ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ಗೆ ಒಂದು ಸೀಟು ಬಿಟ್ಟುಕೊಡಿ

ರಾಜ್ಯಸಭೆ: ಕೆಲವು ಕಾಂಗ್ರೆಸ್‌ ನಾಯಕರ ಒತ್ತಾಯ
Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇದೇ 23ರಂದು ನಡೆಯುವ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್‌ನ ಒಂದು ಗುಂಪು ಪ್ರಬಲವಾಗಿ ಪ್ರತಿಪಾದಿಸುತ್ತಿದೆ.

‘ಗುಂಡ್ಲುಪೇಟೆ, ನಂಜನಗೂಡು ವಿಧಾನಸಭೆ ಉಪ ಚುನಾವಣೆಯಲ್ಲಿ, ಬೆಂಗಳೂರು ಮಹಾನಗರಪಾಲಿಕೆಯಲ್ಲಿ ನಿಮ್ಮನ್ನು ಬೆಂಬಲಿಸಿದ್ದೇವೆ. ನಮಗೆ ಒಂದು ಸ್ಥಾನ ಬಿಟ್ಟುಕೊಡಿ’ ಎಂದು ಜೆಡಿಎಸ್‌ ನಾಯಕರು ಕೇಳಿದ್ದಾರೆ. ಕಾಂಗ್ರೆಸ್‌ನ ಕೆಲವು ನಾಯಕರು ಜೆಡಿಎಸ್‌ ಪರ ವಕಾಲತ್ತು ವಹಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಇದಕ್ಕೆ ವಿರುದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಜೆಡಿಎಸ್‌ ಜಾತ್ಯತೀತ ಪಕ್ಷ. ದೇವೇಗೌಡರು ಜಾತ್ಯತೀತ ಮನೋಭಾವದ ನಾಯಕ. ಕಾಂಗ್ರೆಸ್‌ ಕರೆದಿದ್ದ ಸಭೆಗಳಿಗೂ ಅವರು ತಪ್ಪದೇ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಹದ್ದುಬಸ್ತಿನಲ್ಲಿಡಲು ಈ ಪಕ್ಷದ ಜೊತೆ ಸಖ್ಯ ಬೆಳೆಸುವ ಅಗತ್ಯವಿದೆ. ಇದರಿಂದ ಚುನಾವಣೆ ಬಳಿಕ ನಮಗೆ ಲಾಭವಾಗಬಹುದು. ಈ ಕಾರಣಕ್ಕೆ ಒಂದು ಸ್ಥಾನವನ್ನು ಆ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂಬ ಅಭಿಪ್ರಾಯವನ್ನು ಕೆಲವು ಹಿರಿಯ ನಾಯಕರು ಹೈಕಮಾಂಡ್‌ ಮುಂದೆ ವ್ಯಕ್ತಪಡಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ಖುದ್ದು ಮಾತನಾಡಿದ್ದಾರೆ. ಮೂರನೇ ಸ್ಥಾನ ತಮಗೆ ಬಿಟ್ಟುಕೊಡುವಂತೆ ಕೇಳಿದ್ದಾರೆ. ಹಿಂದೆ ರಾಜ್ಯಸಭೆಗೆ ಚುನಾವಣೆ ನಡೆದಾಗ ಬಿ.ಎಂ. ಫಾರೂಕ್‌ ಅವರನ್ನು ಸೋಲಿಸಲಾಗಿತ್ತು. ತಮ್ಮ ಪಕ್ಷದ ಮತಗಳನ್ನು ಪಡೆದು ನಿವೃತ್ತ ಪೊಲೀಸ್‌ ಅಧಿಕಾರಿ ರಾಮಮೂರ್ತಿ ಅವರನ್ನು ಕಾಂಗ್ರೆಸ್‌ ಗೆಲ್ಲಿಸಿತ್ತು. ಈಗ ಮತ್ತೆ ಫಾರೂಕ್‌ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಬೆಂಬಲಿಸಿ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕ ಅಹಮದ್‌ ಪಟೇಲ್‌ ಈ ಬಗ್ಗೆ ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಮೂರನೇ ಅಭ್ಯರ್ಥಿಯಾಗಿ ಉದ್ಯಮಿ ಚೆನ್ನಾರೆಡ್ಡಿ ಅವರನ್ನು ಕಣಕ್ಕಿಳಿಸಲು ಒಲವು ತೋರಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರೆಡ್ಡಿ ವೀರಣ್ಣಗೆ ಟಿಕೆಟ್‌ ಕೊಡಿಸಲು ಲಾಬಿ ಮಾಡುತ್ತಿದ್ದಾರೆ ಎಂದೂ ಮೂಲಗಳು ವಿವರಿಸಿವೆ.

ಕಾಂಗ್ರೆಸ್‌ ಒಂದು ಸ್ಥಾನವನ್ನು ಮುಸ್ಲಿಮರಿಗೆ, ಮತ್ತೊಂದು ಸ್ಥಾನವನ್ನು ದಲಿತರು, ಹಿಂದುಳಿದ ವರ್ಗ ಅಥವಾ ಲಿಂಗಾಯತರಿಗೆ ಕೊಡಬೇಕು ಎಂಬ ಆಲೋಚನೆ ಹೊಂದಿದೆ.  ರಾಜ್ಯಸಭೆಯಿಂದ ನಿವೃತ್ತಿ ಆಗುತ್ತಿರುವ ಹಾಲಿ ಸದಸ್ಯ ರೆಹಮಾನ್‌ ಖಾನ್‌, ಸಚಿವ ರೋಷನ್‌ ಬೇಗ್‌, ಯುವ ಮುಖಂಡ ಸಲೀಂ ಅಹಮದ್‌ ಅವರ ಹೆಸರು ಚಲಾವಣೆಯಲ್ಲಿವೆ. ಲಿಂಗಾಯತರಲ್ಲಿ ಮಾಜಿ ಸಚಿವ ಮಾಲಕರಡ್ಡಿ, ಕೈಲಾಸನಾಥ ಪಾಟೀಲ, ರಾಣಿ ಸತೀಶ್‌, ಶ್ಯಾಮನೂರು ಶಿವಶಂಕರಪ್ಪ ರೇಸ್‌ನಲ್ಲಿದ್ದಾರೆ. ಮಾಜಿ ಸ್ಪೀಕರ್‌ಗಳಾದ ಮೀರಾ ಕುಮಾರ್‌ (ಜಗಜೀವನರಾಂ ಪುತ್ರಿ) ಮತ್ತು ಶಿವರಾಜ್‌ ಪಾಟೀಲ ಒಳಗೊಂಡಂತೆ ಕೆಲವರ ಹೆಸರುಗಳಿವೆ.

ರಾಹುಲ್‌ ಗಾಂಧಿ ಸದ್ಯ ವಿದೇಶ ಪ್ರವಾಸದಲ್ಲಿದ್ದು, ಅವರು ಬಂದ ಬಳಿಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ರಾಜೀವ್‌ ಚಂದ್ರಶೇಖರ್‌ ಹಾಗೂ ವಿಜಯ ಸಂಕೇಶ್ವರ ಅವರ ಹೆಸರು ಕೇಳಿಬರುತ್ತಿದೆ. ಆದರೆ, ಆ ಪಕ್ಷದ ವರಿಷ್ಠರು ಕೊನೇ ಗಳಿಗೆಯಲ್ಲಿ ಬೇರೆಯವರ ಹೆಸರು ಪ್ರಕಟಿಸಬಹುದು. ಹೊರಗಿನವರಿಗೆ ಟಿಕೆಟ್‌ ಕೊಡುವ ಸಾಧ್ಯತೆ ಕಡಿಮೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ (ಮಾರ್ಚ್‌ 12) ಕೊನೆ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT