ಭ್ರಷ್ಟರ ವರದಿಗಳೆಲ್ಲಾ ಅಸೆಂಬ್ಲಿ ಮುಂದೆ ಬಂದೇ ಇಲ್ಲ!

7
ಸಂದರ್ಶನ: ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ನಿವೃತ್ತ ಉಪ ಲೋಕಾಯುಕ್ತ

ಭ್ರಷ್ಟರ ವರದಿಗಳೆಲ್ಲಾ ಅಸೆಂಬ್ಲಿ ಮುಂದೆ ಬಂದೇ ಇಲ್ಲ!

Published:
Updated:
ಭ್ರಷ್ಟರ ವರದಿಗಳೆಲ್ಲಾ ಅಸೆಂಬ್ಲಿ ಮುಂದೆ ಬಂದೇ ಇಲ್ಲ!

ಲೋಕಾಯುಕ್ತ ಕಚೇರಿಯಲ್ಲಿಯೇ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ಇರಿದಿರುವ ಕೃತ್ಯ  ಭಾರಿ ಚರ್ಚೆ ಹುಟ್ಟುಹಾಕಿದೆ. ಅಕ್ರಮ ಗಣಿ ಹಗರಣಗಳ ವಿಚಾರಣೆಯಿಂದಾಗಿ ದೇಶದ ಗಮನ ಸೆಳೆದಿದ್ದ  ಲೋಕಾಯುಕ್ತ ಸಂಸ್ಥೆಯ ವರ್ಚಸ್ಸು ಈಗ ಕ್ಷೀಣಿಸುತ್ತಿದೆ. ಹೆಚ್ಚಿನ ಅಧಿಕಾರ ಕೊಟ್ಟು ಈ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ಬದಲು ಇರುವ ಅಧಿಕಾರವನ್ನೇ ಕಸಿದುಕೊಂಡು ದುರ್ಬಲಗೊಳಿಸಲಾಗಿದೆ.  ಲೋಕಾಯುಕ್ತಕ್ಕಿದ್ದ ತನಿಖಾ ಅಧಿಕಾರವನ್ನೇ ಕಿತ್ತುಕೊಳ್ಳಲಾಗಿದೆ. ಲೋಕಾಯುಕ್ತ ಕಚೇರಿಯಿಂದ ಹೋದ ವರದಿಗಳು ಸರ್ಕಾರದ ಕಡತಗಳ ರಾಶಿಯಲ್ಲಿ ಹೂತುಹೋಗಿವೆ. ಇವೆಲ್ಲವುಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಅನುಭವ ಹಂಚಿಕೊಂಡಿದ್ದಾರೆ ನಿವೃತ್ತ ಉಪ ಲೋಕಾಯುಕ್ತ, ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ

* ಲೋಕಾಯುಕ್ತ ಕಚೇರಿಯಲ್ಲೇ ಇಂಥದೊಂದು ದುಷ್ಕೃತ್ಯ (ಲೋಕಾಯುಕ್ತರನ್ನು ಚಾಕುವಿನಿಂದ ಇರಿದ ಕೃತ್ಯ) ನಡೆಯಬಹುದು ಎಂದು ಊಹಿಸಿದ್ದಿರಾ?

ಖಂಡಿತಾ ಇಲ್ಲ. ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲು ಸರ್ಕಾರ ನಿರ್ಲಕ್ಷ್ಯ ತೋರಿದ್ದೇ ಇದಕ್ಕೆ ಕಾರಣ. ಕಚೇರಿಯ ಮೆಟಲ್‌ ಡಿಟೆಕ್ಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಸಿ.ಸಿ.ಟಿ.ವಿ ಸರಿಯಾಗಿಲ್ಲ, ಭದ್ರತಾ ಸಿಬ್ಬಂದಿಗೆ ತರಬೇತಿ ಇಲ್ಲ... ಹೀಗೆ ಇಲ್ಲ ಇಲ್ಲಗಳ ಬಗ್ಗೆ ಸರ್ಕಾರದ ಗುಪ್ತಚರ ಇಲಾಖೆಯೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟಿದೆ. ಆ ವರದಿ ಅಲ್ಲಿಯೇ ಕೊಳೆಯುತ್ತಿದೆ. ಹೆಸರಿಗೆ ಮಾತ್ರ ಇರುವ ಇಬ್ಬರೇ ಇಬ್ಬರು ಭದ್ರತಾ ಸಿಬ್ಬಂದಿಗೆ ಭದ್ರತೆ ಬಗ್ಗೆ ಸ್ವಲ್ಪವೂ ತರಬೇತಿ ಕೊಟ್ಟಿಲ್ಲ. ಸೆಲ್ಯೂಟ್‌ ಹೊಡೆಯುವುದು, ಬಂದವರ ಹೆಸರು ಬರೆದುಕೊಳ್ಳುವುದು ಇವಿಷ್ಟನ್ನು ಬಿಟ್ಟರೆ, ಮೆಟಲ್‌ ಡಿಟೆಕ್ಟರ್‌ನಿಂದ ತಪಾಸಣೆ ಮಾಡುವುದು ಹೇಗೆ ಎಂಬ ಬಗ್ಗೆ ಕನಿಷ್ಠ ಜ್ಞಾನವನ್ನೂ ನೀಡಿಲ್ಲ. ಈ ಕಚೇರಿ ಆವರಣದಲ್ಲಿ ಹಿಂದೆ ಬೆಂಕಿ ಬಿದ್ದಿತ್ತು. ಆನಂತರವಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಏಕೋ ನಿರ್ಲಕ್ಷ್ಯ ವಹಿಸಿತು.

* ಆದರೆ, ಈ ವೈಫಲ್ಯ ಇಂದು- ನಿನ್ನೆಯದಲ್ಲ. ಲೋಕಾಯುಕ್ತರೇ ಖುದ್ದಾಗಿ, ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿ ಲೋಪ ಸರಿಪಡಿಸಿಕೊಳ್ಳಬಹುದಿತ್ತಲ್ಲವೇ?

ಹೌದು, ಹಾಗೆ ಮಾಡಬಹುದಿತ್ತು. ಬಹುಶಃ ಇವೆಲ್ಲಾ ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ.

* ಲೋಕಾಯುಕ್ತರ ಮೇಲೆ ಹಲ್ಲೆ ಮಾಡಿರುವ ಆರೋಪಿ ತೇಜರಾಜ್‌ ಶರ್ಮಾ, ‘ನಾನು ಏನೂ ತಪ್ಪು ಮಾಡಿಲ್ಲ, ದೇವರೂ ನನ್ನ ಕಾರ್ಯವನ್ನು ಮೆಚ್ಚುತ್ತಾನೆ’ ಎಂದು ಹೇಳುತ್ತಿದ್ದಾನೆ. ಭ್ರಷ್ಟಾಚಾರದ ಬಗ್ಗೆ ತಾನು ಸೂಕ್ತ ಸಾಕ್ಷ್ಯಾಧಾರ ತಂದಿದ್ದರೂ ಕೇಸುಗಳನ್ನು ಕ್ಲೋಸ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾನಲ್ಲಾ?

ಅವನ ವಿಷಯ ನನಗೆ ಗೊತ್ತಿಲ್ಲ. ಆದರೆ, ಹತಾಶೆಯಿಂದ ಕೂಗಾಡುವ, ರೇಗಾಡುವ ಜನರನ್ನು ನಾನು ಉಪಲೋಕಾಯುಕ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಾಕಷ್ಟು ನೋಡಿದ್ದೇನೆ. ತಮಗೆ ಎಲ್ಲಿಯೂ ನ್ಯಾಯ ಸಿಗದಿದ್ದಾಗ ಜನರು ಹುಚ್ಚುಚ್ಚಾಗಿ ವರ್ತಿಸುವುದು ನನ್ನ ಅನುಭವಕ್ಕೆ ಬಂದಿದೆ. ಒಬ್ಬ ವ್ಯಕ್ತಿ ಈ ಮಟ್ಟಕ್ಕೆ ಹೋಗುತ್ತಾನೆ ಎಂದರೆ ಊಹಿಸುವುದು ಕಷ್ಟ. ಸಾಮಾನ್ಯವಾಗಿ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಸಮಾಧಾನದಿಂದ ಕಾರ್ಯ ನಿರ್ವಹಿಸುತ್ತಾರೆ. ಈ ಪ್ರಕರಣದಲ್ಲಿ ಏನಾಗಿದೆ ಎನ್ನುವ ಸ್ಪಷ್ಟತೆ ನನಗಿಲ್ಲ.

* ನೀವು ಉಪ ಲೋಕಾಯುಕ್ತರಾಗಿ ಕೆಲಸ ನಿರ್ವಹಿಸಿದ ಸಮಯದಲ್ಲಿ ಕೆಟ್ಟ ಅನುಭವಗಳಾಗಿವೆಯೇ?

ನನ್ನ ಅವಧಿಯಲ್ಲಿ ಮಹಿಳೆಯೊಬ್ಬರು ದೂರು ಹೇಳಲು ಬಂದಿದ್ದರು. ಪೊಲೀಸರಿಂದಲೇ ದೌರ್ಜನ್ಯ ಆಗುತ್ತಿದ್ದರೂ ಎಲ್ಲಿಯೂ ತಮ್ಮ ಮನವಿ ಆಲಿಸುತ್ತಿಲ್ಲ ಎಂದು ರೋಸಿ ಹೋಗಿದ್ದ ಅವರು, ಆವೇಶದಿಂದ ಕೂಗಾಡಿದರು. ನಿಜವಾಗಿ ಹೇಳಬೇಕೆಂದರೆ ಆ ಪ್ರಕರಣದ ವಿಚಾರಣೆಯನ್ನು ನಾನು ನಡೆಸಬೇಕೆಂದು ಇರಲಿಲ್ಲ. ಆದರೂ ಪೊಲೀಸರನ್ನು ಕರೆಸಿ ಮಾತುಕತೆ ನಡೆಸಿ ಮಹಿಳೆಯನ್ನು ಸಮಾಧಾನ ಮಾಡಿ ಕಳುಹಿಸಿದ್ದೆ. ಲೋಕಾಯುಕ್ತ ಕಚೇರಿಗೆ ಬರುವವರ ದೂರುಗಳನ್ನು ನಾವು ತಾಳ್ಮೆಯಿಂದ ಆಲಿಸಬೇಕಾಗುತ್ತದೆ.

* ‘ನಮ್ಮ ವ್ಯಾಪ್ತಿಗೆ ಇದು ಬರುವುದಿಲ್ಲ’ ಎಂದು ಹೇಳುವುದು ಇತ್ತೀಚೆಗೆ ಎಲ್ಲೆಡೆ ಸಾಮಾನ್ಯವಾಗಿದೆ. ಲೋಕಾಯುಕ್ತದ ವ್ಯಾಪ್ತಿಗೆ ಏನೇನು ಬರುತ್ತದೆ ಎಂದು ಜನರಿಗೆ ಸ್ಪಷ್ಟವಾಗಿ ತಿಳಿಯುವುದು ಹೇಗೆ?

ಎಲ್ಲರಿಗೂ ಅವರದ್ದೇ ಆದ ವ್ಯಾಪ್ತಿ ಇರುವುದು ನಿಜ. ಆದರೆ, ಅದರಿಂದ ಹೊರಕ್ಕೆ ಬಂದು ಲೋಕಾಯುಕ್ತ ಸಂಸ್ಥೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ನಮ್ಮಿಂದ ನ್ಯಾಯ ಬಯಸಿ ಬಂದವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು. ಇಲ್ಲಿಗೆ ಬಂದರೆ ನ್ಯಾಯ ಸಿಗುತ್ತದೆ ಎಂದುಕೊಂಡು ಬಂದವರಿಗೆ ಕೊನೆಯ ಪಕ್ಷ ಸಮಾಧಾನ ಆಗುವಂಥ ಉತ್ತರವನ್ನಾದರೂ ಕೊಡಬೇಕು. ಇಲ್ಲವೇ, ಎಲ್ಲಿ ಅವರಿಗೆ ನ್ಯಾಯ ಸಿಗುತ್ತದೆ ಎಂಬ ದಾರಿಯನ್ನಾದರೂ ತೋರಿಸಬೇಕು. ಇವೆಲ್ಲಾ ಬಿಟ್ಟು ‘ವ್ಯಾಪ್ತಿ’ಯ ನೆಪ ನೀಡಿ ಹೊರಕ್ಕೆ ಕಳಿಸುವುದು ಸರಿಯಲ್ಲ.

* ಲೋಕಾಯುಕ್ತ ಸಂಸ್ಥೆ ವರ್ಚಸ್ಸು ಕ್ಷೀಣಿಸುತ್ತಿದೆಯಲ್ಲವೇ...?

ಲೋಕಾಯುಕ್ತ ಸಂಸ್ಥೆ ಈಗ ಹಲ್ಲು ಕಿತ್ತ ಹಾವಿನಂತಾಗಿದೆ. ಲೋಕಾಯುಕ್ತ ಪೊಲೀಸರಿಗೆ ಎಫ್‌ಐಆರ್‌ ದಾಖಲಿಸುವ ಹಾಗೂ ಆರೋಪಿಯನ್ನು ಬಂಧಿಸುವ ಅಧಿಕಾರವನ್ನೇ ಕೊಟ್ಟಿಲ್ಲ. ಅಧಿಕಾರವೇ ಇಲ್ಲ ಎಂದ ಮೇಲೆ ಭ್ರಷ್ಟರು ಹೆದರುವುದುಂಟೇ? ಪೊಲೀಸರು ನೋಡುವುದಕ್ಕೆ ಹೇಗಿದ್ದರೂ ಸರಿ, ಪೊಲೀಸ್‌ ಸಮವಸ್ತ್ರ ಹಾಕಿಕೊಂಡು ಬಂದರೆಂದರೆ ಎಲ್ಲರೂ ಸ್ವಲ್ಪ ಹೆದರುತ್ತಾರೆ, ಏಕೆಂದರೆ ಅವರಿಗೆ ಬಂಧಿಸುವ ಅಧಿಕಾರ ಇದೆ. ಲೋಕಾಯುಕ್ತ ಪೊಲೀಸರದ್ದು ಹಾಗಲ್ಲ. ಯಾವ ಇಲಾಖೆಗೆ ಹೋದರೂ ವಿಚಾರಣೆ ಮಾಡಿ ಬಂದು ವರದಿ ನೀಡಿದರೆ ಮುಗಿಯಿತು. ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ತಿಳಿದರೂ ಬಂಧಿಸುವಂತಿಲ್ಲ. ಸಂಸ್ಥೆಗೆ ಸ್ವಾತಂತ್ರ್ಯವೇ ಕೊಡದಿದ್ದಾಗ ಅದರ ವರ್ಚಸ್ಸು ಕ್ಷೀಣಿಸುವುದಿಲ್ಲವೇ?

* ನೀವು ಉಪಲೋಕಾಯುಕ್ತರಾಗಿದ್ದ ವೇಳೆ ಹಲವಾರು ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ವರದಿ ಕೊಟ್ಟಿದ್ದಿರಿ. ತನಿಖೆ ನಡೆದು ಯಾವೊಬ್ಬ ಅಧಿಕಾರಿ ಜೈಲಿಗೆ ಹೋದಂತೆ ಕಾಣುತ್ತಿಲ್ಲವಲ್ಲ?

ಕೆಎಎಸ್‌ ಶ್ರೇಣಿಯ ಅಧಿಕಾರಿಗಳವರೆಗಿನ ಭ್ರಷ್ಟರ ಬಗ್ಗೆ ತನಿಖೆ ನಡೆಸಿ ವರದಿ ನೀಡುವುದು ಮಾತ್ರ ಉಪಲೋಕಾಯುಕ್ತರ ವ್ಯಾಪ್ತಿಗೆ ಬರುತ್ತದೆ. ನಾನು ಆ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದೇನೆ. ಅವರಿಗಿಂತ ಉನ್ನತ ಶ್ರೇಣಿಯ ಅಧಿಕಾರಿಗಳ ಭ್ರಷ್ಟತೆ ಬಗ್ಗೆ ಸೂಚನೆ ಸಿಕ್ಕಾಗೆಲ್ಲ ಲೋಕಾಯುಕ್ತರ ಗಮನಕ್ಕೆ ತಂದಿದ್ದೇನೆ. ವರದಿಗಳನ್ನು ಸರ್ಕಾರಕ್ಕೆ ನೀಡುವುದಕ್ಕೆ ಮಾತ್ರ ನಮ್ಮ ಅಧಿಕಾರ ಸೀಮಿತ. ಅಬ್ಬಬ್ಬಾ ಎಂದರೆ, ರಾಜ್ಯಪಾಲರ ಗಮನಕ್ಕೆ ತರುವಷ್ಟು ಸ್ವಾತಂತ್ರ್ಯ ಇದೆ. ಇಷ್ಟು ಸ್ವಾತಂತ್ರ್ಯದ ಒಳಗೆ ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇವೆ. ನಾನು ಕೊಟ್ಟಿರುವ ಹಲವು ವರದಿಗಳು ಸರ್ಕಾರದಲ್ಲೇ ಕೊಳೆಯುತ್ತಿವೆ. ಈ ಬಗ್ಗೆ ಇನ್ನೇನು ಹೇಳಲಿ...?

* ಇದರ ಬಗ್ಗೆ ನೀವು ಸರ್ಕಾರವನ್ನು ಪ್ರಶ್ನಿಸಬಹುದಿತ್ತಲ್ಲವೇ?

ಎಷ್ಟು ಅಂತ ಪ್ರಶ್ನಿಸುವುದು. ಅವಕಾಶ ಸಿಕ್ಕಾಗೆಲ್ಲಾ ಕೇಳಿದ್ದೇನೆ. ಹಲವಾರು ಇಲಾಖೆಗಳ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ದಿನಪೂರ್ತಿ ಕುಳಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ನೀಡಿದ್ದೇನೆ. ಮೈಸೂರಿನ ಸಮುದಾಯಭವನಗಳ ದೊಡ್ಡ ಮಟ್ಟದಲ್ಲಿನ ಭ್ರಷ್ಟಾಚಾರದ ವರದಿಯನ್ನು ಸಂಪೂರ್ಣ ಸಿದ್ಧಪಡಿಸಿ ಕೊಟ್ಟಿದ್ದೇನೆ. ಇದರ ಬಗ್ಗೆ ಪ್ರಶ್ನಿಸಿದಾಗ ‘ನಿಮ್ಮ ವರದಿ ಸಿಕ್ಕಿದೆ, ನೋಡುತ್ತೇವೆ’ ಎಂಬ ಉತ್ತರ ಬರುತ್ತಿತ್ತು. ಬಹುಶಃ ಇನ್ನೂ ನೋಡುತ್ತಲೇ ಇರಬೇಕು!

* ಇದಕ್ಕೆಲ್ಲಾ ಲೋಕಾಯುಕ್ತ ಕಾಯ್ದೆಯೇ ತೊಡಕಾಗಿದೆ ಎಂದು ಅನಿಸುತ್ತಿದೆ ಅಲ್ಲವೇ?

ಹೌದು, ಲೋಕಾಯುಕ್ತ ಕಾನೂನು ಸರಿಯಿಲ್ಲ. ಲೋಕಾಯುಕ್ತ ಕಚೇರಿಯಿಂದ ರಾಜ್ಯಪಾಲರಿಗೆ ದೂರು ಹೋದಾಗ, ಅದನ್ನು ಅವರು ಅಸೆಂಬ್ಲಿ ಮುಂದೆ ಇಡಬೇಕು. ಆನಂತರ ಮುಂದೇನು...? ಈ ಬಗ್ಗೆ ಕಾಯ್ದೆ ಮೌನವಾಗಿದೆ. ಆದ್ದರಿಂದ ಇದುವರೆಗೂ ಒಂದೇ ಒಂದು ವರದಿ ಅಸೆಂಬ್ಲಿ ಮುಂದೆ ಚರ್ಚೆಗೆ ಬಂದಿಲ್ಲ.

* ಲೋಕಾಯುಕ್ತ ಸಂಸ್ಥೆಯಲ್ಲಿ ರಾಜಕೀಯವೇನಾದರೂ...?

ಸಂಸ್ಥೆಯ ಒಳಗೆ ಹಾಗೇನೂ ಇಲ್ಲ. ವರದಿಗಳು ಚರ್ಚೆಗೆ ಬರದ ಹಿಂದೆ ಏನಿದೆಯೋ ಗೊತ್ತಿಲ್ಲ.

* ನ್ಯಾಯಮೂರ್ತಿ ಭಾಸ್ಕರ್ ರಾವ್‌ ಅವರು ಲೋಕಾಯುಕ್ತರಾಗಿದ್ದ ವೇಳೆ ಭ್ರಷ್ಟಾಚಾರ ನಡೆಸಿದರು ಎಂಬ ಆರೋಪದಿಂದಾಗಿ ಇಡೀ ಸಂಸ್ಥೆಗೆ ಕೆಟ್ಟ ಹೆಸರು ಬಂದಿತ್ತು. ಈಗ ಸಂಸ್ಥೆ ಸಂಪೂರ್ಣ ಭ್ರಷ್ಟಾಚಾರ ಮುಕ್ತವಾಗಿದೆ ಎನಿಸುತ್ತದೆಯೇ?

ಭ್ರಷ್ಟಾಚಾರ ಈಗಲೂ ಇದೆ ಎಂದು ಅನ್ನಿಸುತ್ತಿಲ್ಲ.

* ನಿಮ್ಮ ಅವಧಿಯಲ್ಲಿ ಯಾವುದಾದರೂ ಪ್ರಕರಣದ ವಿಚಾರಣೆ ನಡೆಸದಂತೆ ಒತ್ತಡಗಳು ಬಂದಿರಲಿಲ್ಲವೇ?

ಭಾಸ್ಕರ್‌ ರಾವ್‌ ಅವರ ಭ್ರಷ್ಟಾಚಾರದ ಕುರಿತಾದ ತನಿಖೆಯನ್ನು ಎಸ್ಪಿಯಾಗಿದ್ದ ಸೋನಿಯಾ ನಾರಂಗ್‌ ನಡೆಸುತ್ತಿದ್ದರು. ಅವರನ್ನು ಬದಲಿಸುವಂತೆ ಕೆಲವರಿಂದ ಒತ್ತಡ ಬಂದಿತ್ತು. ಅದಕ್ಕೆ ನಾನು ಕ್ಯಾರೇ ಎನ್ನಲಿಲ್ಲ. ಅದನ್ನು ಬಿಟ್ಟರೆ ಇಂಥ ಅನುಭವ ನನಗೆ ಆಗಿದ್ದಿಲ್ಲ.

* ಹಾಗಿದ್ದರೆ ಭ್ರಷ್ಟಚಾರ ಸಂಪೂರ್ಣವಾಗಿ ತೊಲಗಬೇಕು ಎಂಬ ಧೋರಣೆ ಸರ್ಕಾರಗಳಿಗೆ ಇಲ್ಲ ಎನ್ನುವಿರಾ?

ಯಾವ ಸರ್ಕಾರಗಳಿಗೂ ಭ್ರಷ್ಟಚಾರ ಸಂಪೂರ್ಣ ನಿವಾರಣೆಯಾಗುವುದು ಇಷ್ಟವಿಲ್ಲ. ಈ ವಿಷಯಕ್ಕೆ ಆ ಪಕ್ಷದ ಸರ್ಕಾರ, ಈ ಪಕ್ಷದ ಸರ್ಕಾರ ಎಂದೇನಿಲ್ಲ. ಭ್ರಷ್ಟಚಾರಕ್ಕೆ ವಿವಿಧ ಆಯಾಮಗಳಿವೆ. ಯಾವ ರೂಪದಲ್ಲಾದರೂ  ಯಾವಾಗಲೂ ನಡೆಯುತ್ತಿರುತ್ತದೆ. ಜನರೂ ಹಣ ಕೊಟ್ಟು ಕೆಲಸ ಮಾಡಿಸುವ ಮನಸ್ಥಿತಿ ರೂಢಿಸಿಕೊಂಡಿದ್ದಾರೆ. ಹೀಗಾಗಿ ಭ್ರಷ್ಟಾಚಾರದಲ್ಲಿ ಜನರ ಪಾತ್ರವೂ ಇದ್ದೇ ಇದೆ ಅಲ್ಲವೇ? 

* ಧಾರವಾಡ ಜಿಲ್ಲೆಯ ಡಾ. ಶೀಲಾ ಎನ್ನುವವರ ಪ್ರಕರಣದ ವಿಚಾರಣೆ ವಿಷಯದಲ್ಲಿ ನಿಮ್ಮನ್ನು ಪದಚ್ಯುತಿ ಮಾಡುವ ಮಟ್ಟಿಗೆ ಬಂತು. ಇದರ ಬಗ್ಗೆ ಏನು ಹೇಳುವಿರಿ?

ಒಂದನೆಯ ಉಪ ಲೋಕಾಯುಕ್ತರಾಗಿದ್ದ ಎಸ್.ಬಿ. ಮಜಗೆ ಅವರಿಗೆ ಹೋಗಬೇಕಿದ್ದ ವಿಚಾರಣಾ ವರದಿ ನನ್ನ ಬಳಿ ಬಂದಿದ್ದು ಸಿಬ್ಬಂದಿ ಮಾಡಿದ ತಪ್ಪಿನಿಂದ. ಇದು ಲೋಕಾಯುಕ್ತ ಆಂತರಿಕ ತನಿಖೆಯಿಂದಲೂ ಪತ್ತೆಯಾಗಿದೆ. ಶೀಲಾ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಅದನ್ನು ಆಧರಿಸಿ, ಆರೋಪ ಕೈಬಿಡಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ.

ಆಂತರಿಕ ವಿಚಾರಣೆ ಸರಿಯಾಗಿ ನಡೆದಿಲ್ಲ ಎಂದು ಅನಿಸಿದ್ದರೆ, ಮತ್ತೊಂದು ವಿಚಾರಣೆಗೆ ಮಜಗೆ ಆದೇಶಿಸಬಹುದಿತ್ತಲ್ಲವೇ? ವರ್ಷಕ್ಕೂ ಹೆಚ್ಚು ಕಾಲ ವಿಚಾರಣಾ ವರದಿಯನ್ನು ತಮ್ಮ ಬಳಿ ಇಟ್ಟುಕೊಂಡು, ನಿವೃತ್ತಿ ದಿನ ‘ಸುಭಾಷ್‌ ಅಡಿ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಿದ್ದರು’ ಎಂದು ಆರೋಪ ಮಾಡಿದ್ದು ಸರಿಯಲ್ಲ. ನನ್ನ ವ್ಯಾಪ್ತಿಗೆ ಬಂದಿದ್ದ ಎರಡು ದೂರುಗಳ ಬಗ್ಗೆ ನ್ಯಾಯಮೂರ್ತಿ ಮಜಗೆ ಅವರೂ ತಮ್ಮ ವ್ಯಾಪ್ತಿ ಮೀರಿ ಕೆಲಸ ಮಾಡಿದ್ದಾರೆ. ಇದನ್ನು ನಾನು ತಪ್ಪು ಎಂದು ಹೇಳಲಿಲ್ಲವಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry