ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

7

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ದೇವದುರ್ಗ: ತಾಲ್ಲೂಕಿಗೆ ವಿವಿಧ ಯೋಜನೆಗಳ ಅಡಿ 50 ಸಾವಿರಕ್ಕೂ ಹೆಚ್ಚು ಆಶ್ರಯ ಮನೆಗಳು ಮಂಜೂರಾಗಿವೆ. ಆದರೆ, ಇಂದಿಗೂ ತಾಲ್ಲೂಕಿನಲ್ಲಿ ಬಹಳಷ್ಟು ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಘಟಕದ ಮುಖಂಡ ಹನುಮಂತಪ್ಪ ಕಾಕರಗಲ್‌ ಎಂದು ದೂರಿದರು.

ಇಲ್ಲಿನ ಮಿನಿ ವಿಧಾನಸೌಧ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಅನುದಾನ ಮಂಜೂರಾದರೂ ಸಕಾಲಕ್ಕೆ ಕಾಮಗಾರಿ ನಡೆಯದೆ ನನೆಗುದಿಗೆ ಬಿದ್ದಿದೆ. ನಾರಾಯಣಪುರ ಬಲದಂಡೆ ದುರಸ್ತಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದ ಜಮೀನು ಇರುವ ಕಡೆಗಳಲ್ಲಿ ಬಡವರಿಗೆ ಜಮೀನು ಮಂಜೂರು ಮಾಡಿ ಅನುಕೂಲ ಮಾಡಿಕೊಡಬೇಕು. ಪಟ್ಟಣ ಸೇರಿದಂತೆ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಂದ ತೊಂದರೆಯಾಗುತ್ತಿದೆ. ವೈದ್ಯರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ನಿವೇಶನ ರಹಿತ, ಭೂ ರಹಿತ ಮತ್ತು ವಸತಿ ರಹಿತ ಕುಟುಂಬಗಳನ್ನು ಗುರುತಿಸಿ ಕೂಡಲೇ ಸೌಲಭ್ಯ ಕಲ್ಪಸಬೇಕು’ ಎಂದು ಒತ್ತಾಯಿಸಿದರು.

ಹನುಮಂತಪ್ಪ ಕಾಕರಗಲ್‌, ಹನುಮಂತಪ್ಪ ವೆಂಕಾಪುರ, ಶಿವಪ್ಪ ಪಲಕನಮರಡಿ, ಮಲ್ಲಿಕಾರ್ಜುನ ಜೋಂಡೆ, ಹೈದರ ಅಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry