₹10 ಕೋಟಿ ವೆಚ್ಚದಲ್ಲಿ ಕಾಮಗಾರಿ: ಲೋಬೊ

ಭಾನುವಾರ, ಮಾರ್ಚ್ 24, 2019
28 °C
ವೆನ್ಲಾಕ್‌ ಸೂಪರ್ ಸ್ಪೆಷಾಲಿಟಿ ಕಟ್ಟಡಕ್ಕೆ ಶಿಲಾನ್ಯಾಸ ಇಂದು

₹10 ಕೋಟಿ ವೆಚ್ಚದಲ್ಲಿ ಕಾಮಗಾರಿ: ಲೋಬೊ

Published:
Updated:
₹10 ಕೋಟಿ ವೆಚ್ಚದಲ್ಲಿ ಕಾಮಗಾರಿ: ಲೋಬೊ

ಮಂಗಳೂರು: ನಗರದ ವೆನ್ಲಾಕ್‌ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿ ವಿಭಾಗ, ಮಕ್ಕಳ ಆರೋಗ್ಯ ಸಂಸ್ಥೆ, ಜಿಲ್ಲಾ ಸಾರ್ವಜನಿಕರ ಪ್ರಯೋಗಾಲಯ ಹಾಗೂ ವೆನ್ಲಾಕ್‌ ಜಿಲ್ಲಾ ಸಂಯುಕ್ತ ಆಯುಷ್‌ ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭ ಶನಿವಾರ (ಇದೇ 10) ನಗರದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಾಸಕ ಜೆ.ಆರ್‌. ಲೋಬೊ, ಬೆಳಿಗ್ಗೆ 10.30ಕ್ಕೆ ಸಚಿವರಾದ ಬಿ. ರಮಾನಾಥ ರೈ, ರಮೇಶ್‌ಕುಮಾರ್, ಯು.ಟಿ. ಖಾದರ್‌ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಸದ ನಳಿನ್‌ಕುಮಾರ್ ಕಟೀಲ್‌, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಚ್‌ಎಲ್‌ಎಲ್‌ ಎಂಆರ್‌ಐ ವಿಭಾಗದ ಲೋಕಾರ್ಪ ಣೆಯೂ ನಡೆಯಲಿದೆ ಎಂದರು.

ವೆನ್ಲಾಕ್‌ ಆಸ್ಪತ್ರೆಯಲ್ಲಿ ಮೇಲ್ದರ್ಜೆಗೆ ಏರಿಸಲು ಸರ್ಕಾರದಿಂದ ಮಂಜೂರಾದ ₹10 ಕೋಟಿ ಅನುದಾನದಲ್ಲಿ 124 ಹಾಸಿಗೆಗಳ ಸೂಪರ್‌ ಸ್ಪೆಷಾಲಿಟಿ ವಿಭಾಗದ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. 176 ಹಾಸಿಗೆಯ ನೂತನ ಮೆಡಿಸಿನ್‌ ಬ್ಲಾಕ್‌ಗೆ ಹೊಂದಿಕೊಂಡಂತೆ ಈ ಕಟ್ಟಡ ತಲೆ ಎತ್ತಲಿದೆ. ಈ ಕಟ್ಟಡದಲ್ಲಿ ಹೃದಯ ಚಿಕಿತ್ಸೆ, ಎಂಡೋಸ್ಕೋಪಿ, ಕ್ಯಾಥ್‌ಲ್ಯಾಬ್‌ ವಿಭಾಗಗಳು ಇರಲಿವೆ ಎಂದು ತಿಳಿಸಿದರು.

ಇದರೊಂದಿಗೆ ₹3 ಕೋಟಿ ವೆಚ್ಚದಲ್ಲಿ ಆರ್‌ಎಪಿಸಿಸಿ ಆಸ್ಪತ್ರೆಯನ್ನು ಇಂದಿರಾ ಗಾಂಧಿ ನ್ಯಾಷನಲ್‌ ಚೈಲ್ಡ್ ಇನ್‌ಸ್ಟಿಟ್ಯೂಟ್‌ ಆಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ₹30 ಲಕ್ಷ ವೆಚ್ಚದಲ್ಲಿ ಈಗಾಗಲೇ ಕಟ್ಟಡಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ. ಉಳಿದ ₹2.70 ಕೋಟಿ ವೆಚ್ಚದಲ್ಲಿ 62 ಹಾಸಿಗೆಯ ಸಾಮರ್ಥ್ಯದ 1+3 ನೂತನ ಕಟ್ಟಡವನ್ನು ಆರ್‌ಎಪಿಸಿಸಿ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗುವುದು ಎಂದು ಹೇಳಿದರು.

ಈ ಕಟ್ಟಡದ ನೆಲಮಾಳಿಗೆಯಲ್ಲಿ 20 ಹಾಸಿಗೆ ಸಾಮರ್ಥ್ಯದ ಮಕ್ಕಳ ಎಲುಬು–ಕೀಲು ವಿಭಾಗ, ಮೊದಲ ಮಹಡಿಯಲ್ಲಿ 12 ಹಾಸಿಗೆಯ ಎನ್‌ಐಸಿಯು ವಿಭಾಗ, ಎರಡನೇ ಮಹಡಿಯಲ್ಲಿ ಒಂದು ಹಾಸಿಗೆಯ ವಿಶೇಷ ಸಾಮರ್ಥ್ಯದ 10 ಕೋಣೆಗಳು, ಮೂರನೇ ಮಹಡಿಯಲ್ಲಿ ಎರಡು ಹಾಸಿಗೆಯ ವಿಶೇಷ ವಾರ್ಡ್‌ಗಾಗಿ ಒಟ್ಟು 10 ಕೋಣೆಗಳನ್ನು ನಿರ್ಮಿಸಲಾಗುತ್ತಿದ್ದು, ಮಕ್ಕಳಿಗೆ ಆಟವಾಡಲು ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದು ವಿವರಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ₹50 ಲಕ್ಷ ವೆಚ್ಚದಲ್ಲಿ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ನಿರ್ಮಿಸಲಾಗುತ್ತಿದೆ. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗಿ, ಚಿಕೂನ್‌ ಗುನ್ಯಾ, ಇಲಿಜ್ವರ, ಇತರೇ ರೋಗಗಳಿಗೆ ಎಲಿಸಾ ರಕ್ತ ಪರೀಕ್ಷೆಯನ್ನು ಇಲ್ಲಿ ಮಾಡಲಾಗುವುದು. ಟೈಫಾಯ್ಡ್‌, ಕಾಲರಾ, ಸೇರಿದಂತೆ ಶಂಕಾಸ್ಪದ ರೋಗಗಳ ಪತ್ತೆಗೂ ಇಲ್ಲಿ ಪರೀಕ್ಷೆ ನಡೆಸಲಾಗುವುದು. ಅಲ್ಲದೇ ಕಾಲಕಾಲಕ್ಕೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರದ ಪ್ರಯೋಗಾಲಯದ ತಂತ್ರಜ್ಞರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ದೇಶದಲ್ಲೇ ಮೊದಲು: ದೇಶದಲ್ಲಿಯೇ ಮೊದಲ ಸರ್ಕಾರಿ ವೆನ್ಲಾಕ್‌ ಜಿಲ್ಲಾ ಸಂಯುಕ್ತ ಆಯುಷ್‌ ಆಸ್ಪತ್ರೆಯನ್ನು ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಆಯುಷ್‌ ಚಿಕಿತ್ಸಾ ಪದ್ಧತಿಗಳಾದ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ ಮತ್ತು ಹೊಮಿಯೋಪತಿ ಚಿಕಿತ್ಸೆಗಳು ಒಂದೇ ಸೂರಿನಡಿ ದೊರೆಯಲಿವೆ. ರಾಷ್ಟ್ರೀಯ ಆಯುಷ್‌ ಮಿಷನ್‌ ಹಾಗೂ ರಾಜ್ಯ ಸರ್ಕಾರಗಳ 60: 40 ಅನುದಾನದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಜೆ.ಆರ್. ಲೋಬೊ ಹೇಳಿದರು.

ಈಗಾಗಲೇ ವೆನ್ಲಾಕ್‌ ಆಸ್ಪತ್ರೆಯಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಡಿಇಐಸಿ ವಿಭಾಗವನ್ನು ಪ್ರಾರಂಭಿಸಲಾಗಿದೆ. 0–6 ವರ್ಷದ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್‌ ಅಳವಡಿಸುವ ಸೌಲಭ್ಯ ಇಲ್ಲಿದೆ. ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಕ್ಯಾನ್ಸರ್ ಪೀಡಿತ ರೋಗಿಗಳ ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ. ಪ್ಯಾರಾ ಮೆಡಿಕಲ್‌ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, 82 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟರಾಯ್‌ ಪ್ರಭು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣರಾವ್, ವೆನ್ಲಾಕ್‌ ವೈದ್ಯಕೀಯ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಹಮ್ಮದ್‌ ಇಕ್ಬಾಲ್‌, ಡಾ. ಅಶೋಕ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಡಿ. ಉದಯಶಂಕರ್ ಇದ್ದರು.

**

ಲೇಡಿಗೋಶನ್ ಹೊಸ ಕಟ್ಟಡ ಸಿದ್ಧ

ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದ್ದು, ಇದೇ 15 ಅಥವಾ 16 ರಂದು ಉದ್ಘಾಟನೆ ಮಾಡಲಾಗುವುದು ಎಂದು ಶಾಸಕ ಜೆ.ಆರ್. ಲೋಬೊ ತಿಳಿಸಿದರು.

ಈಗಾಗಲೇ ಎಂಆರ್‌ಪಿಎಲ್‌ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಕಟ್ಟಡ ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮಯ ಪಡೆದುಕೊಂಡು, ಉದ್ಘಾಟನೆಯ ದಿನಾಂಕ ನಿಗದಿ ಮಾಡಲಾಗುವುದು ಎಂದರು.

**

ಸೂಪರ್ ಸ್ಪೆಷಾಲಿಟಿ ವಿಭಾಗ ಆರಂಭವಾದ ನಂತರ ವೆನ್ಲಾಕ್‌ ಆಸ್ಪತ್ರೆಯ ಸಾಮರ್ಥ್ಯ 1,224 ಹಾಸಿಗೆಗಳಿಗೆ ಏರಲಿದೆ.

ಜೆ.ಆರ್‌. ಲೋಬೊ, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry