ಸ್ಫೂರ್ತಿ ನೀಡಿದ ಮಹಿಳೆ ಜಸ್ವಂತಿಬೆನ್ ಪೋಪಟ್

7

ಸ್ಫೂರ್ತಿ ನೀಡಿದ ಮಹಿಳೆ ಜಸ್ವಂತಿಬೆನ್ ಪೋಪಟ್

Published:
Updated:

ಈ ಹೆಸರು ನೋಡಿದ ತಕ್ಷಣ ಇವರು ಯಾರು ಎಂದು ಗೊತ್ತಾಗಲಿಕ್ಕಿಲ್ಲ! ಅಲ್ಲವೇ? "ಲಿಜ್ಜತ್ ಪಾಪಡ್" ಎಂದರೆ ಗೊತ್ತಾಗದೇ ಇರುತ್ತಾ? ಉತ್ತಮ ಗುಣಮಟ್ಟದ ಹಪ್ಪಳಗಳು. ಹೌದು, ಜಸ್ವಂತಿಬೆನ್ ಈ ಸಂಸ್ಥೆಯ ಸಂಸ್ಥಾಪಕರು - ನನಗೆ ಸ್ಫೂರ್ತಿ ನೀಡಿದ ಮಹಿಳೆ!

"ಮಹಿಳೆ ಸ್ವಾವಲಂಬಿಯಾಗಬೇಕು ಮತ್ತು ಆತ್ಮವಿಶ್ವಾಸದಿಂದ ಇರಬೇಕು" ಎಂಬ ಘನ ಉದ್ದೇಶದಿಂದ ಇನ್ನುಳಿದ ಆರು ಮಹಿಳೆಯರೊಂದಿಗೆ ಜೊತೆಗೂಡಿ ಕೇವಲ ೮೦ ರೂಪಾಯಿ ಸಾಲ ತೆಗೆದುಕೊಂಡು ಮನೆಯ ಮಾಳಿಗೆಯಲ್ಲಿ ಹಪ್ಪಳ ಮಾಡಲು ಪ್ರಾರಂಭಿಸಿದ ಸಂಸ್ಥೆ "ಶ್ರೀ ಮಹಿಳಾ ಗೃಹ ಉದ್ಯೋಗ ",  ಇವತ್ತು ವರ್ಷಕ್ಕೆ ೬೫೦ ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ನೂರಾರು ಹೆಣ್ಣು ಮಕ್ಕಳ ಭವಿಷ್ಯ ಬದಲಾಯಿಸಿದೆ.

ಅವರೇನು ತುಂಬಾ ಕಲಿತವರಾ? ಅಲ್ಲ. ಓದು, ಬರಹ ಗೊತ್ತು ಅಷ್ಟೇ. ಅವರಿಗೆ ಮಾಡಲು ಬರುತ್ತಿದ್ದ ಕೆಲಸವಾದರೂ ಏನು? ಅಡಿಗೆ ಬಿಟ್ಟು ಬೇರೇನೂ ಗೊತ್ತಿಲ್ಲ. ಆದರೂ ಕೇವಲ ಒಂದು ಕನಸು, ಒಂದು ಗುರಿ, ಒಂದು ಛಲ ಅವರನ್ನು ಹಾಗೂ ಅವರ ಸಂಗಡಿಗರನ್ನು ಈ ಮಟ್ಟಕ್ಕೆ ಏರಿಸಿತು.

ಈ ಸಂಸ್ಥೆ ಪ್ರಾರಂಭವಾದಾಗ ಬಂದ ತೊಂದರೆಗಳು ಒಂದೇ, ಎರಡೇ? ಮುಂಬೈಯ ಮಳೆಗಾಲದಲ್ಲಿ ೪ ತಿಂಗಳು ತಯಾರಿಕೆಯನ್ನು ನಿಲ್ಲಿಸಬೇಕಾಯಿತು. ಸದಸ್ಯೆಯರ ಸಂಖ್ಯೆ ಹೆಚ್ಚ್ಚಾದಾಗ ಮನೆಯ ಮಾಳಿಗೆ ಸಾಲದಾಯಿತು. ಎಲ್ಲದಕ್ಕೂ ಸರಳವಾಗಿ ಉತ್ತರವನ್ನು ಕಂಡುಕೊಂಡರು. ಮಳೆಗಾಲದಲ್ಲಿ ಮನೆಯ ಒಳಗೆ ಮಂಚದ ಮೇಲೆ ಹಪ್ಪಳಗಳನ್ನು ಹರವಿ ಕೆಳಗೆ ಸ್ಟವ್ ಹಚ್ಚ್ಚಿ ಒಣಗಿಸುವುದು, ಜನ ಜಾಸ್ತಿ ಆದಾಗ ಹಿಟ್ಟನ್ನು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದು ಮರುದಿನ ಹಪ್ಪಳಗಳನ್ನು ತಂದಿರುಸುವುದು, ಇತ್ಯಾದಿ.

ಒಬ್ಬ ಮನುಷ್ಯನ ಪ್ರಗತಿಗೆ ಕೇವಲ ವಿದ್ಯೆ, ಹಣ, ಅಂತಸ್ತು, ಅಧಿಕಾರ, ಸೌಲಭ್ಯಗಳು ಕಾರಣವಲ್ಲ. ಯಾರು ಯಾವುದೇ ಪರಿಸ್ಥಿತಿಯಲ್ಲಿದ್ದರೂ ತಮ್ಮ ದೂರದೃಷ್ಟಿ, ಸಹಕಾರ, ಸಂಘಟನೆ ಹಾಗೂ ಮೌಲ್ಯಗಳ ಬಗ್ಗೆ ನಿಷ್ಠೆಯಿಂದ ಏನು ಬೇಕಾದರೂ ಸಾಧಿಸಬಹುದೆಂಬುದಕ್ಕೆ ಜಸ್ವಂತಿಬೆನ್ ಒಂದು ಉತ್ತಮ ಉದಾಹರಣೆ.

-ಅಂಜಲಿ ಸಂಜೀವ್

ತಲಘಟ್ಟಪುರ, ಕನಕಪುರ ರಸ್ತೆ.

ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry