ದೇವದಾಸಿ ಪದ್ಧತಿ ನಿರ್ಮೂಲನೆಗೆ ಬದ್ಧ

ಭಾನುವಾರ, ಮಾರ್ಚ್ 24, 2019
32 °C
ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ; ಶಕ್ತಿಧಾಮದ ನೂತನ ಕಟ್ಟಡಗಳ ಉದ್ಘಾಟನೆ

ದೇವದಾಸಿ ಪದ್ಧತಿ ನಿರ್ಮೂಲನೆಗೆ ಬದ್ಧ

Published:
Updated:
ದೇವದಾಸಿ ಪದ್ಧತಿ ನಿರ್ಮೂಲನೆಗೆ ಬದ್ಧ

ಮೈಸೂರು: ರಾಜ್ಯದಲ್ಲಿ ದೇವದಾಸಿ ‍ಪದ್ಧತಿ ನಿರ್ಮೂಲನೆಗೆ ರಾಜ್ಯ ಸರ್ಕಾರವು ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಶಕ್ತಿಧಾಮದ ನೂತನ ಕಟ್ಟಡ ಹಾಗೂ ಸೌಲಭ್ಯಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಒಟ್ಟು 26 ಸಾವಿರ ದೇವದಾಸಿಯರು ಇದ್ದಾರೆ ಎಂಬ ಮಾಹಿತಿ ಇದೆ. ಇದೀಗ ರಾಜ್ಯ ಸರ್ಕಾರವು ಸಮೀಕ್ಷೆಯೊಂದನ್ನು ನಡೆಸುತ್ತಿದ್ದು, ನಿಖರ ಮಾಹಿತಿ ಸಿಗಲಿದೆ. ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುವುದು. ಮತ್ತೆ ಯಾರೂ ದೇವದಾಸಿ ಪದ್ಧತಿಯಲ್ಲಿ ನರಳದಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.

‘ಕೇವಲ ಕಾನೂನೊಂದೇ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸದು. ಕಾನೂನಿನ ಜತೆಗೆ ಸಾರ್ವಜನಿಕ ಜಾಗೃತಿಯೂ ಮುಖ್ಯ. ದೇವದಾಸಿಯಂತಹ ಪದ್ಧತಿಗೆ ಪೋಷಕರು ಕಿಡಿಕಾರಬೇಕು. ತಮ್ಮ ಮಕ್ಕಳು ತಮ್ಮಂತೆ ಆಗಬಾರದು ಎಂಬ ಕಾಳಜಿ ಅವರಲ್ಲಿ ಮೂಡಬೇಕು’ ಎಂದು ಕಿವಿಮಾತು ಹೇಳಿದರು.

ಶಕ್ತಿಧಾಮ ಕುರಿತು ಮಾತನಾಡಿದ ಅವರು, ‘ಅನೇಕ ವರ್ಷಗಳಿಂದ ಈ ಸಂಸ್ಥೆಯೊಂದಿಗೆ ನನಗೆ ನಂಟಿದೆ. ನಾನು ಹಣಕಾಸು ಸಚಿವನಾಗಿದ್ದಾಗ ಕೆಂಪಯ್ಯ ಇಲ್ಲಿ ಪೊಲೀಸ್ ಕಮಿಷನರ್ ಆಗಿದ್ದರು. ಆಗ ಡಾ.ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಆಶಯದಂತೆ ಈ ಸಂಸ್ಥೆ ಆರಂಭವಾಯಿತು. ನಮ್ಮ ಸರ್ಕಾರ ಸಮಾಜಪರ ಆಶಯಗಳನ್ನು ಹೊಂದಿದೆ. ಅದಕ್ಕಾಗಿ ಈ ಸಂಸ್ಥೆಗೆ ಕೇಳಿದಷ್ಟು ಹಣ ಕೊಟ್ಟಿದೆ. ಮುಂದೆಯೂ ಬೆಂಬಲಿಸಲಿದೆ’ ಎಂದು ಭರವಸೆ ನೀಡಿದರು.

ಶಕ್ತಿಧಾಮ ಟ್ರಸ್ಟ್‌ ಅಧ್ಯಕ್ಷೆ ಗೀತಾ ಶಿವರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರಿ, ಕಾಂಗ್ರೆಸ್‌ ಮುಖಂಡರಾದ ಜಯಮಾಲಾ, ನಟರಾದ ಶಿವರಾಜಕುಮಾರ್, ಪುನೀತ್‌ ರಾಜಕುಮಾರ್, ಅಶ್ವಿನಿ ಪುನೀತ್‌ ರಾಜಕುಮಾರ್, ಟ್ರಸ್ಟಿಗಳಾದ ಜಿ.ಎಸ್‌.ಜಯದೇವ, ಕೆಂಪಯ್ಯ, ಸಾಹಿತಿ ದೇವನೂರ ಮಹಾದೇವ, ನಿರ್ದೇಶಕ ಭಗವಾನ್, ಶಾಸಕ ಎಂ.ಕೆ.ಸೋಮಶೇಖರ್‌, ಮುಖಂಡರಾದ ಸುನೀಲ್‌ ಬೋಸ್ ಭಾಗವಹಿಸಿದ್ದರು.

**

ಶಕ್ತಿಧಾಮ ವಸತಿ ಶಾಲೆಗೆ ಸಹಕಾರ

ಶಕ್ತಿಧಾಮದಲ್ಲಿ ಹೆಣ್ಣುಮಕ್ಕಳ ವಸತಿ ಶಾಲೆ ನಿರ್ಮಿಸುವ ಬಗ್ಗೆ ಪ್ರಸ್ತಾವ ಸಿಕ್ಕಿದೆ. ಅದಕ್ಕೆ ಸರ್ಕಾರವು ಎಲ್ಲ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

‘ಈಗಾಗಲೇ ಕಟ್ಟಡ ನಿರ್ಮಾಣ ಹಾಗೂ ಸೌಲಭ್ಯಗಳಿಗಾಗಿ ಸರ್ಕಾರ ₹ 5 ಕೋಟಿ ಕೊಟ್ಟಿದೆ. 2ನೇ ಹಂತದ ಯೋಜನೆಯಾಗಿ ವಸತಿ ಶಾಲೆ ನಿರ್ಮಿಸುವುದಾಗಿ ಟ್ರಸ್ಟಿಗಳಾದ ಜಿ.ಎಸ್‌.ಜಯದೇವ ಹಾಗೂ ಇತರರು ಕೋರಿದ್ದಾರೆ. ಅವರ ಮನವಿಗೆ ಸ್ಪಂದನೆ ಸಿಗಲಿದೆ’ ಎಂದು ಅವರು ಹೇಳಿದರು.

**

ಶಕ್ತಿಧಾಮದಲ್ಲಿ ರಾಜ್‌, ಪಾರ್ವತಮ್ಮ ಆತ್ಮ

ಶಕ್ತಿಧಾಮದಲ್ಲಿ ಡಾ.ರಾಜ್‌, ಪಾರ್ವತಮ್ಮ ರಾಜಕುಮಾರ್ ಅವರ ಆತ್ಮವಿದೆ. ಅವರ ಕನಸಿನ ಕೂಸಿದು ಎಂದು ಸಾಹಿತಿ ಹಾಗೂ ಶಕ್ತಿಧಾಮ ಟ್ರಸ್ಟಿಗಳಲ್ಲಿ ಒಬ್ಬರಾದ ದೇವನೂರ ಮಹಾದೇವ ಸ್ಮರಿಸಿದರು.

‘ಶಕ್ತಿಧಾಮ’ ಎಂದು ಹೆಸರಿಟ್ಟವರು ವಿಜಯಾ ದಬ್ಬೆ, ಪ್ರೋತ್ಸಾಹಿಸಿದವರು ರಾಜಶೇಖರ ಕೋಟಿ. ಇವರೆಲ್ಲರ ಆತ್ಮ ಇಲ್ಲಿ ಸುಳಿದಾಡುತ್ತಿವೆ ಎಂದರು.

‘ನಮ್ಮ ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ಪ್ರಕರಣ ಎಂದು ಪರಿಗಣಿಸಬಾರದು; ಅವನ್ನು ಪ್ರಕ್ರಿಯೆ ಎಂದು ನೋಡಬೇಕು. ಆಗ ಮಾತ್ರ ನಮ್ಮಲ್ಲಿ ಜವಾಬ್ದಾರಿ ಮೂಡುತ್ತದೆ. ಸಮಾಜ ಬೆಳೆಯುತ್ತದೆ ಎಂದು ಪಿ.ಸಾಯಿನಾಥ್ ಹೇಳುತ್ತಿದ್ದರು. ಇದನ್ನು ನಾವು ಮನಸಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

**

‘ಇನ್ನೂ ಹೆಚ್ಚಿನ ಕೆಲಸ ಮಾಡುವಾಸೆ’

‘ಶಕ್ತಿಧಾಮಕ್ಕೆ ನಾವು ಚಿಕ್ಕ ಮಕ್ಕಳಿದ್ದಾಲಿಂದಲೂ ಬರುತ್ತಿದ್ದೇವೆ. ಆದರೆ, ಹೆಚ್ಚು ಕಾಲ ಕಳೆಯಲು ಆಗಿಲ್ಲ. ಈಗ ಈ ಸಂಸ್ಥೆಗೆ ಮತ್ತಷ್ಟು ಸೇವೆ ಸಲ್ಲಿಸಬೇಕು ಎಂದನ್ನಿಸುತ್ತಿದೆ. ಇದು ಅಮ್ಮನ ಕನಸಿನ ಕೂಸು’ ಎಂದು ನಟರಾದ ಶಿವರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್‌ ಹೇಳಿದರು.

‘ನೊಂದ ಜೀವಗಳಿಗೆ ಅಮ್ಮ ಸದಾ ತುಡಿಯುತ್ತಿದ್ದರು. ಅವರ ಕನಸನ್ನು ಮತ್ತಷ್ಟು ಸಾಕಾರಗೊಳಿಸಲು ಶ್ರಮಿಸುವೆವು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry