ಹದಿನಾರರ ಪೋರಿಯ ಚಿನ್ನದ ಬೇಟೆ

7

ಹದಿನಾರರ ಪೋರಿಯ ಚಿನ್ನದ ಬೇಟೆ

Published:
Updated:
ಹದಿನಾರರ ಪೋರಿಯ ಚಿನ್ನದ ಬೇಟೆ

‘ಹರಿಯಾಣದಲ್ಲಿ ತಂದೆ–ತಾಯಂದಿರು ತಮ್ಮ ಹೆಣ್ಣುಮಕ್ಕಳಿಗೆ ನೀಡುವ ಪ್ರೋತ್ಸಾಹದ ಮಾದರಿಯಲ್ಲಿಯೇ ನಾವೂ ಮಾಡಿದ್ದೇವೆ. ಆಕೆ ಬಯಸಿದ್ದನ್ನು ಮಾಡಲು ಉತ್ತೇಜನ ಕೊಟ್ಟಿದ್ದೇವೆ. ನಾನು ಮತ್ತು ನನ್ನ ಪತ್ನಿ ದುಡಿಯುವುದೇ ಮಕ್ಕಳಿಗಾಗಿ. ಆದ್ದರಿಂದ ಬೇರೆ ಯಾರಿಂದಲೂ ನಿರೀಕ್ಷೆ ಮಾಡದೇ ನಮ್ಮ ಬಳಿ ಇರುವ ಸಂಪನ್ಮೂಲವನ್ನು ಮಗಳು ಮತ್ತು ಮಗನಿಗೆ ವಿನಿಯೋಗಿಸಿದ್ದೇವೆ. ಅದರಿಂದ ಅವರು ದೊಡ್ಡ ಸಾಧನೆ ಮಾಡುತ್ತಿದ್ದಾರೆ. ದೇಶಕ್ಕೂ ಉತ್ತಮ ಹೆಸರು ಬರುತ್ತಿದೆ..’–

ಹರಿಯಾಣದ ಬೊರಿಯಾ ಪಟ್ಟಣದ ರಾಮಕಿಶನ್ ಭಾಕರ್ ಅವರ ನುಡಿಗಳಿವು. ಮೆಕ್ಸಿಕೊದಲ್ಲಿ ಹೋದ ವಾರ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದ 16ರ ಬಾಲೆ ಮನು ಭಾಕರ್ ಅವರ ತಂದೆ ರಾಮಕಿಶನ್. ಮಗಳ ಸಾಧನೆಯಿಂದ ಅವರು ಸಂತಸದ ಹೊಳೆಯಲ್ಲಿ ತೇಲುತ್ತಿದ್ದಾರೆ. ಆದರೆ ಸಾಧನೆಯ ಶ್ರೇಯವೆಲ್ಲವೂ ಮಗಳಿಗೆ ಸಲ್ಲಬೇಕು ಎನ್ನುತ್ತಾರೆ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಮಗಳ ಸಾಧನೆಯ ಹಾದಿಯನ್ನು ಹೆಮ್ಮೆಯಿಂದ ವಿವರಿಸುತ್ತಾರೆ.

ಮನು ಶೂಟಿಂಗ್ ಕ್ರೀಡೆಗೆ ಬಂದಿದ್ದು ತೀರಾ  ಆಕಸ್ಮಿಕ. ಯೂನಿವರ್ಸಲ್ ಸೆಕೆಂಡರಿ ಸ್ಕೂಲ್‌ನಲ್ಲಿ ಓದುತ್ತಿರುವ ಮನು ತಾಂಗ್ತಾ, ಕರಾಟೆ ಕಲಿಯುತ್ತಿದ್ದರು. ಹತ್ತನೇ ತರಗತಿಯಲ್ಲಿದ್ದಾಗ  ಓದಲು ಸಮಯ ಬೇಕು ಎಂದು ಕರಾಟೆ ನಿಲ್ಲಿಸಿದರು.  ಆಗ ರಾಮಕಿಶನ್ ಅವರು, ‘ಬಿಡುವಿನ ಸಮಯದಲ್ಲಿ ನಿಮ್ಮ ಶಾಲೆಯಲ್ಲಿರುವ ಶೂಟಿಂಗ್‌ ರೇಂಜ್‌ನಲ್ಲಿ ಪಿಸ್ತೂಲ್ ಶೂಟಿಂಗ್ ಅಭ್ಯಾಸ ಮಾಡು. ಅದರಿಂದ ಏಕಾಗ್ರತೆ ಬೆಳೆಯುತ್ತದೆ’ ಎಂದು ಸಲಹೆ ನೀಡಿದರು. ಅವರ ಮಾತು ಕೇಳಿದ ಮನು ಶೂಟಿಂಗ್  ಅಭ್ಯಾಸ ಆರಂಭಿಸಿದರು. ನಿಖರವಾದ ಗುರಿ ಕೈಗೂಡಿತು. ಇದರಿಂದ ಉತ್ತೇಜನಗೊಂಡ ಮನು ಪಿಸ್ತೂಲ್ ಕೊಡಿಸಿದರೆ ದೊಡ್ಡ ಸಾಧನೆ ಮಾಡುತ್ತೇನೆಂದು ಅಪ್ಪನಿಗೆ ದುಂಬಾಲು ಬಿದ್ದರು. ‘ಆಯಿತು ಕೊಡಿಸುತ್ತೇನೆ. ಆದರೆ ಕನಿಷ್ಠ ಎರಡು ವರ್ಷವಾದರೂ ಅಭ್ಯಾಸ ಮಾಡಬೇಕು. ಇಲ್ಲದಿದ್ದರೆ ಹಣ, ಸಮಯ ವ್ಯರ್ಥವಾಗುತ್ತದೆ’ ಎಂದು ರಾಮಕಿಶನ್ ಹೇಳಿದ್ದರು. ಅದಕ್ಕೆ ಒಪ್ಪಿದ್ದ ಮನು ಕೇವಲ ಒಂದು ವರ್ಷ ಕಳೆಯುವುದರಲ್ಲಿಯೇ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದು ಈಗ ಇತಿಹಾಸ.

ಮಹಿಳೆಯರ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಭಾಕರ್‌ 237.5 ಸ್ಕೋರ್‌ ಕಲೆಹಾಕಿ ಮೊದಲಿಗರಾಗದರು. ಬಲಿಷ್ಠ ಶೂಟಿಂಗ್ ಪಟುಗಳ ಪೈಪೋಟಿಯನ್ನು ಎದುರಿಸಿದ 16ರ ಬಾಲಕಿ ಚಿನ್ನಕ್ಕೆ ಕೊರಳೊಡ್ಡಿದ್ದು ಸುಲಭದ ಮಾತಲ್ಲ. 24 ಶಾಟ್‌ಗಳ ಫೈನಲ್‌ನಲ್ಲಿ ಭಾಕರ್‌ ಆರಂಭದಿಂದಲೂ ನಿಖರ ಗುರಿ ಹಿಡಿದರು. ಕೊನೆಯ ಶಾಟ್‌ನಲ್ಲಿ ಅವರು 10.8 ಸ್ಕೋರ್‌ ಹೆಕ್ಕಿದರು. ಈ ಮೂಲಕ ಮೆಕ್ಸಿಕೊದ ಅಲೆಕ್ಸಾಂಡ್ರಾ ಜವಾಲಾ ಅವರ ಸವಾಲು ಮೀರಿದರು. ವಿಶ್ವಕಪ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದ ಹೆಗ್ಗಳಿಕೆ ಹೊಂದಿರುವ ಜವಾಲಾ ಇಲ್ಲಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಅವರು 237.1 ಸ್ಕೋರ್‌ ಸಂಗ್ರಹಿಸಿದರು.

10 ಮೀಟರ್ಸ್‌ ಏರ್‌ ‍ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಮನು ಭಾಕರ್‌ ಮತ್ತು ಓಂ ಪ್ರಕಾಶ್‌ 476.1 ಪಾಯಿಂಟ್ಸ್‌ ಸಂಗ್ರಹಿಸಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಜರ್ಮನಿಯ ಸಾಂಡ್ರಾ ಮತ್ತು ಕ್ರಿಸ್ಟಿಯನ್‌ ರಿಟ್ಜ್‌ ಬೆಳ್ಳಿ ಗೆದ್ದರು. ಈ ಜೋಡಿ 475.2 ಪಾಯಿಂಟ್ಸ್‌ ಕಲೆಹಾಕಿತು.

ಮನು ಅವರ ತಂದೆ ಮರ್ಚಂಟ್ ನೇವಿಯಲ್ಲಿ ಮರೈನ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಸುಮೇಧಾ  ಭಾಕರ್ ಅವರು ಮನು ಓದುತ್ತಿರುವ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಮಗ ಅಖಿಲ್  ಮಾರ್ಷಲ್‌ ಆರ್ಟ್ಸ್‌ ಕಲಿಯುತ್ತಿದ್ದಾರೆ.

‘ಚಿನ್ನದ ಪದಕ ಗೆದ್ದ ಮೇಲೆ ಮನು ಫೋನ್ ಮಾಡಿ ಹೋಗಯಾ ಪಾಪಾ (ಆಯಿತು ಅಪ್ಪಾ) ಎಂದು ಸಂಭ್ರಮದಿಂದ ಹೇಳಿದಾಗ ಕೆಲವು ಕ್ಷಣ ಸ್ತಬ್ಧನಾಗಿಬಿಟ್ಟಿದ್ದೆ. ಅವಳ ಧ್ವನಿಯಲ್ಲಿದ್ದ ಸಂಭ್ರಮದಿಂದಲೇ  ಆಕೆ ಪದಕ ಗೆದ್ದಿದ್ದಾಳೆಂದು ಖಚಿತವಾಗಿತ್ತು. ಒಂದೆರಡು ನಿಮಿಷ ಬಿಟ್ಟು, ಅಬ್‌ ಪಾರ್ಟಿ ಶುರು ಬೇಟಾ (ಈಗ ಪಾರ್ಟಿ ಶುರು ಮಾಡ್ತೇವಿ..)ಎಂದು ಕುಣಿದಾಡಿದ್ದೆ’ ಎಂದು ರಾಮಕಿಶನ್ ಹೇಳುತ್ತಾರೆ.

ಮನೆಯಲ್ಲಿ ಮಗಳು ಅಭ್ಯಾಸ ಮಾಡಲು ಪುಟ್ಟದೊಂದು ರೇಂಜ್ ಕೂಡ ನಿರ್ಮಿಸಿರುವ ರಾಮಕಿಶನ್, ’ಇದೊಂದು ದುಬಾರಿ ಕ್ರೀಡೆ. ಒಂದು ಪಿಸ್ತೂಲ್‌ಗೆ  2 ರಿಂದ 2.25 ಲಕ್ಷ ರೂಪಾಯಿ. ಆಂತಹ ಮೂರು ಪಿಸ್ತೂಲ್‌ಗಳು ಬೇಕು. ಅಲ್ಲದೇ ತರಬೇತಿ, ಪ್ರವಾಸ ಮತ್ತಿತರ ಖರ್ಚುಗಳು ಇರುತ್ತವೆ.  ದೊಡ್ಡ ಮಟ್ಟದ ಕೂಟಗಳಲ್ಲಿ ಗೆದ್ದ ಮೇಲಷ್ಟೇ ಸರ್ಕಾರದ ಗಮನ ಹರಿಯುತ್ತದೆ.  ಆಗ ಒಂದಿಷ್ಟು ಧನಸಹಾಯ ಸಿಗುತ್ತದೆ. ಆದರೆ ಅಲ್ಲಿಯವರೆಗೂ ನಾವೇ ನೋಡಿಕೊಳ್ಳಬೇಕು. ಲೈಸೆನ್ಸ್‌ ಪಡೆಯಲು ಸ್ವಲ್ಪ ಕಷ್ಟ ಅನುಭವಿಸಬೇಕಾಯಿತು. ಸಂಬಂಧಪಟ್ಟ ಅಧಿಕಾರಿಗಳು ರಜೆ ಹೋಗಿದ್ದರಿಂದ ವಿಳಂಬವಾಗಿತ್ತು. ಆನಂತರ ಮಾಧ್ಯಮಗಳಲ್ಲಿ ಸುದ್ದಿ ಬಂದ ಮೇಲೆ ಕೆಲಸ ಸರಾಗವಾಯಿತು’ ಎನ್ನುತ್ತಾರೆ.

ಅಕ್ಟೋಬರ್‌ನಲ್ಲಿ ಬ್ಯೂನಸ್‌ ಐರಿಸ್‌ನಲ್ಲಿ ನಡೆಯುವ ಯೂತ್‌ ಒಲಿಂ‍ಪಿಕ್ಸ್‌ಗೆ  ಮನು ಅರ್ಹತೆ ಗಳಿಸಿದ್ದಾರೆ. ಅಲ್ಲಿಯೂ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry