ಕಾಡಿದ ಕತೆಗೆ ಕಿರುಚಿತ್ರದ ಚೌಕಟ್ಟು

ಭಾನುವಾರ, ಮಾರ್ಚ್ 24, 2019
31 °C
ಕಿರುದಾರಿ

ಕಾಡಿದ ಕತೆಗೆ ಕಿರುಚಿತ್ರದ ಚೌಕಟ್ಟು

Published:
Updated:
ಕಾಡಿದ ಕತೆಗೆ ಕಿರುಚಿತ್ರದ ಚೌಕಟ್ಟು

ಕನ್ನಡ ಸಾಹಿತ್ಯದ ಹಲವಾರು ಕಾದಂಬರಿಗಳು ಸಿನಿಮಾಗಳಾಗಿವೆ. ಆದರೆ ಕಿರುಕತೆಗಳು ಕಿರುಚಿತ್ರವಾಗಿರುವುದು ಬಹಳ ಕಡಿಮೆ. ಸಾಹಿತ್ಯಾಸಕ್ತ, ಸಿನಿರಂಗದ ಛಾಯಾಗ್ರಾಹಕ ಪ್ರಶಾಂತ ಸಾಗರ ‘ಶರಾವತಿ’ ಎಂಬ ಕಿರುಚಿತ್ರ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಪ್ರಶಾಂತ್‌ ಸಾಗರದವರು. ‘ನಾ.ಡಿಸೋಜಾ ಅವರ ‘ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ’ ಕಥೆ ನನ್ನನ್ನು ಬಹಳ ಕಾಡಿತು. ಅದರಲ್ಲಿನ ನಿರೂಪಣೆ ನಾನು ಹುಟ್ಟಿ ಬೆಳೆದ ವಾತಾವರಣವನ್ನೇ ನೆನಪಿಸಿತು. ಹಾಗಾಗಿ ಅದನ್ನು ಕಿರುಚಿತ್ರವಾಗಿಸುವ ಯೋಚನೆ ಬಂತು’ ಎನ್ನುತ್ತಾರೆ ಪ್ರಶಾಂತ್‌. ಅದಕ್ಕಾಗಿ ಡಿಸೋಜಾರಿಂದ ಅನುಮತಿ ಪಡೆದು ನಾಲ್ಕು ಪುಟದ ಕಥೆಯನ್ನು, ಐದು ದಿನಗಳ ಕಾಲ

ಶೂಟಿಂಗ್‌ ಮಾಡಿ, 16 ನಿಮಿಷಗಳ ಕಿರುಚಿತ್ರ ತಯಾರಿಸಿದ್ದಾರೆ. ಮೂರು ಪಾತ್ರಗಳು ಕಿರುಚಿತ್ರದಲ್ಲಿವೆ. 1964ರಲ್ಲಿ ನಿರ್ಮಾಣಗೊಂಡ ಲಿಂಗನಮಕ್ಕಿ ಅಣೆಕಟ್ಟಿನ ಹಿನ್ನೀರಿನಿಂದ ಸಂತ್ರಸ್ತರಾದವರ ಸ್ಥಿತಿಗತಿಯನ್ನು ‘ಶರಾವತಿ’ ಅನಾವರಣ ಮಾಡುತ್ತದೆ. ‘ನಗರಗಳು ಜಗಮಗಿಸಲು ವಿದ್ಯುತ್‌ ಬೇಕು. ಆ ವಿದ್ಯುತ್‌ ಡ್ಯಾಮ್‌ಗಳಿಂದ ಬರುತ್ತೆ. ಆ ಡ್ಯಾಮ್‌ಗಳು ಸಾವಿರಾರು ಜನರು ಬದುಕನ್ನು ಅಂಧಕಾರಕ್ಕೆ ತಳ್ಳಿರುತ್ತದೆ ಎಂಬುದನ್ನು ಚಿತ್ರ ನೆನಪಿಸುತ್ತದೆ’ ಎನ್ನುತ್ತಾರೆ ಪ್ರಶಾಂತ್.

‘ಶರಾವತಿ’ ಕಿರುಚಿತ್ರ ಚಿತ್ರೀಕರಣದ ನೋಟ

ಶರಾವತಿ ಕಣಿವೆಯ ಭಿನ್ನ ನೋಟಗಳನ್ನು ಸೆರೆಹಿಡಿಯಲು ಅವರು ಐದು ದಿನ ಕಾಡುಮೇಡು ಅಲೆದಿದ್ದಾರೆ. ಅಣೆಕಟ್ಟಿನಿಂದ ಆಗಿರುವ ನೋವಿನ ಕತೆಯನ್ನು ಡಿಸೋಜಾ ಬರೆದಿದ್ದರೆ, ಅದನ್ನು ತೆರೆಯ ಮೇಲೆ ತೆರೆದಿಡುವ ಪ್ರಯತ್ನವನ್ನು ಪ್ರಶಾಂತ ಅವರಿಂದಾಗಿದೆ.

ಕಿರುಚಿತ್ರವನ್ನು ಮೊಬೈಲ್‌ನಲ್ಲಿ ನೋಡುವುದಕ್ಕಿಂತ ಪರದೆಯ ಮೇಲೆ ನೋಡುವುದು ಭಿನ್ನ ಅನುಭವ ನೀಡುತ್ತದೆ ಎಂಬ ಕಾರಣಕ್ಕೆ ಪ್ರಶಾಂತ್ ಸ್ನೇಹಿತರು, ಈ ಕಿರುಚಿತ್ರದ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ಫೆಬ್ರುವರಿಯಲ್ಲಿ ನಗರದಲ್ಲಿಯೂ ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು. ‘ಚಿತ್ರವನ್ನು ವಿವಿಧ ಸ್ಪರ್ಧೆಗಳಿಗೆ ಕಳುಹಿಸಿದ್ದೇನೆ. ಹಾಗಾಗಿ ಯೂಟ್ಯೂಬ್‌ಗೆ ಹಾಕಿಲ್ಲ’ ಎಂಬುದು ನಿರ್ದೇಶಕರ ವಿವರಣೆ. ಕಿರುಚಿತ್ರ ನಿರ್ಮಾಣ ಆತ್ಮಸಂತೋಷದ ಕೆಲಸ ಎಂದು ಪ್ರಶಾಂತ್‌ ವಿಶ್ಲೇಷಿಸುತ್ತಾರೆ.

ಚಿತ್ರ ನಿರ್ಮಾಣಕ್ಕಾಗಿ ಪ್ರದೀಪ್‌ ಶಿವಮೊಗ್ಗ ಡ್ರೋನ್‌ ಕ್ಯಾಮೆರಾ ಹಾರಿಸಿದ್ದಾರೆ. ನವೀನ್‌ ಡಿಸೋಜಾ ಹಿನ್ನೆಲೆ ಅವರ ಸಂಗೀತ, ಬಿ.ಕೆ.ಪವನ್‌ ಎಡಿಟಿಂಗ್‌ ಈ ಕಿರುಚಿತ್ರಕ್ಕಿದೆ. ‘ಕಟ್ಟುಕತೆ’ ಸಿನಿ ಕ್ರಿಯೇಷನ್ ಹೊರತಂದಿರುವ ಈ ಕಿರುಚಿತ್ರಕ್ಕೆ ಸುರೇಂದ್ರ ಆರ್ಥಿಕವಾಗಿ ಕೈಜೋಡಿಸಿದ್ದಾರೆ. ಆನಂದ ತುಮಕೂರು, ನಾಗರಾಜ ಸೂರನಗದ್ದೆ, ಜಯಂತ್‌ ಬಲೇಗಾರು ಪಾತ್ರಗಳಾಗಿದ್ದಾರೆ. ಕಿರುಕತೆಯೊಂದನ್ನು ಚಿತ್ರವಾಗಿಸುವ ಮೂಲಕ ಕಾಡುವ ಭಾವಗಳ ಭಾರ ಇಳಿಸಿಕೊಂಡಿದ್ದಾರೆ ಪ್ರಶಾಂತ್‌ ಮತ್ತು ತಂಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry