ಕಾಂಗ್ರೆಸ್‌ ಜಿ.ಪಂ ಸದಸ್ಯನ ದಬ್ಬಾಳಿಕೆ: ದೂರು ದಾಖಲು

ಶುಕ್ರವಾರ, ಮಾರ್ಚ್ 22, 2019
21 °C

ಕಾಂಗ್ರೆಸ್‌ ಜಿ.ಪಂ ಸದಸ್ಯನ ದಬ್ಬಾಳಿಕೆ: ದೂರು ದಾಖಲು

Published:
Updated:
ಕಾಂಗ್ರೆಸ್‌ ಜಿ.ಪಂ ಸದಸ್ಯನ ದಬ್ಬಾಳಿಕೆ: ದೂರು ದಾಖಲು

ಬೆಂಗಳೂರು: ಪರರ ಜಮೀನು ಹಾಗೂ ಮನೆಗೆ ಅತಿಕ್ರಮವಾಗಿ ಪ್ರವೇಶಿಸಿ ದಬ್ಬಾಳಿಕೆ ಮಾಡಿದ್ದ ಆರೋಪದಡಿ ಬೆಂಗಳೂರು ಜಿಲ್ಲಾ ಪಂಚಾಯಿತಿಯ ಕಗ್ಗಲೀಪುರ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಕೆ.ಎಸ್‌.ಪರ್ವೀಜ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸ್ಥಳೀಯ ನಿವಾಸಿ ಶ್ರೀಧರ್‌ ವೆಂಕಟರಾವ್‌ ಮನೆಗೆ 2016ರ ಸೆಪ್ಟೆಂಬರ್‌ 29ರಂದು ನುಗ್ಗಿದ್ದ ಪರ್ವೀಜ್‌ ಹಾಗೂ  ಬೆಂಬಲಿಗರು ಗಲಾಟೆ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಳ್ಳಲು ಕಗ್ಗಲೀಪುರ ಠಾಣೆ ಪೊಲೀಸರು ನಿರಾಕರಿಸಿದ್ದರು. ನೊಂದ ಶ್ರೀಧರ್‌ ಅವರು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಪರಿಶೀಲನೆ ನಡೆಸಿದ ಆಯೋಗ, ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದೆ.

‘ಆಯೋಗದಿಂದ ಫೆ. 10ರಂದೇ ಸೂಚನೆ ಬಂದಿದೆ. ಸಾರ್ವಜನಿಕ ಆಸ್ತಿಗೆ ಹಾನಿ, ಕಾನೂನುಬಾಹಿರವಾಗಿ ಗುಂಪುಗೂಡುವುದು, ಅತಿಕ್ರಮ ಪ್ರವೇಶ, ಕಳ್ಳತನ ಆರೋಪದಡಿ ಪರ್ವೀಜ್‌ ಹಾಗೂ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ದೂರಿನ ವಿವರ: ‘ಪತ್ನಿ ಹಾಗೂ ಮಗನ ಜತೆಯಲ್ಲಿ ವಾಸವಿದ್ದೇನೆ. ಗ್ರಾಮದ ಸರ್ವೆ ನಂ.158 ಹಾಗೂ 161ರಲ್ಲಿ ಜಮೀನು ಇದೆ. ಅದನ್ನು ತಮಗೆ ಮಾರಾಟ ಮಾಡುವಂತೆ ಪರ್ವೀಜ್‌ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಅದಕ್ಕೆ ಒಪ್ಪದಿದ್ದಾಗ ಮನೆ ಹಾಗೂ ಜಮೀನು ಬಳಿ ಬೆಂಬಲಿಗರ ಜತೆ ಬಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ದೂರುದಾರ ಶ್ರೀಧರ್‌ ಆರೋಪಿಸಿದ್ದಾರೆ.

‘ಆರೋಪಿಗಳ ಒತ್ತಡ ಹೆಚ್ಚಾದಾಗ ಜಮೀನಿಗೆ ಬೇಲಿ ಹಾಕಿದ್ದೆವು. ಆರೋಪಿಗಳು ಬೇಲಿಯನ್ನು ಕಿತ್ತೆಸೆದು ಜಮೀನಿನೊಳಗೆ ಅತಿಕ್ರಮ ಪ್ರವೇಶಿಸಿದ್ದರು. ಪೈಪ್ ಹಾಗೂ ವಾಲ್‌ಗಳನ್ನು ಜಖಂಗೊಳಿಸಿದ್ದರು. ವಿದ್ಯುತ್‌ ಮೀಟರ್‌ ಸಹ ಕಿತ್ತೆಸೆ ದಿದ್ದರು. ಜಮೀನು ಪಕ್ಕವೇ ಇರುವ ಮನೆಗೂ ನುಗ್ಗಿ ಬಾಗಿಲು ಮುರಿದಿದ್ದರು. ತೆಂಗಿನಕಾಯಿ ಹಾಗೂ ಹಲವು ವಸ್ತುಗಳನ್ನು ಕದ್ದೊಯ್ದಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಕ್ರಮ ಕೈಗೊಳ್ಳದ ಪೊಲೀಸರು: ‘ಆರೋಪಿ ಕಾಂಗ್ರೆಸ್‌ ಪಕ್ಷದವರಾಗಿದ್ದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಘಟನೆ ಬಗ್ಗೆ ದೂರು ನೀಡಲು ಠಾಣೆಗೆ ಹೋದಾಗ, ‘ದೂರು ಕೊಡಬೇಡಿ. ಅವರು ಹೇಗೆ ಹೇಳುತ್ತಾರೋ ಹಾಗೆ ಮಾಡಿ’ ಎಂದು ಪೊಲೀಸರು ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಅದೇ ಕಾರಣಕ್ಕೆ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದೆ’ ಎಂದು ಶ್ರೀಧರ್‌ ಹೇಳಿದ್ದಾರೆ.

‘ಎಫ್‌ಐಆರ್‌ ದಾಖಲಿಸಿಕೊಂಡ ಬಳಿಕ ಪುರಾವೆಗಳನ್ನು ಕೊಟ್ಟರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಈ ಕ್ರಮದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೂ ದೂರು ಸಲ್ಲಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಕೆ.ಎಸ್‌.ಪರ್ವೀಜ್‌ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry