಗ್ರಹ

ಶಿವಮೊಗ್ಗ: ರಾಜ್ಯದ ಹಾಸ್ಟೆಲ್‌ಗಳ ಸಾಮಗ್ರಿ ಖರೀದಿಯಲ್ಲಿ ನಡೆದ ಭ್ರಷ್ಟಾಚಾರ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ವೈ.ರಾಘವೇಂದ್ರ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಮೋರ್ಚಾ ಜಿಲ್ಲೆಯ ಮಹಿಳಾ ಹಾಸ್ಟೆಲ್‌ಗಳ ಪರಿಶೀಲನೆ ನಡೆಸಿ, ಸಿದ್ಧಪಡಿಸಿದ್ದ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸರ್ಕಾರದ ಕಾರ್ಯವೈಖರಿ, ನಡೆದಿರುವ ಭ್ರಷ್ಟಾಚಾರವನ್ನು ಜನರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ. ಅದರ ಭಾಗವಾಗಿ ಶಿವಮೊಗ್ಗದ ಮಹಿಳಾ ಹಾಸ್ಟೆಲ್‌ಗಳ ಅವ್ಯವಸ್ಥೆ ಕುರಿತು ಸಮೀಕ್ಷೆ ನಡೆಸಲಾಗಿತ್ತು ಎಂದರು.
ಬಿಜೆಪಿ ವಿವಿಧ ಮೋರ್ಚಾ ಕಾರ್ಯಕರ್ತರ ತಂಡಗಳು ರಾಜ್ಯದ 1,080 ಪರಿಶಿಷ್ಟರ ಹಾಸ್ಟೆಲ್ ಹಾಗೂ 1,510 ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಿವೆ. ಮೇಲ್ವಿಚಾರಕರ ಕೊರತೆ, ಶೌಚಾಲಯ, ಸ್ವಚ್ಛತೆ ಕೊರತೆ, ಸ್ನಾನಗೃಹ ಬಳಕೆಗೆ ಯೋಗ್ಯವಾಗಿಲ್ಲದೇ ಇರುವುದು, ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕೊಠಡಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ತುಂಬಿರುವುದು ಕಂಡುಬಂದಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟದಲ್ಲಿ ಗುಣಮಟ್ಟ ಇಲ್ಲ. ಎಲ್ಲೆಡೆ ಅಡುಗೆ ತಯಾರಕರ ಕೊರತೆ ಇರುವುದನ್ನು ಪತ್ತೆ ಹಚ್ಚಿದೆ ಎಂದರು.
ವಿದ್ಯಾರ್ಥಿಗಳು ಮಲಗುವುದಕ್ಕೆ ಮಂಚದ ಸೌಲಭ್ಯ ಇಲ್ಲ. ಕೆಲವೆಡೆ ಕಾವಲುಗಾರರಿಲ್ಲ, ಗ್ರಂಥಾಲಯ ಸೌಲಭ್ಯವಿಲ್ಲ, ಪೂರೈಕೆ ಮಾಡುತ್ತಿರುವ ಆಹಾರದ ಗುಣಮಟ್ಟ ಕಳಪೆಯಾಗಿದೆ. ಕ್ರೀಡಾ ಸೌಲಭ್ಯ ನೀಡಲಾಗುತ್ತಿಲ್ಲ, ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಲ್ಲ ಎಂದು ದೂರಿದರು.
ದಲಿತ ಮಕ್ಕಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ನಡೆಯುತ್ತಿದೆ. ಕಂಪ್ಯೂಟರ್ ಖರೀದಿ, ಸೋಲಾರ್ ವಾಟರ್ ಹೀಟರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಸಮಿತಿ ಶಿಫಾರಸು ಮಾಡಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
2015-16ನೇ ಸಾಲಿನಲ್ಲಿ ಕಂಪ್ಯೂಟರ್, ಸಮವಸ್ತ್ರ ಖರೀದಿ, ಕಟ್ಟಡ ಕಾಮಗಾರಿ, ಆಹಾರ ಪದಾರ್ಥ ಖರೀದಿಯಲ್ಲಿ ಸುಮಾರು ₹ 2,157 ಕೋಟಿ ಹಗರಣ ನಡೆಸಲಾಗಿದೆ ಎಂದು ವಿಧಾನಮಂಡಲ ಸಮಿತಿ ವರದಿ ನೀಡಿದೆ. ಈ ಕುರಿತು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಪಕ್ಷದ ಮುಖಂಡರಾದ ಎಸ್. ದತ್ತಾತ್ರಿ, ಡಿ.ಎಸ್. ಅರುಣ್, ವೀರಭದ್ರಪ್ಪ ಪೂಜಾರ್, ರಾಮಾನಾಯ್ಕ, ಶಿವಪ್ಪ, ಕೆ.ಎಸ್.ಅರುಣ್ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.