ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾವೆಲಿನ್‌: ಭರವಸೆಯ ಮಿಂಚು

Last Updated 11 ಮಾರ್ಚ್ 2018, 19:40 IST
ಅಕ್ಷರ ಗಾತ್ರ

2016ರ ಜುಲೈ 23; ಭಾರತದ ಅಥ್ಲೆಟಿಕ್‌ ಕ್ಷೇತ್ರಕ್ಕೆ ಮರೆಯಲಾಗದ ದಿನ. 19 ವರ್ಷದ ನೀರಜ್‌ ಚೋಪ್ರಾ ಅಂದು ಪೋಲೆಂಡ್‌ನಲ್ಲಿ ಎಸೆದ ಜಾವೆಲಿನ್‌ 86.48 ಮೀಟರ್ ದೂರ ಬಿದ್ದಾಗ ಹೊಸ ದಾಖಲೆ ಸೃಷ್ಟಿಯಾಯಿತು.

ವಿಶ್ವ ಚಾಂಪಿಯನ್ ಆದ ಅವರು ಜಾವೆಲಿನ್ ಅನ್ನು ಅತ್ಯಂತ ದೂರ ಎಸೆದ ವಿಶ್ವದ ಮೊದಲಿಗ ಎಂಬ ಪಟ್ಟ ತಮ್ಮದಾಗಿಸಿಕೊಂಡರು. ವಿಶ್ವ ಚಾಂಪಿಯನ್‌ಷಿಪ್ ಒಂದರಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಖ್ಯಾತಿಯೂ ಅವರದಾಯಿತು.

ಅಂದಿನ ಸಾಧನೆ ನೀರಜ್ ಚೋಪ್ರಾ ಅವರಲ್ಲಿ ಅಹಂ ತುಂಬಲಿಲ್ಲ. ಸಾಧನೆಯ ಪಥದಲ್ಲಿ ಮತ್ತಷ್ಟು ಹೆಜ್ಜೆ ಹಾಕಲು ಪ್ರೇರೇಪಿಸಿತು. ನಂತರವೂ ಪದಕಗಳ ಬೇಟೆಯಾಡಿದ ಅವರು ಈಗ ಮತ್ತೊಂದು ಸಾಧನೆ ಮಾಡಿದ್ದಾರೆ. ಮಹತ್ವದ ಮೈಲುಗಲ್ಲೊಂದರತ್ತ ಸಾಗುತ್ತಿದ್ದಾರೆ.

ಈ ಬಾರಿಯ ಫೆಡರೇಷನ್ ಕಪ್‌ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನಕ್ಕೆ ಗುರಿ ಇಟ್ಟ ಅವರು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಭರವಸೆ ಮೂಡಿಸಿದ್ದಾರೆ. ಫೆಡರೇಷನ್‌ ಕಪ್‌ನಲ್ಲಿ ಅವರ ಸಾಧನೆ 85.94 ಮೀಟರ್‌ ಆಗಿತ್ತು. ಕಾಮನ್‌ವೆಲ್ತ್ ಕೂಟಕ್ಕೆ ಆಯ್ಕೆಯಾಗಲು ನಿಗದಿಯಾಗಿದ್ದ ಅಂತರಕ್ಕಿಂತ ನಾಲ್ಕು ಮೀಟರ್‌ ಹೆಚ್ಚು ದೂರವನ್ನು ಅವರ ಜಾವೆಲಿನ್ ದಾಟಿತ್ತು.

ಇದೇ ಸಾಧನೆಯನ್ನು ಅವರು ಮುಂದುವರಿಸಿದರೆ ಕಾಮನ್‌ವೆಲ್ತ್ ಕೂಟದಲ್ಲಿ ಭಾರತಕ್ಕೆ ಪದಕ ಖಚಿತವಾಗಲಿದೆ. ಯಾಕೆಂದರೆ ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ ಇಷ್ಟು ದೂರ ಜಾವೆಲಿನ್‌ ಎಸೆಯುವ ಅಥ್ಲೀಟ್‌ ಸದ್ಯ ಇಲ್ಲ.

ಕ್ರೀಡೆಯ ನಾಡಿನಲ್ಲಿ ಹುಟ್ಟಿದ ಕುಡಿ

ದೇಶದ ಕ್ರೀಡಾ ಕ್ಷೇತ್ರಕ್ಕೆ ಧಾರಾಳ ಕೊಡುಗೆ ನೀಡುತ್ತಿರುವ ಹರಿಯಾಣದ ಪಾನಿಪತ್‌ ನೀರಜ್ ಅವರ ಹುಟ್ಟೂರು. ಸರೋಜ್‌ ದೇವಿ ಮತ್ತು ಸತೀಶ್‌ ಕುಮಾರ್‌ ಅವರ ರೈತ ಕುಟುಂಬದಲ್ಲಿ ಜನಿಸಿದ ಅವರು ಎಳವೆಯಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್ ಆಡುತ್ತಿದ್ದರು. ಆದರೆ ಮಾವ ನೀಡಿದ ಸಲಹೆಯೊಂದು ಅವರ ಬದುಕಿನ ಚಿತ್ರವನ್ನೇ ಬದಲಿಸಿತು.

ಅಥ್ಲೆಟಿಕ್ಸ್‌, ಅದರಲ್ಲೂ ಜಾವೆಲಿನ್‌ ಥ್ರೋದಲ್ಲಿ ಹೆಸರು ಗಳಿಸಲು ಸಾಧ್ಯ ಎಂದು ಹೇಳಿದ ಮಾವನ ಮಾತು ಫಲಿಸಿತು.
ಚೆಂಡು ತೊರೆದು ಭರ್ಚಿ ಹಿಡಿದ ಅವರು ಪಾನಿಪತ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 2011ರಿಂದ ಅಥ್ಲೆಟಿಕ್‌ ‘ಫೀಲ್ಡ್‌’ಗೆ ಪ್ರವೇಶಿಸಿದರು; ಸಾಧನೆಯ ಶಿಖರವೇರಿದರು.

ಒಂದು ವರ್ಷದ ಅಭ್ಯಾಸದ ನಂತರ ಲಖನೌದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದರು. ಮೊದಲ ಕೂಟದಲ್ಲೇ 16 ವರ್ಷದೊಳಗಿನವರ ರಾಷ್ಟ್ರೀಯ ದಾಖಲೆಯನ್ನೂ ಮುರಿದರು. ಎರಡು ವರ್ಷಗಳ ನಂತರ 18 ವರ್ಷದೊಳಗಿನವರ ರಾಷ್ಟ್ರೀಯ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

ಮೊದಲ ಕೂಟದಲ್ಲಿ 68.64 ಮೀಟರ್ ದೂರ ಎಸೆದ ಅವರು ಎರಡೇ ವರ್ಷಗಳಲ್ಲಿ ಈ ಅಂತರವನ್ನು 76.5 ಮೀಟರ್‌ಗೆ ಹೆಚ್ಚಿಸಿಕೊಂಡರು. ಮುಂದಿನ ವರ್ಷ ಅವರ ಎಸೆತದ ದೂರ 81.4 ಮೀಟರ್‌ ತಲುಪಿತು. ಈ ಮೂಲಕ 20 ವರ್ಷದೊಳಗಿನವರ ದಾಖಲೆಯನ್ನೂ ಮುರಿದರು.

2016ರಲ್ಲಿ ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ 82.23 ಮೀಟರ್ ಸಾಧನೆ ಮಾಡಿ ಸೀನಿಯರ್ ವಿಭಾಗದ ಮೊತ್ತ ಮೊದಲ ಪದಕ (ಚಿನ್ನ) ಗೆದ್ದು ಕೂಟ ದಾಖಲೆ ಬರೆದರು. ಇದೇ ವರ್ಷ ವಿಶ್ವ ಚಾಂಪಿಯನ್‌ ಪಟ್ಟವನ್ನೂ ಅಲಂಕರಿಸಿದ ಅವರ ಮುಂದಿನ ವರ್ಷ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಚಿನ್ನ ಗೆದ್ದ ಚೋಪ್ರಾ ಪ್ಯಾರಿಸ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲಿ ಪಾಲ್ಗೊಂಡ ಅಪರೂಪದ ಸಾಧನೆಯನ್ನೂ ಮಾಡಿದರು. ಈ ಲೀಗ್‌ನಲ್ಲಿ ಐದನೇ ಸ್ಥಾನ ಗಳಿಸಿದರು.

ಮೊದಮೊದಲು ಗ್ಯಾರಿ ಕ್ಯಾಲ್ವರ್ಟ್‌ ಅವರ ಬಳಿ ತರಬೇತಿ ಪಡೆಯುತ್ತಿದ್ದ ಅವರ ಈಗಿನ ಗುರು ಉವೆ ಹಾನ್‌. ಭಾರತದಲ್ಲಿ ಜಾವೆಲಿನ್ ಥ್ರೋದಲ್ಲಿ ಹೆಸರು ಗಳಿಸಿದವರ ಸಂಖ್ಯೆ ಕಡಿಮೆ. ಸದ್ಯ ದೇವಿಂದರ್‌ ಸಿಂಗ್ ಕಾಂಗ್ ಮತ್ತು ನೀರಜ್ ಚೋಪ್ರಾ ಈ ಕ್ಷೇತ್ರದಲ್ಲಿ ಬೆಳಗುತ್ತಿರುವ ತಾರೆಗಳು. ಹೀಗಾಗಿ ಇವರಿಬ್ಬರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ತಂತ್ರ ಬದಲಿಸಲು ಕೋಚ್‌ ಆಸಕ್ತಿ

ಚೋಪ್ರಾ ಅವರ ಪ್ರತಿಭೆಗೆ ಮತ್ತಷ್ಟು ಸಾಣೆ ಹಿಡಿಯಲು ಈಗಿನ ಕೋಚ್‌ ಉವೆ ಹಾನ್‌ ಮುಂದಾಗಿದ್ದು ತಂತ್ರಗಳನ್ನು ಬದಲಿಸಲು ಮನಸ್ಸು ಉದ್ದೇಶಿಸಿದ್ದಾರೆ.

‘ಫೆಡರೇಷನ್ ಕಪ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಫಲಿತಾಂಶ ಬಂದಿದೆ. ಆದರೆ ಅವರಿಗೆ ಇನ್ನೂ ದೂರ ಎಸೆಯುವ ಸಾಮರ್ಥ್ಯ ಇದೆ. ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹೊರಗೆಡವಲು ತಂತ್ರಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಬೇಕಾಗಿದೆ. ಜಾವೆಲಿನ್‌ ಸರಿಯಾದ ದಿಶೆಯಲ್ಲಿ ಮುನ್ನುಗ್ಗಲು ಮತ್ತು ಸಮರ್ಪಕ ಎತ್ತರದಲ್ಲಿ ಸಾಗಲು ಕೆಲವು ಬದಲಾವಣೆಗಳು ಅನಿವಾರ್ಯ. ಇದು ಸಾಧ್ಯವಾದರೆ ಚೋಪ್ರಾ ಸಾಧನೆ ಇನ್ನಷ್ಟು ಬೆಳಗಲಿದೆ’ ಎಂದು ಅವರು ಹೇಳಿದ್ದಾರೆ.

‘ಸದ್ಯ ಚೋಪ್ರಾ ಅವರಿಗೆ 80ರಿಂದ 85 ಶೇಕಡಾ ಶಕ್ತಿಯನ್ನು ಮಾತ್ರ ಜಾವೆಲಿನ್ ಮೇಲೆ ಹಾಕಲು ಆಗುತ್ತಿದೆ. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕಾಗಿದೆ. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಮೊದಲು ಹೆಚ್ಚು ಒತ್ತಡ ಹೇರಲು ಬಯಸುವುದಿಲ್ಲ. ಆ ಕೂಟದ ನಂತರ ಅವರಲ್ಲಿ ಮಹತ್ವದ ಬದಲಾವಣೆ ಉಂಟಾಗಲಿದೆ’ ಎಂಬುದು ಉವೆ ಹಾನ್‌ ಅವರ ಭರವಸೆಯ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT