ಬಣ್ಣದ ಬಟ್ಟೆಯಲ್ಲಿ ಶಶಿಕಲಾ

7
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಗರಂ

ಬಣ್ಣದ ಬಟ್ಟೆಯಲ್ಲಿ ಶಶಿಕಲಾ

Published:
Updated:
ಬಣ್ಣದ ಬಟ್ಟೆಯಲ್ಲಿ ಶಶಿಕಲಾ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಪಕ್ಷದ ಮುಖ್ಯಸ್ಥೆ ವಿ.ಕೆ.ಶಶಿಕಲಾ ನಟರಾಜನ್ ಇಂದಿಗೂ ಬಣ್ಣದ ಬಟ್ಟೆಗಳನ್ನೇ ತೊಟ್ಟುಕೊಂಡು ಓಡಾಡುತ್ತಿದ್ದಾರೆ. ಜೆ.ಇಳವರಸಿ ಸಹ ಅಂಥದ್ದೇ ಬಟ್ಟೆ ತೊಡುತ್ತಿದ್ದಾರೆ.

ಕಾರಾಗೃಹಕ್ಕೆ ಶನಿವಾರ ದಿಢೀರ್ ಭೇಟಿ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಶಶಿಕಲಾ ಹಾಗೂ ಇಳವರಸಿ ಬಣ್ಣದ ಬಟ್ಟೆಯಲ್ಲಿರುವುದನ್ನು ಕಂಡು ಗರಂ ಆದರು. ಸೆಲ್‌ನಲ್ಲಿದ್ದ ಉಳಿದ ಕೈದಿಗಳು ಬಿಳಿ ಬಟ್ಟೆ ಧರಿಸಿದ್ದರು. ಅದನ್ನು ಗಮನಿಸಿದ ರೇಖಾ, ‘ಇವರಿಬ್ಬರಿಗಷ್ಟೇ ಬಣ್ಣದ ಬಟ್ಟೆ ಧರಿಸಲು ಏಕೆ ಅವಕಾಶ ನೀಡಿದ್ದೀರಿ’ ಎಂದು ಜೈಲು ಸಿಬ್ಬಂದಿಯನ್ನು ಪ್ರಶ್ನಿಸಿದರು.

ಸಿಬ್ಬಂದಿ, ‘ಕೈದಿಗಳ ಶಿಕ್ಷೆ ಸ್ವರೂಪದ ಆಧಾರದಲ್ಲಿ ಬಣ್ಣದ ಬಟ್ಟೆಗಳನ್ನು ಧರಿಸಲು ಅವಕಾಶವಿದೆ. ನಿಯಮಗಳ ಅನುಸಾರವೇ ಬಟ್ಟೆ ಧರಿಸಿದ್ದಾರೆ’ ಎಂದು ಸಬೂಬು ಹೇಳಿದರು. ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಆ ಬಗ್ಗೆ ಲಿಖಿತವಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದರು.

‘ಬಣ್ಣದ ಬಟ್ಟೆಗಳು ನಿಮಗೆ ಎಲ್ಲಿಂದ ಬಂದವು’ ಎಂದು ಶಶಿಕಲಾಳನ್ನೇ ರೇಖಾ ಪ್ರಶ್ನಿಸಿದರು. ಮೌನವೇ ಅದಕ್ಕೆ ಉತ್ತರವಾಯಿತು. ನಂತರ ಅವರ ಕೋಣೆಗೆ ಹೋದ ರೇಖಾ, ಅಲ್ಲಿದ್ದ ವಸ್ತುಗಳನ್ನು ಸಹ ಪರಿಶೀಲಿಸಿದರು. ಬ್ಯಾಗೊಂದರಲ್ಲಿ ನಾನಾ ಬ್ರ್ಯಾಂಡ್‌ನ ಬಟ್ಟೆಗಳಿರುವುದು ಗಮನಕ್ಕೆ ಬಂತು.

ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ದೂರುಗಳು ಇದ್ದಿದ್ದರಿಂದ ರೇಖಾ ಶರ್ಮಾ, ಸೆಲ್‌ನಲ್ಲಿ ಗಂಟೆಗೂ ಹೆಚ್ಚು ಹೊತ್ತು ಪರಿಶೀಲನೆ ನಡೆಸಿದರು. ಪ್ರತಿಯೊಂದು ಕೊಠಡಿಗೂ ಹೋಗಿ ವಸ್ತುಸ್ಥಿತಿ ತಿಳಿದುಕೊಂಡರು.

ನಂತರ ಶಶಿಕಲಾ ಜತೆಗೆ ಐದು ನಿಮಿಷ ಮಾತುಕತೆ ನಡೆಸಿದರು. ಜೈಲಿನ ಸೌಲಭ್ಯ ಹಾಗೂ ವಾತಾವರಣದ ಬಗ್ಗೆ ವಿಚಾರಿಸಿದರು. ‘ಎಲ್ಲವೂ ಚೆನ್ನಾಗಿದೆ. ಕಂಪ್ಯೂಟರ್‌ ಹಾಗೂ ಕನ್ನಡ ಕಲಿಯುತ್ತಿದ್ದೇನೆ’ ಎಂದು ಆಂಗ್ಲ ಭಾಷೆಯಲ್ಲಿ ಶಶಿಕಲಾ ಉತ್ತರಿಸಿದರು.

‘ಆರೋಗ್ಯ ಸಮಸ್ಯೆ ಇರುವುದಾಗಿ ಸುದ್ದಿ ಆಗಿತ್ತು. ಈಗ ಹೇಗಿದ್ದೀರಾ’ ಎಂದು ರೇಖಾ ಪ್ರಶ್ನಿಸಿದ್ದಕ್ಕೆ, ‘ಅಂಥದ್ದೇನೂ ಆಗಿಲ್ಲ. ಆರೋಗ್ಯ ಚೆನ್ನಾಗಿಯೇ ಇದೆ’ ಎಂದರು.

ಮಧ್ಯಪ್ರವೇಶಿಸಿದ್ದ ಇಳವರಸಿ, ‘ನಮಸ್ಕಾರ್‌ಗಳು. ಇಲ್ಲಿ ತೊಂದರೆ ಇಲ್ಲ’ ಎಂದು ಕನ್ನಡದಲ್ಲಿ ಮಾತು ಆರಂಭಿಸಿ ಆಂಗ್ಲ ಭಾಷೆಯಲ್ಲಿ ಮುಂದುವರಿಸಿದರು.

‘ಊಟ ಸೇರಿದಂತೆ ಜೈಲಿನ ಎಲ್ಲ ವ್ಯವಸ್ಥೆ ಚೆನ್ನಾಗಿದೆ ಎಂದು ಕೈದಿಗಳು ಹೇಳಿದ್ದಾರೆ. ಇಲ್ಲಿ ಎಲ್ಲರೂ ಸಾಮಾನ್ಯ ಕೈದಿಗಳಂತೆ ಇದ್ದಾರೆ. ಶಶಿಕಲಾ ಸೇರಿದಂತೆ ಬೇರೆ ಯಾರ ಕೋಣೆಯಲ್ಲೂ ವಿಶೇಷ ಸೌಲಭ್ಯಗಳು ಕಂಡುಬಂದಿಲ್ಲ’ ಎಂದು ರೇಖಾ ಅವರು ಸಂದರ್ಶಕರ ಪುಸ್ತಕದಲ್ಲಿ ಬರೆದಿರುವುದಾಗಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry