ಒಂದೇ ಒಂದು ಮುತ್ತು ಕಾಯ್ದಿರಿಸು

7

ಒಂದೇ ಒಂದು ಮುತ್ತು ಕಾಯ್ದಿರಿಸು

Published:
Updated:
ಒಂದೇ ಒಂದು ಮುತ್ತು ಕಾಯ್ದಿರಿಸು

ಅರ್ಧ ಬತ್ತಿದ ನದಿಯ ನೀರು

ಅಲ್ಲಲ್ಲಿ ತುಂಡುತುಂಡಾದ ಮಳೆಹುಳುವಿನಂತೆ

ಹೊರಳಾಡುವುದು ಒಂದಾಗಿ ಹರಿಯಲಾಗದೆ ಅಭಿಸಾರಿಕೆಯ ತೆವಲಿನಲಿ,

ಒಂದೇ ಒಂದು ಮುತ್ತು ಕಾಯ್ದಿರಿಸು

ಕಡಲತಡಿಗೂ ಆಲಿಂಗನಕೂ ಸಮತ್ವದ ನೆರಳಿದೆ

ಅರ್ಧಚಂದ್ರನ ಖಡ್ಗ ಭೂಮಿಗುದುರದೆ

ತುಂಡಾಗದೆ ಉಳಿದ ಗುಲಾಬಿಯ ನೆತ್ತಿಯ ಮುತ್ತು

ಚಿಲ್ಲೆನ್ನದ ವಿರಹ

ಮೊಲೆಯ ತುಂಬಿನ ಗಡಸು ಆವೇಶ,

ಬಳಕ ಕಣ್ಣಪಟ್ಟಿಯಲಿ ಸೂಸಿ ತೂರಿದ ಕೊರಡು ಟೊಂಗೆಯ ಹಸಿರು,

ಅಷ್ಟಷ್ಟೇ ಉಸಿರಿನ ತುಣುಕುಗಳ

ಗೋಡೆಗಂಟಿಸಿ ಬಂದಿರುವೆ,

ಒಂದೇ ಒಂದು ಮುತ್ತು ಕಾಯ್ದಿರಿಸು

ಅನಾಥ ಚಿತ್ರವೊಂದಕ್ಕೆ ಜೀವ ತುಂಬುವುದಿದೆ

ಹೂವ ಒಡಲಾಳಕೆಲ್ಲಿಯ ಕೈಕಾಲು

ಒಂದು ಕೆಂದುಟಿ,

ಕುರುಡುಬಿದ್ದ ಕಣ್ಣು,

ಸುವಾಸನೆಭರಿತ ಒಂಟಿ ಹೃದಯ

ಒಂದೇ ಒಂದು ಮುತ್ತು ಕಾಯ್ದಿರಿಸು

ಪಕಳೆಗಳೂ ಅಂಬೆಗಾಲಿಡುವಂತೆ.

ಅಲೆಗಳಲೆ ಮುದ್ದಿಸುವ ಗಾಳಿ

ಸಿಡಿಲೇಳುವ ಮೋಡಗಳ ರೌದ್ರ ಸದೃಶ ಕೇಳಿ

ವಿದಳನವೋ ಸಮ್ಮಿಲನವೋ

ಪ್ರಶ್ನಿಸುವ ಕತ್ತಲು ಅಲ್ಲೇ ಧಾನಸ್ಥ

ಬೆಳಕು ಸರಿಯುವ ತನಕ

ಒಂದೇ ಒಂದು ಮುತ್ತು ಕಾಯ್ದಿರಿಸು

ಬೆಳಕು ಕತ್ತಲೆಗಳ ಮೀರಿದೊಂದು ಕಾಲವನು

ಕಟ್ಟಿ ಹಾಕುವುದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry