ತೇವಾಂಶದ ಕೊರತೆ: ತೆಂಗಿನಮರಗಳಿಗೆ ರೋಗ

ಬುಧವಾರ, ಮಾರ್ಚ್ 20, 2019
23 °C
ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕಿನ ರೈತರಿಗೆ ತೆಂಗಿನಮರಗಳೇ ಆಧಾರ, ರೋಗಬಾಧೆಯಿಂದ ಕಂಗಾಲು

ತೇವಾಂಶದ ಕೊರತೆ: ತೆಂಗಿನಮರಗಳಿಗೆ ರೋಗ

Published:
Updated:
ತೇವಾಂಶದ ಕೊರತೆ: ತೆಂಗಿನಮರಗಳಿಗೆ ರೋಗ

ಮಂಡ್ಯ: ಕೆಆರ್‌ಎಸ್‌, ಹೇಮಾವತಿ ಅಣೆಕಟ್ಟೆಯ ನೀರು ಸುತ್ತಲೂ ಹರಿಯುತ್ತಿದ್ದರೂ ಕೆ.ಆರ್‌.ಪೇಟೆ ಮತ್ತು ನಾಗಮಂಗಲ ತಾಲ್ಲೂಕುಗಳು ಒಣ ಪ್ರದೇಶವಾಗಿಯೇ ಉಳಿದಿವೆ.

ಮಳೆಯನ್ನೇ ನೆಚ್ಚಿ ಬದುಕುತ್ತಿರುವ ಎರಡೂ ತಾಲ್ಲೂಕುಗಳ ರೈತರಿಗೆ ತೆಂಗಿನಮರಗಳೇ ಸಂಜೀವಿನಿ. ಕಳೆದ ಮೂರು ವರ್ಷಗಳಿಂದ ಮಳೆ ಕೊರತೆಯಾಗಿದ್ದು, ತೆಂಗಿನ ಮರಗಳು ರೋಗಪೀಡಿತವಾಗಿದ್ದು ರೈತರ ಜಂಘಾಬಲವೇ ಕುಸಿದು ಬಿದ್ದಿದೆ.

ಹತ್ತು ಕಾಯಿ ಕಿತ್ತು ಸಂತೆಯಲ್ಲಿ ಮಾರಾಟ ಮಾಡಿ ರೈತರು ತಿಂಗಳವರೆಗೆ ಜೀವನ ಸಾಗಿಸುತ್ತಿದ್ದರು. ಮಾರುಕಟ್ಟೆಯಲ್ಲಿ ಕೆ.ಜಿ. ತೆಂಗಿನಕಾಯಿಗೆ ₹ 40 ಬೆಲೆ ಇದೆ. ಆದರೆ ತೆಂಗಿನಕಾಯಿ ಇಳುವರಿಯಲ್ಲಿ ಕುಂಠಿತವಾಗಿರುವ ಕಾರಣ ರೈತರು ನಷ್ಟ ಅನುಭವಿಸಿದ್ದಾರೆ.

ಬರಗಾಲದಲ್ಲಿ ರೈತರನ್ನು ತೆಂಗಿನಮರಗಳು ಕಾಪಾಡುತ್ತಿದ್ದವು. ಈಗ ತೆಂಗಿನಮರಕ್ಕೂ ರೋಗ ಬಂದಿರುವ ಕಾರಣ ರೈತರನ್ನು ಮುಂದೆ ಕಾಪಾಡುವವರು ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ. ಮೊದಲು ಒಂದು ತೆಂಗಿನ ಮರಕ್ಕೆ ನೂರು ತೆಂಗಿನಕಾಯಿಗಳು ಬೀಳುತ್ತಿದ್ದವು. ಆದರೆ ಈಗ ರೋಗಪೀಡಿತ ಮರಗಳಿಂದ ಇಳುವರಿ ಸಂಪೂರ್ಣ ಕುಸಿದಿದೆ. ಒಂದು ಮರಕ್ಕೆ 10 ಕಾಯಿ ಸಿಗುವುದೇ ಈಗ ದುಸ್ತರವಾಗಿದೆ.

‘ಕೆ.ಆರ್‌.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚು ತೆಂಗಿನಮರಗಳು ನಾಶವಾಗಿವೆ. ಮಳೆ ಕೊರತೆಯಿಂದ ತೇವಾಂಶದ ಕೊರತೆಯುಂಟಾಗಿ ನುಸಿರೋಗ ಮರವನ್ನು ಕಾಡುತ್ತಿದೆ. ಕೊಳವೆಬಾವಿಗಳು ಬತ್ತಿ ಹೋಗಿರುವ ಕಾರಣ ಸಾವಿರ ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರು ಕೊರತೆಯಾಗಿ ತೆಂಗಿನಮರಗಳನ್ನು ನುಸಿ ಪೀಡೆ ಕಾಡುತ್ತಿದ್ದು ಮರಗಳು ಇದ್ದೂ ಇಲ್ಲದಂತಾಗಿವೆ. ತೆಂಗಿನ ಕಾಯಿಗಳು ಬಹಳ ಸಣ್ಣದಾಗುತ್ತಿದ್ದು ಅವುಳನ್ನು ಮಾರುಕಟ್ಟೆ ಯಲ್ಲಿ ಕೇಳುವವರೇ ಇಲ್ಲ. ಅವುಗಳನ್ನು ಕಜ್ಜಿ ಕಾಯಿ ಎನ್ನುತ್ತೇವೆ’ ಎಂದು ರೈತ ಮರೀಗೌಡ ಹೇಳಿದರು.

‘ತೆಂಗಿನ ಮರಗಳಿಗೆ ಸೂಕ್ತ ವಾತಾವರಣ ಇರಬೇಕು. ಬಿಸಿಲು ಮತ್ತು ತೇವಾಂಶದ ಸಮತೋಲನ ಅವಶ್ಯ. ಆದರೆ ಈಚೆಗೆ ಬಿಸಿಲು ಹೆಚ್ಚಾಗುತ್ತಿದ್ದು ವಾತಾವರಣದಲ್ಲಿ ತೇವಾಂಶದ ಕೊರತೆ ಉಂಟಾಗುತ್ತಿದೆ. ಈ ಹವಾಗುಣವನ್ನು ತೆಂಗಿನಮರಗಳು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತೆಂಗಿನಮರ ಗಳನ್ನು ರೋಗಗಳು ಕೊಲ್ಲುತ್ತಿವೆ. ಕಿಕ್ಕೇರಿ, ಸಂತೆಬಾಚಹಳ್ಳಿ, ಶೀಳನೆರೆ, ಬೂಕನಕೆರೆ ಭಾಗದ ರೈತರಿಗೆ ತೆಂಗಿನಮರಗಳೇ ಆಧಾರ’ ಎಂದು ಕೆ.ಆರ್‌.ಪೇಟೆ ರೈತಸಂಘದ ಮುಖಂಡ ಜಯರಾಮು ಹೇಳಿದರು.

ರಸಸಾವರ ರೋಗ: ನಾಗಮಂಗಲ ತಾಲ್ಲೂಕಿನಲ್ಲಿ ತೇವಾಂಶದ ಕೊರತೆಯುಂಟಾಗಿ ತೆಂಗಿನ ಮರಗಳಿಗೆ ರಸಸಾವರ ರೋಗ ಕಾಣಿಸಿಕೊಂಡಿದೆ. ಇದರಿಂದ ತೆಂಗಿನಮರದಲ್ಲಿ ರಸ ಜಿನುಗುತ್ತಿದ್ದು ಸುಳಿಯೇ ಒಣಗಿ ಹೋಗುತ್ತಿದೆ. ಶೇ 40ರಷ್ಟು ಮರಗಳು ರಸಸಾವರ ರೋಗಕ್ಕೆ ತುತ್ತಾಗಿ ನಾಶ ಹೊಂದಿವೆ. ಇದರ ಜೊತೆಗೆ ನುಸಿ ರೋಗ ಕಾಣಿಸಿಕೊಂಡಿದ್ದು ತೆಂಗಿನ ಇಳುವರಿ ಕಡಿಮೆಯಾಗಿ ರೈತರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.

ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಹೋಬಳಿಯ ಆರಣಿ, ನೆಲ್ಲಿಗೆರೆ, ಜವರನಹಳ್ಳಿ ಗ್ರಾಮ ಪಂಚಾಯಿತಿ ಭಾಗದ ಹಳ್ಳಿಗಳ ತೆಂಗಿನಮರಗಳು ಹೆಚ್ಚಾಗಿ ರೋಗಬಾಧೆಗೆ ಒಳಗಾಗಿ ನಾಶಹೊಂದಿವೆ. ಬಿಂಡಿಗನವಿಲೆ ಹೋಬಳಿಯ ಕದಬಳ್ಳಿ, ಹೊನ್ನಾವರ, ಲಾಳನಕೆರೆ ಗ್ರಾಮ ಪಂಚಾಯಿತಿಯ ಹಳ್ಳಿಗಳಲ್ಲಿ ರೋಗ ಕಾಣಿಸಿಕೊಂಡಿದೆ. ಕಸಬಾ ವ್ಯಾಪ್ತಿಯ ಮಾಯಿಗೋನಹಳ್ಳಿ, ಅಂಚೆಚಿಟ್ಟನಹಳ್ಳಿ, ಹೊಣಕೆರೆ ಹೋಬಳಿ ವ್ಯಾಪ್ತಿಯ ಬೋಗಾದಿ ಕಾಂತಾಪುರ ಗ್ರಾಮ ಪಂಚಾಯಿತಿ ಹಳ್ಳಿಗಳಲ್ಲಿ ತೆಂಗಿನ ಮರಗಳು ನಾಶ ಹೊಂದಿವೆ.

‘ನಮ್ಮ ತಾಲ್ಲೂಕಿನ ಒಣ ಪ್ರದೇಶದಲ್ಲಿ ತೆಂಗಿನ ಮರಗಳು ರೈತರನ್ನು ರಕ್ಷಣೆ ಮಾಡಿದ್ದವು. ನೀರು ಇರುವ ಕಡೆ ತರಕಾರಿ ರೈತರಿಗೆ ಆಸರೆಯಾಗಿತ್ತು. ಆದರೆ ಈಗ ಮಳೆ ಕೊರತೆ ಉಂಟಾಗಿ ತೆಂಗು ನಾಶವಾಗಿರುವ ಕಾರಣ ರೈತರಿಗೆ ದಿಕ್ಕೇ ತೋಚದಂತಾಗಿದೆ. ರಾಜಕಾರಣಿಗಳು ಇಚ್ಛಾಶಕ್ತಿ ಬಳಸಿ ನೀರಾವರಿ ಯೋಜನೆ ಜಾರಿಗೊಳಿಸಿದ್ದರೆ ರೈತರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ನಾಗಮಂಗಲ ರೈತಸಂಘದ ಮುಖಂಡ ಎಚ್‌.ಸಿ.ಗೋಪಾಲಕೃಷ್ಣ ಹೇಳಿದರು.

**

ತೆಂಗು ಪುನಶ್ಚೇತನ ಯೋಜನೆ

‘ರೋಗಬಾಧೆ, ಅನುತ್ಪಾದನೆ, ತೇವಾಂಶ, ಪೋಷಕಾಂಶಗಳ ಕೊರತೆಯಿಂದ ಇಳುವರಿ ಕುಂಠಿತವಾಗಿರುವ ಮರಗಳ ಮರು ನಾಟಿಗೆ ತೋಟಗಾರಿಕೆ ಇಲಾಖೆ ಕ್ರಮ ವಹಿಸಿದೆ. ಆ ಮೂಲಕ ತೆಂಗು ಪುನಶ್ಚೇತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಮರುನಾಟಿಗೆ ತಗುಲುವ ವೆಚ್ಚದಲ್ಲಿ ತೋಟಗಾರಿಕೆ ಇಲಾಖೆ ಶೇ 50ರಷ್ಟು ಸಹಾಯಧನ ನೀಡುತ್ತದೆ. ಇನ್ನು ತೆಂಗು ಅಭಿವೃದ್ಧಿ ಮಂಡಳಿಯು ಸಮಗ್ರ ಬೇಸಾಯ ಯೋಜನೆಯಡಿ ತೆಂಗು ಪುನಶ್ಚೇತನಕ್ಕೆ ಶೇ 100ರಷ್ಟು ಸಹಾಯಧನ ಸಿಗಲಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು ಹೇಳಿದರು.

**

ಮೊದಲು 100 ತೆಂಗಿನ ಮರ ಇದ್ದರೂ ಯುವ ರೈತರಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು. ಆದರೆ ಈಗ ಸಾವಿರ ತೆಂಗಿನ ಮರ ಇದ್ದರೂ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಮಳೆ, ನೀರಾವರಿ ಕೊರತೆಯೇ ಈ ಬದಲಾವಣೆಗೆ ಕಾರಣವಾಗಿದೆ

–ಶಿವಕುಮಾರ್‌, ರೈತ, ಕೆ.ಆರ್‌.ಪೇಟೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry