ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಚಾಲಕರ ಮೇಲೆ ಕ್ಯಾಮೆರಾ ಕಣ್ಣು!

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಎಚ್ಚರಿಕೆ
Last Updated 10 ಮಾರ್ಚ್ 2018, 8:52 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅಪಾಯಕಾರಿ ಚಾಲನೆ ಮತ್ತಿತರ ದೂರುಗಳು ಹೆಚ್ಚುತ್ತಿದ್ದು, ಚಾಲಕರ ಮೇಲೆ ವಿಡಿಯೊ ರೆಕಾರ್ಡಿಂಗ್‌ ಮೂಲಕ ನಿಗಾ ಇರಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದರು.

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿ ಕರೊಬ್ಬರ ದೂರಿಗೆ ಉತ್ತರಿಸಿದ ಕಮಿಷನರ್, ‘ಚಾಲನೆ ಸಮಯದಲ್ಲಿನ ಉಲ್ಲಂಘನೆಗಳು, ಬಸ್‌ಗಳಲ್ಲಿ ಟಿಕೆಟ್‌ ನೀಡದಿರುವುದು, ಚಾಲಕ ಮತ್ತು ನಿರ್ವಾಹಕರ ಉಡಾಫೆ ವರ್ತನೆ ಕುರಿತು ವಿಡಿಯೊ ರೆಕಾರ್ಡಿಂಗ್‌ ಆಧಾರದಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಶೇಷ ಕಾರ್ಯಾಚರಣೆ: ಮಂಗಳಾ ದೇವಿ ಸುತ್ತಮುತ್ತ ಮೀನಿನ ಲಾರಿಗಳಿಂದ ಹೊರಚೆಲ್ಲುವ ನೀರಿನಿಂದ ತೊಂದರೆಯಾಗುತ್ತಿದೆ ಎಂಬ ಅಹವಾಲಿಗೆ ಸ್ಪಂದಿಸಿದ ಸುರೇಶ್, ‘ಹಳೆ ಬಂದರು ಸಮೀಪ ದಲ್ಲೇ ವಿಶೇಷ ಕಾರ್ಯಾಚರಣೆ ನಡೆಸಿ ಮೀನಿನ ಲಾರಿಗಳನ್ನು ತಪಾಸಣೆ ಮಾಡಲಾಗುವುದು. ಮೀನಿನ ಎಣ್ಣೆಯುಕ್ತ ನೀರು ರಸ್ತೆಗೆ ಚೆಲ್ಲದಂತೆ ಕ್ರಮ ಕೈಗೊಳ್ಳದ ಲಾರಿಗಳು ಮತ್ತು ಅವುಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದರು.

ಜ್ಯೋತಿ ಜಂಕ್ಷನ್‌– ಫಳ್ನೀರ್‌ ಮಾರ್ಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಿರುವುದಕ್ಕೆ ಸ್ಥಳೀಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿ, ‘ಏಕಮುಖ ಸಂಚಾರ ವ್ಯವಸ್ಥೆ ಕುರಿತು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬದಲಾವಣೆ ಕುರಿತು ಪರಿಶೀಲಿಸಲಾಗುವುದು’ ಎಂದರು.

ದೇರಳಕಟ್ಟೆಯ ಯೇನೆಪೋಯ ಮತ್ತು ಕೆ.ಎಸ್‌.ಹೆಗ್ಡೆ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ರಸ್ತೆ ಬದಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿ ತೊಂದರೆ ಮಾಡುತ್ತಿದ್ದಾರೆ ಎಂದು ಸ್ಥಳೀಯರೊಬ್ಬರು ದೂರಿದರು. ಅಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ತಪ್ಪೆಸಗುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಧ್ವನಿವರ್ಧಕ ತಡೆಗೆ ಆಗ್ರಹ: ವಾಮಂ ಜೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಲವು ಧಾರ್ಮಿಕ ಕೇಂದ್ರಗಳಲ್ಲಿ ತಡರಾತ್ರಿಯವರೆಗೂ ಧ್ವನಿವರ್ಧಕಗಳನ್ನು ಬಳಕೆ ಮಾಡಲಾ ಗುತ್ತಿದೆ. ಇದರಿಂದ ವಿದ್ಯಾರ್ಥಿ ಗಳಿಗೆ ಪರೀಕ್ಷಾ ತಯಾರಿಗೆ ತೊಂದರೆ ಆಗುತ್ತಿದೆ ಎಂಬ ದೂರು ಕೇಳಿಬಂತು.

‘ರಾತ್ರಿ 10 ಗಂಟೆಯ ಬಳಿಕ ಹೊರ ಆವರಣದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಅವಕಾಶವಿಲ್ಲ. ಈ ಕುರಿತು ಕ್ರಮ ಜರುಗಿಸುವಂತೆ ಸ್ಥಳೀಯ ಪೊಲೀ ಸರಿಗೆ ಸೂಚನೆ ನೀಡಲಾ ಗುವುದು’ ಎಂದರು.

ಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಮದ್ಯದಂಗಡಿ ಇರುವ ಕುರಿತು ವ್ಯಕ್ತಿಯೊಬ್ಬರು ದೂರು ಹೇಳಿದರು. ಈ ಸಂಬಂಧ ಜಿಲ್ಲಾಧಿಕಾರಿಯವರಿಗೆ ದೂರು ನೀಡುವಂತೆ ಸುರೇಶ್‌ ಸೂಚಿಸಿದರು.

ಕಿನ್ನಿಗೋಳಿ ಪೇಟೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತದವರು ರಸ್ತೆಯ ಬದಿಯನ್ನು ಅಗೆದು ಹಾಗೆಯೇ ಬಿಟ್ಟಿರುವ ವಿಚಾರ ಮತ್ತೆ ಪ್ರಸ್ತಾಪ ವಾಯಿತು. ಈ ಕುರಿತು ಗ್ರಾಮ ಪಂಚಾ ಯಿತಿಯ ಗಮನಕ್ಕೆ ತರಲಾಗಿದೆ. ಪಂಚಾ ಯಿತಿ ಅಧ್ಯಕ್ಷರನ್ನೇ ಕಚೇರಿಗೆ ಕರೆಸಿ ಸೂಚನೆ ನೀಡಲಾಗುವುದು ಎಂದರು.

ಕೆ.ಎಸ್‌. ರಾವ್‌ ರಸ್ತೆಯಲ್ಲಿ ಆಟೊ ರಿಕ್ಷಾಗಳನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುವುದು, ಮಂಗಳೂರು– ಕಾರ್ಕಳ ನಡುವೆ ಸಂಚರಿಸುವ ಬಸ್‌ಗಳನ್ನು ಅತಿವೇಗದಲ್ಲಿ ಚಾಲನೆ ಮಾಡುತ್ತಿರುವುದು, ಮಂಗಳೂರಿನಿಂದ ಉಡುಪಿ, ಕಾರ್ಕಳ ಮಾರ್ಗದ ಬಸ್‌ಗಳಲ್ಲಿ ಕರ್ಕಶ ಹಾರನ್‌ ಬಳಕೆ, ನಗರ ಸಾರಿಗೆ ಬಸ್‌ಗಳಲ್ಲಿ ಟ್ರಿಪ್ ತುಂಡರಿಸುವುದು, ಕಾವೂರು ಜಂಕ್ಷನ್‌ನಲ್ಲಿ ಪೊಲೀಸರು ಇಲ್ಲಿದಿರುವ ವಿಚಾರಗಳು ಫೋನ್‌ ಇನ್‌ ವೇಳೆ ಪ್ರಸ್ತಾಪವಾದವು.

ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವೆಲೆಂಟೈನ್ ಡಿಸೋಜ, ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಕಾಶ್, ಕುಮಾರಸ್ವಾಮಿ, ಚಂದ್ರ, ಎಎಸ್‌ಐ ಯೂಸುಫ್, ಹೆಡ್ ಕಾನ್‌ಸ್ಟೆಬಲ್ ಪುರು ಷೋತ್ತಮ, ಕೆನರಾ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ (ಸಿಟಿ ಬಸ್) ಸಂಘದ ಜಂಟಿ ಕಾರ್ಯದರ್ಶಿ ರಾಮಚಂದ್ರ ಪಿಲಾರು ಫೋನ್‌ ಇನ್‌ನಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT