ಬುಧವಾರ, ಜೂನ್ 23, 2021
22 °C

ನಿಮ್ಮಪ್ಪನಾಣೆ... ನಿಮ್ತಾಯಾಣೆ...!

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿಕ್ಕ ಮಕ್ಕಳು ಗೋಲಿ, ಗಿಲ್ಲಿದಾಂಡು ಆಡುವಾಗ ಆಣೆ– ಪ್ರಮಾಣ ಹಾಕಿ ಕಿತ್ತಾಡುವ ‘ಹುಡುಗಾಟ’ವನ್ನು ಎಲ್ಲರೂ ಕಂಡಿರಬಹುದು. ಬಿಬಿಎಂಪಿಯಲ್ಲಿ ಇತ್ತೀಚೆಗೆ ನಡೆದ ಬಜೆಟ್‌ ಮೇಲಿನ ಚರ್ಚೆಯು ಇಂಥದ್ದೇ ಪ್ರಸಂಗಕ್ಕೆ ಸಾಕ್ಷಿಯಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ‘ಆಣೆ’ ಪದ ಕಾರಣವಾಯಿತು.

ಕಾಂಗ್ರೆಸ್‌ ನಾಯಕ ಶಿವರಾಜ್‌, ‘ಬೆಂಗಳೂರು ರಕ್ಷಿಸಿ ಎಂದು ಸುಳ್ಳು ಚಾರ್ಜ್‌ಶೀಟ್‌ ಹಾಕಿರುವ ನೀವು ‘ನಿಮ್ಮಪ್ಪನಾಣೆ’ಗೂ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಈ ಚಾರ್ಜ್‌ಶೀಟ್‌ಗೆ ಜನರೇ ಬಿ– ರಿಪೋರ್ಟ್‌ ಕೊಡುತ್ತಾರೆ’ ಎಂದು ವಿರೋಧ ಪಕ್ಷ ಬಿಜೆಪಿಯ ಕಾಲೆಳೆಯಲು ಪ್ರಯತ್ನಿಸಿದರು. ಬಿಜೆಪಿ ಸದಸ್ಯರಾದ ಉಮೇಶ್‌ ಶೆಟ್ಟಿ, ಡಾ.ರಾಜು ಮತ್ತಿತರರು, ‘ನಿಮಗೆ ತಾಕತ್ತು ಇದ್ದರೆ ನಿಮ್ತಾಯಾಣೆ, ನಿಮ್ಮಪ್ಪನಾಣೆ ಮಾಡಿಕೊಳ್ಳಿ... ನಮ್ಮಪ್ಪನ ಆಣೆ ಹಾಕಬೇಡಿ’ ಎಂದು ವಾಕ್ಸಮರಕ್ಕೆ ನಿಂತರು.

ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ‘ಆಡಳಿತ ಪಕ್ಷದ ನಾಯಕರು ಯಾಕೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾವಭಾವದಲ್ಲೇ ಮಾತನಾಡಲಾರಂಭಿಸಿದ್ದಾರೆ. ಅವರದೇ ದೇಹಭಾಷೆ, ಅವರದೇ ಡೈಲಾಗ್‌ ಬರುತ್ತಿವೆ. ಇವರು ಜೂನಿಯರ್‌ ಸಿದ್ದರಾಮಯ್ಯ’ ಎಂದು ಶಿವರಾಜ್‌ಗೆ ಮಾತಿನಲ್ಲೇ ಚುಚ್ಚಿದರು.

ಮೇಯರ್‌ ಆರ್‌.ಸಂಪತ್‌ರಾಜ್‌, ‘ವಿರೋಧ ಪಕ್ಷದ ನಾಯಕರು ಜೂನಿಯರ್‌ ಸಿದ್ದರಾಮಯ್ಯ ಎಂದಿದ್ದಕ್ಕೆ ಬೇಸರ ಮಾಡಿಕೊಳ್ಳಬೇಡಿ. ಇದು ನಿಜವಾದ ಪ್ರಶಂಸೆ, ಎಲ್ಲರೂ ಖುಷಿಪಡಬೇಕು. ಇನ್ನು ಮುಂದೆ ನಮ್ಮ ನಾಯಕರು ಸಿದ್ದರಾಮಯ್ಯ ಅವರಂತೆ ಪಂಚೆ, ಶಲ್ಯ ಧರಿಸಿ ಸಭೆಗೆ ಬರಬೇಕು’ ಎನ್ನುವ ಮೂಲಕ ಆಡಳಿತ ಪಕ್ಷದವರ ಬೆಂಬಲಕ್ಕೆ ನಿಂತರಲ್ಲದೆ ಸಭೆಯಲ್ಲಿ ನಗೆ ಉಕ್ಕಿಸಲೂ ಕಾರಣರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.