ಯಾತನೆ

ಬುಧವಾರ, ಮಾರ್ಚ್ 20, 2019
23 °C

ಯಾತನೆ

Published:
Updated:
ಯಾತನೆ

ಎದೆಯೊಳಗೆ ಆಳವಾಗಿ

ನಾಟಿದ ಮುಳ್ಳುಗಳಿವೆ

ನಕ್ಷತ್ರಗಳ ಲೆಕ್ಕವಾದರೂ ಇಡಬಹುದು ಪ್ರಿಯನೇ

ಮುಳ್ಳುಗಳಿಗೆ ಬೇರೂ ಮೊಳೆತು

ಒಡಲೊಳಗಿನ ನರಗಳಲೆಲ್ಲ

ಹಿಂಜಾಡಿ

ಕೆಲವು

ಊರ್ಧ್ವಮುಖಿಯಾಗಿಯೂ

ಕೆಲವು

ಅಧೋಮುಖಿಯಾಗಿಯೂ

ಚಲಿಸುತ್ತ ನನ್ನನ್ನು ಶವದ ಹಾಗೇ

ಭೂಮಿಯಿಂದ ಮೇಲಕ್ಕೆತ್ತಬಹುದು ಪ್ರಿಯನೇ

ನೀನು ನಿನ್ನ ಗುಲಾಬಿತೋಟದ

ಮುಸ್ಸಂಜೆಯಲಿ ಮೈಮರೆತಿರುವಾಗ ತಟ್ಟನೇ

ಒಂದೆರಡು ಹನಿಗಳುದುರಿದರೆ

ನೆನಪಿಸಿಕೋ ಪ್ರಿಯನೇ

ನೀನಿರಿದ ಗಾಯಗಳನು ತೊಳೆಯಲೂ ತ್ರಾಣವಿರದೇ

ಅಳಲೂ ಬೊಗಸೆ ಕಂಬನಿಯಿರದೇ

ಮರುಭೂಮಿಯ ಪಾಪಾಸುಕಳ್ಳಿಯಾದ ಜೀವದಲಿ

ಕಾದ ಕಣ್ಣುಗಳು ಬೇಯುತ್ತಿವೆ ಮತ್ತು

ಮುಗಿಲು ಬಸಿದು ಎರಡು ಹನಿ ಉದುರಿರಬಹುದು...

ನೇರವಾಗಿ

ನನ್ನ ಎದೆಗೆ ಬೆಂಕಿಯಿಟ್ಟ ಅವಳು

ಮೋಡದ ಮೇಲೇರಿ ಕೂತು ಆಲಾಪಿಸುವಾಗೆಲ್ಲ ನೀನು ಮತ್ತೇರಿ

ತೇಲುತ್ತಿದ್ದೆ ರಾಗದ ಬೆನ್ನೇರಿ

ಮೋಡಗಳು ಇನ್ನೇನು ಅಂಗಳದಲ್ಲಿ ಸುರಿದೇಬಿಡುವ ಹುನ್ನಾರದಲ್ಲಿರುವಾಗ

ದೀಪದ ಸುತ್ತಲೂ ಕುಣಿಕುಣಿದ

ಪತಂಗಗಳು ರೆಕ್ಕೆ ಸುಟ್ಟು ಸತ್ತುಹೋದದ್ದನ್ನೂ ನೀನು ನೆನೆಯಲಿಲ್ಲ ಪ್ರಿಯನೇ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry