ಬನಸುಂ: ನೂರರ ಸುಂದರ ನೆನಪು

ಶುಕ್ರವಾರ, ಮಾರ್ಚ್ 22, 2019
29 °C

ಬನಸುಂ: ನೂರರ ಸುಂದರ ನೆನಪು

Published:
Updated:
ಬನಸುಂ: ನೂರರ ಸುಂದರ ನೆನಪು

ಬೆಂಗಳೂರಿನ ರಾಜಾಜಿನಗರ ಎಂಬ ಬಡಾವಣೆ ಆಗಿನ್ನೂ ಹೆಸರು ಮಾತ್ರ ಪಡೆದಿತ್ತು. ಮನೆಗಳೂ ಇರಲಿಲ್ಲ; ರಸ್ತೆಗಳೂ ಇರಲಿಲ್ಲ. ಅಲ್ಲಿಗೆ ಹೋಗಬೇಕಾದ ಪ್ರಸಂಗ ಬಂದಾಗ ಇದ್ದ ಒಂದೇ ಸಾರಿಗೆ ವ್ಯವಸ್ಥೆ ಎಂದರೆ ಎರಡು ಕಾಲುಗಳು ಮಾತ್ರ. ಆದ್ದರಿಂದ ನಮ್ಮ ತಂದೆ ಒಂದು ಉಪಾಯ ಮಾಡಿದರು; ಸೈಕಲ್ ಮೇಲೆ ನಾವು ಮೂವರು- ನಾನು ಕ್ಯಾರಿಯರ್ ಮೇಲೆ, ನನ್ನ ತಮ್ಮಂದಿರಿಬ್ಬರು ಸೀಟ್ ಮತ್ತು ಬಾರ್ ಮೇಲೆ- ನನ್ನ ಅಕ್ಕಂದಿರು, ಅಮ್ಮ ಮತ್ತು ತಂದೆ ಎಲ್ಲರೂ ನಡೆದರು. ಆಗ ಮಲ್ಲೇಶ್ವರದ ರೈಲ್ವೆ ಸ್ಟೇಷನ್ ಬಳಿ ಹಳಿ ದಾಟಿಯೇ ಹೋಗಬೇಕಾಗಿತ್ತು- ಅದೂ ಹಳ್ಳ ಇಳಿದು ಹತ್ತಿ. ಅಲ್ಲಿ ನಮ್ಮ ಮೆರವಣಿಗೆಗೆ ಒಂದು ನಿಲುಗಡೆ. ಸೈಕಲ್ ಹೊತ್ತು ಹಳಿ ದಾಟಿದಮೇಲೆ ಪುನಃ ಮೆರವಣಿಗೆ. ಇದು ನನ್ನ ತಂದೆಯ ಬಗ್ಗೆ ನನಗೆ ಸದಾ ಹಸಿರಾಗಿರುವ ಅತಿ ಹಳೆಯ ನೆನಪು.

ತಂದೆಯವರಿಗೆ ಕೆಲಸ ಇದ್ದದ್ದು ಎಲೆಕ್ಟ್ರಿಕ್ ಆಫೀಸಿನಲ್ಲಿ. ಆದರೆ ಅವರ ಹೃದಯ ಇದ್ದದ್ದು ಸಾಹಿತ್ಯ ಕ್ಷೇತ್ರದಲ್ಲಿ. ಪ್ರವಾಸೀ ಲೇಖನಗಳು, ಕತೆಗಳು, ಕವನಗಳು, ಇತಿಹಾಸ, ವಿಮರ್ಶೆ - ಹೀಗೆ ಹಲವಾರು ಪ್ರಕಾರಗಳಲ್ಲಿ ಅವರು ಕೈ ಆಡಿಸಿದ್ದರು. ಒಂದು ನಾಟಕವನ್ನೂ ಬರೆದಿದ್ದರು. ಮನೆಯ ತುಂಬೆಲ್ಲ ಪುಸ್ತಕಗಳು. ಸುಮಾರು 2000 ಇದ್ದಿರಬಹುದು. ನಮಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ತಂದುಕೊಟ್ಟಿದ್ದರು. ಒಮ್ಮೆ ಜಿ.ಪಿ. ರಾಜರತ್ನಂ ಅವರ ಮನೆಗೆ ಕರೆದೊಯ್ದಿದ್ದರು. ಕಡಲೆ ಪುರಿ ಎಂಬ ಪುಸ್ತಕವನ್ನು ಅಲ್ಲಿ ಸಂಪಾದಿಸಿದ್ದೆ.

ಕಥಾವಳಿ ಎಂಬುದೊಂದು ಮಾಸಪತ್ರಿಕೆ 50ರ ದಶಕದಲ್ಲಿ ಪ್ರಕಟವಾಗುತ್ತಿತ್ತು. ತಂದೆಯವರೇ ಅದರ ಸಂಪಾದಕರಾಗಿದ್ದರು. ಮಲ್ಲೇಶ್ವರದಲ್ಲಿ ಕನ್ನಡ ಹಿತೈಷಿಗಳ ಸಂಘ ಎಂಬುದೊಂದು ಸಂಸ್ಥೆಯನ್ನೂ ಕಟ್ಟಿ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಅದಕ್ಕೆ ಸಂಬಂಧಪಟ್ಟ ಕಾಗದ ಪತ್ರಗಳು ಮನೆಯಲ್ಲಿ ಇರುತ್ತಿದ್ದವು. ಅನೇಕ ಹಿರಿಯರ ಹೆಸರುಗಳು ನೆನಪಿವೆ. ನನ್ನ ಪಠ್ಯ ಪುಸ್ತಕದಲ್ಲಿ ಇರುವ ಹೆಸರು ಇಲ್ಲೇಕೆ ಎಂದು ಅನೇಕ ಬಾರಿ ಯೋಚಿಸಿದ್ದುಂಟು. ಬೆಳ್ಳಾವೆ ನರಹರಿ ಶಾಸ್ತ್ರಿಗಳು, ಜಯದೇವಿ ತಾಯಿ ಲಿಗಾಡೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಗೋಪಾಲಕೃಷ್ಣರಾವ್ , ವಿ ಸೀ, ದ.ರಾ. ಬೇಂದ್ರೆ - ಇವರುಗಳಲ್ಲದೆ ವಿಶ್ವೇಶ್ವರಯ್ಯನವರ ಮನೆಗೂ ನನ್ನನ್ನು ಕರೆದೊಯ್ದಿದ್ದು ನೆನಪಿದೆ. ಅವರೆಲ್ಲರ ಕುರಿತು ಅವರು ಬರೆದ ಲೇಖನಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆಗ ನನಗಿರಲಿಲ್ಲ.

ನಾನು ಹೈಸ್ಕೂಲಿಗೆ ಬರುವಾಗ ನಮ್ಮ ತಂದೆಗೆ ವರ್ಗವಾಗಿ ಊರಿಂದೂರಿಗೆ ಪ್ರಯಾಣ ಮಾಡುತ್ತಿದ್ದರು. ಆಯಾ ಊರಿನ ವಿಶೇಷಗಳ ಕುರಿತ ಲೇಖನಗಳನ್ನು ತಯಾರು ಮಾಡಿ ಕಳಿಸುತ್ತಿದ್ದರು. ಜಯನಗರದ ಆ ರಸ್ತೆಗೆ ಅವರು ಅಂಚೆ ಕಚೇರಿ ರಸ್ತೆ ಎಂದು ಹೆಸರಿಟ್ಟು ರಬ್ಬರ್ ಸ್ಟಾಂಪ್ ಮಾಡಿಸಿದ್ದರಿಂದಲೋ ಏನೋ ಪ್ರತಿದಿನ ಅಂಚೆಯಣ್ಣ ಮನೆಗೆ ಬರುತ್ತಿದ್ದ. ಪ್ರತಿದಿನ ನಮಗೆ ಏನಾದರೊಂದು ದಪ್ಪ ಲಕೋಟೆ ಬರುತ್ತಿತ್ತು. ತಂದೆಯವರ ಮೋಡಿ ಅಕ್ಷರಗಳನ್ನು ಸುಂದರವಾಗಿ ಮಾರ್ಪಡಿಸುವ ಜವಾಬ್ದಾರಿ ಅಮ್ಮನದು. ಅನಂತರ ಅದನ್ನು ಪ್ರಜಾವಾಣಿ, ತಾಯಿನಾಡು, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿತ್ತು. ಜಯನಗರದಿಂದ ಮಹಾತ್ಮಗಾಂಧಿ ರಸ್ತೆಗೆ ಹೋಗುವುದೆಂದರೆ ಬೇರೆ ಊರಿಗೆ ಹೋಗಿ ಬಂದಂತೆ ಲೆಕ್ಕ.

ನಮ್ಮ ವಿದ್ಯಾಭ್ಯಾಸದ ಬಗ್ಗೆ ಅವರೆಂದೂ ತಾಕೀತು ಮಾಡಲಿಲ್ಲ. ಹಾಗಾಗಿ ನಾವು ಒಬ್ಬೊಬ್ಬರೂ ನಮಗಿಷ್ಟಬಂದ ವಿಷಯಗಳನ್ನು ಆಯ್ಕೆ ಮಾಡಿಕೊಂಡೆವು. ಆದರೆ ಅದರಿಂದ ನಮ್ಮ ಸಾಹಿತ್ಯ ಅಭಿರುಚಿಗೆ ಎಂದೂ ತೊಡಕಾಗಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿಗೆ ವಾರಕ್ಕೊಮ್ಮೆಯಾದರೂ ನಾನು ಹೋಗುತ್ತಿದ್ದೆ. ಅಲ್ಲಿಯ ಪುಸ್ತಕಗಳೇ ನನಗೆ ಮುಖ್ಯ ಆಕರ್ಷಣೆ; ಶಿವರಾಮ ಕಾರಂತರ ಮತ್ತು ಬೆಳ್ಳಾವೆ ವೆಂಕಟರಾಮಪ್ಪನವರ ಪುಸ್ತಕಗಳನ್ನು ಅದೆಷ್ಟು ಬಾರಿ ಓದಿದ್ದೆನೋ ಗೊತ್ತಿಲ್ಲ. ನಮ್ಮ ತಂದೆಯವರು ಮೊದಲು ಅಲ್ಲಿ ವ್ಯವಸ್ಥಾಪಕರಾಗಿದ್ದರು; ನಿವೃತ್ತಿಯಾದ ಮೇಲೆ ಪುನಃ ಅದೇ ಉತ್ಸಾಹದಿಂದ ಸೇರಿದರು. ಮನೆಮನೆಗೆ ಕನ್ನಡ ಪುಸ್ತಕಗಳನ್ನು ಒಯ್ದು ಮಾರುವ ಚಳವಳಿಯನ್ನೇ ನಡೆಸಿದರು. ಬಾಂಗ್ಲಾದೇಶದ ಇತಿಹಾಸ ಬರೆಯುವುದಕ್ಕಾಗಿ ಯೋಧರ ಮನೆಮನೆಗೆ ಹೋಗಿ ಸಂದರ್ಶನ ನಡೆಸಿದರು. ಯುದ್ಧದ ವಿವರಗಳಿಗಾಗಿ ಮಿಲಿಟರಿ ಅಧಿಕಾರಿಗಳ ಮನೆಗೂ ಹೋಗುತ್ತಿದ್ದರು. ಆಗಲೇ ಅಷ್ಟು ಉತ್ಸಾಹ ಇದ್ದವರು ಚಿಕ್ಕಂದಿನಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದುದು ಖಂಡಿತ. ಇವರು ದಿವಂಗತ ಎಚ್. ನರಸಿಂಹಯ್ಯ ಅವರ ಸಹಪಾಠಿಯಾಗಿದ್ದರು. ನಂದಿಗೆ ಹೋಗಿ ಗಾಂಧಿಯವರ ಜೊತೆ ಇದ್ದರು. ಆಮೇಲೆ ಚಲೋ ಮೈಸೂರ್ ಚಳವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಅನುಭವಗಳೆಲ್ಲಾ ಅದೇ ಹೆಸರಿನ ಕಾದಂಬರಿಯಲ್ಲಿ ಮೂಡಿಬಂದಿವೆ.

ಚಾರಿತ್ರಿಕ ಘಟನೆಗಳನ್ನು ಆಧರಿಸಿ ಈಗ ಅನೇಕ ಕಾದಂಬರಿಗಳು ಹೊರಬರುತ್ತಿವೆ. ಆದರೆ ಬಹುಶಃ ನಮ್ಮ ತಂದೆ ಬರೆದ ಚಲೋ ಮೈಸೂರ್ ಈ ಬಗೆಯ ಮೊತ್ತ ಮೊದಲ ಪ್ರಯತ್ನವಾಗಿರಬೇಕು ಅನ್ನಿಸುತ್ತದೆ. ಈಗಲೂ ಅದನ್ನು ಓದಿ ಮೆಚ್ಚಿದವರಿದ್ದಾರೆ. ಚಳವಳಿಯ ಪ್ರಾಮಾಣಿಕ ವಿವರಣೆಗೆ ಅವರ ಸ್ವಂತ ಅನುಭವಗಳೇ ಕಾರಣವಾಗಿರಬೇಕು.

ಸುಗ್ಗಿಯ ಕತೆಗಳು ಎಂಬ ಪುಸ್ತಕವೊಂದಿತ್ತು. ತಮ್ಮ ಅನುಭವಗಳನ್ನೇ ಅದರಲ್ಲಿ ಹೆಣೆದಿದ್ದರು. ಮೊದಲ ವಿಧಾನ ಸಭೆಗೆ ಬಂದಿದ್ದವನೊಬ್ಬ ಅದರ ವಿವರಗಳನ್ನೆಲ್ಲಾ ವರ್ಣಿಸುತ್ತಾನೆ. ಕೊನೆಗೆ ‘ಅಸೆಂಬ್ಲಿ ಹೇಗಿತ್ತು?’ ಎಂಬ ಪ್ರಶ್ನೆಗೆ ‘ಅದೇನು? ಬಟ್ಟಲೊಳಗೆ ಸಕ್ಕರೆ ನೀರಲ್ಲಿ ಬೆಳ್ಳಗೆ ಇತ್ತಲ್ಲಾ ಅದಾ? ತುಂಬಾ ಚೆನ್ನಾಗಿತ್ತು’ ಎಂದು ಉತ್ತರಿಸಿದ ಪ್ರಸಂಗ ನನ್ನ ಸ್ಮೃತಿ ಪಟಲದಲ್ಲಿ ಅಚ್ಚಾಗಿದೆ. (ಈ ಪುಸ್ತಕದ ಹಸ್ತಪ್ರತಿಯೇ ಕಳೆದು ಹೋಯಿತು) ಇಂತಹ ಇನ್ನೂ ಕೆಲವು ಪ್ರಸಂಗಗಳು ವಿನೋದ ಮಾಸಪತ್ರಿಕೆಯಲ್ಲಿ ಹಳೆಯ ಡೈರಿಯ ಹೊಸ ಕತೆಗಳು ಎಂಬ ಸರಣಿಯಾಗಿ ಪ್ರಕಟಗೊಂಡವು.

ಅವರಿಗೆ ಬೆಂಗಳೂರಿನ ಮೇಲೆ ವಿಶೇಷ ಅಭಿಮಾನ. ಅದರ ಚರಿತ್ರೆಯನ್ನು ಕೆದಕುತ್ತಾ ಹೊರಟವರು ಹೊಸ ಹೊಸ ಆಕರಗಳನ್ನು ಹುಡುಕಿ ತೆಗೆದರು. ಶಾಲೆಯ ಮಕ್ಕಳಂತೆ ಊಟದ ಡಬ್ಬಿ ಸಮೇತ ಕರಾರುವಾಕ್ಕಾಗಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೂ ವಿಧಾನಸೌಧದ ಹಳೆಯ ದಾಖಲೆಗಳನ್ನು ಓದಲು (ಆಗ್ಗೆ ಝೆರಾಕ್ಸ್ ಸೌಲಭ್ಯ ಇರಲಿಲ್ಲ) ಹೋಗುತ್ತಿದ್ದರು. ಕೋರಮಂಗಲದ ಲಕ್ಷ್ಮಮ್ಮನ ಸಮಾಧಿಯನ್ನು (ಈಕೆ ಕೆಂಪೇಗೌಡನ ಸೊಸೆ) ಹುಡುಕುತ್ತಾ ಬಿಸಿಲಿನಲ್ಲಿ ಅಲೆದು ಅಂತೂ ಪತ್ತೆ ಮಾಡಿದರು. ಸುಮಾರು ಹತ್ತು ವರ್ಷಗಳ ಶ್ರಮದ ನಂತರ ಪುಸ್ತಕ ಸಿದ್ಧವಾಯಿತು. ಆದರೆ ಈ ವಿಚಿತ್ರ ಪುಸ್ತಕವನ್ನು ಪ್ರಕಟಿಸಲು ಯಾರೂ ಮುಂದೆ ಬರಲಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಇತಿಹಾಸ ವಿಭಾಗದಿಂದ ಕನ್ನಡ ವಿಭಾಗಕ್ಕೆ ಪುನಃ ಇತಿಹಾಸಕ್ಕೆ ಕಾಗದ ಓಡಾಡಿತು. ಏನೂ ತೀರ್ಮಾನವಾಗಲಿಲ್ಲ. ಧೈರ್ಯಮಾಡಿ ತಂದೆಯವರು ಇದನ್ನು ಸ್ವಂತ ಖರ್ಚಿನಿಂದಲೇ ಪ್ರಕಟಿಸಿದರು. ಆಗ ಅದು ಅಷ್ಟಾಗಿ ಮಾರಾಟವಾಗಲಿಲ್ಲ. ಅವರು ತೀರಿಕೊಂಡಮೇಲೆ ಒಂದೊಂದಾಗಿ ಪ್ರತಿಗಳು ಮಾರಾಟವಾದವು. ಆಸಕ್ತರು ಹುಡುಕಿಕೊಂಡು ಮನೆಗೇ ಬರುತ್ತಿದ್ದರು.

ಇದು ಕಷ್ಟ; ಮಾಡಲಾರೆ - ಎಂಬ ಶಬ್ದಗಳು ನಮ್ಮ ತಂದೆಯವರಿಗೆ ಗೊತ್ತೇ ಇರಲಿಲ್ಲ. ಪುಸ್ತಕ ಪ್ರಕಟಣೆಯೇ ಆಗಲಿ, ಹಳ್ಳದಲ್ಲಿ ಬಿದ್ದು ಹೋಗಿದ್ದ ವಸ್ತುವನ್ನು ತರುವುದೇ ಆಗಲಿ, ಅವರ ಆತ್ಮವಿಶ್ವಾಸ ಅವರನ್ನು ಮುಂದಕ್ಕೆ ಕರೆದೊಯ್ಯುತ್ತಿತ್ತು. ಜೋಗದಲ್ಲಿ ಕೆಲಸ ಮಾಡುತ್ತಿದ್ದಾಗ ಕೆಳಗಿನ ಕಣಿವೆಯಲ್ಲಿ ಹಾಳುಬಿದ್ದಿದ್ದ ದೇವಸ್ಥಾನವನ್ನು ಪತ್ತೆ ಮಾಡಿ. ಅಲ್ಲಿಂದ ಚಾಮುಂಡೇಶ್ವರಿ ವಿಗ್ರಹವನ್ನು ಬೆಟ್ಟದ ಮೇಲಕ್ಕೆ ಹತ್ತಿಸಿದ್ದು ದೊಡ್ಡ ಸಾಹಸವೇ ಸರಿ. ಇಂದು ಅದು ದೊಡ್ಡ ದೇವಾಲಯವೇ ಆಗಿದೆ. ಹಾಗೆಯೇ ಇತಿಹಾಸದ ಪುಟಗಳಿಂದ ಕೆಳದಿಯ ವೈಶಿಷ್ಟ್ಯಗಳನ್ನು ತೆಗೆದು ಪ್ರಚಾರಕ್ಕೆ ತಂದದ್ದೂ ಒಂದು ಪ್ರಮುಖ ಘಟ್ಟ. ಸಾಗರದಲ್ಲಿ 1955ರಷ್ಟು ಹಿಂದೆಯೇ ಸಾಹಿತ್ಯೋತ್ಸವ ನಡೆಸಿ ಹಿರಿಯ ಸಾಹಿತಿಗಳನ್ನು ಒಂದುಗೂಡಿಸಿದ ಕೀರ್ತಿಯೂ ಸೇರುತ್ತದೆ.

ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲದೆ ನಾಟಕ ರಂಗದಲ್ಲಿಯೂ ಇವರು ದುಡಿದಿದ್ದರು ಎಂಬ ಹೊಸ ವಿಷಯ ಕೆಲವೇ ತಿಂಗಳ ಹಿಂದೆ ತಿಳಿಯಿತು. ವೀಣೆ ರಾಜಾರಾಯರ ಮಗಳು ಆರ್. ಪೂರ್ಣಿಮಾ ಒಂದು ಅಪರೂಪದ ಚಿತ್ರವನ್ನು ತೋರಿಸಿದರು. ಗದಾಯುದ್ಧ ನಾಟಕದ ದೃಶ್ಯ. ದುರ್ಯೋಧನ ಮತ್ತು ಭೀಮನ ಪಾತ್ರಗಳಲ್ಲಿ ಸಿ. ಕೆ. ನಾಗರಾಜರಾಯರು ಮತ್ತು ವೀಣೆ ರಾಜಾರಾಯರು; ಕೃಷ್ಣನಾಗಿ ನಮ್ಮ ತಂದೆಯವರು. ನಮ್ಮ ತಂದೆಯವರ ಈ ಪ್ರತಿಭೆಯ ಬಗ್ಗೆ ನಮಗೆ ತಿಳಿದೇ ಇರಲಿಲ್ಲ. ಈ ನಾಟಕ 40ನೆಯ ದಶಕದ ಕೊನೆಗೋ ಅಥವಾ 50ರ ದಶಕದ ಆದಿಭಾಗದಲ್ಲೋ ನಡೆದಿರಬೇಕು. ಆ ನಂತರ ಅವರು ಜೋಗಕ್ಕೆ ತೆರಳಿದರು. ಕೈಲಾಸಂ ರಾಮರಾಯರೊಡನೆ ಇವರ ನಂಟಿಗೆ ಇದೇ ಕಾರಣವಿರಬೇಕು. ಅಮ್ಮಾವ್ರ ಗಂಡ ಪುಸ್ತಕಕ್ಕೆ ರಾಮರಾಯರು ನಮ್ಮ ತಂದೆಯವರಿಂದ ಟಿಪ್ಪಣಿ ಬರೆಸಿದ್ದರು.

ನಮ್ಮ ತಂದೆಯವರೊಡನೆ ವಿಷಯಗಳನ್ನು ಚರ್ಚಿಸಲು ಅನೇಕರು ಮನೆಗೆ ಬಂದು ಹೋಗುತ್ತಿದ್ದರು. ವಿಷಯಗಳು ವೈವಿಧ್ಯ ಪೂರ್ಣವಾಗಿರುತ್ತಿದ್ದವು. ನಾನು ಶಾಲೆಯಲ್ಲಿದ್ದಾಗ ನನ್ನ ಉಪಾಧ್ಯಾಯಿನಿಯರೇ ಅನೇಕರು ಬಂದಿದ್ದರು. ಮುಂದೆ ಅಮೆರಿಕನ್ನಡ ಆರಂಭಿಸಿದ ನಾಗಲಕ್ಷ್ಮೀ ಹರಿಹರೇಶ್ವರ ಅವರು, ವೈದಿಕ ಸಂಸ್ಕೃತಿಯನ್ನು ಅಭ್ಯಸಿಸಿದ ಹ್ಯೂಸ್ಟನ್‌ನ ಡಾ. ವಸುಮತಿ ಚಾರ್ವಾಕ, ಮುಂಬೈನ ಡಾ. ವಸಂತ ದೇಸಾಯಿ, ಮಂಗಳೂರಿನ ಪದ್ಮನಾಭ ಆಚಾರ್ಯ, ಕೆನಡಾದ ಐ.ಮಾ. ಮುತ್ತಣ್ಣ ಹೀಗೆ ಹಲವಾರು ಹೆಸರುಗಳು ನೆನಪಿಗೆ ಬರುತ್ತವೆ. ಚರ್ಚೆಯಲ್ಲಿ ಅತಿ ಹೆಚ್ಚಿನ ಸಮಯ ಕಳೆಯುತ್ತಿದ್ದವರು ಫಝ್ಲುಲ್ ಹಸನ್- ಅವರಿಗೆ ಸಹಪಾಠಿ ಎಂಬ ಆತ್ಮೀಯತೆಯೂ ಇತ್ತು. (ಇವರು ಬೆಂಗಳೂರಿನ ಇತಿಹಾಸವನ್ನು ಇಂಗ್ಲಿಷ್‌ನಲ್ಲಿ ಬರೆದರು)

80ರ ದಶಕದ ನಂತರ ಬಹಳ ವಿದ್ಯಾರ್ಥಿಗಳು ಮನೆಗೆ ಬರುತ್ತಿದ್ದರು. ಹಿರಿಯರಲ್ಲಿ ಎಂ.ಎ. ಸೇತುರಾವ್, ಕಿ.ರಂ. ನಾಗರಾಜ, ಶೇಷಶಾಸ್ತ್ರಿ, ಆಣ್ಣಿಗೇರಿ - ಹೀಗೆ ಬೇರೆ ಬೇರೆ ಕ್ಷೇತ್ರದವರು ಬಂದಿದ್ದು ನೆನಪು. ಬೆಂಗಳೂರಿನ ಇತಿಹಾಸದ ಜಾಡು ಹಿಡಿದು ಮುಂದುವರೆದವರಲ್ಲಿ ಸುರೇಶ್ ಮೂನ ಮುಖ್ಯರಾದವರು. ಆಗ ನಾನು ಸ್ವತಃ ಸಂಶೋಧನೆಯಲ್ಲಿ ಮುಳುಗಿದ್ದರಿಂದ ಕೆಲವರ ಪರಿಚಯ ದೊರೆಯಲಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದವರು ಪುಸ್ತಕ ಪ್ರಕಟಿಸಿದ ಸಂದರ್ಭದಲ್ಲಿ ಧಾರವಾಡಕ್ಕೆ ಹೋಗಿ ಬಂದ ನನ್ನ ತಂದೆ ನನಗಾಗಿ ಒಂದು ಅಮೂಲ್ಯ ಗ್ರಂಥವನ್ನು ತಂದರು. ಅದು ಭಾರತೀಯ ಖಗೋಳ ವಿಜ್ಞಾನದ ಕುರಿತು ಸೋಮಯಾಜಿಯವರು ಬರೆದಿದ್ದ ಥೀಸಿಸ್. ಇಂದು ಆಕರ ಗ್ರಂಥವಾಗಿದೆ.

ಬೆಂಗಳೂರಿನ ಇತಿಹಾಸ ಈಗ ಆಕರ ಗ್ರಂಥವಾಗಿದೆ. ಅಂಕಿತ ಪುಸ್ತಕದವರ ಪುನರ್ಮುದ್ರಣ ಈಗಾಗಲೇ ಎರಡು ಮುದ್ರಣಗಳನ್ನು ಕಂಡಿದೆ. ಅದರ ಪುಟಗಳನ್ನು ತಿರುವಿ ಹಾಕಿದಾಗ ತಂದೆಯವರು ಆ ಕುರಿತು ಪ್ರತಿ ರಾತ್ರಿ ವಿವರಿಸುತ್ತಿದ್ದ ಪ್ರಸಂಗಗಳು ನೆನಪಾಗುತ್ತವೆ. ಅವರು ಇಂದು ಇದ್ದಿದ್ದರೆ ನೂರು ತುಂಬುತ್ತಿತ್ತು. ಸ್ವಾತಂತ್ರ್ಯ ನಂತರದ ಇತಿಹಾಸ ಬಹುಶಃ ಲಭ್ಯವಾಗಿರುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry