ಹಾಗೇ ಸಿಕ್ಕ ಜಿಂಜೀ ಕೋಟೆ!

7

ಹಾಗೇ ಸಿಕ್ಕ ಜಿಂಜೀ ಕೋಟೆ!

Published:
Updated:
ಹಾಗೇ ಸಿಕ್ಕ ಜಿಂಜೀ ಕೋಟೆ!

ಕೆಲವೊಂದು ಸಾರಿ ಹೋಗಬೇಕಿರುವ ಸ್ಥಳಕ್ಕಿಂತ ಕ್ರಮಿಸುವ ದಾರಿಯೇ ಆಸಕ್ತಿದಾಯಕವಾಗಿರುತ್ತದೆ. ಅಂತಹುದೇ ಒಂದು ಅನುಭವ ನಮಗಾಗಿದ್ದು ನಾವು ನಾಲ್ಕು ಜನ ಸ್ನೇಹಿತರು ಬೆಂಗಳೂರಿನಿಂದ ಪುದುಚೇರಿಗೆ ಪ್ರಯಾಣ ಬೆಳೆಸಿದಾಗ. ಹೊಸ ವರ್ಷವನ್ನು ಸ್ವಾಗತಿಸಲು ಪುದುಚೇರಿಗೆ ಹೋಗಬೇಕೆಂಬುದು ನಮ್ಮ ಯೋಜನೆಯಾಗಿತ್ತು. ಜೊತೆಗೆ ನಮ್ಮ ದಾರಿಯಲ್ಲಿ ಸಿಗಬಹುದಾದ ಪ್ರೇಕ್ಷಣಿಯ ಸ್ಥಳಗಳಿಗೂ ಒಂದು ಸಣ್ಣ ಭೇಟಿ ನೀಡಬೇಕೆಂದು ಯೋಚನೆ ಮಾಡಿಕೊಂಡಿದ್ದೆವು. ಅದರಂತೆ ಕೃಷ್ಣಗಿರಿ ಜಲಾಶಯ, ತಿರುವಣ್ಣಾಮಲೈನ ಅಣ್ಣಾಮಲೈ ದೇವಸ್ಥಾನ ನೋಡಿಕೊಂಡು ಅಲ್ಲಿಯೇ ಉಳಿದೆವು.

ಮರುದಿನ ಮುಂಜಾನೆ ಪುದುಚೇರಿಗೆ ಪ್ರಯಾಣ ಮುಂದುವರೆಸಿದ ನಮಗೆ ತಿರುವಣ್ಣಾಮಲೈನಿಂದ 40 ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿ ಎದುರಾಗಿದ್ದು ಜಿಂಜೀ ಕೋಟೆ. ಈ ಕೋಟೆಗೆ ಭೇಟಿ ನೀಡುವ ಯೋಜನೆ ನಮ್ಮಲ್ಲಿ ಇರಲೇ ಇಲ್ಲ.

ಜಿಂಜೀ ಕೋಟೆಯಲ್ಲಿರುವ ಕಲ್ಯಾಣ ಮಹಲ್‌

‘ಪೂರ್ವದ ಟ್ರಾಯ್’ ಎಂದು ಬ್ರಿಟಿಷರಿಂದ ಕರೆಸಿಕೊಂಡಿದ್ದ ಜಿಂಜೀ ಕೋಟೆ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯಿಂದ 70 ಕಿ.ಮೀ ದೂರದಲ್ಲಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿರುವ ಈ ಕೋಟೆ ಚೋಳರ ಅವಧಿಯಲ್ಲಿ, 9ನೇ ಶತಮಾನದಲ್ಲಿ ನಿರ್ಮಿತವಾದದ್ದು. ಮುಂದೆ 13ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದವರು ಅದನ್ನು ಪುನರುತ್ಥಾನಗೊಳಿಸಿದರು. ಅಲ್ಲದೆ, ಈ ಕೋಟೆ ಜಿಂಜೀ ನಾಯಕರ ಆಡಳಿತ ಕೇಂದ್ರವೂ ಆಗಿತ್ತು. ಇನ್ನೊಂದು ಇತಿಹಾಸದ ಪ್ರಕಾರ ಈ ಕೋಟೆಯನ್ನು 15-16ನೇ ಶತಮಾನದಲ್ಲಿ ಜಿಂಜೀ ನಾಯಕರೇ ಕಟ್ಟಿಸಿದ್ದರು ಎಂಬ ಮಾತು ಕೂಡ ಇದೆ.

ಇತಿಹಾಸದ ವಿವಿಧ ಘಟ್ಟಗಳಲ್ಲಿ ಈ ಕೋಟೆಯು ಶಿವಾಜಿ, ವಿಜಯನಗರದ ಅರಸರು, ಮರಾಠರು, ವಿಜಾಪುರದ (ಇಂದಿನ ವಿಜಯಪುರ) ಸುಲ್ತಾನರು, ಮೊಘಲರು ಮುಂತಾದವರ ವಶದಲ್ಲಿಯೂ ಇದ್ದಿತ್ತು ಎನ್ನಲಾಗಿದೆ. ಇದೊಂದು ಅಜೇಯ ಕೋಟೆ ಎಂದು ಶಿವಾಜಿ ಉದ್ಗರಿಸಿದ್ದ ಎಂಬ ಮಾತು ಇದೆ.ಜಿಂಜೀ ಕೋಟೆಯು ಉತ್ತರಕ್ಕೆ ಕೃಷ್ಣಗಿರಿ, ಪಶ್ಚಿಮಕ್ಕೆ ರಾಜಗಿರಿ, ಆಗ್ನೇಯಕ್ಕೆ ಚಂದ್ರಾಯನದುರ್ಗ ಎಂಬ ಮೂರು ಬೆಟ್ಟಗಳನ್ನು ಹೊಂದಿದೆ. ಕೋಟೆಯ ಗೋಡೆಗಳು 13 ಕಿ.ಮೀ ಉದ್ದವಾಗಿದ್ದು, ಮೂರು ಬೆಟ್ಟಗಳನ್ನು ಸಂಪರ್ಕಿಸುವ ಗೋಡೆಗಳು ಸುಮಾರು 11 ಚದರ ಕಿ.ಮೀ ವಿಸ್ತೀರ್ಣವನ್ನು ಒಳಗೊಳ್ಳುತ್ತವೆ. ಕೋಟೆಯು ಅಂದಾಜು 80 ಅಡಿ ಆಳದ ಕಂದಕಗಳಿಂದ ಸಂರಕ್ಷಿತವಾಗಿದೆ. ಕೋಟೆಯ ಸಂಕೀರ್ಣದ ಒಳಗೆ ಏಳು ಅಂತಸ್ತಿನ ಕಲ್ಯಾಣ ಮಹಲ್, ಬಂದೀಖಾನೆಗಳು, ಚೆಂಜೀ ಅಮ್ಮ ಎಂಬ ಹಿಂದೂ ದೇವತೆಯ ದೇವಸ್ಥಾನ ಮುಂತಾದ ಸ್ಥಳಗಳಿರುವುದು ಗಮನಾರ್ಹ. ಅಲ್ಲದೆ, ಆನೈಕುಲಂ ಎಂಬ ಪವಿತ್ರ ಹೊಂಡವೂ ಇಲ್ಲಿದೆ.

ಕೃಷ್ಣಗಿರಿಯಿಂದ ಕಾಣುವ ರಾಜಗಿರಿ ಕೋಟೆ

ಬೆಂಗಳೂರಿನಿಂದ ಜಿಂಜೀ ಕೋಟೆಯು ಸುಮಾರು 240 ಕಿ.ಮೀ ದೂರದಲ್ಲಿದೆ. ಬಸ್ಸುಗಳ ಮೂಲಕ ತೆರಳುವವರು, ಬೆಂಗಳೂರಿನಿಂದ ತಿರುವಣ್ಣಾಮಲೈ ತಲುಪಿ, ಅಲ್ಲಿಂದ 40 ಕಿ.ಮೀ ದೂರದಲ್ಲಿರುವ ಜಿಂಜೀ ಕೋಟೆ ತಲುಪಬಹುದು. ಅದರ ಹೊರತಾಗಿ ರೈಲಿನ ಮೂಲಕ ತಿಂಡಿವನಮ್ ತಲುಪಿ ಅಲ್ಲಿಂದ ಜಿಂಜೀ ಕೋಟೆಗೆ ಪ್ರಯಾಣಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry