ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕರಂದ‍‍‍ಪ್ರಿಯ ಹಳದಿ ಜಾಕೆಟ್ಟಿನ ಕಣಜ

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಳದಿ ಜಾಕೆಟ್ ಕಣಜ, ಹಾರ‍್ನೆಟ್ ಎಂಬ ಹೆಸರಿನ ಜೇನುಹುಳದಂತಹ ಪುಟ್ಟ ಜೀವಿ. ಹೂವಿನ ಮಕರಂದ ಇದರ ಆಹಾರ. ಕಾಯಿ ಬಿಡುವ ಹೂ- ಗಿಡ ಮರಗಳ ಸಂತಾನೋತ್ಪತ್ತಿಗೆ ಇದು ಸೇತುವೆ. ಮಕರಂದ ಸಿಗದ ಋತುಗಳಲ್ಲಿ ಬೆಳೆ ನಾಶಮಾಡುವ ಹುಳ ಹಪ್ಪಟೆ ಕೀಟಗಳನ್ನೇ ಹಿಡಿದು ತಿಂದು ಜೀವಿಸುತ್ತವೆ.

ಒಂದು ವಿಧದಲ್ಲಿ ಪರಿಸರದ ಸಮತೋಲನಕ್ಕೆ ಇವು ಸಹಕಾರಿಯೇ. ಹತ್ತಿರ ಹೋಗಿ ಅದರ ಮೈದಡವಿದಿರೋ, ತಳ್ಳಿದಿರೋ ಜೋಕೆ… ಉರಿ ಜ್ವಾಲೆಯ ಕಟುವಾದ ಇಂಜೆಕ್ಷನ್ (ಕುಟುಕು) ಕೊಟ್ಟೇಬಿಡುತ್ತದೆ. ಇದನ್ನು ಕಾಣಲು ಅಡವಿಗೇ ಹೋಗಬೇಕಿಲ್ಲ. ಕೈತೋಟದಲ್ಲಿ, ಹೂವಿನಿಂದ ತುಂಬಿದ ನಗರ ಪ್ರದೇಶದ ಗಿಡ ಮರಗಳಲ್ಲೂ ಇವು ಕಾಣಸಿಗುತ್ತವೆ. ಕಟ್ಟಡ, ಗೋಡೆ, ಕಾಂಪೌಂಡ್ ಅಂಚಿನಲ್ಲೇ ಗಟ್ಟಿಮುಟ್ಟಾದ ಪುಟ್ಟ ಗೂಡುಗಳ ಕಾಂಪ್ಲೆಕ್ಸ್ ಕಟ್ಟಿ ಮೊಟ್ಟೆ- ಮರಿ ಮಾಡುತ್ತವೆ. ತಮ್ಮ ಪಾಡಿಗೆ ಮಾಡುವ ಪರಿಸರ ಸಂರಕ್ಷಣೆಯ ಅರಿವಿಲ್ಲದ ನಗರದ ಮಂದಿ ಅವು ಕಟ್ಟಿಕೊಳ್ಳುವ ಗೂಡನ್ನು ಕಿತ್ತು ಸಂತತಿಯ ನಾಶಮಾಡುವುದೇ ಹೆಚ್ಚು. ಜಗತ್ತಿನ ಹಲವೆಡೆ ಹೇರಳವಾಗಿ ಜೀವಿಸುವ ಬೇರೆ ಬೇರೆ ತಳಿಯ ಈ ಜೀವಿಯ ವೈಜ್ಞಾನಿಕ ಹೆಸರು genera Vespula and Dolichovespula.

ನಗರದ ಗಾಂಧಿ ಕೃಷಿ ವಿಜ್ನಾನ ಕೇಂದ್ರದ ಹಸಿರು ತೋಟದಲ್ಲಿ ಹಳದಿ ಜಾಕೆಟ್ ಕಣಜದ ಈ ದೃಶ್ಯವನ್ನು ಇತ್ತೀಚೆಗೆ ಕ್ಯಾಮೆರಾದಲ್ಲಿ ಸೆರೆಹಿಡಿದವರು ಜಿ.ಕೆ.ವಿ.ಕೆ.ಯ ನ್ಯಾಯಾಂಗ ಬಡಾವಣೆಯ ನಿವಾಸಿ ಶಿವಪ್ರಕಾಶ್ ಭೋಗಣ್ಣ. ಡಿಜಿಟಲ್ ಎಸ್.ಎಲ್.ಆರ್ ಇಲ್ಲದ್ದರಿಂದ, ನಿಕಾನ್ ಕೂಲ್ ಫಿಕ್ಸ್ ಪಿ.510 ಆಟೋಮ್ಯಾಟಿಕ್ ಡಿಜಿಟಲ್ ಕ್ಯಾಮೆರಾವನ್ನೇ ಇಲ್ಲಿ ಬಳಸಿದ್ದಾರೆ. ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ ಅವರು ಎರಡು ವರ್ಷಗಳಿಂದ ಪ್ರಕೃತಿ, ಪಕ್ಷಿ, ಮ್ಯಾಕ್ರೋ, ದೇವಾಲಯ ಮುಂತಾದ ಛಾಯಾಗ್ರಹಣ ಅವರ ಹವ್ಯಾಸ. ಇಲ್ಲಿ ಅಳವಡಿಸಿದ ಎಕ್ಸ್‌ಪೋಶರ್ ವಿವರ ಇಂತಿವೆ: ಅಪರ್ಚರ್‌ ಎಫರ್್4.4., ಶಟರ್ ವೇಗ 1/125 ಸೆಕೆಂಡ್, ಐ.ಎಸ್.ಒ. 125. ಟ್ರೈಪಾಡ್, ಫ್ಲಾಶ್ ಬಳಸಿಲ್ಲ.

ಈ ಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:
* ಈ ಎಕ್ಸ್‌ಪೋಶರ್‌ನ ಮೂಲ ಇಮೇಜನ್ನು ನಾಲ್ಕೈದು ಪಟ್ಟು ಹೆಚ್ಚು ಅಳತೆಗೆ ಸೂಕ್ಷ್ಮವಾದ ವಿವರಗಳನ್ನು ತೋರಿಸುವಷ್ಟು ದೊಡ್ಡದಾಗಿ ಹಿಗ್ಗಿಸಿ, ಬೇಡವಾದ ಗಿಡದ ಇತರ ರೆಂಬೆ ಕೊಂಬೆ, ಎಲೆ, ಹೂವುಗಳನ್ನು ಕತ್ತರಿಸಿ ಇಲ್ಲಿರುವ ಚಿತ್ರ ಸಂಯೋಜನೆಗೆ ಪೂರಕವಾಗಿ ಕ್ರಾಪ್ ಮಾಡಿರುವ ಅಂತಿಮ ಚೌಕಟ್ಟು ಇದು. ತಾಂತ್ರಿಕವಾಗಿ ಈ ಚಿತ್ರ ಚಿಕ್ಕ ಅಳತೆಯಲ್ಲಿ ಚಂದವಾಗಿ ತೋರುತ್ತದೆ. ಸರಿ. ಒಮ್ಮೆ ಬೇಕೆಂದಾಗ ಇನ್ನಷ್ಟು ದೊಡ್ಡದಾಗಿ ಹಿಗ್ಗಿಸಿ ಮುದ್ರಿಸಬೇಕಾಗಿದ್ದರೆ, ರೆಸೊಲ್ಯೂಷನ್ ಸಾಲದೇ ಚಿತ್ರ ಕೆಡುತ್ತದೆ.

* ಈ ತರಹದ ಸೂಕ್ಷ್ಮ ಜೀವಿಗಳ ಛಾಯಾಚಿತ್ರ ತೆಗೆಯಲು, ಉತ್ತಮವಾದ ಡಿಜಿಟಲ್ ಎಸ್.ಎಲ್.ಆರ್ ಕ್ಯಾಮೆರಾ ಮತ್ತು ತುಸು ದೂರದಿಂದಲೇ ವಸ್ತುವಿಗೆ ಅರಿವಿಲ್ಲದಂತೆ ಕ್ಲಿಕ್ಕಿಸಲು ಬೇಕಾಗುವ ಮ್ಯಾಕ್ರೋ ಅಳವಡಿಸಿರುವ ಜೂಮ್‌ ಲೆನ್ಸ್, ಟ್ರೈಪಾಡ್ ಮತ್ತು ಕಡಿಮೆ ಬೆಳಕಿದ್ದಲ್ಲಿ ಫ್ಲಾಶ್ ಕೂಡಾ ಸಹಕಾರಿ. ಆಗ, ವಸ್ತುವಿನ ಮತ್ತು ಪೂರಕವಾದ ಹಿನ್ನೆಲೆಯ ಭಾಗಗಳು ಅಂತಿಮವಾಗಿ ಕತ್ತರಿ ಪ್ರಯೋಗಮಾಡುವ ಪ್ರಮೇಯ ಬಾರದೇ ಪೂರ್ತಿ ಚೌಕಟ್ಟಿನಲ್ಲಿ ಸಮರ್ಪಕವಾಗಿ ಆವರಿಸಲ್ಪಡುತ್ತಿತ್ತು. ಅಲ್ಲದೆ ಚಿತ್ರದ ಗುಣಾತ್ಮಕತೆಗೆ ಭಂಗವಿಲ್ಲದೇ ಉತ್ತಮವಾದ ರೆಸಲ್ಯೂಶನ್‌ನಲ್ಲಿ ಮೂಡುತ್ತಿತ್ತು.


ಶಿವಪ್ರಕಾಶ್‌ ಬೋಗಣ್ಣ

* ಕಲಾತ್ಮಕವಾಗಿ ಪರಿಶೀಲಿಸಿದಲ್ಲಿ, ಈ ಚಿತ್ರದ ಕ್ಯಾಮೆರಾ ಕೋನ ಮತ್ತು ವಸ್ತುವಿನ (ಮಕರಂದ ಸವಿಯುವ ಕಣಜದ) ಭಾಗ, ನೋಡುಗನ ಕಣ್ಣು ಮತ್ತು ಕುತೂಹಲವನ್ನು ಸೆಳೆಯುತ್ತವೆ. ಬಿಚ್ಚಿಹಿಡಿದ ಅದರ ಎರಡೂ ಪುಟ್ಟ ರೆಕ್ಕೆಗಳು, ಸೂಕ್ಷ್ಮವಾಗಿ (ಪಕಳೆಗಳಿಗೆ ಘಾಸಿಯಾಗದಂತೆ) ಸಮತೋಲನ ಕಾಯ್ದಿರುವ ಅದರ ತಾಜಾ ಹಳದಿ ಕಪ್ಪು ಹೊಟ್ಟೆಯ ಭಾಗ ಮತ್ತು ಉದ್ದನೆಯ ನವಿರಾದ ಕಾಲುಗಳು, ಹೂವಿನ ಮಧುರವಾದ ಒಳಭಾಗಗಳು, ಅವಕ್ಕೆ ಪೂರಕವಾದ ಗಿಡದ ಮೊಗ್ಗು, ಅಚ್ಚ ಹಸಿರು- ಕೆಂಪು ಎಲೆಗಳು ಇತ್ಯಾದಿ ಚೌಕಟ್ಟಿನಲ್ಲಿರುವ ಪ್ರತಿಯೊಂದು ಅಂಶವೂ, ಅವುಗಳ ಬಣ್ಣಗಳೂ ಸೇರಿ, ವರ್ಣ ಸಾಮರಸ್ಯದಿಂದ ಮತ್ತು ಅವೆಲ್ಲದರ ವಿನ್ಯಾಸದಿಂದ ಚಿತ್ರದ ಸೊಬಗನ್ನು ಹೆಚ್ಚಿಸಿವೆ.

* ಈ ಬಗೆಯ ಮ್ಯಾಕ್ರೋ ಛಾಯಾಚಿತ್ರಗಳ ಮುಖ್ಯ ಉದ್ದೇಶ, ಬರಿ ಕಣ್ಣಿಗೆ ಗೋಚರಿಸದ ಜೀವಿಗಳ ಸೂಕ್ಷ್ಮ ಚಿತ್ರವನ್ನು ಸೆರೆಹಿಡಿದು ತೋರಿಸುವುದು ಸರಿಯಷ್ಟೇ. ಅದನ್ನೇ ಒಂದು ಚಿತ್ರದ ಕ್ಯಾನ್ವಾಸ್ ಮಾದರಿಯಲ್ಲಿ ಸೂಕ್ತವಾದ ಚೌಕಟ್ಟಿನಲ್ಲಿ ಸಂಯೋಜಿಸಿ ಸುಂದರವಾಗಿಯೂ ಮಾಡುವವರು, ಕಲಾ ಕೌಶಲ್ಯವುಳ್ಳ ಛಾಯಾಚಿತ್ರಕಾರರು. ಅಂತಹ ಚಿತ್ರಣಗಳು ಕೇವಲ ವಸ್ತು ನಿರೂಪಣೆಯಾಗಿಯಷ್ಟೇ ಆಗಿರದೇ, ಉತ್ತಮ ಕಲಾಕೃತಿಯಾಗಿಯೂ ನೋಡುಗರ ಮನ ತಣಿಸಿಯಾವು!

ಶಿವಪ್ರಕಾಶ್ ಭೋಗಣ್ಣ ಅವರು ಈ ದಿಸೆಯಲ್ಲಿ ತಮ್ಮ ಕ್ಯಾಮೆರಾ ಕೈಚಳಕದೊಂದಿಗೆ ಕಲಾಪ್ರಜ್ಞೆಯನ್ನೂ ಅಳವಡಿಸುವುದರ ಮೂಲಕ ಗಮನ ಸೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT