6
ಕೆಎಸ್‌ಒಯು ದೂರ ಶಿಕ್ಷಣದ ಸಹಭಾಗಿತ್ವ ಸಂಸ್ಥೆಗಳಿಂದ ವಂಚನೆ

ನಕಲಿ ಅಂಕಪಟ್ಟಿ: ಸಿಐಡಿ ತನಿಖೆಗೆ ನಿರ್ದೇಶನ

Published:
Updated:
ನಕಲಿ ಅಂಕಪಟ್ಟಿ: ಸಿಐಡಿ ತನಿಖೆಗೆ ನಿರ್ದೇಶನ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ(ಕೆಎಸ್‌ಒಯು) ದೂರ ಶಿಕ್ಷಣದ ಸಹಭಾಗಿತ್ವ ಹೊಂದಿರುವ ಸಂಸ್ಥೆಗಳು ನಕಲಿ ಅಂಕಪಟ್ಟಿ ನೀಡಿ ವಿದ್ಯಾರ್ಥಿಗಳಿಗೆ ವಂಚಿಸುತ್ತಿರುವ ಪ್ರಕರಣಗಳ ತನಿಖೆ ನಡೆಸುವಂತೆ ಅಪರಾಧ ತನಿಖಾ ದಳಕ್ಕೆ (ಸಿಐಡಿ) ಕರ್ನಾಟಕ ಮಾಹಿತಿ ಆಯೋಗ ನಿರ್ದೇಶನ ನೀಡಿದೆ.

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ‘ಆಲ್‌ಗಲ್ ಯುನಿವರ್ಸಲ್ ಟ್ರಸ್ಟ್’ ಎಂಬ ಸಂಸ್ಥೆ ಹರಿಯಾಣದ ವಿದ್ಯಾರ್ಥಿಗೆ ನೀಡಿದ್ದ ನಕಲಿ ಅಂಕಪಟ್ಟಿ ಬಗ್ಗೆ ಕೆಎಸ್‌ಒಯುನಿಂದ ಮಾಹಿತಿ ಪಡೆದಿರುವ ಆಯೋಗವು ತನಿಖೆಗೆ ಆದೇಶಿಸಿದೆ.

ಪ್ರಕರಣದ ವಿವರ: ಕೆಎಸ್‌ಒಯು ಸಹಭಾಗಿತ್ವದಲ್ಲಿ ಆಲ್‌ಗಲ್ ಯುನಿವರ್ಸಲ್‌ ಟ್ರಸ್ಟ್‌ ನಡೆಸುತ್ತಿದ್ದ ಬಿ.ಟೆಕ್ (ಎಲೆಕ್ಟ್ರಾನಿಕ್ಸ್ ಅಂಡ್  ಟೆಲಿಕಮ್ಯುನಿಕೇಷನ್) ಎಂಜಿನಿಯರಿಂಗ್ ಕೋರ್ಸ್‌ಗೆ ಹರಿಯಾಣದ ಆಶೀಶ್‌ ವಶಿಷ್ಠ ಎಂಬ ವಿದ್ಯಾರ್ಥಿ ದಾಖಲಾಗಿದ್ದರು.

ಮೂರು ಸೆಮಿಸ್ಟರ್ ಅಂಕಪಟ್ಟಿ ನೀಡಿದ್ದ ಟ್ರಸ್ಟ್, ‌ನಾಲ್ಕನೇ ಸೆಮಿಸ್ಟರ್ ಅಂಕಪಟ್ಟಿ ನೀಡಿರಲಿಲ್ಲ. ಈ ಕಾರಣಕ್ಕೆ ಆಶೀಶ್‌ ತನ್ನ ನೋಂದಣಿ ಸಂಖ್ಯೆಯ ಸಹಿತ ಕೆಎಸ್‌ಒಯುಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿಂದ ಯಾವುದೇ ಉತ್ತರ ಬಾರದ ಕಾರಣ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.

ವಿಚಾರಣೆ ನಡೆಸಿದ ಆಯೋಗ, ಅಂಕಪಟ್ಟಿ ನೀಡುವಂತೆ ಕೆಎಸ್‌ಒಯುಗೆ ಸೂಚಿಸಿತ್ತು. ಆದರೆ, ಆಶೀಶ್‌ ನೀಡಿದ್ದ ನೋಂದಣಿ ಸಂಖ್ಯೆ ಕೆಎಸ್‌ಒಯು ನೀಡಿದ್ದ ನೋಂದಣಿ ಸಂಖ್ಯೆಗಳಿಗೆ ಹೊಂದಾಣಿಕೆಯಾಗಲಿಲ್ಲ. ಅನುಮಾನಗೊಂಡ ಕೆಎಸ್‌ಒಯು ಮೂರನೇ ಸೆಮಿಸ್ಟರ್ ಅಂಕಪಟ್ಟಿ ಮತ್ತು ಪರೀಕ್ಷಾ ಪ್ರವೇಶ ಪತ್ರದ ನಕಲು ಪ್ರತಿಗಳನ್ನು ಕಳುಹಿಸುವಂತೆ ತಿಳಿಸಿತ್ತು. ಅದರಂತೆ ಆಶೀಶ್ ಅಂಕಪಟ್ಟಿಯ ನಕಲು ಪ್ರತಿಗಳನ್ನು ಕಳುಹಿಸಿದ್ದರು.

‘ಇವುಗಳನ್ನು ಪರಿಶೀಲಿಸಿದಾಗ ಅಲ್‌ಗಲ್ ಯುನಿವರ್ಸಲ್‌ ಸಂಸ್ಥೆಯೇ ಪ್ರವೇಶ ಪತ್ರ ಮತ್ತು ಅಂಕಪಟ್ಟಿ ಸೃಷ್ಟಿಸಿ ವಿತರಣೆ ಮಾಡಿದೆ ಎಂಬುದು ಗೊತ್ತಾಗಿದೆ’ ಎಂದು ಆಯೋಗಕ್ಕೆ ಕೆಎಸ್‌ಒಯು ಸ್ಪಷ್ಟಪಡಿಸಿತ್ತು. ಇದನ್ನು ಆಧರಿಸಿ ಟ್ರಸ್ಟ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್‌ಒಯುಗೆ ಆಯೋಗ ಆದೇಶಿಸಿದೆ.

ನಕಲಿ ಅಂಕಪಟ್ಟಿ ದಂಧೆಯ ಬಗ್ಗೆ ತನಿಖೆ ನಡೆಸುವಂತೆ ಸಿಐಡಿ ಪೊಲೀಸ್ ಮಹಾ ನಿರ್ದೇಶಕರಿಗೂ ರಾಜ್ಯ ಮಾಹಿತಿ ಆಯುಕ್ತ ಎನ್‌.ಪಿ. ರಮೇಶ್ ನಿರ್ದೇಶನ ನೀಡಿದ್ದಾರೆ.

***

ಶಿಕ್ಷಣ ಸಂಸ್ಥೆಗಳೇ ನಕಲಿ ಅಂಕಪಟ್ಟಿ ಮುದ್ರಿಸಿಕೊಟ್ಟರೆ ಉಳಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸಿಐಡಿ ತನಿಖೆಗೆ ಸೂಚನೆ ನೀಡಿದ್ದೇನೆ.

– ಎನ್‌.ಪಿ. ರಮೇಶ್, ಮಾಹಿತಿ ಆಯುಕ್ತ

         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry