ಬಡ್ತಿ ಮಸೂದೆ ವಾಪಸು?

7
ನಿವೃತ್ತಿ ಅಂಚಿನಲ್ಲಿರುವವರಿಗೆ ‘ನಿಯಮ 32’ರ ಅಡಿ ಬಡ್ತಿ ಭಾಗ್ಯ

ಬಡ್ತಿ ಮಸೂದೆ ವಾಪಸು?

Published:
Updated:
ಬಡ್ತಿ ಮಸೂದೆ ವಾಪಸು?

ಬೆಂಗಳೂರು: ರಾಷ್ಟ್ರಪತಿ ಅಂಕಿತಕ್ಕೆ ರಾಜ್ಯ ಸರ್ಕಾರ ಕಳುಹಿಸಿದ ‘ಬಡ್ತಿ ಮೀಸಲು ಮಸೂದೆ’ಗೆ ಕೇಂದ್ರ ಗೃಹ ಇಲಾಖೆ ಮತ್ತೆ ಸ್ಪಷ್ಟೀಕರಣ ಕೇಳಿದೆ. ಹೀಗಾಗಿ, ಮಸೂದೆ ರಾಷ್ಟ್ರಪತಿ ಭವನ ತಲುಪುವ ಬಗ್ಗೆಯೇ ಅನುಮಾನ ಮೂಡಿದೆ.

ಈ ಮಧ್ಯೆ, ಎಲ್ಲ ಇಲಾಖೆಗಳಲ್ಲಿ ಸರ್ಕಾರಿ ಸೇವಾ ನಿಯಮಾವಳಿ ‘ನಿಯಮ 32’ರ ಅಡಿ ಬಡ್ತಿ ನೀಡುವಂತೆ‌ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಸುತ್ತೋಲೆ ಹೊರಡಿಸಿದೆ. ಆ ಮೂಲಕ, ನಿವೃತ್ತಿ ಅಂಚಿನಲ್ಲಿರುವ ನೌಕರರಿಗೆ ಈ ಪರ್ಯಾಯ ಮಾರ್ಗದಲ್ಲಿ ಬಡ್ತಿ ಭಾಗ್ಯ ಕರುಣಿಸಲು ಸರ್ಕಾರ ನಿರ್ಧರಿಸಿದೆ.

ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ– 2002’ ಅನ್ನು 2017ರ ಫೆ. 9ರಂದು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, 1978ರ ಏ. 24ರಿಂದ ಅನ್ವಯವಾಗುವಂತೆ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ತತ್ಪರಿಣಾಮ ಕ್ರಮ (‌ಮುಂಬಡ್ತಿ‌) ತೆಗೆದುಕೊಳ್ಳುವಂತೆ ಆದೇಶಿಸಿತ್ತು.

ಈ ಆದೇಶ ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿದ್ದ ಸರ್ಕಾರ, ಎಲ್ಲ ಇಲಾಖೆಗಳಲ್ಲಿ ನೌಕರರ ಬಡ್ತಿ ತಡೆ ಹಿಡಿಯುವ ತೀರ್ಮಾನವನ್ನು ಕಳೆದ ಮಾರ್ಚ್‌ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿತ್ತು. ಆದರೆ, ಸರ್ಕಾರದ ಆದೇಶ ಬದಿಗಿಟ್ಟು ನಿಯಮ 32 ಅಡಿ ಕೆಲವರಿಗೆ ಡಿಪಿಎಆರ್‌ ಬಡ್ತಿ ನೀಡಿತ್ತು. ‘ಈ ನಿಯಮ ದುರ್ಬಳಕೆ ಮಾಡಿಕೊಂಡು ಸಿಬ್ಬಂದಿ ಹಿಂಬಾಗಿಲ ಮೂಲಕ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ’ ಎಂಬ ಆರೋಪ ಕೇಳಿಬಂದಾಗ ಡಿಸೆಂಬರ್‌ನಲ್ಲಿ ಅದಕ್ಕೂ ತಡೆ ನೀಡಲಾಗಿತ್ತು.

‘ಬಡ್ತಿ ಮೀಸಲು ವಿವಾದದ ಕಾರಣ ಒಂದು ವರ್ಷದಿಂದ ಸರ್ಕಾರ ರೆಗ್ಯುಲರ್ (ಸಾಮಾನ್ಯ) ಬಡ್ತಿ ತಡೆಹಿಡಿದಿದೆ. ಇದರಿಂದ ಹಲವರು ಬಡ್ತಿಯಿಂದ ವಂಚಿತರಾಗಿದ್ದಾರೆ. ಇದೇ ಮಾರ್ಚ್‌ 31ಕ್ಕೆ ನಿವೃತ್ತರಾಗಲಿರುವ ನೌಕರರ ಹಿತದೃಷ್ಟಿಯಿಂದ ನಿಯಮ 32ರ ಅಡಿ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

ಫೆ. 9ರಂದು ಕೋರ್ಟ್‌ ನೀಡಿದ್ದ ಆದೇಶವನ್ನು ಸರ್ಕಾರ ಪಾಲಿಸಲು ಇದೇ ಮಾರ್ಚ್‌ 15 ಕೊನೆ ದಿನ. 16ರಂದು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಕೋರ್ಟ್‌ ಆದೇಶದಂತೆ ವಿವಿಧ ಇಲಾಖೆಗಳು ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿವೆ. ಆದರೆ, ತತ್ಪರಿಣಾಮ ಕ್ರಮ ತೆಗೆದುಕೊಂಡಿಲ್ಲ.

ಕೋರ್ಟ್‌ ಆದೇಶ ಪಾಲನೆಯಿಂದ ಹಿಂಬಡ್ತಿ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರ ಹಿತ ಕಾಪಾಡಲು ಸರ್ಕಾರ ಮಸೂದೆ ರೂಪಿಸಿತ್ತು. ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಗೊಂಡಿರುವ ಮಸೂದೆಗೆ ಅಂಕಿತ ಹಾಕಲು ನಿರಾಕರಿಸಿರುವ ರಾಜ್ಯಪಾಲ ವಜುಭಾಯಿ ವಾಲಾ, ರಾಷ್ಟ್ರಪತಿಯಿಂದ ಅನುಮೋದನೆ ಪಡೆಯುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಮಸೂದೆಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸುವ ಮೊದಲು ಕೇಂದ್ರ ಗೃಹ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಓಪಿಟಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಷ್ಟ್ರೀಯ ಆಯೋಗ, ಕಾನೂನು ಇಲಾಖೆ ಸೇರಿದಂತೆ ಐದು ಇಲಾಖೆಗಳಿಂದ ಅಭಿಪ್ರಾಯ ಪಡೆಯುತ್ತದೆ.

ಕಾನೂನು ಇಲಾಖೆ ಕೇಳಿದ್ದ ಪ್ರಶ್ನೆಗಳಿಗೆ ಕಾನೂನು ತಜ್ಞರ ಸಲಹೆ ಪಡೆದು ಸಂಸದೀಯ ಇಲಾಖೆ ಉತ್ತರ ನೀಡಿದೆ. ಸುಪ್ರೀಂ ಕೋರ್ಟ್ ರದ್ದುಪಡಿಸಿದ ಕಾಯ್ದೆಯಲ್ಲಿರುವ ಅಂಶಗಳೇ ಮಸೂದೆಯಲ್ಲಿದೆ. ಹೀಗಾಗಿ, ಈಗಾಗಲೇ ನೀಡಿರುವ ಉತ್ತರದಿಂದ ತೃಪ್ತಿಯಾಗದ ಕಾನೂನು ಇಲಾಖೆ, ಮತ್ತಷ್ಟು ವಿವರಣೆ ಕೇಳಿದೆ ಎಂದು ಮೂಲಗಳು ತಿಳಿಸಿವೆ.

‘ಪರಿಷ್ಕೃತ ಪಟ್ಟಿ ಆಧರಿಸಿಯೇ ಬಡ್ತಿ’

‘ಸುಪ್ರೀಂ ಕೋರ್ಟ್‌ ಆದೇಶ ಅನ್ವಯ ಪರಿಷ್ಕರಿಸಿದ ಜ್ಯೇಷ್ಠತಾ ಪಟ್ಟಿ ಆಧರಿಸಿಯೇ ನಿಯಮ 32ರ ಅಡಿ ಬಡ್ತಿ ನೀಡುವಂತೆ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದು ಡಿಪಿಎಆರ್‌ ಅಧಿಕಾರಿಯೊಬ್ಬರು ತಿಳಿಸಿದರು.

ಸಾಮಾನ್ಯವಾಗಿ ಖಾಲಿ ಹುದ್ದೆಗಳಿಗೆ ಜ್ಯೇಷ್ಠತೆ ಪರಿಗಣಿಸಿ (ನಿಯಮಾನುಸಾರ) ಬಡ್ತಿ ನೀಡಲಾಗುತ್ತದೆ. ಸಿಬ್ಬಂದಿಯ ಐದು ವರ್ಷಗಳ ಕಾರ್ಯಕ್ಷಮತಾ ವರದಿ ಆಧರಿಸಿ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಬಡ್ತಿ ನೀಡುತ್ತದೆ. ಈ ರೀತಿ ಬಡ್ತಿ ಪಡೆದವರು ಬಡ್ತಿ ಪಡೆದ ಹುದ್ದೆಗೆ ನಿಗದಿಪಡಿಸಿದ ವೇತನ ಪಡೆಯಲು ಅರ್ಹರಾಗುತ್ತಾರೆ.

ಖಾಲಿ ಇರುವ ಹುದ್ದೆಗೆ ವಿಶೇಷ ಬಡ್ತಿ (ಸ್ಥಾನಪನ್ನ– ಆಫೀಸಿಯೇಟ್‌) ನೀಡಲು ‘ನಿಯಮ 32’ ಅವಕಾಶ ಕಲ್ಪಿಸುತ್ತದೆ. ಹೀಗೆ ಬಡ್ತಿ ಪಡೆಯುವ ಅಧಿಕಾರಿ, ಆ ಹುದ್ದೆಯ ಪ್ರಸಕ್ತ ಕರ್ತವ್ಯಗಳ ಪ್ರಭಾರ ನೋಡಿಕೊಳ್ಳುವ ಅಧಿಕಾರ ಪಡೆಯುತ್ತಾರೆ. ಅಂಥವರು ಮೂಲ ವೇತನದ ಶೇ 7ರಷ್ಟು ಅಧಿಕ ವೇತನ ಪಡೆಯುವ ಜೊತೆಗೆ ರೆಗ್ಯುಲರ್‌ ಬಡ್ತಿ ಹೊಂದಿದವರು ಪಡೆಯುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ. ಹೀಗೆ ನೇಮಿಸಲು ವೃಂದ ನೇಮಕಾತಿನಿಯಮ ಅನುಸಾರ ಅರ್ಹತೆ ಇರಬೇಕು.

*

ಮೀಸಲು ಮಸೂದೆ ಕುರಿತು ಕೇಂದ್ರ ಕಾನೂನು ಇಲಾಖೆ ಮತ್ತೆ ಸ್ಪಷ್ಟೀಕರಣ ಕೇಳಿದೆ ಎಂಬ ಮಾಹಿತಿ ನನಗೂ ಬಂದಿದೆ. ಆದರೆ, ಏನು ಕೇಳಿದೆ ಎಂಬುದು ಗೊತ್ತಿಲ್ಲ.

-ಟಿ.ಬಿ. ಜಯಚಂದ್ರ, ಕಾನೂನು, ಸಂಸದೀಯ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry