ಹೆಣ ಕೊಡಲು ಹಣ ಕೇಳಿದರೆ ಕ್ರಿಮಿನಲ್‌ ಮೊಕದ್ದಮೆ

7
ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ

ಹೆಣ ಕೊಡಲು ಹಣ ಕೇಳಿದರೆ ಕ್ರಿಮಿನಲ್‌ ಮೊಕದ್ದಮೆ

Published:
Updated:
ಹೆಣ ಕೊಡಲು ಹಣ ಕೇಳಿದರೆ ಕ್ರಿಮಿನಲ್‌ ಮೊಕದ್ದಮೆ

ಮೈಸೂರು: ಹಣಕ್ಕಾಗಿ ಪೀಡಿಸಿ ಹೆಣ ಕೊಡಲು ಸತಾಯಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶನಿವಾರ ಖಡಕ್‌ ಎಚ್ಚರಿಕೆ ನೀಡಿದರು.

‘ಯಾವುದೇ ಸನ್ನಿವೇಶದಲ್ಲಿ ಆಸ್ಪತ್ರೆಗಳಲ್ಲಿ ಸಾವು ಸಂಭವಿಸಿದಾಗ ಮೊದಲು ಶವವನ್ನು ಸಂಬಂಧಿಕರಿಗೆ ನೀಡಬೇಕು. ಅದೆಷ್ಟೇ ಶುಲ್ಕ ಪಾವತಿ ಬಾಕಿ ಇರಲಿ. ಆರ್ಥಿಕ ಅಥವಾ ಇನ್ನಾವುದೋ ಕಾರಣಕ್ಕೆ ಶವ ನೀಡಲು ನಿರಾಕರಿಸುವಂತಿಲ್ಲ’ ಎಂದು ತಾಕೀತು ಮಾಡಿದರು.

‘ರಾಜ್ಯದ ಎಲ್ಲ ಜನರಿಗೆ ಗುಣಮಟ್ಟದ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ 1.43 ಕೋಟಿ ಕುಟುಂಬಗಳಿದ್ದು, ಬಿಪಿಎಲ್‌ ಕುಟುಂಬಗಳಿಗೆ ಉಚಿತ ಹಾಗೂ ಎಪಿಎಲ್‌ ಕುಟುಂಬಗಳಿಗೆ ಶೇ 30ರಷ್ಟು ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಸಿಗಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಸರ್ಕಾರವೇ ಹಣ ಭರಿಸಲಿದೆ’ ಎಂದರು.

‘ಮೈಸೂರಿನಲ್ಲಿ ಸದ್ಯದಲ್ಲೇ ಮೂತ್ರಪಿಂಡ ಕಸಿ ಘಟಕ ಹಾಗೂ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆ ಘಟಕ ಸ್ಥಾಪಿಸಲಾಗುವುದು. ನನಗೆ ವೈದ್ಯಕೀಯ ವಿಚಾರದಲ್ಲಿ ಅಷ್ಟೊಂದು ಜ್ಞಾನವಿಲ್ಲ. ಪುತ್ರ ಡಾ.ಯತೀಂದ್ರನ ಬಳಿ ಕೇಳಿ ತಿಳಿದುಕೊಳ್ಳುತ್ತೇನೆ’ ಎಂದು ನುಡಿದರು.

‘ಮೈಸೂರು ಸಂಸ್ಥಾನದ ರಾಜರ ಬಳಿಕ ಮೈಸೂರು ಜಿಲ್ಲೆಗೆ ಹೆಚ್ಚು ಕೊಡುಗೆ ನೀಡಿದ್ದು ನಮ್ಮದೇ ಸರ್ಕಾರ. ಐದು ವರ್ಷಗಳಲ್ಲಿ ಜಿಲ್ಲೆಗೆ ₹ 5 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ. ಹಿಂದಿನವು ಬರೀ ಬುರುಡೆ ಸರ್ಕಾರಗಳು’ ಎಂದರು.

ಹುಬ್ಬಳ್ಳಿಯಲ್ಲೂ ಜಯದೇವ ಆಸ್ಪತ್ರೆ

ಹುಬ್ಬಳ್ಳಿಯಲ್ಲೂ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ ತೆರೆಯಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು. ಮೈಸೂರಿನಲ್ಲಿ ₹ 210 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 350 ಹಾಸಿಗೆಗಳ ಸೌಲಭ್ಯದ ಜಯದೇವ ಹೃದ್ರೋಗ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು, ಕಲಬುರ್ಗಿ, ಮೈಸೂರು ಸೇರಿ ಜಯದೇವ ಹೃದ್ರೋಗ ಆಸ್ಪತ್ರೆಗಳಲ್ಲಿ ಈಗ 1,200 ಹಾಸಿಗೆಗಳ ಸೌಲಭ್ಯವಿದೆ. ಹೃದ್ರೋಗಗಳಿಗೆ ಸಂಬಂಧಿಸಿದಂತೆ ದೇಶದ ಬೇರೆಲ್ಲೂ ಇಂಥ ಸೌಲಭ್ಯ ಇಲ್ಲ. ಇದಕ್ಕೆಲ್ಲ ಕಾರಣ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರ ಆಸಕ್ತಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry