ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ.1ರಿಂದ ಇ–ವೇ ಬಿಲ್ ಜಾರಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ

Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಅಂತರರಾಜ್ಯ ಸರಕುಗಳ ಸುಗಮ ಸಾಗಾಣಿಕೆಗೆ ಅನುವು ಮಾಡಿಕೊಡುವ ಇ–ವೇ ಬಿಲ್‌ ವ್ಯವಸ್ಥೆಯನ್ನು ಏಪ್ರಿಲ್‌ 1ರಿಂದ ಜಾರಿಗೆ ತರಲು ಶನಿವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಎಲ್ಲ ರಾಜ್ಯಗಳಲ್ಲೂ ಇದು ಹಂತ ಹಂತವಾಗಿ ಏಪ್ರಿಲ್ 15ರಿಂದ ಜಾರಿಗೆ ಬರಲಿದೆ. ಇದಕ್ಕಾಗಿ ರಾಜ್ಯಗಳನ್ನು ನಾಲ್ಕು ಹಂತಗಳಾಗಿ ವಿಭಜಿಸಲಾಗುವುದು. ಮೊದಲಿಗೆ ಯಾವ ರಾಜ್ಯಗಳಲ್ಲಿ ಜಾರಿಗೆ ತರಬೇಕೆಂದು ಏಪ್ರಿಲ್‌ 7ರಂದು ನಿರ್ಧರಿಸಲಾಗುತ್ತದೆ. ಜೂನ್‌ ವೇಳೆಗೆ ಎಲ್ಲ ರಾಜ್ಯಗಳಲ್ಲೂ ಇದು ಜಾರಿಗೆ ಬರಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

‘ಜಿಎಸ್‌ಟಿಆರ್‌–3ಬಿ ಮತ್ತು ಜಿಎಸ್‌ಟಿಆರ್–1 ವ್ಯವಸ್ಥೆ ಅಡಿಯಲ್ಲೇ ರಿಟರ್ನ್ಸ್ ಸಲ್ಲಿಸಲು ಜೂನ್‌ವರೆಗೆ ಅವಕಾಶ ಮಾಡಿಕೊಡಲಾಗಿದೆ. ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸುವ ಬಗ್ಗೆ ಸಭೆಯಲ್ಲಿ ಒಮ್ಮತ ಮೂಡದ ಕಾರಣ, ಪ್ರಸ್ತುತ ಇರುವ ವ್ಯವಸ್ಥೆಯಲ್ಲೇ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸಲು ಮೂರು ತಿಂಗಳ ವರೆಗೆ ಗಡುವು ವಿಸ್ತರಿಸಲಾಗಿದೆ.

‘ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ವ್ಯವಸ್ಥೆ ಸರಳವಾಗಿರಬೇಕು, ಯಾವುದೇ ಗೊಂದಲಗಳಿಂದ ಕೂಡಿರಬಾರದು ಎಂಬ ಆಶಯ ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿಗಳಿಗೆ ಇದೆ’ ಎಂದು ಜೇಟ್ಲಿ  ಹೇಳಿದ್ದಾರೆ.

‘ಪ್ರತಿ ತಿಂಗಳೂ ಒಂದು ಬಾರಿ ಮಾತ್ರ ರಿಟರ್ನ್ಸ್ ಸಲ್ಲಿಸುವ ವ್ಯವಸ್ಥೆ ಇರಬೇಕು’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.  ರಿಟರ್ನ್ಸ್‌ ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸುವ ಅವಶ್ಯಕತೆ ಇದೆ. ಆದರೆ ಅದನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು. ₹50,000ಕ್ಕಿಂತ ಹೆಚ್ಚಿನ ಮೊತ್ತದ  ಸರಕಿನ ಅಂತರ ರಾಜ್ಯ ಸಾಗಾಣಿಕೆಗೂ ಮುಂಚೆಯೇ   ಕಡ್ಡಾಯವಾಗಿ ಇ–ವೇಲ್‌ ನೋಂದಣಿ ಮಾಡಿಸಬೇಕು.

ಇ–ವಾಲೆಟ್ ಯೋಜನೆ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ ರಫ್ತುದಾರರಿಗೆ ಅಕ್ಟೋಬರ್ 1ರೊಳಗೆ ಮರುಪಾವತಿ ಮಾಡಲು  ಇ–ವಾಲೆಟ್ ಯೋಜನೆ ಜಾರಿಗೊಳಿಸಲೂ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮರುಪಾವತಿ: ಮಾ. 15ರಿಂದ ಶಿಬಿರ
ನವದೆಹಲಿ:
ರಫ್ತುದಾರರಿಗೆ ಜಿಎಸ್‌ಟಿ ಮರುಪಾವತಿ ಸುಲಭಗೊಳಿಸಲು ದೇಶದಾದ್ಯಂತ ಮಾರ್ಚ್‌ 15ರಿಂದ ವಿಶೇಷ ಶಿಬಿರ ಆಯೋಜಿಸಲಾಗುವುದು ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾಸುಂಕ ಮಂಡಳಿ ಅಧ್ಯಕ್ಷೆ ವನಜಾ ಸರ್ನಾ ಶನಿವಾರ ತಿಳಿಸಿದ್ದಾರೆ.

‘ಈಗಾಗಲೇ ಮಂಡಳಿಯು ₹5,000 ಕೋಟಿ ವರೆಗೆ ಮರುಪಾವತಿ ಮಾಡಿದೆ. ಆದರೆ, ಜಿಎಸ್‌ಟಿ ಜಾರಿಯಾಗಿ ಎಂಟು ತಿಂಗಳು ಕಳೆದರೂ ಇನ್ನೂ ಶೇ 70ರಷ್ಟು ಮರುಪಾವತಿ ಬಾಕಿ ಉಳಿದಿದೆ.

‘ಜಿಎಸ್‌ಟಿ ಮರುಪಾವತಿಗಾಗಿ ದಾಖಲೆ ಸಲ್ಲಿಸುವ ವೇಳೆ ಕೆಲವು ರಫ್ತುದಾರರು ತಪ್ಪುಗಳನ್ನು ಮಾಡಿರುವ ಹಲವಾರು ನಿದರ್ಶನಗಳಿವೆ. ಅಂತಹವರಿಗಾಗಿ ಶಿಬಿರ ಆಯೋಜಿಸಿ ಸಲಹೆ ನೀಡಲು ಮಂಡಳಿ ನಿರ್ಧರಿಸಿದೆ.

‘ಹಂತ ಹಂತವಾಗಿ ರಫ್ತುದಾರರಿಗೆ ನೇರವಾಗಿಯೇ ಮರುಪಾವತಿ  ಮಾಡಲಾಗುವುದು. ಸಮಸ್ಯೆಗಳನ್ನು ಬಗೆಹರಿಸಿ ಕೂಡಲೇ ಮರುಪಾವತಿ ಮಾಡಲು ವಿಶೇಷ ಶಿಬಿರಗಳನ್ನು ಆಯೋಜಿಸಲಾಗುವುದು. ಇದು ಮಾರ್ಚ್‌ 29ರವರೆಗೆ  ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಶಿಬಿರಗಳಲ್ಲಿ ತಜ್ಞರು ಭಾಗವಹಿಸಿ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಮಾರ್ಚ್‌ 31ರ ವೇಳೆಗೆ ಬಾಕಿ ಉಳಿದಿರುವ ಎಲ್ಲ ಮರುಪಾವತಿಗಳು ಇತ್ಯರ್ಥವಾಗುವ ನಿರೀಕ್ಷೆ ಇದೆ. ಅಕ್ಟೋಬರ್ 1ರವರೆಗೆ ರಫ್ತುದಾರರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT