ಪೊಲೀಸ್‌ ಸಿಬ್ಬಂದಿಗೆ ಇರಿದ ರೌಡಿಗೆ ಗುಂಡೇಟು

7

ಪೊಲೀಸ್‌ ಸಿಬ್ಬಂದಿಗೆ ಇರಿದ ರೌಡಿಗೆ ಗುಂಡೇಟು

Published:
Updated:
ಪೊಲೀಸ್‌ ಸಿಬ್ಬಂದಿಗೆ ಇರಿದ ರೌಡಿಗೆ ಗುಂಡೇಟು

ಚಡಚಣ (ವಿಜಯಪುರ ಜಿಲ್ಲೆ): ಬೆನ್ನಟ್ಟಿ ಬಂದ ಪೊಲೀಸ್‌ ಸಿಬ್ಬಂದಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ ಭೀಮಾ ತೀರದ ರೌಡಿ, ಶಶಿಧರ ಮುಂಡೆವಾಡಿ ಮೇಲೆ ಪೊಲೀಸರು ಶನಿವಾರ ಗುಂಡು ಹಾರಿಸಿದ್ದಾರೆ.

ತಾಲ್ಲೂಕಿನ ಬರಡೋಲ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತದಿಂದ ಗಾಯಗೊಂಡಿರುವ ಪಿಎಸ್‌ಐ ಗೋಪಾಲ ಹಳ್ಳೂರ, ಕಾನ್‌ಸ್ಟೆಬಲ್‌ ಅರವಿಂದ ಮಾದರ ಅವರು ಚಡಚಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಮುಂಡೆವಾಡಿಯ ಎಡ ಮೊಳಕಾಲಿನ ಕೆಳಗೆ ಗುಂಡೇಟಿನಿಂದ ಗಾಯವಾಗಿದ್ದು, ಇದೇ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮುಂಡೆವಾಡಿ, ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಮಾಹಿತಿ ಪಡೆದಿದ್ದ ಚಡಚಣ ಪೊಲೀಸರು, ಆತನನ್ನು ಬೆನ್ನಟ್ಟಿ ಅಡ್ಡಗಟ್ಟಿದ್ದಾರೆ. ಈ ವೇಳೆ, ಆತ ಪಿಎಸ್‌ಐ, ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ಇರಿದು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣವೇ ಪಿಎಸ್‌ಐ, ಮುಂಡೆವಾಡಿಯತ್ತ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾರೆ. ನೆಲಕ್ಕುರುಳಿದ ಆತನನ್ನು ಹಾಗೂ ಅವನ ಬಳಿಯಿದ್ದ ಜೀವಂತ ಗುಂಡು ತುಂಬಿದ್ದ ಎರಡು ನಾಡ ಪಿಸ್ತೂಲುಗಳನ್ನು ವಶಕ್ಕೆ ಪಡೆದಿದ್ದಾರೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪತ್ರಕರ್ತ ಸುನೀಲ ಹೆಗ್ಗರವಳ್ಳಿ ಹತ್ಯೆಗಾಗಿ, ಪತ್ರಕರ್ತ ರವಿ ಬೆಳಗೆರೆಯಿಂದ ಸುಪಾರಿ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಮುಂಡೆವಾಡಿಯನ್ನು ಡಿಸೆಂಬರ್‌ನಲ್ಲಿ ಬಂಧಿಸಿದ್ದರು.

‘ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ ಆತ, ಮತ್ತೆ ತನ್ನ ಹಳೆ ದಂಧೆಯಾದ ಅಕ್ರಮ ಶಸ್ತ್ರಾಸ್ತ್ರ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry