ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಮೌಲ್ಯ ಬಿತ್ತುವ ‌ಕಾಲ ನೇಪಥ್ಯಕ್ಕೆ

ಪ್ರಕಾಶಕರ ಪ್ರಥಮ ಸಮ್ಮೇಳನದಲ್ಲಿ ಡಾ.ರಮಾಕಾಂತ ಜೋಶಿ ಬೇಸರ
Last Updated 10 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಸ್ತಕ ಪ್ರಕಾಶನವು ಲೇಖಕರ ಆತ್ಮಸಂತೃಪ್ತಿಯ ಕಾರ್ಯವಾಗಿ ಸಮಾಜದಲ್ಲಿ ಗೌರವ ಪಡೆಯುವ, ಉತ್ತಮ ಜೀವನ ಮೌಲ್ಯ ಬಿತ್ತುವ ಸಾಧನವಾಗಿ ಕಾಣುವ ಕಾಲ ನೇಪಥ್ಯಕ್ಕೆ ಸರಿದಿದೆ’ ಎಂದು ಮನೋಹರ ಗ್ರಂಥಮಾಲ ಸಂಪಾದಕ–ಪ್ರಕಾಶಕ ರಮಾಕಾಂತ ಜೋಶಿ ಅಭಿಪ್ರಾಯಪಟ್ಟರು.

ಕನ್ನಡ ಪುಸ್ತಕ ಪ್ರಾಧಿಕಾರವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಕಾಶಕರ ಪ್ರಥಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಂತ್ರಜ್ಞಾನ, ಅಂದವಾದ ಮುದ್ರಣ ಮತ್ತು ವಿನ್ಯಾಸದ ಫಲವಾಗಿ ಇಂದು ದಿನ ಬೆಳಗಾಗುವುದರೊಳಗೆ ಸಾವಿರಾರು ಪುಸ್ತಕಗಳು ಮಾರುಕಟ್ಟೆಗೆ ಬರತೊಡಗಿವೆ. ಪುಸ್ತಕ ಪ್ರಕಾಶನವು ಬೃಹತ್‌ ಉದ್ದಿಮೆಯಾಗಿ ರೂಪುಗೊಂಡಿದೆ. ಲಾಭ ಗಳಿಕೆಯ ಸ್ವರೂಪ ಪಡೆದುಕೊಂಡಿದೆ ಎಂದರು.

ಟಿ.ವಿ, ಇಂಟರ್‌ನೆಟ್‌, ಮನರಂಜನಾ ಮಾಧ್ಯಮಗಳ ಪ್ರಭಾವದಿಂದ ಪುಸ್ತಕ ಓದುಗರ ಸಂಖ್ಯೆ ಕ್ಷೀಣಿಸತೊಡಗಿದೆ ಎಂಬ ಕೂಗು ಇದೆ. ಈ ಆತಂಕದ ಸ್ವರದ ನಡುವೆಯೂ ಪ್ರತಿ ಭಾಷೆಯಲ್ಲೂ ಕನಿಷ್ಠ 2,000ದಿಂದ 3,000 ಪುಸ್ತಕಗಳು ಪ್ರಕಟವಾಗುತ್ತಿವೆ. ಇದಕ್ಕೆ ಲೇಖಕ, ಪ್ರಕಾಶಕರ ಅಪರಿಮಿತ ಉತ್ಸಾಹ ಹಾಗೂ ಗ್ರಂಥಾಲಯ ಇಲಾಖೆ ಪ್ರೋತ್ಸಾಹವೂ ಕಾರಣವಿರಬಹುದು ಎಂದರು.

ಸಮ್ಮೇಳನ ಉದ್ಘಾಟಿಸಿದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳ ಸಿದ್ದಪ್ಪ, ‘ಪುಸ್ತಕೋದ್ಯಮ ಬೆಳೆಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಲೇಖಕರು, ಪ್ರಕಾಶಕರು ಹಾಗೂ ಓದುಗರ ಜತೆ ಕೈಜೋಡಿಸಿ ಈ ಉದ್ಯವನ್ನು ಸರ್ಕಾರ ಅರ್ಥಪೂರ್ಣವಾಗಿ ಬೆಳೆಸಬೇಕು’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ, ‘ಪುಸ್ತಕೋದ್ಯಮ ಬೆಳವಣಿಗೆಗೆ ತೊಡಕಾಗಿರುವ ಪುಸ್ತಕ ದರ ನಿಗದಿ ಕ್ರಮ ಸರಿಪಡಿಸಲು ಮತ್ತು ಗ್ರಂಥಾಲಯ ಸೆಸ್‌ ಹಣದ ದುರ್ಬಳಕೆ ತಡೆಯಲು ರಾಜ್ಯದಲ್ಲಿ ‘ಪುಸ್ತಕ ನೀತಿ’ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಸಲಹೆಗಳು

* ಕನ್ನಡ ಪುಸ್ತಕ ಪ್ರಾಧಿಕಾರ ಸಬಲಗೊಳಿಸಬೇಕು. ಪುಸ್ತಕೋದ್ಯಮ ಬೆಳೆಸಲು ಯೋಜನೆ ರೂಪಿಸಬೇಕು

* ಪ್ರತಿ ಜಿಲ್ಲೆ, ನಗರಗಳ ರಂಗಮಂದಿರ, ಸಾಂಸ್ಕೃತಿಕ ಭವನಗಳ ಒಳಾಂಗಣದಲ್ಲಿ ‘ಬುಕ್‌ ರ‍್ಯಾಕ್‌’ ತೆರೆಯಬೇಕು

* ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪುಸ್ತಕ ಪ್ರಾಧಿಕಾರದ ಪ್ರಕ
ಟಣೆಗಳನ್ನು ಒಂದೇ ಸೂರಿನಡಿ ಮಾರಬೇಕು

* ಕನ್ನಡ ಪುಸ್ತಕಗಳ ವೆಬ್‌ಸೈಟ್‌ ಪ್ರಾರಂಭಿಸಿ ಸರ್ವಲೇಖಕರ ಕೃತಿಗಳ ಸಂಕ್ಷಿಪ್ತ ಪರಿಚಯ ನೀಡಬೇಕು

**

ರಾಜ್ಯದಲ್ಲಿ ಲೇಖಕರು, ಪ್ರಕಾಶಕರು ಹಾಗೂ ಓದುಗರಿಗೆ ಕೊರತೆ ಇಲ್ಲ. ಆದರೆ, ಇವರನ್ನು ಸಮನ್ವಯಗೊಳಿಸುವ ವ್ಯವಸ್ಥೆ ರೂಪುಗೊಳ್ಳಬೇಕಿದೆ
– ಪ್ರಕಾಶ್‌ ಕಂಬತ್ತಹಳ್ಳಿ, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ

**

‘ಉತ್ತಮ ಪ್ರಕಾಶನ’ ಪ್ರಶಸ್ತಿ ಮೊತ್ತ ₹1 ಲಕ್ಷದಿಂದ ₹3 ಲಕ್ಷಕ್ಕೆ ಏರಿಸಬೇಕು. ಪ್ರಕಾಶಕರಿಗೂ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು
 –ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಬರಹಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ

**

450 ರಾಜ್ಯದಲ್ಲಿರುವ ಪ್ರಕಾಶಕರು

7,000 ರಾಜ್ಯದಲ್ಲಿ ಈ ವರ್ಷ ಪ್ರಕಟವಾಗುತ್ತಿರುವ ಅಂದಾಜು ಪುಸ್ತಕಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT