ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯವಾದ್ಯಕ್ಕೆ ನಾದೋಪಚಾರ ಮಾಡುವ ರಂಗಸ್ವಾಮಿ

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಸೂರ್ಯ ದಿನದ ಕರ್ತವ್ಯ ಮುಗಿಸಿ ಮುಳುಗಲು ಅಣಿಯಾಗುತ್ತಿದ್ದ. ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದ ಸಮೀಪವೆ ಇರುವ ಉಪ್ಪಾರಪೇಟೆ ಪೋಲಿಸ್ ಠಾಣೆಯ ಎದುರು ನಿಂತಿದ್ದೆ. 'ತಾಮ್... ಥಕ...ಧೀಮ್' ನಾದದ ಅನುರಣನ ಕೇಳಿಸಿತು! ಹತ್ತಿರದಲ್ಲಿ ಸಂಗೀತ ಶಾಲೆ ಉಂಟೇ ಅಥವಾ ನಾಟಕದ ತಾಲೀಮು ನಡೆಯುತ್ತಿರಬಹುದೇ ಎಂದು ಅಂದಾಜಿಸಲಾಗದೆ ಯಾಂತ್ರಿಕವಾಗಿ ಬೆನ್ನು ತಿರುಗಿಸಿ ಕೆಳರಸ್ತೆ ತಲುಪಿಸುವ ಮೆಟ್ಟಿಲುಗಳನ್ನು ಇಳಿದೆ. ಹೌದು, ಎಡ ಮಗ್ಗುಲಿನ ಪುಟ್ಟ ಮಳಿಗೆಯೊಂದರಿಂದಲೇ ಲಯಬದ್ಧ ಇಂಪುಧ್ವನಿ ಅನುರಣಿಸುತ್ತಿದ್ದುದು.

ಇನ್ನೂ ಮೃದಂಗವಾಗಿ ರೂಪುಗೊಳ್ಳಬೇಕಿದ್ದ, ಚರ್ಮ ಹೊದ್ದ ಉರುಳೆಯ ಶಿರದ ಮೇಲೆ ಮೆಲ್ಲಗೆ ಬೆರಳಾಡಿಸುತ್ತ ವಿವಿಧ ಕೋನಗಳಲ್ಲಿ ಕಿವಿಗೊಡುತ್ತಿದ್ದ ಹಿರಿಜೀವದ ಹೆಸರು ಎಂ.ಆರ್.ರಂಗಸ್ವಾಮಿ. ಮೃದಂಗ, ತಬಲ, ಖಂಜರಿ, ಡೋಲು ಮುಂತಾದ ಹತ್ತಾರು ಬಗೆಯ ಚರ್ಮ ವಾದ್ಯಗಳನ್ನು ತಯಾರಿಸುವ, ಹಳೆಯವಕ್ಕೆ ಕಾಯಕಲ್ಪ ನೀಡುವ ಮಳಿಗೆ ಅವರದು.

‘ವಾದ್ಯ ತಯಾರಿನಾ, ರಿಪೇರಿನಾ’ಎಂದು ವಿಚಾರಿಸಿದೆ. ‘ಒಂದು ರೀತಿಯಲ್ಲಿ ಸಂಗೀತ ಕಛೇರಿಗಳಿಗೆ ಪೂರ್ವ ತಯಾರಿಯ ವೇದಿಕೆ ಎಂದುಕೊಳ್ಳಿ’ ಎಂದು ನಕ್ಕರು. ಅವರ ಮಾತು ನಿಜ. ಅವರದು ಪೂರ್ವಭಾವಿ ಕಛೇರಿಯೇ. ಲಯ ವಾದ್ಯಗಳಿಗೆ ಶ್ರುತಿ, ಲಯದ ಶುಶ್ರೂಷೆ ನೀಡುವಲ್ಲಿ ರಂಗಸ್ವಾಮಿಯವರದು ಮಾಂತ್ರಿಕ ಸ್ಪರ್ಶ.

‘ನನಗೀಗ ಎಪ್ಪತ್ಮೂರು ವರ್ಷ ವಯಸ್ಸು. ದೊಡ್ಡ ದೊಡ್ಡ ಕಲಾವಿದರಿಗೆಲ್ಲ ನಾನು ತಬಲಾ, ಮೃದಂಗ ಮಾಡ್ಕೊಟ್ಟಿದೀನಿ. ಡೋಲುಗಳಿಗೆ ಮರುಧ್ವನಿ ಕೊಟ್ಟಿದೀನಿ. ನನ್ನದು ಅರವತ್ಮೂರು ವರ್ಷ ಸರ್ವೀಸು’ ಎಂದು ಕುಕ್ಕರಗಾಲಿನಲ್ಲಿ ಕೂತು ತಬಲಾಗೆ ಲೆಕ್ಕಾಚಾರವಾಗಿ ಚರ್ಮದ ದಾರ ಬಿಗಿಯುತ್ತ ಅವರು ಹೇಳಿದರು.

ಅವರ ಸಹಾಯಕ ಎರಡು ಕಪ್ಪು ಬೋಗುಣಿಗಳಲ್ಲಿ ಕಡು ಕಪ್ಪು ಬಣ್ಣದ 'ಕರಣೈ' ಮತ್ತು ಸುಣ್ಣದ ಕಣಕಗಳನ್ನು ತಯಾರಿಸುತ್ತಿದ್ದರು. ಹೊಂದಿಸಿದ ಚರ್ಮಕ್ಕೆ ಅಕ್ಕಿ ಹಿಟ್ಟಿನ ಕಣಕವನ್ನೂ ಬಳಿಯುತ್ತಾರೆ. ಅಂದ ಹಾಗೆ ಕರಣೈ ಎನ್ನುವುದು ಕಬ್ಬಿಣದ ಕುಲುಮೆಯಲ್ಲಿ ಲಭ್ಯವಾಗುವ ತ್ಯಾಜ್ಯ ಪುಡಿ. ಈ ಲೋಹದ ಪುಡಿ ಚರ್ಮ ವಾದ್ಯದ ಕೇಂದ್ರದಲ್ಲಿ ಚಕ್ಕುಲಿ ಒರಳುಬಿಲ್ಲೆಯಂಥ ವೃತ್ತಾಕಾರದಲ್ಲಿ ಲೇಪಿಸಿದರೇನೆ ನಾದೋದ್ಭವ. ಅದರ ಮೇಲಿನ ತಾಡನದಿಂದ ಘಂಟಾಧ್ವನಿ ಹೊರಹೊಮ್ಮುತ್ತದೆ. ಫೆರಿಕ್ ಆಕ್ಸೈಡ್ ಮತ್ತು ಗಂಜಿಪುಡಿಯನ್ನೂ ಸಹ ಲೇಪಿಸುತ್ತಾರೆ. ಎಲ್ಲವೂ ಶ್ರುತಿಗಾಗಿ, ಲಯಕ್ಕಾಗಿ. ‘ಅದೆಲ್ಲಾ ಸರಿ, ಸುಣ್ಣ ಬಳಿಯೋದು ಯಾವ ಉದ್ದೇಶಕ್ಕೆ’ ಎಂದು ಪ್ರಶ್ನಿಸಿದ್ದಕ್ಕೆ ರಂಗಸ್ವಾಮಿ ದಿಢೀರನೆ ಮೌನಿಯಾದರು. ಅದು ವೃತ್ತಿ ರಹಸ್ಯವೆಂದು ನನಗೆ ಖಾತ್ರಿಯಾಯಿತು.

ರಂಗಸ್ವಾಮಿಯವರಿಗೆ ಲಯವಾದ್ಯದ ವೃತ್ತಿ ತಂದೆ ರಂಗಯ್ಯ ಅವರಿಂದ ಬಂದ ಬಳುವಳಿ. ಅವರು ಅರಳೇಪೇಟೆಯಲ್ಲಿ ಚರ್ಮವಾದ್ಯ ಮಳಿಗೆ ಇಟ್ಟುಕೊಂಡಿದ್ದರು. ಕೇರಳ, ತಮಿಳುನಾಡಿನಿಂದ ಸಂಗೀತಗಾರರು ಇಲ್ಲಿಗೆ ಬಂದು ಮೃದಂಗ ಮಾಡಿಕೊಡಲು ಕೋರುತ್ತಿದ್ದರಂತೆ. ಹಳೇ ವಾದ್ಯಗಳಿಗೆ ಮರುಜೀವ ನೀಡುವುದು ಹೊಸದನ್ನು ಮಾಡುವುದಕ್ಕಿಂತ ತ್ರಾಸ. ಒಂದು ಮೃದಂಗ ಅಥವಾ ತಬಲಾ ಹೊಸದಾಗಿ ಆರ್ಡರ್ ಕೊಟ್ಟು ಮಾಡಿಸಲು ಮೂರರಿಂದ ಮೂರೂವರೆ ಸಾವಿರ ರೂಪಾಯಿ ತಗಲುತ್ತದೆ. ಈ ಕೆಲಸಕ್ಕೆ ಒಂದರಿಂದ ಒಂದೂವರೆ ತಿಂಗಳು ಬೇಕಾಗುತ್ತದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಊರು ಮಾತ್ರವಲ್ಲ ಹೊರರಾಜ್ಯಗಳಿಂದಲೂ ಆರ್ಡರ್ ಬರುತ್ತೆ. ಶ್ರುತಿ, ಲಯ ಕಾಯಕಲ್ಪಕ್ಕೆ ರಂಗಪ್ಪನವರಲ್ಲಿಗೆ ವಾದ್ಯಗಳನ್ನು ತರುವವರ ಸಂಖ್ಯೆ ದೊಡ್ಡದೇ ಇದೆ.

‘ನಿರೀಕ್ಷೆಗೂ ಮೀರಿ ಬದುಕಿನ ಶೈಲಿ ಪಲ್ಲಟಗೊಂಡಿದೆ. ಹಾಡಿದ್ದೇ ಹಾಡಾಗಿದೆ. ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ ಕಲಿಕೆ ತೀರ ವಿರಳವಾಗುತ್ತಿದೆ. ಹೀಗಿರುವಾಗ ನಿಮ್ಮ ವೃತ್ತಿ ಹೇಗೆ ಸಾಗಿದೆ?’ ಎಂದು ಕೇಳಿದೆ.

‘ನಿಜ, ಈಗ ಎಲ್ಲರ ಕೈನಲ್ಲೂ ಮೊಬೈಲು, ಐ ಪ್ಯಾಡು, ಲ್ಯಾಪ್‌ಟ್ಯಾಪ್. ವಾದ್ಯ ಸಂಗೀತ ಕಲಿಯುವ ಆಸಕ್ತಿ ಎಷ್ಟು ಜನರಿಗಿದೆಯೋ ಗೊತ್ತಿಲ್ಲ. ಅಂತಾದ್ರಲ್ಲಿ ವಾದ್ಯಗಳನ್ನು ತಯಾರಿಸುವುದು, ರಿಪೇರಿ ಮಾಡುವ ಕಾಯಕ ಕಲಿಯುವುದುಂಟೇ? ಯುವಕರು ಮುಂದೆ ಬಂದ್ರೆ ಈ ಕಸುಬು ಹೇಳ್ಕೊಡೋಕೆ ನಾನು ಸಿದ್ಧ’ ಎಂದು ಪ್ರತಿಕ್ರಿಯಿಸಿದರು.

ಲಯ ಚರ್ಮವಾದ್ಯಗಳನ್ನು ತಯಾರಿಸಲು ಹಸು, ಮೇಕೆ, ಎಮ್ಮೆಯ ಚರ್ಮ ಬಳಸುತ್ತಾರೆ. ಶರೀರ ಹಲಸಿನ ಮರದ್ದು. ಕರಾರುವಾಕ್ಕಾದ ಬಿಗಿತ ಹಾಗೂ ಎಳೆತಕ್ಕೆ ಎಮ್ಮೆಯ ಚರ್ಮದ ದಾರವೇ ಪ್ರಶಸ್ತ. ಕರ್ನಾಟಕ ಸಂಗೀತಕ್ಕೆ ಮೃದಂಗ, ಹಿಂದೂಸ್ತಾನಿ ಸಂಗೀತದಲ್ಲಿ ತಬಲಾ ಬಳಕೆಯಾಗುತ್ತದೆ. ಮೃದಂಗವೇ ಎರಡು ಘಟಕಗಳಾಗಿ ತಬಲ ಆಯಿತೆಂಬ ಮಾತಿದೆ. ಎರಡೂ ದೈವಿಕ ವಾದ್ಯಗಳೆಂಬ ನಂಬಿಕೆ ಪ್ರಚಲಿತವಿದೆ.

ಎಂ. ಆರ್. ರಂಗಸ್ವಾಮಿಯವರ ಸಂಪರ್ಕಕ್ಕೆ: 95352 35699‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT