ಬದುಕಿನ ಸಂತೆಯ ಲೆಕ್ಕ ಕಲಿಸಿದಾಕೆ

7

ಬದುಕಿನ ಸಂತೆಯ ಲೆಕ್ಕ ಕಲಿಸಿದಾಕೆ

Published:
Updated:
ಬದುಕಿನ ಸಂತೆಯ ಲೆಕ್ಕ ಕಲಿಸಿದಾಕೆ

ಐವತ್ತು ವರ್ಷಗಳಿಂದಲೂ ನಮ್ಮ ಮನೆಯ ಕಿರಾಣಿ ಅಂಗಡಿಯ ಖಾತೆ ಪುಸ್ತಕದಲ್ಲಿ ಅಕೆಯದ್ದೇ ಹೆಸರು ಅಷ್ಚೇ .ವರ್ಷಗಳಿಂದ ದಲ್ಲಾಳಿ ಅಂಗಡಿಯ ಖಾತೆ ಪುಸ್ತಕದಲ್ಲಿಯೂ ಅದೇ ಹೆಸರು. ಈಗಲೂ ಅದೇ ಹೆಸರಿನಲ್ಲಿ ನಮ್ಮ ಮನೆಯ ವ್ಯವಹಾರಗಳು ಮುಂದುವರೆದಿವೆ. ಆ ಹೆಸರು ಪಾರತೆಮ್ಮ ಗೂಳಪ್ಪನವರ. ನಮ್ಮ ತಾಯಿಯ ತಾಯಿ ನಮ್ಮ ಅಜ್ಜಿ. ಗೂಳಪ್ಪನವರ ನಮ್ಮ ಮನೆತನದ ಮತ್ತೊಂದು ಹೆಸರು. ಆಕೆ ಬದುಕಿನ ಸಂತೆಯ ಲೆಕ್ಕ ಕಲಿಸಿದಾಕೆ. ಹೊಲದಲ್ಲಿ ಬೆಳೆಯುತ್ತಿದ್ದ ತರಕಾರಿಗಳನ್ನು ಊರೂರ ಸಂತೆ ಅಲೆದು ಮಾರಿದಾಕೆ. ಅಲ್ಲದೇ ಅದು ಡಿಸಿಹೆಚ್ ಹತ್ತಿ ಬೆಳೆಯುತ್ತಿದ್ದ ಪರ್ವಕಾಲ. ರಾಣೇಬೆನ್ನೂರಿನ ಎಪಿಎಂಸಿಗೆ ಹೋಗಿ ಹತ್ತಿ ಮಾರಿಕೊಂಡು ಬರುವುದೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಖುಷಿ. ಮನೆಯಲ್ಲಿದ್ದ ಎರಡು ಎಮ್ಮೆಯ ಹಾಲು ಬೆಣ್ಣೆ ಮಾರುವ ವಿಷಯದಲ್ಲಿಯೂ ಅಜ್ಜಿಯ ಹೆಸರು ಖರೀದಿದಾರರಿಗೆ ಚಿರಪರಿಚಿತ.

ಈ ಎಲ್ಲಾ ಸಂದರ್ಭಗಳಲ್ಲಿಯೂ ಅಜ್ಜಿಯ ಜೊತೆ ಹೋಗುತ್ತಿದ್ದೆ. ನಾನು ಐದನೇ ಕ್ಲಾಸಿಗೆ ಬಂದಾಗಿನಿಂದಲೂ ಅಜ್ಜಿಯ ನಂಟು ಬಿಟ್ಟವನಲ್ಲ. ನಮ್ಮಜ್ಜಿ ಸಂತೆಯಲ್ಲಿ ಕುಳಿತು ತರಕಾರಿ ತೂಗುತ್ತಿದ್ದರೆ ನಾನು ಕೆಜಿ ಲೆಕ್ಕದ ರೂಪಾಯಿಗಳನ್ನು ಕೂಗುತ್ತಿದ್ದೆ. ತೂಕ ಮತ್ತು ರೇಟಿನ ವಿಷಯದಲ್ಲಿ ನಮ್ಮಜ್ಜಿ ಬಹಳ ಕರೆಕ್ಟು. ಸಂತೆಯ ದರಕ್ಕಿಂತ ಕಡಿಮೆಯೇ ಮಾರುತ್ತಿದ್ದ ನಮ್ಮಜ್ಜಿ ‘ಕೋಡೋಳು ಭೂಮ್ತಾಯಿ, ತಿನ್ನೋರು ಅವರು, ತರೋದಷ್ಟೇ ನಾವು’ ಅನ್ನುತ್ತಿದ್ದ ಅಜ್ಜಿಯ ಮಾತು ನನಗಾಗ ಅರ್ಥ ಆಗುತ್ತಿರಲಿಲ್ಲ. ವ್ಯಾಪಾರದಲ್ಲಿ ಮೋಸವಿರುತ್ತಿರಲಿಲ್ಲ. ದಲ್ಲಾಳಿ ಅಂಗಡಿಯಲ್ಲಿ ಸಾಲದ ಬಾಕಿ ಉಳಿಸುತ್ತಿರಲಿಲ್ಲ. ಹಾಲು ಬೆಣ್ಣೆಯಲ್ಲಿ ಕಲಬೆರಕೆ ಮಾಡುತ್ತಿರಲಿಲ್ಲ. ತುಂಬಾ ಪ್ರಮಾಣಿಕ, ಶುದ್ಧಹಸ್ತದ ವ್ಯವಹಾರ ನಮ್ಮಜ್ಜಿಯದು. ನಾನು ಪಿಯುಸಿಗೆ ಬರುವ ವೇಳೆಗಾಗಲೇ ಹಣ್ಣಾಗಿದ್ದ ಅಜ್ಜಿ ಊರಿನಲ್ಲಿಯೇ ಪುಟ್ಟ ಗೂಡಂಗಡಿ ಇಟ್ಟುಕೊಂಡು ಸ್ವಾಭಿಮಾನ ಮೆರೆದಾಕೆ. ನನ್ನ ಕಾಲೇಜಿನ ಓದಿಗೆ ಐದು ರೂಪಾಯಿ ಹೊಂದಿಸಿ ಕೊಟ್ಟಾಕೆ. ನಮ್ಮ ಜೊತೆ ಇರುವ ಇನ್ನೂ ಒಂದಷ್ಟು ದಿನಗಳ ಲೆಕ್ಕ ತಪ್ಪಿದಾಕೆ ಅನಿಸಿಬಿಡುತ್ತದೆ. ಅಜ್ಜಿಯ ನೆನಪಾದಗೆಲ್ಲ ಕಣ್ಣು ತೇವ.

-ಸೋಮು ಕುದರಿಹಾಳ

 ಗಂಗಾವತಿ ಜಿ. ಕೊಪ್ಪಳ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry