4

‘ಅಮ್ಮನ ಜವಾಬ್ದಾರಿಯೇ ಕಷ್ಟ’

Published:
Updated:
‘ಅಮ್ಮನ ಜವಾಬ್ದಾರಿಯೇ ಕಷ್ಟ’

* ವೃತ್ತಿಪರ ಬಾಕ್ಸರ್‌ ಆಗಿ ಮಕ್ಕಳನ್ನು ಹೇಗೆ ನಿಭಾಯಿಸ್ತೀರಿ?

ಇದು ಕಷ್ಟದ ಪ್ರಶ್ನೆ. ಬಾಕ್ಸಿಂಗ್‌ ತರಬೇತಿ ಪಡೆಯುವುದು ನನಗೆ ಇಷ್ಟ. ಎಷ್ಟು ಹೊತ್ತಾದರೂ ತರಬೇತಿಯಲ್ಲಿ ಕಳೆಯಬಲ್ಲೆ. ಆದರೆ ಅಮ್ಮನಾಗಿ ಮನೆಯಲ್ಲಿದ್ದಾಗ ಮಕ್ಕಳ ಕಾಳಜಿ ಮಾಡುವುದು ತುಂಬ ಕಷ್ಟ. ಅವರನ್ನು ಸಂಭಾಳಿಸಲು ಮಾನಸಿಕವಾಗಿ ಗಟ್ಟಿ ಇರಬೇಕು. ಕಠಿಣ ತರಬೇತಿ ಹಾಗೂ ಮೂರು ಮಕ್ಕಳ ತಾಯಿಯಾಗಿ ಅವರ ಜವಾಬ್ದಾರಿಯನ್ನು ಜೊತೆಜೊತೆಯಾಗಿ ನಿಭಾಯಿಸುವುದು ಸವಾಲು. ಆದರೆ ನನ್ನ ಪತಿ ಸಹಾಯ ಮಾಡುತ್ತಾರೆ.

* ಮಹಿಳೆಯಾಗಿ ಹೆಮ್ಮೆ ಅನಿಸಿದ ಕ್ಷಣ?

ಬಾಕ್ಸಿಂಗ್‌ ಕಲಿಯಲು ಆರಂಭಿಸಿದಾಗಲೇ ವಿಶ್ವ ಚಾಂಪಿಯನ್ ಆಗುವ ಕನಸು ಕಂಡಿದ್ದೆ. ಇವಳು ಮಹಿಳೆ, ಮದುವೆಯಾದವಳು, ಮಕ್ಕಳ ಹೆತ್ತವಳು, ಈಶಾನ್ಯ ರಾಜ್ಯದವಳು ಇತ್ಯಾದಿ ಮಾತುಗಳನ್ನು ಮೀರಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡೆ. ಅಂತಹ ಅನೇಕ ಕ್ಷಣಗಳು ನನ್ನಲ್ಲಿ ಹೆಮ್ಮೆ ತರುತ್ತವೆ.

* ಮರೆಯಲಾಗದ ದಿನ?

ಬಾಕ್ಸಿಂಗ್ ಪುರುಷ ಪ್ರದಾನ ಆಟ. ನಾನೂ ಅಥ್ಲೆಟಿಕ್ಸ್ ಬಿಟ್ಟು ಬಾಕ್ಸಿಂಗ್‌ ಸೇರಿಕೊಂಡಾಗ ‘ಹೆಣ್ಣು ಮಕ್ಕಳಿಗ್ಯಾಕೆ ಇದು?’ ಎಂದು ಹೀಯಾಳಿಸಿದ್ದರು. ನಾನು ಬಾಕ್ಸಿಂಗ್‌ನಲ್ಲಿದ್ದಿದ್ದು ನನ್ನ ಹೆತ್ತವರಿಗೂ ಗೊತ್ತಿರಲಿಲ್ಲ. ರಾಜ್ಯ ಚಾಂಪಿಯನ್ ಆದಾಗ ಪತ್ರಿಕೆಯೊಂದರ ಮೊದಲ ಪುಟದಲ್ಲಿ ಫೋಟೊ ಪ್ರಕಟವಾಗಿತ್ತು. ಆಗ ನನ್ನಮ್ಮ ‘ಅರೇ ನನ್ನ ಮಗಳಲ್ವಾ’ ಎಂದು ಕಣ್ಣರಳಿಸಿದ್ದರು.

* ಬಾಕ್ಸರ್ ಆಗಿ ತೂಕ ಕಾಯ್ದುಕೊಳ್ಳುವುದು ಎಷ್ಟು ಕಷ್ಟ?

ನನ್ನ ತೂಕ 48. ಸದ್ಯ 48 ಕೆಜಿ ಒಳಗಿನ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ದೇಹ ತೂಕ ಹೆಚ್ಚಿಸಿಕೊಳ್ಳುವುದು ಮತ್ತು ಅದಕ್ಕೆ ಹೊಂದಿಕೊಳ್ಳುವುದು ಯಾವಾಗಲೂ ಕಠಿಣ. ತೂಕ ಕಾಪಾಡಿಕೊಳ್ಳಲು ನಾನು ಪ್ರತಿದಿನ ಕಠಿಣ ತರಬೇತಿ ಪಡೆಯುತ್ತೇನೆ. ಬೆಳಿಗ್ಗೆ ಮತ್ತು ಸಂಜೆ ತಲಾ 45 ನಿಮಿಷ ಅಭ್ಯಾಸ ಮಾಡುತ್ತೇನೆ.

* ಮಹಿಳೆಯರಿಗೆ ಬಾಕ್ಸಿಂಗ್ ಯಾಕೆ ಬೇಕು?

ಬಾಕ್ಸಿಂಗ್ ಅಂದ್ರೆ ಬರೀ ಆಟ ಅಷ್ಟೇ ಅಲ್ಲ. ಇದು ಸಮರಕಲೆ. ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ಸಹಾಯಕ.

* ನಿಮ್ಮ ಮಕ್ಕಳಿಗೆ ಬಾಕ್ಸಿಂಗ್ ಕಲಿಸುತ್ತಿದ್ದೀರಾ?

ನನ್ನ ಗಂಡ ಫುಟ್‌ಬಾಲ್ ಆಟಗಾರ ಆಗಿದ್ದರಿಂದ ಮೂರು ಮಕ್ಕಳೂ ಅಪ್ಪನ ಕಡೆ. ಅವರಿಗೆ ಫುಟ್‌ಬಾಲ್ ಇಷ್ಟ. ಮುಂದೆ ಬಾಕ್ಸಿಂಗ್ ಕಲಿತೀವಿ ಅಂದ್ರೆ ನಾನು ಖುಷಿಯಾಗಿ ಹೇಳಿಕೊಡ್ತೀನಿ.

***

ನನ್ನ ಪಥ್ಯಾಹಾರ...

ಆರೋಗ್ಯ ಚೆನ್ನಾಗಿದ್ದರೆ ಎಲ್ಲವೂ ಸರಿ ಇರುತ್ತದೆ. ನಾನು ನನ್ನ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತೇನೆ. ಜಂಕ್‌ಫುಡ್‌ಗಳನ್ನು ಮುಟ್ಟುವುದೇ ಇಲ್ಲ. ಉತ್ತಮ ಡಯಟ್‌ ಪಾಲಿಸುತ್ತೇನೆ. ಆಟಗಾರರು ಹೆಚ್ಚು ನೀರು ಕುಡಿಯಲೇಬೇಕು. ಇದು ನನ್ನ ಆರೋಗ್ಯ ಕಾಪಾಡಲು ಸಹಾಯ ಮಾಡಿದೆ. ಕ್ರೀಡಾಕ್ಷೇತ್ರದಲ್ಲಿ ತುಂಬ ನಿಯಮಗಳಿರುತ್ತವೆ. ಮಾತ್ರೆ ಅಥವಾ ಜಂಕ್‌ಫುಡ್‌ಗಳ ವಿಷಕಾರಿ ಅಂಶಗಳು ನಮ್ಮ ದೇಹಕ್ಕೆ ಹಾನಿ ಮಾಡಬಹುದು. ಹಾಗಾಗಿ ವೈದ್ಯರ ಸಲಹೆ ಇಲ್ಲದೆ ನಾನು ಯಾವ ಔಷಧಿ, ಮಾತ್ರೆಯನ್ನೂ ಸೇವಿಸುವುದಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry